ಒಳ್ಳೆದು ಅಂತಾ ಬೇಕಾಬಿಟ್ಟಿ ತಿಂದ್ರೆ ಸಮಸ್ಯೆ ಶುರುವಾಗುತ್ತೆ. ಪಿಸ್ತಾ ವಿಷ್ಯದಲ್ಲೂ ಇದು ಸತ್ಯ. ರುಚಿ ಹೆಚ್ಚಿರುವ ಪಿಸ್ತಾವನ್ನು ಒಂದಾದ್ಮೇಲೆ ಒಂದರಂತೆ ತಿಂತಾ ಹೋದ್ರೆ ಆಮೇಲೆ ಆಸ್ಪತ್ರೆ ಸೇರ್ಬೇಕಾಗುತ್ತೆ ಹುಷಾರ್.
ಸದೃಢ ಆರೋಗ್ಯ (Health) ಕ್ಕೆ ಒಣ ಹಣ್ಣುಗಳು (Dry Fruits ) ಹೆಚ್ಚು ಪ್ರಯೋಜನಕಾರಿ ಎಂಬುದನ್ನು ನೀವು ಕೇಳಿರ್ತೀರಿ. ಅನೇಕರು ದಿನನಿತ್ಯ ಡ್ರೈ ಫ್ರೂಟ್ಸ್ ಸೇವನೆ ರೂಢಿ ಮಾಡಿಕೊಂಡಿರುತ್ತಾರೆ. ಈ ಡ್ರೈ ಫ್ರೂಟ್ಸ್ ಲೀಸ್ಟ್ ನಲ್ಲಿ ಪಿಸ್ತಾ (pista)ಕೂಡ ಸೇರಿದೆ. ಪಿಸ್ತಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಹಾಗೆಯೇ ತಿನ್ನಬಹುದು. ಅದನ್ನು ಖೀರ್ ಮಾಡಿಯೂ ಸೇವನೆ ಮಾಡೋರಿದಾರೆ. ಅದಕ್ಕೆ ಉಪ್ಪು ಹಾಕಿ ತಿನ್ನುವವರೂ ಇದ್ದಾರೆ. ಅದಕ್ಕೆ ಮಸಾಲೆ ಬೆರೆಸಿ ತಿಂದ್ರೆ ರುಚಿ ಜಾಸ್ತಿ. ಪಿಸ್ತಾದಲ್ಲಿ ಪೌಷ್ಟಿಕಾಂಶವಿದೆ. ಆಂಟಿ ಆಕ್ಸಿಡೆಂಟ್ ಗುಣವಿದೆ. ಪ್ರೊಟೀನ್ ಇದೆ. ವಿಟಮಿನ್ ಬಿ 6 ಹಾಗೂ ಆರೋಗ್ಯಕರ ಕೊಬ್ಬು ಇದ್ರಲ್ಲಿದೆ. ಥಯಾಮಿನ್ ಕೂಡ ಪಿಸ್ತಾದಲ್ಲಿದೆ. ಪಿಸ್ತಾ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತನ್ನು ಕೇಳಿ ನಾವು – ನೀವೆಲ್ಲ ಪಿಸ್ತಾವನ್ನು ಯರ್ರಾಬಿರ್ರಿ ತಿಂದ್ರೆ ಆರೋಗ್ಯ ಸುಧಾರಿಸುವ ಬದಲು ಹದಗೆಡುತ್ತದೆ. ಪಿಸ್ತಾ ಸೇವನೆಯು ಕೆಲವರಿಗೆ ಏಕೆ ಹಾನಿಕಾರಕ ಎಂದು ನಾವು ಹೇಳ್ತೇವೆ.
ಪಿಸ್ತಾ ಸೇವನೆಯಿಂದ ಅನಾನುಕೂಲ :
ತೂಕ ಹೆಚ್ಚಳ : ಪಿಸ್ತಾ ಒಳ್ಳೆಯದು ಎನ್ನುವ ಕಾರಣಕ್ಕೆ ಅನೇಕರು ಮುಷ್ಟಿಗಟ್ಟಲೆ ಪಿಸ್ತಾ ಸೇವನೆ ಮಾಡ್ತಾರೆ. ಪಿಸ್ತಾವನ್ನು ಅತಿಯಾಗಿ ತಿನ್ನುವುದರಿಂದ ತೂಕ ತುಂಬಾ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ತೂಕ ಇಳಿಸಿಕೊಳ್ಳಬೇಕೆನ್ನುವವರು ಪಿಸ್ತಾದಿಂದ ದೂರವಿರುವುದು ಉತ್ತಮ. ಏಕೆಂದರೆ ಇದನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುವ ಬದಲು ಹೆಚ್ಚಾಗಲು ಪ್ರಾರಂಭಿಸುತ್ತದೆ. ಒಂದ್ವೇಳೆ ಪಿಸ್ತಾ ತುಂಬಾ ಇಷ್ಟ, ಅದನ್ನು ತಿನ್ಲೇಬೇಕು ಎನ್ನುವವರು ಒಂದು ಅಥವಾ ಎರಡು ಪಿಸ್ತಾ ಮಾತ್ರ ಸೇವನೆ ಮಾಡಿ. ಈ ಒಂದೆರಡು ಪಿಸ್ತಾ ನಿಮ್ಮ ತೂಕದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.
ಸೋರೆಕಾಯಿ ತಿನ್ನುತ್ತೀರಾ? ಹಾಗಾದ್ರೆ ಈ ಸುದ್ದಿ ಓದಿ, ಆಮೇಲೆ ತಿನ್ಬೇಕು ಅಂದ್ರೆ ನಿಮ್ಮಿಷ್ಟ!
ರಕ್ತದೊತ್ತಡ (Blood Pressure) ನಿಯಂತ್ರಣ : ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಅನೇಕ ಜನರಲ್ಲಿ ಕಂಡುಬರುತ್ತದೆ. ರಕ್ತದೊತ್ತಡ ಸಮಸ್ಯೆಯಿಂದ ಬಳಲುವ ವ್ಯಕ್ತಿಗಳು ಪಿಸ್ತಾ ಸೇವನೆ ಮಾಡಿದ್ರೆ ರೋಗ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪಿಸ್ತಾದಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಕಂಡುಬರುತ್ತದೆ. ಇದು ವ್ಯಕ್ತಿಗೆ ಹಾನಿಕಾರಕವಾಗಿದೆ. ಇದು ರಕ್ತದೊತ್ತಡ ಸಮಸ್ಯೆಯಿರುವ ರೋಗಿಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ವ್ಯಕ್ತಿಗೆ ಹೃದಯ ಸಮಸ್ಯೆ ಉಂಟಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಪಿಸ್ತಾ ಅತಿಯಾದ ಸೇವನೆ ಒಳ್ಳೆಯದಲ್ಲ.
ಉಸಿರಾಟದ ಸಮಸ್ಯೆ (Breathing Problem) : ಯಾವುದೇ ಆಹಾರವನ್ನು ಅತಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಅದೇ ರೀತಿ ಹೆಚ್ಚು ಪಿಸ್ತಾಗಳನ್ನು ಸೇವಿಸುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಇದರಲ್ಲಿ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಆದ್ದರಿಂದ ಇದನ್ನು ಅತಿಯಾಗಿ ಸೇವಿಸಿದರೆ ರಕ್ತದಲ್ಲಿ ಪ್ರೋಟೀನ್ ಪ್ರಮಾಣವು ಹೆಚ್ಚಾಗುತ್ತದೆ. ಇದರಿಂದಾಗಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ.
ಕಿಡ್ನಿ ಸಮಸ್ಯೆ (Kidney Issue) : ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುವುದು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ರಕ್ತದಲ್ಲಿ ಪ್ರೋಟೀನ್ ಪ್ರಮಾಣ ಅಧಿಕವಾಗಿದ್ದರೆ, ನಿಮ್ಮ ಮೂತ್ರಪಿಂಡಗಳು ಹಾನಿಗೊಳಗಾಗಬಹುದು. ಆದ್ದರಿಂದ, ಅಗತ್ಯಕ್ಕಿಂತ ಹೆಚ್ಚು ಪಿಸ್ತಾ ತಿನ್ನಬೇಡಿ. ಕಿಡ್ನಿ ಸಂಬಂಧಿ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಮೇರೆಗೆ ಮಾತ್ರ ಪಿಸ್ತಾ ಸೇವಿಸಿ.
ತಾವರೆಯ ಬೇರಿನಲ್ಲಡಗಿದೆ ಆರೋಗ್ಯದ ಅದ್ಭುತ ರಹಸ್ಯ
ಅತಿಯಾದ ಪಿಸ್ತಾ ಸೇವನೆ ಅಲರ್ಜಿಗೆ ಕಾರಣ : ಕೆಲವರಿಗೆ ಪಿಸ್ತಾ ಸೇವನೆ ಅಲರ್ಜಿಯ ಸಮಸ್ಯೆ ಉಂಟು ಮಾಡುತ್ತದೆ. ಪಿಸ್ತಾವನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ತುರಿಕೆ, ದದ್ದುಗಳು ಸೇರಿದಂತೆ ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಸಾಮಾನ್ಯ ವ್ಯಕ್ತಿ ಎಷ್ಟು ಪಿಸ್ತಾ ಸೇವನೆ ಮಾಡ್ಬೇಕು : ತಜ್ಞರ ಪ್ರಕಾರ, ಮೇಲಿನ ಯಾವುದೇ ರೋಗ ಸಮಸ್ಯೆಯಿಲ್ಲ ಎಂದಾದ್ರೆ ಸಾಮಾನ್ಯ ವ್ಯಕ್ತಿ ಪಿಸ್ತಾವನ್ನು ಲಘು ಆಹಾರವಾಗಿ ಸೇವಿಸಬಹುದು. ಪ್ರತಿದಿನ 30 ಪಿಸ್ತಾಗಳನ್ನು ತಿನ್ನಬಹುದು. ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸದಿದ್ದರೆ, ದಿನವಿಡೀ 30 ಪಿಸ್ತಾಗಳನ್ನು ತಿನ್ನಬಹುದು. ಆದರೆ ಹೆಚ್ಚಿನ ಪ್ರೋಟೀನ್ ತೆಗೆದುಕೊಳ್ಳುತ್ತಿದ್ದರೆ 30 ಕ್ಕಿಂತ ಕಡಿಮೆ ಪಿಸ್ತಾಗಳನ್ನು ಸೇವಿಸಬೇಕು.