ಕೊಡಗಿನ ಅಂಕಿತ ಭಾರತ ಹಾಕಿ ತಂಡದ ಕೋಚ್!

Kannadaprabha News   | stockphoto
Published : Jan 22, 2020, 10:05 AM IST
ಕೊಡಗಿನ ಅಂಕಿತ ಭಾರತ ಹಾಕಿ ತಂಡದ ಕೋಚ್!

ಸಾರಾಂಶ

ಕರ್ನಾಟಕದ ಪಾಲಿಗೆ ಮತ್ತೊಂದು ಹೆಮ್ಮೆಯ ವಿಚಾರ. ಭಾರತ ಹಾಕಿ ತಂಡಕ್ಕೆ ಅದ್ಬುತ ಪ್ರತಿಭೆಗಳನ್ನು ನೀಡಿದ ಕೊಡಗು ಇದೀಗ ಕೋಚ್ ಆಗಿಯೂ ಮತ್ತೊಂದು ಪ್ರತಿಭೆ ನೀಡಿದೆ.  ಕೊಡಗಿನ ಅಂಕಿತಾ ಇದೀಗ ಭಾರತ ಹಾಕಿ ತಂಡದ ಕೋಚಿಂಗ್‌ಗೆ ಆಯ್ಕೆಯಾಗಿದ್ದಾರೆ. 

ಮಡಿಕೇರಿ(ಜ.22):  ರಾಷ್ಟ್ರೀಯ ಹಿರಿಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್‌ ಆಗಿ ಕೊಡಗಿನ ಅಂಕಿತಾ ಸುರೇಶ್‌ ಅವರನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿದೆ. ಜ.22ರಿಂದ ಫೆ.6ರ ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಹಿರಿಯ ಮಹಿಳಾ ಆಟಗಾರರ ನ್ಯೂಝಿಲ್ಯಾಂಡ್‌ ಪ್ರವಾಸ ಪಂದ್ಯಾವಳಿಗೆ ಭಾರತ ತಂಡದ ಕೋಚ್‌ ಆಗಿ ತೆರಳುತ್ತಿದ್ದಾರೆ.

ಇದನ್ನೂ ಓದಿ: ಪ್ರೊ ಲೀಗ್ ಹಾಕಿ: ಶೂಟೌಟಲ್ಲಿ ಗೆದ್ದ ಭಾರತ!

ಕೊಡಗು ಜಿಲ್ಲೆ ಕ್ರೀಡಾಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಿದೆ. ಹಾಕಿ ಕ್ರೀಡೆಯಲ್ಲಂತೂ ಕೊಡಗಿನ ಬಹುತೇಕ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ. ಆದರೆ ಹೆಚ್ಚು ಮಹಿಳಾ ಆಟಗಾರರು ಕಾರಣಾಂತರಗಳಿಂದ ಕ್ರೀಡಾಕೂಟದಿಂದ ದೂರ ಸರಿಯುತ್ತಿದ್ದಾರೆ. ಈ ನಡುವೆಯೂ ಕೊಡಗಿನ ಅಂಕಿತಾ ಸುರೇಶ್‌ ಅವರು ಇದೀಗ ರಾಷ್ಟ್ರೀಯ ಹಾಕಿ ಸಹಾಯಕ ತರಬೇತುದಾರರಾಗಿ ಆಯ್ಕೆಯಾಗಿದ್ದು, ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಕೋಚ್‌ ಆಗಿ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: ಪ್ರೊ ಲೀಗ್‌ ಹಾಕಿ: ನೆದರ್‌ಲ್ಯಾಂಡ್ ಎದುರು ಭಾರತ ಜಯಭೇರಿ

ಹಾಕಿ ಇಂಡಿಯಾ ವತಿಯಿಂದ ಜ.5ರಿಂದ 21ರವರೆಗೆ ಬೆಂಗಳೂರಿನ ಸಾಯ್‌ ಸೆಂಟರ್‌ನಲ್ಲಿ ಸೀನಿಯರ್‌ ವುಮೆನ್‌ ನ್ಯಾಶನಲ್‌ ಕೋಚಿಂಗ್‌ ಕ್ಯಾಂಪ್‌ ನಡೆದಿದ್ದು, ಅಂಕಿತಾ ಜೂನಿಯರ್‌ ಸಹಾಯಕ ಕೋಚ್‌ ಆಗಿ ಕೆಲಸ ಮಾಡಿದ್ದಾರೆ.

ಅಂಕಿತಾ ಸುರೇಶ್‌ ಅವರು ಬಿ.ಎ. ಸುರೇಶ್‌ -ಬಿ.ಎಸ್‌. ಧರ್ಮಾವತಿ ದಂಪತಿಯ ಪುತ್ರಿ. ಕೊಡಗಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಹೊನ್ನಂಪಾಡಿ ಸುರೇಶ್‌ ಅವರ ಪತ್ನಿ. ಪ್ರಸ್ತುತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದಲ್ಲಿ ಹಾಕಿ ತರಬೇತುದಾರರಾಗಿರುವ ಅಂಕಿತಾ ಸುರೇಶ್‌ ಶಿಕ್ಷಣದ ಅವಧಿಯಲ್ಲಿ ಸೀನಿಯರ್‌ ನ್ಯಾಷನಲ್‌ ಚೈನ್ನೈ ಅಣ್ಣಾಮಲೈ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಮಡಿಕೇರಿ ಸಾಯ್‌ ವಸತಿ ನಿಲಯದಲ್ಲಿ ತರಬೇತಿ ಪಡೆದಿದ್ದು, ಚೆನ್ನೈ, ಆಂಧ್ರಪ್ರದೇಶ, ಶಿವಮೊಗ್ಗದಲ್ಲಿ ಹಾಕಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಕಿ ಕರ್ನಾಟಕ ಸಬ್‌ಜೂನಿಯರ್‌, ಜೂನಿಯರ್‌, ಸೀನಿಯರ್‌ ಮಹಿಳಾ ತಂಡಕ್ಕೆ ಕೋಚ್‌ ಆಗಿಯೂ ಕೆಲಸ ಮಾಡಿದ್ದಾರೆ.

ಹಾಕಿಯಲ್ಲಿ ಸಾಧನೆ: 
ಶಾಲಾ- ಕಾಲೇಜು ದಿನಗಲ್ಲಿ ಅಂಕಿತಾ ಅವರು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ. 4 ಜೂನಿಯರ್‌ ನ್ಯಾಶನಲ್‌, ಆಲ್‌ ಇಂಡಿಯಾ ಅಂತರ ವಿಶ್ವ ವಿದ್ಯಾಲಯ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಹಾಕಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದಾರೆ. 2012, 2013ರಲ್ಲಿ ಭೋಪಾಲ್‌ನಲ್ಲಿ ನಡೆದಿದ್ದ ಸೀನಿಯರ್‌ ನ್ಯಾಷನಲ್‌ ಹಾಕಿ ಚಾಂಪಿಯನ್‌ಶಿಪ್‌, 2011ರಲ್ಲಿ ಹರಿಯಾಣದಲ್ಲಿ ನಡೆದಿದ್ದ ಜೂನಿಯರ್‌ ನ್ಯಾಷನಲ್‌ ಹಾಕಿ ಚಾಂಪಿಯನ್‌ಶಿಪ್‌, ನಮ್ಮ ರಾಜ್ಯದಲ್ಲಿ ನಡೆದಿದ್ದ 56ನೇ ಐಎಚ್‌ಎಫ್‌ ಸೀನಿಯರ್‌ ವುಮೆನ್ಸ್‌ ನ್ಯಾಷನಲ್‌ ಹಾಕಿ ಚಾಂಪಿಯನ್‌ಶಿಪ್‌ ಸೇರಿದಂತೆ ಹಲವು ರಾಷ್ಟ್ರ ಹಾಗೂ ಅಂತರ ವಿಶ್ವ ವಿದ್ಯಾನಿಲಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ.

ಅಥ್ಲೆಟಿಕ್ಸ್‌ ಮೂಲಕ ಆರಂಭ :
ಅಂಕಿತಾ ಅವರು ಅಥ್ಲೆಟಿಕ್ಸ್‌ ಮೂಲಕ ತಮ್ಮ ಕ್ರೀಡಾಜೀವನ ಆರಂಭಿಸಿದರು. ರಾಷ್ಟ್ರ ಮಟ್ಟದ 3,000 ಮೀಟರ್‌ ಮತ್ತು 5,000 ಮೀಟರ್‌ ಓಟದ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಮಡಿಕೇರಿಯ ಜೂನಿಯರ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ದೈಹಿಕ ಶಿಕ್ಷಣ ಶಿಕ್ಷಕರ ಮಾರ್ಗದರ್ಶನದಂತೆ ತಮ್ಮನ್ನು ಹಾಕಿ ಕ್ರೀಡೆಯಲ್ಲಿ ತೊಡಗಿಸಿಕೊಂಡರು. ಸಾಯ್‌ ಹಾಕಿ ತರಬೇತಿ ಕೇಂದ್ರದ ಸೇರಿದ ನಂತರ ಕ್ರೀಡೆಯ ಬಗ್ಗೆ ಉತ್ಸಾಹ, ಆಸಕ್ತಿ ಮತ್ತಷ್ಟುಹೆಚ್ಚಾಯಿತು.

ಈ ಬಗ್ಗೆ ‘ಸುವರ್ಣನ್ಯೂಸ್.ಕಾಂ’ಗೆ ಪ್ರತಿಕ್ರಿಯಿಸಿರುವ ಅಂಕಿತಾ, ಹಾಕಿ ಇಂಡಿಯಾ ವಿವಿಧ ಕೋರ್ಸ್‌ಗಳನ್ನು ಮಾಡಿದ್ದೇನೆ. ಇದೀಗ ರಾಷ್ಟ್ರೀಯ ಸೀನಿಯರ್‌ ವುಮೆನ್ಸ್‌ ತಂಡಕ್ಕೆ ಸಹಾಯಕ ಕೋಚ್‌ ಆಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಸಾಯ್‌ ಕ್ರೀಡಾ ಪ್ರಾಧಿಕಾರದಲ್ಲಿದ್ದ ಮುತ್ತುಕುಮಾರ್‌ ನನಗೆ ರೋಲ್‌ ಮಾಡೆಲ್‌. ನಾನು ಹಾಕಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀನಿವಾಸ್‌ ಅವರೇ ಕಾರಣ. ಕೋಚ್‌ಗಳಾದ ಕರುಂಬಯ್ಯ, ಸುರೇಶ್‌, ಶಂಕರ್‌, ವಿವೇಕ್‌, ಶ್ರೀಪತಿ, ಈರಪ್ಪ ಅವರು ತನಗೆ ಬಹಳಷ್ಟುಸಹಕಾರ ನೀಡಿದ್ದಾರೆ. ಮನೆಯಲ್ಲಿ ಕುಟುಂಬ ಹಾಗೂ ಪತಿಯ ಸಂಪೂರ್ಣ ಬೆಂಬಲ ಇದೆ ಎನ್ನುತ್ತಾರೆ ಅಂಕಿತಾ.

ಭಾರತೀಯ ಹಾಕಿ ತಂಡದಲ್ಲಿ ಸ್ಥಾನ ಪಡೆಯಬೇಕೆಂಬ ಆಸೆ ಇತ್ತು. ಆದರೆ ಅದು ಸಾಧ್ಯವಾಗಿಲ್ಲ. ಆದ್ದರಿಂದ ನನ್ನ ಆಟಗಾರರನ್ನಾದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದುಕೊಂಡು ಹೋಗಬೇಕೆಂದುಕೊಂಡಿದ್ದೆ. ಇದೀಗ ರಾಷ್ಟ್ರೀಯ ಹಿರಿಯ ಮಹಿಳೆಯರ ಹಾಕಿ ತಂಡಕ್ಕೆ ಸಹಾಯಕ ಕೋಚ್‌ ಆಗಿ ಆಯ್ಕೆಯಾಗಿರುವುದು ಖುಷಿ ತಂದಿದೆ. ಮುಂದೆ ಏಷ್ಯನ್‌ ಚಾಂಪಿಯನ್‌ ಟ್ರೋಫಿ, ಒಲಿಂಪಿಕ್‌ಗೆ ತೆರಳುವ ತಂಡಕ್ಕೆ ಕೋಚ್‌ ಆಗಬೇಕೆಂಬ ಕನಸಿದೆ ಎಂದು ರಾಷ್ಟ್ರೀಯ ಹಾಕಿ ತಂಡದ ಸಹಾಯಕ ಹಾಕಿ ಕೋಚ್‌ ಅಂಕಿತಾ ಸುರೇಶ್‌ ಹೇಳಿದ್ದಾರೆ.

ವರದಿ: ವಿಘ್ನೇಶ್ ಎಂ.ಭೂತನಕಾಡು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೋಹರ್‌ ಕಪ್: ಹಾಕಿ ಪಂದ್ಯದಲ್ಲಿ ಭಾರತ-ಪಾಕ್‌ ಹ್ಯಾಂಡ್‌ಶೇಕ್‌!
ಕ್ರಿಕೆಟ್ ಆಯ್ತು, ಈಗ ಭಾರತ-ಪಾಕ್ ಹಾಕಿಯಲ್ಲೂ ನೋ ಹ್ಯಾಂಡ್ ಶೇಕ್ ?