Unripe Banana Use: ಅರ್ಧ ಗಳಿತ ಬಾಳೆಹಣ್ಣು ತಿನ್ನಿ, ಕ್ಯಾನ್ಸರ್‌ ದೂರವಿಡಿ

By Suvarna News  |  First Published Aug 11, 2022, 5:52 PM IST

ನಾರಿನಂಶ ಭರಿತ ಮತ್ತು ನಿರೋಧಕ ಸ್ಟಾರ್ಚ್‌ ಅಂಶ ಹೊಂದಿರುವ ಆಹಾರದಿಂದ ಹೊಟ್ಟೆ ಮತ್ತು ಕರುಳಿಗೆ ಸಂಬಂಧಿಸಿದ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ವಿಶೇಷವೆಂದರೆ, ಅರ್ಧ ಕಳಿತ ಬಾಳೆಹಣ್ಣು ಕ್ಯಾನ್ಸರ್‌ ತಡೆಯುವಲ್ಲಿ ಭಾರೀ ಪ್ರಯೋಜನಕಾರಿ ಎನ್ನುವುದು ಸಾಬೀತಾಗಿದೆ.
 


ಉತ್ತಮ ಆಹಾರ ಪದ್ಧತಿಯಿಂದ ಗುಣಮಟ್ಟದ ಜೀವನ ನಡೆಸಬಹುದು ಎನ್ನುವುದು ಕೇವಲ ಮಾತಲ್ಲ, ಅನುಭವವೇದ್ಯವಾಗುವಂಥದ್ದು. ನಮ್ಮ ನಡುವೆ ಕೆಲವು ಜನರಿರುತ್ತಾರೆ, ಎದುರು ಎಂಥದ್ದೇ ಕರಿದ ತಿಂಡಿಗಳನ್ನು ಇಟ್ಟರೂ ಸ್ವಲ್ಪೇ ಸ್ವಲ್ಪ ತಿನ್ನುತ್ತಾರೆ, ಅಥವಾ ತಿನ್ನುವುದೇ ಇಲ್ಲ ಅವರು ವಯಸ್ಸಾದರೂ ತಮ್ಮ ಕೆಲಸ ಮಾಡಿಕೊಂಡು, ಯಾರಿಗೂ ಭಾರವಾಗದೆ ಸುಲಲಿತವಾಗಿ ಜೀವನ ನಡೆಸುತ್ತಾರೆ. ಆದರೆ, ಇನ್ನು ಕೆಲವು ಜನ ಬಯಸಿ ಬಯಸಿ ಅಂತಹ ತಿಂಡಿಗಳನ್ನು ತಿನ್ನುತ್ತಾರೆ. ಇದರಿಂದ ವಯಸ್ಸಾದ ಬಳಿಕ ಸಾಕಷ್ಟು ಸಮಸ್ಯೆಯಾಗುತ್ತದೆ. ನಾರಿನಂಶ ಭರಿತ ಕೂಡಿರುವ ಆಹಾರ ಸೇವನೆ ಆರೋಗ್ಯಕ್ಕೆ ಭಾರೀ ಉತ್ತಮ ಎನ್ನುವುದು ನಮಗೆಲ್ಲ ತಿಳಿದೇ ಇದೆ. ದೀರ್ಘಕಾಲ ನಾರಿನಂಶ ಇರುವ ಆಹಾರ ಪದ್ಧತಿಯನ್ನೇ ಅನುಸರಿಸಿದರೆ ದೀರ್ಘಕಾಲದ ರೋಗಗಳು ಹೆಚ್ಚು ಬಾಧಿಸುವುದಿಲ್ಲ ಎನ್ನುತ್ತವೆ ಇದುವರೆಗಿನ ಅಧ್ಯಯನಗಳು. ಕೆಲವು ಕ್ಯಾನ್ಸರ್‌ ಗಳು ಸಹ ನಾರಿನಂಶಭರಿತ ಆಹಾರ ಪದ್ಧತಿಯಿಂದ ದೂರವಿಡಬಹುದು. ಸಂಸ್ಕರಿತ ಆಹಾರ ಮತ್ತು ನಾರಿನಂಶ ಕಡಿಮೆ ಇರುವ ಆಹಾರ ಕರುಳು ಮತ್ತು ಜೀರ್ಣಾಂಗವ್ಯೂಹದ ಕ್ಯಾನ್ಸರ್‌ ಗೆ ಕಾರಣವಾಗಬಹುದು. ಅಷ್ಟರಮಟ್ಟಿಗೆ ನಮ್ಮ ಆಹಾರದಲ್ಲಿ ನಾರಿನ ಅಂಶ ಮಹತ್ವ ಪಡೆದುಕೊಂಡಿದೆ. 
ನಮ್ಮ ದೇಹದ ಯಾವುದೇ ಅಂಗಾಂಗಗಳಲ್ಲಿ ಕ್ಯಾನ್ಸರ್‌ (Cancer) ಉಂಟಾಗಬಹುದು. ಇತ್ತೀಚಿನ ದಿನಗಳಲ್ಲಂತೂ ವಿಷಯುಕ್ತ ಆಹಾರ ಪದ್ಧತಿ, ಜೀವನಶೈಲಿ (Lifestyle) ಸೇರಿದಂತೆ ಅನೇಕ ಕಾರಣಗಳಿಂದ ಕ್ಯಾನ್ಸರ್‌ ಹೆಚ್ಚುತ್ತಿದೆ. ಆನುವಂಶಿಕವಾಗಿಯೂ (Hereditary) ಕ್ಯಾನ್ಸರ್‌ ಬರುತ್ತದೆ. ಕುಟುಂಬದ ಹಿರಿಯರಿಗೆ ಯಾರಿಗಾದರೂ ಕ್ಯಾನ್ಸರ್‌ ಇದ್ದರೆ ಮುಂದಿನ ತಲೆಮಾರಿಗೂ ಅದು ಮುಂದುವರಿಯಬಹುದು. ಆದರೆ, ಆನುವಂಶಿಕವಾಗಿ ಬರುವ ಕ್ಯಾನ್ಸರ್‌ ಅನ್ನು ತಡೆಯುವಲ್ಲಿ ಬಾಳೆಹಣ್ಣು ಭಾರೀ ಪ್ರಯೋಜನಕಾರಿ ಎನ್ನುವ ಸಂಗತಿ ನಿಮಗೆ ತಿಳಿದಿದೆಯೇ? ಇತ್ತೀಚಿನ ಅಧ್ಯಯನದ ಪ್ರಕಾರ, ಸ್ವಲ್ಪ ಕಳಿತ (Slightly Unripe), ಒಗರಿನ ಅಂಶವೇ ಹೆಚ್ಚಾಗಿರುವ ಬಾಳೆಹಣ್ಣನ್ನು (Banana) ತಿನ್ನುವುದರಿಂದ ಹೆಚ್ಚು ಲಾಭವಿದೆ. 20 ವರ್ಷಗಳ ದೀರ್ಘ ಅಧ್ಯಯನ ಇದನ್ನು ಬಹಿರಂಗಪಡಿಸಿದೆ. ಚೆನ್ನಾಗಿ ಕಳಿಯದ ಬಾಳೆಹಣ್ಣಿನಲ್ಲಿರುವ ಸ್ಟಾರ್ಚ್‌ (Starch) ಅಂಶ ಕೆಲವು ರೀತಿಯ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಶೇಕಡ 60ರಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಲ್ಲದು. 
ನ್ಯೂಕ್ಯಾಸಲ್‌ (Newcastle) ಮತ್ತು ಲೀಡ್ಸ್‌ (Leeds) ವಿಶ್ವವಿದ್ಯಾಲಯದ ತಜ್ಞರ ತಂಡ ಇಂಥದ್ದೊಂದು ಅಧ್ಯಯನವನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ಕ್ಯಾನ್ಸರ್‌ ಪ್ರಿವೆನ್ಷನ್‌ ರಿಸರ್ಚ್‌ ಎನ್ನುವ ಮ್ಯಾಗಜಿನ್‌ ನಲ್ಲಿ ಈ ಕುರಿತ ಲೇಖನವೂ ಪ್ರಕಟವಾಗಿದೆ. ಕರುಳಿನ ಮೇಲ್ಭಾಗದಲ್ಲಿ ಕ್ಯಾನ್ಸರ್‌ ಉಂಟಾದರೆ ಪತ್ತೆ ಮಾಡುವುದು ಕಷ್ಟ. ತಜ್ಞರ ಪ್ರಕಾರ, ಕರುಳಿನ ಮೇಲ್ಭಾಗದಲ್ಲಿ ಉಂಟಾಗುವ ಕ್ಯಾನ್ಸರ್‌ ಗಡ್ಡೆಗಳು ಬೇಗ ಬೆಳಕಿಗೆ ಬರುವುದೇ ಇಲ್ಲ. ಅರ್ಧಂಬರ್ಧ ಕಳಿತ ಬಾಳೆಹಣ್ಣಿನ ಡಯೆಟ್‌ (Diet) ಪಾಲಿಸುವ ಮೂಲಕ ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ನಿರೋಧಕ ಸ್ಟಾರ್ಚ್
ಈ ಅಧ್ಯಯನಕ್ಕಾಗಿ ವಿಶ್ವಾದ್ಯಂತ ಸುಮಾರು ಒಂದು ಸಾವಿರ ಲಿಂಚ್‌ ಸಿಂಡ್ರೋಮ್‌ (Lynch Syndrome) ಹೊಂದಿರುವ ವ್ಯಕ್ತಿಗಳನ್ನು ಅಧ್ಯಯನ ಮಾಡಲಾಗಿತ್ತು. ಲಿಂಚ್‌ ಸಿಂಡ್ರೋಮ್‌ ಎನ್ನುವುದು ಡಿಎನ್‌ ಎಗೆ (DNA) ಸಂಬಂಧಿಸಿದ ಕೊರತೆಯಾಗಿದ್ದು, ಇದನ್ನು ಹೊಂದಿದವರಲ್ಲಿ ಕರುಳು, ದೊಡ್ಡಕರುಳು, ಹೊಟ್ಟೆ, ಗರ್ಭಕೋಶ, ಪ್ಯಾಂಕ್ರಿಯಾಸ್‌, ಪ್ರಾಸ್ಟೇಟ್‌ ಹಾಗೂ ಮೂತ್ರನಾಳದ ಕ್ಯಾನ್ಸರ್‌ ಉಂಟಾಗುವುದು ಅತ್ಯಂತ ಸಾಮಾನ್ಯವಾಗಿದೆ. ಹೀಗಾಗಿ, ಈ ತೊಂದರೆ ಹೊಂದಿದವರನ್ನೇ ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳಲಾಗಿತ್ತು. ಸಂಶೋಧಕರು ಹೊಟ್ಟೆಯ ಭಾಗಕ್ಕೆ ಸಂಬಂಧಿಸಿದ ಕೆಲವು ಕ್ಯಾನ್ಸರ್‌ ಗಳು ಉಂಟಾಗದಂತೆ ರಕ್ಷಣೆ ನೀಡುವ ಆಹಾರ ಪದ್ಧತಿಯನ್ನು ಅನ್ವೇಷಿಸುತ್ತಿದ್ದರು. ಈ ಸಮಯದಲ್ಲಿ ಅರ್ಧಕಳಿತ ಬಾಳೆಹಣ್ಣಿನ ಪ್ರಯೋಗವೂ ನಡೆದಿತ್ತು. ಓಟ್ಸ್‌ (Oats), ಧಾನ್ಯಗಳು (Cereals), ಕೆಂಪು ಅಕ್ಕಿ (Red Rice), ಬಟಾಣಿ (Peas), ಬೀನ್ಸ್‌ (Beans) ಮತ್ತು ಅರ್ಧಕಳಿತ ಬಾಳೆಹಣ್ಣು ಈ ನಿಟ್ಟಿನಲ್ಲಿ ಭಾರೀ ಪ್ರಯೋಜನಕಾರಿ ಎನ್ನುವುದು ಸಾಬೀತಾಗಿದೆ. ಈ ಎಲ್ಲ ಆಹಾರಗಳಲ್ಲಿ ನಿರೋಧಕ ಸ್ಟಾರ್ಚ್‌ ಅಂಶ ಅಧಿಕವಾಗಿದೆ. ಈ ಸ್ಟಾರ್ಚ್‌ ಸಂಸ್ಕರಿತ ಆಹಾರಗಳಲ್ಲಿ (Processed Food) ಇರುವಂತಹ ಸ್ಟಾರ್ಚ್‌ ಅಲ್ಲ ಎನ್ನುವುದು ಗಮನಾರ್ಹ. ಇದು ನಿರೋಧಕ (Resistant) ಗುಣವುಳ್ಳದ್ದು. ಹೀಗಾಗಿ, ಇವುಗಳಿಂದ ಶೇಕಡ 60ರಷ್ಟು ಕ್ಯಾನ್ಸರ್‌ ಅಪಾಯ ಕಡಿಮೆ ಮಾಡಿಕೊಳ್ಳಲು ಸಾಧ್ಯ ಎಂದು ಸಂಶೋಧಕರು ಹೇಳಿದ್ದಾರೆ.  

Tap to resize

Latest Videos

click me!