
ಡಾ। ಮುರಲೀ ಮೋಹನ್ ಚೂಂತಾರು
ದಂತ ವೈದ್ಯರು ಹಾಗೂ ಬಾಯಿ ಮುಖ ದವಡೆ ಶಸ್ತ್ರಚಿಕಿತ್ಸಕರು.
ಮಾರ್ಚ್ 6ರಂದು ವಿಶ್ವದಾದ್ಯಂತ ‘ದಂತ ವೈದ್ಯರ ದಿನ’ ಎಂದು ಆಚರಿಸಲಾಗುತ್ತದೆ. ದಂತ ವೈದ್ಯರ ಸೇವೆಯನ್ನು ಸ್ಮರಿಸುತ್ತಾ ಅವರಿಗೊಂದು ಧನ್ಯವಾದ ಅಥವಾ ಅಭಿನಂದನೆ ತಿಳಿಸುವ ಸುದಿನ. ಅದೇಕೋ ದಂತ ವೈದ್ಯರ ಬಗೆಗಿನ ಭಯ ಜನ ಸಾಮಾನ್ಯರಲ್ಲಿ ಇನ್ನೂ ಉಳಿದಿದೆ. ದಂತ ವೈದ್ಯರು ಎಂದರೆ ‘ನೋವು ಉಂಟು ಮಾಡುವವರು ಎಂಬ ಹಣೆ ಪಟ್ಟಿ ಇನ್ನೂ ಪೂರ್ತಿಯಾಗಿ ಕಳಚಿ ಕೊಂಡಿಲ್ಲ. ತಲೆ ತಲಾಂತರಗಳಿಂದ ದಂತ ವೈದ್ಯರನ್ನು ‘ಖಳ ನಾಯಕ’ನ ರೀತಿಯಲ್ಲಿ ಚಿತ್ರಿಸಲಾಗಿದೆ ಮತ್ತು ಜನಮಾನಸದಲ್ಲಿ ದಂತ ವೈದ್ಯರ ಬಗ್ಗೆ ಬೀತಿಯ ಕಲ್ಪನೆ ಇನ್ನೂ ತೊಲಗಿಲ್ಲದಿರುವುದೇ ಸೋಜಿಗದ ಮತ್ತು ದೌರ್ಭಾಗ್ಯದ ಸಂಗತಿ. ಯಾವೊಬ್ಬ ವ್ಯಕ್ತಿಯೂ ನೋವಿಲ್ಲದೇ ಇನ್ನೂ ದಂತ ವೈದ್ಯರ ಬಳಿ ಬರಲು ಹಿಂದೇಟು ಹಾಕುವುದಂತೂ ಸತ್ಯ. ದಂತ ವೈದ್ಯರ ದಂತ ಕುರ್ಚಿ ಮಾತ್ರ ಇನ್ನೂ ಹೆಚ್ಚಿನವರಿಗೆ ಮುಳ್ಳಿನ ಹಾಸಿಗೆಯಾಗಿ ಉಳಿದಿರುವುದೇ ಬಹು ದೊಡ್ಡ ಜೀರ್ಣಿಸಿಕೊಳ್ಳಲಾಗದ ಸತ್ಯ.
1790ರ ಮಾರ್ಚ್ 6ರಂದು ಅಮೆರಿಕದ ಖ್ಯಾತ ದಂತ ವೈದ್ಯ ಜಾನ್ ಗ್ರೀನ್‍ವುಡ್ ಎಂಬಾತ ಪ್ರಪ್ರಥಮ ಬಾರಿಗೆ ಕಾಲಿನಿಂದ ಚಾಲಿತವಾದ ದಂತ ಕುರ್ಚಿಯನ್ನು ಸಂಶೋಧಿಸಿದರು. ಇದರ ನೆನಪಿಗಾಗಿ ಮಾರ್ಚ್ 6 ಅನ್ನು ವಿಶ್ವ ದಂತ ವೈದ್ಯರ ದಿನ ಎಂದು ಆಚರಿಸುತ್ತಾರೆ. ಭಾರತ ದೇಶದಲ್ಲಿ ಡಾ। ಶಫಿಯುದ್ದೀನ್ ಅಹ್ಮದ್ ಅವರನ್ನು ದಂತ ವೈದ್ಯ ಶಾಸ್ತ್ರದ ಪಿತಾಮಹ ಎಂದೂ, ವಿಶ್ವದಲ್ಲಿ ಡಾ। ಪಿಯರಿ ಫೌಚಾರ್ಡ್ ಅವರನ್ನು ಆಧುನಿಕ ದಂತ ವೈದ್ಯಕೀಯ ಶಾಸ್ತ್ರದ ಪಿತಾಮಹ ಎಂದೂ ಕರೆಯುತ್ತಾರೆ.
ಹಿಂದಿನ ಕಾಲದಲ್ಲಿ ವೈಜ್ಞಾನಿಕತೆ ತಂತ್ರಜ್ಞಾನ ಮತ್ತು ಕೌಶಲ್ಯಗಳ ಕೊರತೆಯಿಂದಾಗಿ ದಂತ ವೈದ್ಯಕೀಯ ಕ್ಷೇತ್ರ ಅಂದರೆ ಜನರಲ್ಲಿ ಒಂದು ರೀತಿಯ ಅವ್ಯಕ್ತ ಭಯ ಕಾಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಹೊಸ ಹೊಸ ಆವಿಷ್ಕಾರ ಬಂದಿದೆ. ತಂತ್ರಜ್ಞಾನ ಮತ್ತು ವೈದ್ಯ ವಿಜ್ಞಾನದಲ್ಲಿ ಅಪಾರ ಬದಲಾವಣೆ ಉಂಟಾಗಿದೆ. ಹಾಗಾಗಿ ದಂತ ವೈದ್ಯಕೀಯ ಕ್ಷೇತ್ರ ಈಗ ಮೊದಲಿನಂತೆ ಉಳಿದಿಲ್ಲ. ದಂತ ವೈದ್ಯಕೀಯ ಆಸ್ಪತ್ರೆ ಎಂದರೆ ಯಾವುದೋ ಹೊಸ ಲೋಕಕ್ಕೆ ಎಂದಂತೆ ಭಾಸವಾಗುವ ರೀತಿಯಲ್ಲಿ ಮಾರ್ಪಾಡಾಗಿದೆ. ವಿಶಾಲವಾದ ಜಾಗ, ಮೆತ್ತನೆಯ ದೇಹದಾಕೃತಿಯ ದಂತ ಕುರ್ಚಿ, ಹವಾನಿಯಂತ್ರಿಕ ವಾತಾವರಣ, ಕಿವಿಗೊಪ್ಪುವ ಲಘು ಸಂಗೀತ... ಹಾಗೇ ಬಹಳಷ್ಟು ಬದಲಾವಣೆ ಉಂಟಾಗಿದೆ. ದಂತ ವೈದ್ಯಕೀಯ ಚಿಕಿತ್ಸೆ ಈಗ ಬರೀ ನೋವು ನಿವಾರಕ ವ್ಯವಸ್ಥೆಗಿಂತಲೂ ಸೌಂದರ್ಯವರ್ಧಕ ಚಿಕಿತ್ಸೆಯಾಗಿ ಬದಲಾಗಿರುವುದು ಖಂಡಿತವಾಗಿಯೂ ಸತ್ಯ. ಇಷ್ಟೆಲ್ಲಾ ಬದಲಾವಣೆಯಾಗಿದ್ದರೂ ಜನರು ಮಾತ್ರ ದಂತ ವೈದ್ಯರ ಬಗ್ಗೆ ಇನ್ನೂ ತಪ್ಪು ಕಲ್ಪನೆಗಳನ್ನು ಹೊಂದಿರುವುದು ಸೋಜಿಗವೇ ಸರಿ. ಅದೇನೋ ಇರಲಿ ನಿಮ್ಮ ನೋವನ್ನು ಶಮನ ಮಾಡುವ ನಿಮ್ಮನ್ನು ಸದಾ ನಗಿಸಲು ಮತ್ತು ಹಸನ್ಮುಖಿಯಾಗಿ ಇರುವಂತೆ ಶುಭ್ರ ದಂತಪಂಕ್ತಿಗಳಿಗಾಗಿ ಸದಾಕಾಲ ಶ್ರಮ ಪಡುವ ದಂತ ವೈದ್ಯರನ್ನು ಸ್ಮರಿಸುವ ಮತ್ತು ಒಂದು ಪುಟ್ಟ ಥ್ಯಾಂಕ್ಸ್ ಹೇಳುವ ದಿನ ಮಾರ್ಚ್ 6 ಎಂಬುದಂತೂ ನಿಜ.
1.ಬಾಯಿ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಜಾಗೃತಿ ಮೂಡಿಸುವ ಉದ್ದೇಶದಿಂದ ಆಚರಣೆ ಮಾಡಲಾಗುತ್ತಿದೆ.
2.ದಂತ ಸಂಬಂಧಿ ರೋಗಗಳಾದ ದಂತ ಕ್ಷಯ, ದಂತ ಕುಳಿ, ದಂತ ಸವೆತ, ದಂತ ಅತಿ ಸಂವೇದನೆ ಮುಂತಾದ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆ ಮಾಡಲಾಗುತ್ತದೆ.
3.ದಂತ ಆರೋಗ್ಯ ಮತ್ತು ಬಾಯಿ ಆರೋಗ್ಯಕ್ಕೆ ಪೂರಕವಾದ ಹವ್ಯಾಸಗಳ ಬಗ್ಗೆ ಜನರಲ್ಲಿ ಒಲವು ಮೂಡಿಸುವ ಉದ್ದೇಶದಿಂದಾಗಿ ಈ ಆಚರಣೆ ಮಾಡಲಾಗುತ್ತಿದೆ.
4.ಮಕ್ಕಳಲ್ಲಿ ದಂತ ಸಂಬಂಧಿ ರೋಗಗಳನ್ನು ತಡೆಯುವ ಬಗ್ಗೆ ಮತ್ತು ಮಕ್ಕಳಲ್ಲಿ ದಂತ ರಕ್ಷಣೆಯ ಬಗ್ಗೆ ಒಲವು ಮೂಡಿಸುವ ಉದ್ದೇಶದಿಂದ.
5.ಮುಖ ಮನಸ್ಸಿನ ಕನ್ನಡಿ ಇದ್ದಂತೆ. ಸುಂದರವಾದ ದಂತ ಪಂಕ್ತಿಗಳಿಂದ ಕೂಡಿದ ನಗು ಮುಖದ ಅಂದವನ್ನು ಹೆಚ್ಚಿಸುತ್ತದೆ. ಜನರ ಹಲ್ಲನ್ನು ಸರಿಪಡಿಸಿ ನಗುವಿನ ಮಾದಕತೆ ಹೆಚ್ಚಿಸುವಂತೆ ಪ್ರೇರೇಪಿಸಿ ರೋಗಿಗಳ ಆತ್ಮವಿಶ್ವಾಸವನ್ನು ವೃದ್ಧಿಸುವ ಸದುದ್ದೇಶದಿಂದ ಈ ಆಚರಣೆ ಮಾಡಲಾಗುತ್ತಿದೆ.
6.ದಂತ ಆರೋಗ್ಯವನ್ನು ವೃದ್ಧಿಸುವ ಹವ್ಯಾಸಗಳಾದ ದಂತದಾರ ಬಳಕೆ, ದಂತ ಕುಂಚಗಳ ಸೂಕ್ತ ಬಳಕೆ, ದಂತ ಚೂರ್ಣಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಮೂಲ ಉದ್ದೇಶದೊಂದಿಗೆ ದಂತ ವೈದ್ಯರ ದಿನ ಆಚರಿಸಲಾಗುತ್ತಿದೆ.
ದಂತ ವೈದ್ಯರ ದಿನದ ಸಂದೇಶ:
1.ದಿನಕ್ಕೆರಡು ಬಾರಿ ಕನಿಷ್ಠ ಮೂರು ನಿಮಿಷಗಳ ಕಾಲ ಹಲ್ಲುಜ್ಜಬೇಕು.
2.ದಿನಕ್ಕೊಮ್ಮೆಯಾದರೂ ದಂತದಾರ ಅಥವಾ ದಂತ ಬಳ್ಳಿ ಬಳಸಿ ಹಲ್ಲುಗಳ ಸಂದುಗಳನ್ನು ಶುಚಿಗೊಳಿಸಿ
3.ಕನಿಷ್ಠ ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿ ಮಾಡಬೇಕು. ಹಲ್ಲು ನೋವು ಬಂದಾಗ ಮಾತ್ರ ದಂತ ವೈದ್ಯರ ಭೇಟಿ ಮಾಡುವುದು ಸರಿಯಾದ ಕ್ರಮವಲ್ಲ.
4.ನೀವು ಸೇವಿಸುವ ಆಹಾರದ ಮೇಲೆ ನಿಗಾ ಇರಲಿ. ಸಮತೋಲಿತ ಮತ್ತು ಹಲ್ಲಿನ ಆರೋಗ್ಯಕ್ಕೆ ಪೂರಕವಾದ ನಾರುಯುಕ್ತ ಹಣ್ಣು ಹಂಪಲು, ಹಸಿ ತರಕಾರಿಯುಕ್ತ ಆಹಾರ ಸೇವಿಸಿ. ಇಂಗಾಲಯುಕ್ತ ಕೃತಕ ಪೇಯಗಳನ್ನು ತ್ಯಜಿಸಬೇಕು. ತಾಜಾ ಹಣ್ಣಿನ ರಸ, ಕಬ್ಬಿನ ಹಾಲು ಎಳನೀರು ಮುಂತಾದ ನೈಸರ್ಗಿಕ ಪೇಯಗಳನ್ನು ಸೇವಿಸಬೇಕು.
5.ಎರಡೂ ಊಟಗಳ ನಡುವೆ ಸಿಹಿ ಪದಾರ್ಥ ಮತ್ತು ಅಂಟು ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಅನಿವಾರ್ಯವಾದಲ್ಲಿ ಸೇವಿಸಿದ ಬಳಿಕ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು.
6.ಪ್ರತಿ ನಿತ್ಯ ರಾತ್ರಿ ಮಲಗುವ ಮುನ್ನ ಮೌತ್‍ವಾಶ್ ಬಳಸುವ ಹವ್ಯಾಸ ಮಾಡಿಕೊಳ್ಳಿ. ಕನಿಷ್ಠ ಪಕ್ಷ ಬಿಸಿ ನೀರಿಗೆ ಒಂದು ಚಿಟಿಕೆ ಉಪ್ಪುಹಾಕಿ. ಆ ದ್ರಾವಣದಿಂದ ಬಾಯಿ ಶುಚಿಗೊಳಿಸಬೇಕು.
7.ಪ್ರತಿ ವರ್ಷದಲ್ಲಿ ಒಮ್ಮೆಯಾದರೂ ದಂತ ವೈದ್ಯರ ಬಳಿ ಹಲ್ಲು ಶುಚಿಗೊಳಿಸಬೇಕು. ಇದರಿಂದ ಬಾಯಿವಾಸನೆ, ವಸಡಿನ ಉರಿಯೂತ ಮತ್ತು ವಸಡಿನಲ್ಲಿ ರಕ್ತ ಒಸರುವುದು ನಿಯಂತ್ರಣಕ್ಕೆ ಬರುತ್ತದೆ.
8.ಹಲ್ಲುನೋವು ಬಂದಾಗ ಸ್ವಯಂ ಔಷಧಿಗಾರಿಕೆ ಮಾಡಿಕೊಂಡು ನೋವು ನಿವಾರಕ ಔಷಧಿ ತೆಗೆದುಕೊಳ್ಳುವುದು ಬಹಳ ಅಪಾಯಕಾರಿ. ದಂತ ವೈದ್ಯರ ಸಲಹೆ ಅತೀ ಅಗತ್ಯ.
ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಹಲ್ಲಿನ ಆರೋಗ್ಯವೂ ಅತೀ ಅವಶ್ಯಕ. ಬಾಯಿ ಎನ್ನುವುದು ನಮ್ಮ ದೇಹದ ಪ್ರವೇಶ ದ್ವಾರವಿದ್ದಂತೆ. ಜೀರ್ಣಾಂಗ ವ್ಯೂಹದ ಹೊಸ್ತಿಲೇ ನಮ್ಮ ಬಾಯಿ ಆಗಿರುತ್ತದೆ. ಇಂತಹ ಬಾಯಿಯಲ್ಲಿ ಆರೋಗ್ಯವಂತ ಹಲ್ಲುಗಳು ಇಲ್ಲದಿದ್ದಲ್ಲಿ ಪ್ರಥಮ ಚುಂಬನಂ ದಂತಭಗ್ನಂ ಎಂಬಂತೆ ಜೀರ್ಣಾಂಗ ವ್ಯವಸ್ಥೆಯ ಹಳಿ ತಪ್ಪುವುದಂತೂ ಖಂಡಿತ. ಹಲ್ಲಿನ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಪರಿಪೂರ್ಣವಾಗಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಹಲ್ಲುಗಳ ಆರೋಗ್ಯ ನಿರ್ಲಕ್ಷಿಸಿದರೆ, ನಿಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುವುದು ಸಹಜ.
ಹಿಂದಿನ ಕಾಲದಲ್ಲಿ ದಂತ ವೈದ್ಯರು ಎಂದರೆ ಕೇವಲ ಹಲ್ಲು ತೆಗೆಯಲು ಮಾತ್ರ ಸೀಮಿತವಾಗಿದ್ದರು. ಆದರೆ ಈಗ ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಬಂದಿದೆ. ಮೂರನೇ ದವಡೆ ಹಲ್ಲಿನ ಒಳಭಾಗ ದಂತ ಮಜ್ಜೆಯ ಒಳಗಿನ ಆಕಾರ ಕೋಶ ಜೀವಕೋಶಗಳಿಂದ ಹೊಸತಾದ ಹಲ್ಲನ್ನು ಸೃಷ್ಟಿ ಮಾಡುವಲ್ಲಿಯವರೆಗೆ ದಂತ ವೈದ್ಯ ವಿಜ್ಞಾನ ಬೆಳೆದಿದೆ. ಈಗ ದಂತ ಚಿಕಿತ್ಸೆ ಕೇವಲ ರೋಗ ಚಿಕಿತ್ಸೆ ಪದ್ಧತಿಯಾಗಿ ಉಳಿಯದೆ, ರೋಗ ಬರದಂತೆ ತಡೆಯುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ನಿಯಮಿತವಾದ ದಂತ ತಪಾಸಣೆ, ದಂತ ಶುಚಿಗೊಳಿಸುವಿಕೆ, ಹಲ್ಲು ತುಂಬಿಸುವಿಕೆಯಿಂದ ಹಲ್ಲು ಹುಳುಕಾಗದಂತೆ ಮಾಡುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಜೊತೆಗೆ ಸೌಂದರ್ಯ ವರ್ಧಕ ಚಿಕಿತ್ಸೆಯಾಗಿ ಬದಲಾಗಿದೆ. ಹಲ್ಲಿನ ಅಂದವನ್ನು ವಿನೀರ್, ಕಿರೀಟ(ಕ್ರೌನ್) ಮತ್ತು ಹೊಸತಾದ ಸಿಮೆಂಟ್‌ಗಳಿಂದ ತುಂಬಿಸಿ, ವ್ಯಕ್ತಿಯ ನಗುವಿನ ವಿನ್ಯಾಸವನ್ನೇ ಬದಲಿಸಿ, ಆತನ ಜೀವನದ ದೃಷ್ಟಿಕೋನವನ್ನೇ ಬದಲಾಯಿಸುವ ಕಾಲದಲ್ಲಿ ನಾವಿದ್ದೇವೆ. ಹಿಂಜರಿಕೆ, ಕೀಳರಿಮೆ ಹೋಗಿ ಹೊಸ ಆತ್ಮ ವಿಶ್ವಾಸ ಬಂದು, ಆ ವ್ಯಕ್ತಿಯ ಜೀವನದ ದೃಷ್ಟಿಕೋನ ಬದಲಾಗಿ, ಆತ್ಮವಿಶ್ವಾಸ ಹೆಚ್ಚಿ, ಹೊಸತಾದ ಮರುಜನ್ಮ ನೀಡಲಾಗುತ್ತದೆ. ಚಿಕಿತ್ಸೆಗೆ ಹೆಚ್ಚು ಒತ್ತು ನೀಡುತ್ತಿದ್ದ ದಂತ ಚಿಕಿತ್ಸಾ ಪದ್ಧತಿ ಈಗ ಹೆಚ್ಚು ರೋಗ ತಡೆಯುವ ಚಿಕಿತ್ಸೆಯಾಗಿ ಪರಿವರ್ತನೆಯಾಗಿದೆ. ದಂತ ಚಿಕಿತ್ಸಾಲಯಗಳು ಬದಲಾಗಿ ಈಗ ದಂತ ಸ್ಪಾಗಳು ಹುಟ್ಟಿಕೊಂಡಿದೆ. ಒಟ್ಟು ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಪರಿಪೂರ್ಣ ಬೆಳವಣಿಗೆಯಲ್ಲಿ ಹಲ್ಲುಗಳ ಪಾತ್ರ ಬಹಳ ಮುಖ್ಯವಾಗಿದೆ. ಒಟ್ಟಿನಲ್ಲಿ ಸುಂದರ ಸದೃಢವಾದ ಹಲ್ಲುಗಳು ಮನುಷ್ಯನ ಆತ್ಮ ವಿಶ್ವಾಸದ ಮತ್ತು ವ್ಯಕ್ತಿತ್ವದ ಪ್ರತೀಕ. ಸುಂದರವಾಗಿ ನಗಲು, ಆಹಾರ ಜಗಿಯಲು, ಸ್ಪಷ್ಟವಾಗಿ ಮಾತನಾಡಲು ಮತ್ತು ದೇಹದ ಆರೋಗ್ಯದ ಸಮತೋಲನವನ್ನು ಕಾಪಾಡಲು ಹಲ್ಲಿನ ಆರೋಗ್ಯ ಅತೀ ಅವಶ್ಯಕ. ಈ ನಿಟ್ಟಿನಲ್ಲಿ ವ್ಯಕ್ತಿಯ ಆರೋಗ್ಯ ಪಾಲನೆಯಲ್ಲಿ ದಂತ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಕೊನೆಮಾತು:
ದಂತ ಸುರಕ್ಷತೆಗೆ ರೂಲ್ ಆಫ್ ಟೂ(Rule of two...2/2/2/2) ಇದರ ಪ್ರಕಾರ ಪ್ರತಿ ವರುಷದಲ್ಲಿ ಎರಡು ಬಾರಿ ದಂತ ವೈದ್ಯರ ಬಳಿ ದಂತ ತಪಾಸಣೆ, ದಿನಕ್ಕೆರಡು ಬಾರಿ ಎರಡು ನಿಮಿಷ ಹಲ್ಲುಜ್ಜುವಿಕೆ, ದಿನಕ್ಕೆರಡು ಬಾರಿ ದಂತ ದಾರ ಬಳಕೆ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.