* ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಒಡಿಶಾ ಚಾಂಪಿಯನ್
* ಚೊಚ್ಚಲ ಪ್ರಶಸ್ತಿ ಗೆಲ್ಲುವ ಕರ್ನಾಟಕ ತಂಡದ ಕನಸು ಭಗ್ನ
* ಒಡಿಶಾ ಮೊದಲ ಬಾರಿ ಚಾಂಪಿಯನ್ ಪಟ್ಟ
ಭೋಪಾಲ್(ಮೇ.18): ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ (Senior Women's National Championship 2022) ಚೊಚ್ಚಲ ಪ್ರಶಸ್ತಿ ಗೆಲ್ಲುವ ಕರ್ನಾಟಕ ತಂಡದ ಕನಸು ಭಗ್ನಗೊಂಡಿದೆ. ಮಂಗಳವಾರ ನಡೆದ 12ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ರಾಜ್ಯ ತಂಡ ಒಡಿಶಾ ವಿರುದ್ಧ 0-2 ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಒಡಿಶಾ ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಪಂದ್ಯದ ಆರಂಭದಲ್ಲಿ ಉಭಯ ತಂಡಗಳಿಂದ ತೀವ್ರ ಪೈಪೋಟಿ ಉಂಟಾಗಿತ್ತು. ಇತ್ತಂಡಗಳ ಡಿಫೆಂಡರ್‌ಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ ಪರಿಣಾಮ ಮೊದಲಾರ್ಧದಲ್ಲಿ ಗೋಲು ದಾಖಲಾಗಲಿಲ್ಲ. ಆದರೆ 34ನೇ ನಿಮಿಷದಲ್ಲಿ ಪೂನಂ ಬಾರ್ಲಾ ಒಡಿಶಾಗೆ ಗೋಲಿನ ಆರಂಭ ನೀಡಿದರು. ಕಾಂಚನ್ ಬಾರ್ಲಾ 59ನೇ ನಿಮಿಷದಲ್ಲಿ ಬಾರಿಸಿದ ಗೋಲು ಕರ್ನಾಟಕಕ್ಕೆ ಪ್ರಶಸ್ತಿ ತಪ್ಪಿಸಿತು. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹರಾರಯಣವನ್ನು 3-2 ಗೋಲುಗಳಿಂದ ಸೋಲಿಸಿದ ಜಾರ್ಖಂಡ್ ಕಂಚಿನ ಪದಕ ತನ್ನದಾಗಿಸಿಕೊಂಡಿತು.
undefined
ಮಿನಿ ಒಲಿಂಪಿಕ್ಸ್: ಈಜಿನಲ್ಲಿ ಎರಡು ಚಿನ್ನ ಗೆದ್ದ ನಯನಾ
ಬೆಂಗಳೂರು: 2ನೇ ಆವೃತ್ತಿ ಕರ್ನಾಟಕ ಮಿನಿ ಒಲಿಂಪಿಕ್ಸ್‌ನ (Mini Olympics) 2ನೇ ದಿನವಾದ ಮಂಗಳವಾರ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ವಹಿತಾ ನಯನಾ 2 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ. ಬಾಲಕಿಯರ ವಿಭಾಗದ 400 ಮೀ. ಫ್ರೀಸ್ಟೈಲ್‌ನಲ್ಲಿ ಅವರು 4 ನಿಮಿಷ 53.59 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೊದಲ ಚಿನ್ನ ಗೆದ್ದರೆ, 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 1 ನಿ. 19.06 ಸೆಕೆಂಡ್‌ಗಳಲ್ಲಿ ಕ್ರಮಿಸಿ ಮತ್ತೊಂದು ಸ್ವರ್ಣಕ್ಕೆ ಮುತ್ತಿಕ್ಕಿದರು. ತನಿಷಿ ಗುಪ್ತಾ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಳ್ಳಿ, 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಗೆದ್ದರು. 50 ಮೀ. ಬ್ಯಾಕ್‌ಸ್ಟೋಕ್‌ನಲ್ಲಿ ಧಿನಿದಿ, 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಸಿದ್ಧಿ ಗೌತಮ್ ಚಿನ್ನ ಗೆದ್ದರು. ಕೂಟದ ಮೊದಲ ದಿನ 30 ಮೀ. ಆರ್ಚರಿಯಲ್ಲಿ ಚಿನ್ನ ಗೆದ್ದಿದ್ದ ಪ್ರಪುಲ್ ಮತ್ತೊಂದು ಚಿನ್ನ ತಮ್ಮದಾಗಿಸಿಕೊಂಡರು. ಅವರು ಬಾಲಕರ ವಿಭಾಗದ 20 ಮೀ.ನಲ್ಲಿ ಸ್ವರ್ಣ ಪಡೆದರು.
ಇಂದಿನಿಂದ ಕರ್ನಾಟಕ ಮಿನಿ ಒಲಿಂಪಿಕ್ಸ್ ಆರಂಭ
ಹಾಕಿ ಬಾಲಕರ ವಿಭಾಗದ ಪಂದ್ಯದಲ್ಲಿ ಹಾಸನ ತಂಡ ದಕ್ಷಿಣ ಕನ್ನಡ ವಿರುದ್ಧ, ಕೊಡಗು ತಂಡ ಬೆಳಗಾವಿ ವಿರುದ್ಧ ಜಯಗಳಿಸಿತು. ಕಲಬುರಗಿಯನ್ನು ಬಾಗಲಕೋಟೆ ಮಣಿಸಿತು. ಬಾಲಕಿಯರ ವಿಭಾಗದಲ್ಲಿ ಹಾಸನ ಹಾಗೂ ಕೊಡಗಿನ ತಂಡಗಳು ಜಯಭೇರಿ ಬಾರಿಸಿತು. ಬಾಲಕರ ಫುಟ್ಬಾಲ್‌ನಲ್ಲಿ ಮೈಸೂರು, ಉತ್ತರ ಕನ್ನಡ, ಬೆಂಗಳೂರು, ಹಾಸನ, ಬಾಲಕಿಯರ ವಿಭಾಗದಲ್ಲಿ ವಿಜಯಪುರ, ಹಾವೇರಿ ತಂಡಗಳು ಗೆಲುವು ಸಾಧಿಸಿತು.
ಕೋವಿಡ್ ಕಾಟ: ಏಷ್ಯನ್ ಪ್ಯಾರಾ ಗೇಮ್ಸ್ ಮುಂದಕ್ಕೆ
ಬೀಜಿಂಗ್: ಚೀನಾದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಏಷ್ಯನ್ ಪ್ಯಾರಾ ಗೇಮ್ಸ್ ಮುಂದೂಡಿಕೆಯಾಗಿದೆ. ಈ ಬಗ್ಗೆ ಮಂಗಳವಾರ ಆಯೋಜಕರು ಅಧಿಕೃತ ಘೋಷಣೆ ಮಾಡಿದ್ದಾರೆ. ಕ್ರೀಡಾಕೂಟ ಹ್ಯಾಂಗ್ಝೂನಲ್ಲಿ ಅಕ್ಟೋಬರ್ 9ರಿಂದ 15ರ ವರೆಗೆ ನಡೆಯಬೇಕಿತ್ತು. ಕೆಲ ದಿನಗಳ ಹಿಂದಷ್ಟೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಆತಿಥ್ಯದಿಂದ ಚೀನಾ ಹಿಂದೆ ಸರಿದಿತ್ತು. ಸೆ.10ರಿಂದ 25ರ ವರೆಗೆ ನಡೆಯಬೇಕಿದ್ದ ಕ್ರೀಡಾಕೂಟ ಕೋವಿಡ್ ಕಾರಣಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದರು.
ಅಂಪೈರ್‌ಗೆ ಹಲ್ಲೆ: ಕುಸ್ತಿಪಟು ಸತೇಂದರ್‌ಗೆ ಆಜೀವ ನಿಷೇಧ
ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಆಯ್ಕೆ ಟ್ರಯಲ್ಸ್ ವೇಳೆ ರೆಫರಿ ಮೇಲೆ ಹಲ್ಲೆ ನಡೆಸಿದ ಕುಸ್ತಿಪಟು ಸತೇಂದರ್ ಮಲಿಕ್ ಅವರಿಗೆ ರಾಷ್ಟ್ರೀಯ ಕುಸ್ತಿ ಫೆಡರೇಷನ್ ಆಜೀವ ನಿಷೇಧ ಹೇರಿದೆ. ಮಂಗಳವಾರ 125 ಕೆಜಿ ವಿಭಾಗದ ಫೈನಲ್ ಪಂದ್ಯದ ವೇಳೆ ಸತೇಂದರ್ ರೆಫ್ರಿ ಜಗ್‌ಭೀರ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಪಂದ್ಯ ಕೊನೆಗೊಳ್ಳಲು 18 ಸೆಕೆಂಡುಗಳಿರುವಾಗ ರೆಫ್ರಿ ಅವರು ಸತೇಂದರ್‌ರ ಎದುರಾಳಿಗೆ ಟೇಕ್‌ಡೌನ್ ಅಂಕ ನೀಡಿದ್ದು, ಇದರಿಂದ ಪಂದ್ಯದಲ್ಲಿ ಸತೇಂದರ್ ಸೋಲನುಭವಿಸಿದ್ದರು. ಇದರಿಂದ ಆಕ್ರೋಶಿತರಾಗಿ ಸತೇಂದರ್ ರೆಫ್ರಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.