Asia Cup 2022: ಸೂಪರ್‌ 4ಗೆ ಭಾರತ ಹಾಕಿ ತಂಡ ಲಗ್ಗೆ

By Kannadaprabha NewsFirst Published May 27, 2022, 9:17 AM IST
Highlights

* ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ ಹಾಕಿ ತಂಡ

* ಭಾರತ ತಂಡಕ್ಕೆ ಇಂಡೋನೇಷ್ಯಾದೆದುರು 16-0 ಅಂತರದ ಭರ್ಜರಿ ಗೆಲುವು

* ಏಷ್ಯಾ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಸೂಪರ್‌ 4ಗೆ ಪ್ರವೇಶಿದ ಭಾರತ

ಜಕಾರ್ತ(ಮೇ.27): ಏಷ್ಯಾ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ (Asia Cup Hockey Tournament) ಸೂಪರ್‌ 4ಗೆ ಪ್ರವೇಶಿಸಬೇಕಿದ್ದರೆ ಏನು ಮಾಡಬೇಕು ಎನ್ನುವ ಸ್ಪಷ್ಟ ಗುರಿಯೊಂದಿಗೆ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಗುರುವಾರ ಇಂಡೋನೇಷ್ಯಾ ವಿರುದ್ಧ ಕಣಕ್ಕಿಳಿದ ಭಾರತ, 16-0 ಗೋಲುಗಳ ಅಂತರದಲ್ಲಿ ಜಯಿಸಿ ಗುರಿ ಸಾಧಿಸಿದೆ. ಗುರುವಾರ ಜಪಾನ್‌ ವಿರುದ್ಧ ಪಾಕಿಸ್ತಾನ 2-3ರಿಂದ ಸೋತ ಬಳಿಕ, ಪಾಕಿಸ್ತಾನವನ್ನು ಗೋಲುಗಳ ವ್ಯತ್ಯಾಸದ ಆಧಾರದಲ್ಲಿ ಹಿಂದಿಕ್ಕಿ ಸೂಪರ್‌ 4ರ ಹಂತ ಪ್ರವೇಶಿಸಲು ಭಾರತ 16 ಗೋಲುಗಳ ಅಂತರದಲ್ಲಿ ಗೆಲ್ಲಬೇಕಿತ್ತು. ಅದನ್ನು ಸಾಧಿಸಿದ ಭಾರತ, ಪಾಕಿಸ್ತಾನದ 2023ರ ಹಾಕಿ ವಿಶ್ವಕಪ್‌ ಕನಸಿಗೂ ಕೊಳ್ಳಿ ಇಟ್ಟಿತು.

ಭಾರತದ (Indian Hockey Team) ಆಕ್ರಮಣಕಾರಿ ಆಟವನ್ನು ತಡೆಯಲಷ್ಟೇ ಪ್ರಯತ್ನಿಸಿದ ಇಂಡೋನೇಷ್ಯಾ, ಪಂದ್ಯದ ಬಹುತೇಕ ಸಮಯ ಅಂಕಣದ ತನ್ನ ಭಾಗದಲ್ಲೇ ಉಳಿಯಿತು. ಭಾರತೀಯರಿಗೆ ನಿರಂತರವಾಗಿ ಪೆನಾಲ್ಟಿ ಕಾರ್ನರ್‌ ಅವಕಾಶಗಳು ಸಿಕ್ಕರೂ ಅದರ ಸರಿಯಾದ ಲಾಭವೆತ್ತಲಿಲ್ಲ. ಪಂದ್ಯದಲ್ಲಿ ಒಟ್ಟು 21 ಪೆನಾಲ್ಟಿ ಕಾರ್ನರ್‌ಗಳಲ್ಲಿ ಭಾರತ ಕೇವಲ 8ರಲ್ಲಿ ಗೋಲು ಬಾರಿಸಿತು. ಮೊದಲಾರ್ಧದಲ್ಲಿ 6 ಗೋಲು ಬಾರಿಸಿದ್ದ ಭಾರತ, ದ್ವಿತೀಯಾರ್ಧದಲ್ಲಿ 10 ಗೋಲು ಗಳಿಸಿತು. ದಿಪ್ಸನ್‌ ಟಿರ್ಕೆ 5, ಕರ್ನಾಟಕದ ಆಭರಣ್‌ ಸುದೇವ್‌ 3, ಎಸ್‌.ವಿ.ಸುನಿಲ್‌, ಸೆಲ್ವಂ ಕಾರ್ತಿ, ಪವನ್‌ ರಾಜ್‌ಭಾರ್‌ ತಲಾ 2, ಉತ್ತಮ್‌ ಸಿಂಗ್‌ ಹಾಗೂ ನೀಲಂ ಸಂಜೀಪ್‌ ತಲಾ 1 ಗೋಲು ಹೊಡೆದರು.

‘ಎ’ ಗುಂಪಿನಿಂದ ಭಾರತ, ಜಪಾನ್‌, ‘ಬಿ’ ಗುಂಪಿನಿಂದ ದ.ಕೊರಿಯಾ, ಮಲೇಷ್ಯಾ ಸೂಪರ್‌ 4ಕ್ಕೆ ಪ್ರವೇಶಿಸಿವೆ. ಈ ಹಂತದಲ್ಲಿ ತಂಡಗಳು ತಲಾ 3 ಪಂದ್ಯಗಳನ್ನಾಡಲಿದ್ದು, ಅಗ್ರ 2 ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ.

Magnificent game for as they mark a big win against Indonesia at the Hero Asia Cup 2022 to qualify for the Super 4s of the Hero Asia Cup 2022!😍 pic.twitter.com/TJOEixswSk

— Hockey India (@TheHockeyIndia)

Following our resounding victory over Indonesia, we leaped to 2️⃣nd place and got qualified for the Hero Asia Cup 2022 Super 4s! pic.twitter.com/CJqwvzqVVP

— Hockey India (@TheHockeyIndia)

ಗ್ರೀಸ್‌ನಲ್ಲಿ ಶ್ರೀಶಂಕರ್‌ಗೆ ಲಾಂಗ್‌ ಜಂಪ್‌ ಚಿನ್ನ

ನವದೆಹಲಿ: ಗ್ರೀಸ್‌ನಲ್ಲಿ ಬುಧವಾರ ನಡೆದ 12ನೇ ಅಂತಾರಾಷ್ಟ್ರೀಯ ಜಿಗಿತಗಳ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಶ್ರೀಶಂಕರ್‌ ಮುರಳಿ ಲಾಂಗ್‌ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಬುಧವಾರ ಅವರು 8.31 ಮೀ. ದೂರಕ್ಕೆ ನೆಗೆದು ಬಂಗಾರ ಗೆದ್ದರೆ, ಸ್ವೀಡನ್‌ನ ಮೊಂಟ್ಲರ್‌(8.27 ಮೀ) ಬೆಳ್ಳಿ ಹಾಗೂ ಫ್ರಾನ್ಸ್‌ನ ಜುಲೆಸ್‌ (8.17 ಮೀ.) ಕಂಚು ಜಯಿಸಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಶ್ರೀಶಂಕರ್‌ ಕಳೆದ ತಿಂಗಳು 8.36 ಮೀ. ದೂರಕ್ಕೆ ನೆಗೆದು ರಾಷ್ಟ್ರೀಯ ದಾಖಲೆ ಬರೆದಿದ್ದರು.

ನಾಯಿ ಜೊತೆ ಐಎಎಸ್ ಅಧಿಕಾರಿಯ ವಾಕಿಂಗ್, ಅದಕ್ಕಾಗಿ ಅಥ್ಲೀಟ್ಸ್ ಗಳನ್ನು ಸ್ಟೇಡಿಯಂನಿಂದ ಹೊರಹಾಕಿದರು!

ಲವ್ಲೀನಾ ಈಗ ಬಾಕ್ಸಿಂಗ್‌ ಅಥ್ಲೀಟ್ಸ್‌ ಸಮಿತಿ ಮುಖ್ಯಸ್ಥೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಬಾಕ್ಸರ್‌, ಭಾರತದ ಲವ್ಲೀನಾ ಬೊರ್ಗೊಹೈನ್‌ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ(ಐಬಿಎ)ಯ ಅಥ್ಲೀಟ್ಸ್‌ ಸಮಿತಿಯ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ ವೇಳೆ ನಡೆದ ಮತದಾನದಲ್ಲಿ ಲವ್ಲೀನಾ ಗರಿಷ್ಠ ಮತಗಳನ್ನು ಪಡೆದಿದ್ದಾರೆ. ಭಾರತದ ಮತ್ತೋರ್ವ ಬಾಕ್ಸರ್‌ ಶಿವ ಥಾಪ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಇಂದಿನಿಂದ ಬೆಂಗ್ಳೂರಲ್ಲಿ 3*3 ಬಾಸ್ಕೆಟ್‌ಬಾಲ್‌ ಫೈನಲ್ಸ್‌

ಬೆಂಗಳೂರು: ಚೊಚ್ಚಲ ಆವೃತ್ತಿಯ 3*3 ಇಂಡಿಯನ್‌ ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಲೀಗ್‌(ಐಎನ್‌ಬಿಎಲ್‌) ಫೈನಲ್ಸ್‌ ಶುಕ್ರವಾರ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಫೈನಲ್‌ ಪಂದ್ಯ ಮೇ 29ಕ್ಕೆ ನಡೆಯಲಿದೆ. ಮಾ.18ಕ್ಕೆ ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಆರಂಭವಾಗಿದ್ದ ಟೂರ್ನಿ ಬಳಿಕ ದೇಶಾದ್ಯಂತ 20 ನಗರಗಳಲ್ಲಿ ಆಯೋಜಿಸಲಾಗಿದ್ದು, 2900ಕ್ಕೂ ಹೆಚ್ಚು ತಂಡಗಳು, 9000ಕ್ಕೂ ಅಧಿಕ ಆಟಗಾರರು ಪಾಲ್ಗೊಂಡಿದ್ದಾರೆ. ಇದರಲ್ಲಿ ಆಯ್ಕೆಯಾಗಿರುವ 80 ತಂಡಗಳು ಫೈನಲ್ಸ್‌ನಲ್ಲಿ ಪುರುಷ, ಮಹಿಳೆ, ಅಂಡರ್‌-18 ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಸ್ಪರ್ಧಿಸಲಿವೆ ಎಂದು ಭಾರತೀಯ ಬಾಸ್ಕೆಟ್‌ಬಾಲ್‌ ಫೆಡರೇಶನ್‌ ಮಾಹಿತಿ ನೀಡಿದೆ.


 

click me!