ಹೃದಯಾಘಾತವಾದಾಗ ಜೀವ ಉಳಿಸಲು ತಕ್ಷಣಕ್ಕೆ ಏನು ಮಾಡಬೇಕು ?

By Suvarna News  |  First Published Sep 16, 2022, 10:17 AM IST

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವಿನ ಪ್ರಮಾಣ ಹೆಚ್ಚಾಗ್ತಿದೆ. ಅದರಲ್ಲೂ ಬಹುತೇಕರು ಸೂಕ್ತ ಸಮಯಕ್ಕೆ ಪ್ರಥಮ ಚಿಕಿತ್ಸೆ ದೊರಕದೆ  ಸಾವನ್ನಪ್ಪುತ್ತಾರೆ. ಹಾಗಿದ್ರೆ ಹೃದಯಾಘಾತವಾದಾಗ ವ್ಯಕ್ತಿಯ ಜೀವ ಉಳಿಸಲು ತಕ್ಷಣಕ್ಕೆ ಏನು ಮಾಡಬೇಕು ?


ಹೃದಯವು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ದೇಹದ ಉತ್ತಮ ಕಾರ್ಯನಿರ್ವಹಣೆಗೆ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಕಳಪೆ ಆಹಾರ ಪದ್ಧತಿ, ಜಡ ಜೀವನಶೈಲಿ ಮತ್ತು ಒತ್ತಡದ ಜೀವನವು ಹೃದಯದ ಆರೋಗ್ಯವನ್ನು ಹಾಳುಮಾಡುತ್ತದೆ. ಮಾತ್ರವಲ್ಲ ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್, ಕುಟುಂಬದ ಇತಿಹಾಸದಂತಹ ಅಂಶಗಳು ಹೃದಯದ ಆರೋಗ್ಯವನ್ನು ಹದಗೆಡಿಸಬಹುದು. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೃದಯರಕ್ತನಾಳದ ಕಾಯಿಲೆಗಳು ವಿಶ್ವಾದ್ಯಂತ ಅತಿ ಹೆಚ್ಚು ಸಾವುಗಳಿಗೆ ಕಾರಣವಾಗುತ್ತವೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ಪ್ರತಿ ವರ್ಷ ಸುಮಾರು 17.9 ಮಿಲಿಯನ್ ಜನರು ಸಾಯುತ್ತಾರೆ. ಆತಂಕಕಾರಿಯಾಗಿ, ಪ್ರತಿ ಐದು ಸಾವುಗಳಲ್ಲಿ ನಾಲ್ಕು ಹೃದಯಾಘಾತ (Heartattack) ಮತ್ತು ಪಾರ್ಶ್ವವಾಯುಗಳಿಂದ ಉಂಟಾಗುತ್ತವೆ ಮತ್ತು ಈ ಸಾವುಗಳಲ್ಲಿ (Death) ಮೂರನೇ ಒಂದು ಭಾಗವು 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಕಾಲಿಕವಾಗಿ ಸಂಭವಿಸುತ್ತದೆ. ಹಾಗಿದ್ರೆ ಯಾವಾಗ ಹೃದಯಾಘಾತವಾಗುತ್ತದೆ. ಹೃದಯಾಘಾತದ ಲಕ್ಷಣಗಳೇನು (Symptoms) ? ಹೃದಯಾಘಾತವಾದ ತಕ್ಷಣ ವ್ಯಕ್ತಿಯ ಜೀವವನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಮೊದಲಾದ ವಿಚಾರಗಳನ್ನು ತಿಳಿದುಕೊಳ್ಳೋಣ.

Tap to resize

Latest Videos

ಹಾರ್ಟ್ ಅಟ್ಯಾಕ್‌ ಆಗ್ಬಾರ್ದು ಆದ್ರೆ ಮೊದ್ಲೇ ಈ ಟೆಸ್ಟ್ ಮಾಡಿಸ್ಕೊಳ್ಳಿ

ಯಾವಾಗ ಹೃದಯಾಘಾತವಾಗುತ್ತದೆ ?
ಹೃದಯಾಘಾತವಾಗುವ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಯಾವಾಗ ಆಗುತ್ತದೆ ಎಂಬುದು ಹಲವರಿಗೆ ಗೊತ್ತಿಲ್ಲ.ಹೃದಯಾಘಾತದಲ್ಲಿ ಹೃದಯಕ್ಕೆ ರಕ್ತ ಸಂಚಲನೆ (Blood circulation) ಹಠಾತ್‌ ಆಗಿ ಬ್ಲಾಕ್ ಆಗುತ್ತದೆ. ಪ್ರತಿಫಲವಾಗಿ ಹೃದಯ ಸ್ತಂಭನ ಉಂಟಾಗಿ ಬಳಿಕ ಹೃದಯದಿಂದ ದೇಹಕ್ಕೆ ರಕ್ತ ಸಂಚಾರ ನಿಂತು ಹೋಗುತ್ತದೆ.

ಹೃದಯಾಘಾತದ ಲಕ್ಷಣಗಳೇನು ?
ಹೃದಯಾಘಾತವಾಗುವ ಮೊದಲು ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೃದಯಾಘಾತಕ್ಕೂ ಮೊದಲು ರೋಗಿಗಳ ಎದೆಯ ಎಡಭಾಗದಲ್ಲಿ ತೀಕ್ಷ್ಣ ನೋವು ಕಂಡು ಬರುತ್ತದೆ. ಎದೆಯ ಮೇಲೆ ಏನೋ ಭಾರವಾದ ವಸ್ತ ಕುಳಿತುಕೊಂಡ ಅನುಭವವಾಗುತ್ತದೆ. ನೋವು ಕ್ರಮೇಣ ಭುಜಗಳತ್ತ ವ್ಯಾಪಿಸಿ ಕೈ, ಬೆನ್ನು, ಕುತ್ತಿಗೆ, ಕೆಳ ದವಡೆ, ಹಲ್ಲು ಹಾಗೂ ಹೊಟ್ಟೆಯ (Stomach) ಮೇಲ್ಭಾಗಕ್ಕೂ ವಿಸ್ತರಿಸುತ್ತದೆ. ತಂಪು ವಾತಾವರಣದಲ್ಲೂ ಬೆವರಬಹುದು. ಉಸಿರಾಡಲು ಕಷ್ಟ, ವಾಕರಿಕೆ, ತಲೆ ಸುತ್ತುವುದು, ವೇಗದ ಎದೆಬಡಿತ ಮೊದಲಾದ ಲಕ್ಷಣಗಳು ಕಂಡು ಬರಬಹುದು.

ಹೃದಯಾಘಾತವಾದ ತಕ್ಷಣ ಏನು ಮಾಡಬೇಕು ?
ತಕ್ಷಣ ಸಮೀಪದ ಆಸ್ಪತ್ರೆಗೆ ಕರೆ ಮಾಡಿ ಆಂಬುಲೆನ್ಸ್ ತರಿಸಿಕೊಳ್ಳಿ. ಬಳಿಕ ರೋಗಿಯ (Patient) ಬಾಯಿಗೆ ಆಸ್ಪಿರಿನ್ ಗುಳಿಗೆಯನ್ನು ಹಾಕಿ ಚೀಪುತ್ತಾ ನುಂಗಲು ತಿಳಿಸಿ. ತಕ್ಷಣಕ್ಕೆ ಆಸ್ಪಿರಿನ್ ನೀಡುವ ಪ್ರಯೋಜನವೆಂದರೆ ಇದು ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಒಂದು ವೇಳೆ ರೋಗಿ ಪ್ರಜ್ಞಾಹೀನರಾದರೆ ಸಿಪಿಆರ್ (ಕಾರ್ಡಿಯೋ ವಲ್ಮನರಿ ರೆಸಪಿಟೇಶನ್‌) ನೀಡುವ ಕ್ರಮ ಅನುಸರಿಸಿ. ಈ ಬಗ್ಗೆ ಕೊಂಚ ತರಬೇತಿ ಪಡೆದಿದ್ದರೆ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. 

ಸೊಂಟದ ಕೊಬ್ಬು ಹೆಚ್ಚಳ ಹೃದಯಾಘಾತದ ಅಪಾಯ ಹೆಚ್ಚಿಸುತ್ತೆ!

ಸಿಪಿಆರ್ ಮಾಡುವ ವಿಧಾನ: ಒಂದು ಹಸ್ತದ ಹಿಂಭಾಗದಲ್ಲಿ ಇನ್ನೊಂದು ಹಸ್ತವನ್ನು ಇರಿಸಿ. ಕೆಳಗಿನ ಹಸ್ತದ ಕೆಳಭಾಗದ ರೋಗಿಯ ಎದೆಯ ನಡುಭಾಗಕ್ಕೆ ಬರುವಂತೆ ಇರಿಸಿ. ನಿಮ್ಮ ದೇಹದ ಭಾರ ಹಸ್ತದ ಮೇಲೆ ಬೀಳುವಂತೆ ಮಾಡುತ್ತಾ ಇರಿ. ಹೀಗೆ ಐದರ ವರೆಗೆ ಒತ್ತಿ ಒಂದೆರಡು ಕ್ಷಣ ನಿಲ್ಲಿಸಿ ಮತ್ತೆ ಇದನ್ನೇ ಕ್ರಮವನ್ನು ಮುಂದುವರಿಸಿ. ರೋಗಿಗೆ ಕೃತಕ ಉಸಿರಾಟವನ್ನು ಸಹ ನೀಡಬೇಕಾಗಿ ಬರಬಹುದು. 

ಸಿಪಿಆರ್ ಮಾಡುವ ಬಗ್ಗೆ ತರಬೇತಿ ಪಡೆಯಿರಿ: ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (ಸಿಪಿಆರ್‌)ಯನ್ನು ಸಾಮಾನ್ಯ ಜನರು ಪಡೆದುಕೊಂಡರೆ ಹೃದ್ರೋಗ ಸಂಬಂಧಿತ ಸಾವಿನ ಪ್ರಮಾಣ ತಗ್ಗಿಸಬಹುದು. ಆದರೆ ದೇಶದ ಬಹುಪಾಲು ಜನರಿಗೆ ಸಿಪಿಆರ್ ಕ್ರಮದ ಬಗ್ಗೆ ಅರಿವಿಲ್ಲ. ಹೀಗಾಗಿ ಹೃದಯಾಘಾತ ಸಂಭವಿಸುವ ವೇಳೆ ತುರ್ತು ಕ್ರಮ ಕೈಗೊಳ್ಳಲಾಗದೆ ಸಂಪೂರ್ಣವಾಗಿ ವೈದ್ಯರನ್ನೇ ಅವಲಂಬಿಸುತ್ತಾರೆ. ಪ್ರಥಮ ಚಿಕಿತ್ಸೆ ದೊರೆಯದ ಕಾರಣವೇ ಅದೆಷ್ಟೋ ಮಂದಿ ಸಾವನ್ನಪ್ಪುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಸಿಪಿಆರ್ ನೀಡುವ ಬಗ್ಗೆ ತಿಳಿದುಕೊಳ್ಳುವುದು ಒಳಿತು. 

click me!