FIH Hockey5s ಎಫ್‌ಐಎಚ್‌ ಹಾಕಿ ಫೈವ್ಸ್ ಟೂರ್ನಿ, ಭಾರತ ತಂಡಕ್ಕೆ ರಾಜ್ಯದ ರಾಹೀಲ್‌!

By Suvarna News  |  First Published May 19, 2022, 3:25 PM IST
  • ಜೂ.4, 5ಕ್ಕೆ ಸ್ವಿಜರ್‌ಲೆಂಡ್‌ನಲ್ಲಿ ಟೂರ್ನಿ
  •  ಕರ್ನಾಟಕದ ಮೊಹಮದ್‌ ರಾಹೀಲ್‌ಗೆ ಸ್ಥಾನ 
  • ಭಾರತ ಸೇರಿದೆಂತೆ 5 ತಂಡಗಳು ಭಾಗಿ

ನವದೆಹಲಿ(ಮೇ.19): ಚೊಚ್ಚಲ ಆವೃತ್ತಿಯ ಎಫ್‌ಐಎಚ್‌ ಹಾಕಿ ಫೈವ್ಸ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, 9 ಸದಸ್ಯರ ತಂಡದಲ್ಲಿ ಕರ್ನಾಟಕದ ಮೊಹಮದ್‌ ರಾಹೀಲ್‌ ಸ್ಥಾನ ಪಡೆದಿದ್ದಾರೆ. ಡಿಫೆಂಡರ್‌ ಗುರಿಂದರ್‌ ಸಿಂಗ್‌ ತಂಡವನ್ನು ಮುನ್ನಡೆಸಲಿದ್ದಾರೆ. ಸ್ವಿಜರ್‌ಲೆಂಡ್‌ನ ಲುಸ್ಸಾನೆಯಲ್ಲಿ ಜೂ.4, 5ರಂದು ನಡೆಯಲಿರುವ ಟೂರ್ನಿಯಲ್ಲಿ ಭಾರತ, ಪೋಲೆಂಡ್‌, ಸ್ವಿಜರ್‌ಲೆಂಡ್‌, ಉರುಗ್ವೆ ಮತ್ತು ದಕ್ಷಿಣ ಆಫ್ರಿಕಾ ಸೆಣಸಲಿವೆ. ಮೊದಲ ದಿನ ಭಾರತ ತಂಡ ಉರುಗ್ವೆ ಹಾಗೂ ಪೋಲೆಂಡ್‌ ವಿರುದ್ಧ ಆಡಲಿದ್ದು, 2ನೇ ದಿನ ಸ್ವಿಜರ್‌ಲೆಂಡ್‌ ಮತ್ತು ದ.ಆಫ್ರಿಕಾವನ್ನು ಎದುರಿಸಲಿದೆ. ಜೂ.5ರಂದೇ ಅಗ್ರ 2 ಸ್ಥಾನ ಪಡೆಯುವ ತಂಡಗಳ ನಡುವೆ ಫೈನಲ್‌ ನಡೆಯಲಿದೆ.

ಹಾಕಿಯ ‘ಟಿ20’ ಈ ಹಾಕಿ ಫೈವ್ಸ್ ಟೂರ್ನಿ
ಸಂಪ್ರದಾಯಿಕ ಹಾಕಿಗೂ ಈ ಹಾಕಿ ಫೈವ್ಸ್‌ಗೂ ಹಲವು ವ್ಯತ್ಯಾಸಗಳಿವೆ. ಇದರಲ್ಲಿ 11ರ ಬದಲು ಕೇವಲ 5 ಆಟಗಾರರು ಆಡಲಿದ್ದಾರೆ. ಅಂಕಣ ಸಣ್ಣದಿರಲಿದೆ. ಪ್ರತಿ ಪಂದ್ಯ ತಲಾ 10 ನಿಮಿಷಗಳ ಎರಡು ಅವಧಿ ಎಂದರೆ ಒಟ್ಟು 20 ನಿಮಿಷಗಳ ನಡೆಯಲಿದೆ. ಇಲ್ಲಿ ಹೆಚ್ಚೆಚ್ಚು ಗೋಲುಗಳು ದಾಖಲಾಗಲಿವೆ. ಇದೊಂದು ರೀತಿ ಹಾಕಿಯ ಟಿ20 ಇದ್ದಂತೆ.

Latest Videos

undefined

ಭಾರತೀಯ ಹಾಕಿ ತಂಡಕ್ಕೆ ಕರುನಾಡ ಆಭರಣ..!

ಏಷ್ಯಾ ಕಪ್‌ ಹಾಕಿ: ಭಾರತ ತಂಡಲ್ಲಿ ರಾಜ್ಯದ ಮೂವರು
ಇಂಡೋನೇಷ್ಯಾದ ಜರ್ಕಾತದಲ್ಲಿ ಮೇ 23ರಿಂದ ಜೂನ್‌ 1ರ ವರೆಗೆ ನಡೆಯಲಿರುವ ಏಷ್ಯಾ ಕಪ್‌ ಹಾಕಿ ಟೂರ್ನಿಯ ಭಾರತ ಪುರುಷರ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೋಮವಾರ ಹಾಕಿ ಇಂಡಿಯಾ 20 ಆಟಗಾರರ ತಂಡವನ್ನು ಪ್ರಕಟಿಸಿತು. ರಾಜ್ಯದ ಶೇಷೇ ಗೌಡ ಬಿ.ಎಂ. ಹಾಗೂ ಆಭರಣ್‌ ಸುದೇವ್‌ ಇದೇ ಮೊದಲ ಬಾರಿ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದು, ಹಿರಿಯ ಫಾರ್ವರ್ಡ್‌ ಆಟಗಾರ ಎಸ್‌.ವಿ.ಸುನಿಲ್‌ ಕೂಡಾ ತಂಡಕ್ಕೆ ಮರಳಿದ್ದಾರೆ. ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿ ಬಳಿಕ ಹಿಂಪಡೆದ ರೂಪಿಂದರ್‌ ಸಿಂಗ್‌ ಪಾಲ್‌ ನಾಯಕ, ಬಿರೇಂದ್ರ ಲಕ್ರಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ಗಾಯಾಳು ರೂಪಿಂದರ್‌ ಏಷ್ಯಾ ಕಪ್‌ನಿಂದ ಔಟ್‌
ನಿವೃತ್ತಿ ತ್ಯಜಿಸಿ ಭಾರತ ತಂಡಕ್ಕೆ ವಾಪಸಾಗಿ ನಾಯಕನ ಸ್ಥಾನ ಪಡೆದಿದ್ದ ಹಿರಿಯ ಹಾಕಿ ಆಟಗಾರ ರೂಪಿಂದರ್‌ ಸಿಂಗ್‌ ಗಾಯಗೊಂಡಿದ್ದು, ಮೇ 23ರಿಂದ ಜಕಾರ್ತದಲ್ಲಿ ಆರಂಭವಾಗಲಿರುವ ಏಷ್ಯಾ ಕಪ್‌ ಹಾಕಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅಭ್ಯಾಸ ವೇಳೆ ಅವರು ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಟೂರ್ನಿಗೆ ಲಭ್ಯರಿಲ್ಲ ಎಂದು ಹಾಕಿ ಇಂಡಿಯಾ ಶುಕ್ರವಾರ ಮಾಹಿತಿ ನೀಡಿದೆ. ಉಪನಾಯಕನಾಗಿ ಆಯ್ಕೆಯಾಗಿದ್ದ ಬೀರೇಂದ್ರ ಲಾಕ್ರಾ ತಂಡದ ನಾಯಕತ್ವ ವಹಿಸಲಿದ್ದು, ಕರ್ನಾಟಕದ ಹಿರಿಯ ಆಟಗಾರ ಎಸ್‌.ವಿ.ಸುನಿಲ್‌ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ರೂಪಿಂದರ್‌ ಬದಲು ನೀಲಂ ಸಂಜೀಪ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಗ್ಯಾರೇಜ್ ಸೇರಬೇಕಿದ್ದ ಶೇಷೇಗೌಡ ಈಗ ರಾಷ್ಟ್ರೀಯ ಹಾಕಿಪಟು..!

ಏಷ್ಯಾಕಪ್‌ಗೆ ಭಾರತ ಹಾಕಿ ತಂಡ ಅಭ್ಯಾಸ ಆರಂಭ
ಮೇ 23ರಿಂದ ಜೂನ್‌ 1ರ ವರೆಗೂ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಪುರುಷರ ಏಷ್ಯಾಕಪ್‌ ಹಾಕಿ ಟೂರ್ನಿಗೆ ಹಾಲಿ ಚಾಂಪಿಯನ್‌ ಭಾರತ ತಂಡ ಸೋಮವಾರದಿಂದ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ದಲ್ಲಿ ಅಭ್ಯಾಸ ಆರಂಭಿಸಿದೆ. ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಮಲೇಷ್ಯಾ, ಜಪಾನ್‌, ದ.ಕೊರಿಯಾ, ಇಂಡೋನೇಷ್ಯಾ, ಬಾಂಗ್ಲಾದೇಶ ಹಾಗೂ ಒಮಾನ್‌ ತಂಡಗಳು ಪಾಲ್ಗೊಳ್ಳಲಿವೆ. ಈ ವರೆಗೂ ಒಟ್ಟು 10 ಆವೃತ್ತಿಗಳು ನಡೆದಿದ್ದು, ಭಾರತ 2003, 2007 ಹಾಗೂ 2017ರಲ್ಲಿ ಚಾಂಪಿಯನ್‌ ಆಗಿತ್ತು.

click me!