* ಹಾಕಿ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ
* ಜನವರಿ 13ರಿಂದ 29ರವರೆಗೆ ಒಡಿಶಾದಲ್ಲಿ ಜರುಗಲಿರುವ ಪ್ರತಿಷ್ಠಿತ ಟೂರ್ನಿ
* ಹಾಕಿ ವಿಶ್ವಕಪ್‌ಗೆ ವೇದಿಕೆಯಾಗಲಿರುವ ಭುವನೇಶ್ವರ್ ಹಾಗೂ ರೂರ್ಕೆಲಾ
ಭುವನೇಶ್ವರ್(ಜ.02): ಬಹುನಿರೀಕ್ಷಿತ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯು ಜನವರಿ 13ರಿಂದ 29ರವರೆಗೆ ಒಡಿಶಾದಲ್ಲಿ ಜರುಗಲಿದೆ. ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಮದುವಣಗಿತ್ತಿಯಂತೆ ಒಡಿಶಾ ಸಜ್ಜಾಗಿದೆ. ಭುವನೇಶ್ವರ್ ಹಾಗೂ ರೂರ್ಕೆಲಾದಲ್ಲಿ ಹಾಕಿ ವಿಶ್ವಕಪ್ ಟೂರ್ನಿಯ ಪಂದ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ಹಾಕಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ರಾಜ್ಯ ಸರ್ಕಾರವು 2018ರಲ್ಲಿ ಯಶಸ್ವಿಯಾಗಿ ಹಾಕಿ ವಿಶ್ವಕಪ್ ಟೂರ್ನಿ ಆಯೋಜಿಸಿದೆ. ಅದ್ದೂರಿಯಾಗಿ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಯನ್ನು ಆಯೋಜಿಸಲು ಯಾವುದೇ ಸಮಸ್ಯೆಯಿಲ್ಲ. ಈ ಮೊದಲು ಭುವನೇಶ್ವರ್‌ನಲ್ಲಿಯೇ ಎಲ್ಲಾ ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ ರೂರ್ಕೆಲಾದಲ್ಲಿಯೂ ಹಾಕಿ ವಿಶ್ವಕಪ್ ಟೂರ್ನಿಯ ಪಂದ್ಯಗಳು ಜರುಗಲಿವೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಸುರೇಶ್ ಮೊಹಪಾತ್ರ ತಿಳಿಸಿದ್ದಾರೆ.
undefined
"22,000 ವೀಕ್ಷಕ ಸಾಮರ್ಥ್ಯವನ್ನು ಹೊಂದಿರುವ ಹೊಸ ಹಾಕಿ ಸ್ಟೇಡಿಯಂನ್ನು ರೂರ್ಕೆಲಾದಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ ನಿರ್ಮಿಸುವುದು ನಿಜಕ್ಕೂ ಸವಾಲಾಗಿತ್ತು. ಸಾಕಷ್ಟು ಸವಾಲುಗಳ ಗುರಿಯನ್ನು ನಾವೀಗಾಗಲೇ ತಲುಪಿದ್ದೇವೆ. 16 ರಾಷ್ಟ್ರಗಳು ಪಾಲ್ಗೊಳ್ಳುವ ಈ ಟೂರ್ನಿಯಲ್ಲಿ, ದಿನವೊಂದಕ್ಕೆ 4 ಪಂದ್ಯಗಳನ್ನು ಇಲ್ಲಿ ಆಯೋಜಿಸಲು ತೀರ್ಮಾನಿಸಿದ್ದೇವೆ ಎಂದು ಮೊಹಪಾತ್ರ ತಿಳಿಸಿದ್ದಾರೆ.
ಇನ್ನು 150ರಿಂದ 200 ಮಂದಿ ಅಂತಾರಾಷ್ಟ್ರೀಯ ಗಣ್ಯ ವ್ಯಕ್ತಿಗಳಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಕಲ್ಪಿಸುವುದು ಕೂಡಾ ನಮ್ಮ ಪಾಲಿಗೆ ಸವಾಲಿನ ವಿಚಾರವಾಗಿತ್ತು. ಆ ಜವಾಬ್ದಾರಿಯನ್ನು ಇದೀಗ ತಾಜ್ ಗ್ರೂಪ್‌ನವರು ವಹಿಸಿಕೊಂಡಿದ್ದಾರೆ ಎಂದು ಸುರೇಶ್ ಮೊಹಪಾತ್ರ ತಿಳಿಸಿದ್ದಾರೆ. ಮೊದಲ ಬಾರಿಗೆ ಹಾಕಿ ವಿಶ್ವಕಪ್ ಟೂರ್ನಿಯು ರೂರ್ಕೆಲಾದಲ್ಲಿಯೂ ಜರುಗುತ್ತಿರುವುದರಿಂದ ಸ್ಥಳೀಯ ಹಾಕಿ ಅಭಿಮಾನಿಗಳು ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ನಾವು ಯುವಕರು ಹಾಕಿಯತ್ತ ಇನ್ನಷ್ಟು ಆಕರ್ಷಿತರಾಗಲು ಬೇಕಾದ ಎಲ್ಲಾ ಸೌಕರ್ಯಗಳನ್ನು ನಾವು ಒದಗಿಸಲಿದ್ದೇವೆ ಎಂದು ಸುರೇಶ್ ಮೊಹಪಾತ್ರ ಹೇಳಿದ್ದಾರೆ.
ಹಾಕಿ ವಿಶ್ವಕಪ್: ರೂರ್ಕೆಲಾ ಪಂದ್ಯಗಳ ಟಿಕೆಟ್ ಸೋಲ್ಡೌಟ್!
2023ರ ಎಫ್‌ಐಎಚ್ ಹಾಕಿ ವಿಶ್ವಕಪ್ ಒಡಿಶಾದಲ್ಲಿ ಜ.13ರಿಂದ 29ರ ವರೆಗೆ ನಡೆಯಲಿದ್ದು, ರೂರ್ಕೆಲಾದಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಕೆಲವೇ ದಿನಗಳಲ್ಲಿ ಮಾರಾಟವಾಗಿದೆ ಎಂದು ಹಾಕಿ ಇಂಡಿಯಾ ಮಾಹಿತಿ ನೀಡಿದೆ. ರೂರ್ಕೆಲಾದಲ್ಲಿ ನೂತನವಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಕ್ರೀಡಾಂಗಣ 22,000 ಆಸನ ಸಾಮರ್ಥ್ಯ ಹೊಂದಿದ್ದು, ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನಿಸಿಕೊಂಡಿದೆ.
ಬೆಂಗಳೂರಿಗೆ ಬಂದ ಹಾಕಿ ವಿಶ್ವಕಪ್; ದಿಗ್ಗಜರಿಂದ ಟ್ರೋಫಿ ಅನಾವರಣ
ಟೂರ್ನಿಯ 20 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಡಿಸೆಂಬರ್ 19ಕ್ಕೆ ಇಲ್ಲಿನ ಪಂದ್ಯಗಳ ಟಿಕೆಟ್ ಮಾರಾಟಕ್ಕಿಟ್ಟಿದ್ದು, ವಾರದೊಳಗೆ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದೆ. ಇನ್ನು ಭುವನೇಶ್ವರದ ಕಳಿಂಗಾ ಕ್ರೀಡಾಂಗಣದ 24 ಪಂದ್ಯಗಳ ಬಹುತೇಕ ಟಿಕೆಟ್‌ಗಳು ಕೂಡಾ ಮಾರಾಟವಾಗಿವೆ ಎಂದು ತಿಳಿದುಬಂದಿದೆ.
ಹಾಕಿ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದರೆ ಭಾರತೀಯರಿಗೆ ತಲಾ 25 ಲಕ್ಷ ಬಹುಮಾನ!
ನವದೆಹಲಿ: ಭಾರತ ತಂಡವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂಬರುವ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದರೆ ತಂಡದ ಪ್ರತಿ ಆಟಗಾರನಿಗೆ ತಲಾ 25 ಲಕ್ಷ ರು. ಬಹುಮಾನ ನೀಡುವುದಾಗಿ ಹಾಕಿ ಇಂಡಿಯಾ ಘೋಷಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿದ ಸಂಸ್ಥೆ, ಸಹಾಯಕ ಸಿಬ್ಬಂದಿಗೂ ತಲಾ 5 ಲಕ್ಷ ರು. ನೀಡುವುದಾಗಿ ತಿಳಿಸಿದೆ. ಅಲ್ಲದೇ ಬೆಳ್ಳಿ ಗೆದ್ದರೆ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಕ್ರಮವಾಗಿ ತಲಾ 15 ಲಕ್ಷ ರು. ಹಾಗೂ 3 ಲಕ್ಷ ರು., ಕಂಚು ಗೆದ್ದರೆ ತಲಾ 10 ಲಕ್ಷ ಹಾಗೂ 2 ಲಕ್ಷ ರು. ನೀಡುವುದಾಗಿ ತಿಳಿಸಿದೆ. ಭಾರತ ಕೊನೆ ಬಾರಿ 1975ರಲ್ಲಿ ಹಾಕಿ ವಿಶ್ವಕಪ್ ಗೆದ್ದಿತ್ತು.