
ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು, ಐಬ್ರೋ ಶೇಪ್, ಥ್ರೆಡ್ಡಿಂಗ್ ಅಥವಾ ಮುಖದ ಕೂದಲು ತೆಗೆಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಹುಬ್ಬಿಗೆ ಆಕಾರ ಕೊಟ್ಟರೆನೇ ಮುಖ ಅಂದವಾಗಿ ಕಾಣಿಸುವ ಕಾರಣದಿಂದಾಗಿ ಅವರು ಪ್ರತೀ ತಿಂಗಳು ಬ್ಯೂಟಿಪಾರ್ಲರ್‌ಗೆ ಹೋಗಿ ಥ್ರೆಡಿಂಗ್ ಮಾಡಿಸಿಕೊಳ್ಳುತ್ತಿರುತ್ತಾರೆ. ತಮಾಷೆಯೆಂದರೆ, ಕೆಲವು ಜನರು ಥ್ರೆಡ್ಡಿಂಗ್‌ನ(Eyebrow Threading) ಮಾಡಿಸುವುದನ್ನ ಇಷ್ಟಪಡುತ್ತಾರೆ. ಆದರೆ ಕೆಲವರು ಹೆಚ್ಚು ನೋವು ಪಡುತ್ತಾರೆ. ಅದು ಯಾವ ರೀತಿಯಾಗಿ ಬ್ಯೂಟಿಷಿಯನ್ ಐಬ್ರೋ ಮಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಐಬ್ರೋ ಮಾಡಿಸುವುದು ಸ್ವಲ್ಪ ಕಷ್ಟವಾದರೂ ಮಹಿಳೆಯರು ತಮ್ಮ ಸೌಂದರ್ಯಕ್ಕಾಗಿ ಬ್ಯೂಟಿಪಾರ್ಲರ್‌ಗೆ ಹೋಗಿ ಥ್ರೆಡಿಂಗ್(Threading) ಮಾಡಿಸಿಕೊಳ್ಳುತ್ತಿರುತ್ತಾರೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದು ಗೊತ್ತೆ? ಈ ಥ್ರೆಡಿಂಗ್ ಮಾಡಿಸಿಕೊಳ್ಳುವುದರಿಂದ ಹೆಪಟೈಟಿಸ್ ಬಿ ಎಂಬ ಸೋಂಕು ಕಾಣಿಸಿಕೊಳ್ಳುತ್ತದೆ. ಅಷ್ಟಕ್ಕೂ ಈ ಹೆಪಟೈಟಿಸ್ ಬಿ (Hepatitis B) ವೈರಲ್ ಸೋಂಕು ಎಂದರೆ ಏನು ?
ಹೆಪಟೈಟಿಸ್ ಬಿ ಇದು ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇದು ಅಲ್ಪಾವಧಿಯ ಅಥವಾ ದೀರ್ಘಕಾಲದದ್ದಾಗಿರಬಹುದು. ಹೆಪಟೈಟಿಸ್ ಬಿ ವೈರಸ್ (HBV) ನಿಂದ ಉಂಟಾಗುತ್ತದೆ, ಇದು ಸೋಂಕಿತ ರಕ್ತ ಅಥವಾ ಯೋನಿ ಸ್ರವಿಸುವಿಕೆ ಅಥವಾ ದೇಹದ ದ್ರವಗಳ ಸಂಪರ್ಕದ ಮೂಲಕ ಹರಡುತ್ತದೆ. ಇದರ ಪರಿಣಾಮ ಪ್ರಾರಂಭದಲ್ಲಿ ತಿಳಿಯುವುದಿಲ್ಲ ಆದರೆ ದೀರ್ಘಕಾಲದ ವರೆಗೆ ಈ ವೈರಸ್‌ನ ಪ್ರಭಾವ ಇರುವಂತಹ ಸಾಧ್ಯತೆಗಳು ಇರುತ್ತದೆ.
ಥ್ರೆಡಿಂಗ್‌ನಂತಹ ಸೌಂದರ್ಯ ಚಿಕಿತ್ಸೆಗಳು ಹೆಪಟೈಟಿಸ್ ಬಿ (Hepatitis B) ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಹಾಗಂತ ಎಲ್ಲಾ ಥ್ರೆಡಿಂಗ್‌ನಿಂದ ಹೆಪಟೈಟಿಸ್ ಬರುತ್ತದೆ ಎಂದಲ್ಲ. ವಿಶೇಷವಾಗಿ ಥ್ರೆಡಿಂಗ್ ಮಾಡುವಂತಹ ಸಂದರ್ಭದಲ್ಲಿ ಸರಿಯಾದಂತಹ ದಾರಗಳನ್ನ ಬಳಸಿದರೆ ಯಾವುದೇ ಉಪಯೋಗವಾಗುವುದಿಲ್ಲ. ಆದರೆ ಕಡಿಮೆ ಬೆಲೆಯ ಅಸುರಕ್ಷಿತ ದಾರಗಳನ್ನ ಬಳಸುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಬ್ಯೂಟಿ ಪಾರ್ಲರ್‌ಗಳಲ್ಲಿ ಮೊಡವೆ, ಗಾಯಗಳ ಮೇಲೆ ಥ್ರೆಡಿಂಗ್ ಮಾಡಿರುತ್ತಾರೆ. ಅದೇ ದಾರವನ್ನ ಇನ್ನೊಬ್ಬರಿಗೂ ಬಳಸುತ್ತಾರೆ. ಥ್ರೆಡಿಂಗ್‌ಗೆ ಬಳಸುವ ದಾರವು ಸೋಂಕಿತ ವ್ಯಕ್ತಿಯ ರಕ್ತ ಅಥವಾ ದೈಹಿಕ ದ್ರವಗಳೊಂದಿಗೆ ಸಂಪರ್ಕಕ್ಕೆ ಬಂದು ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಇನ್ನೊಬ್ಬ ವ್ಯಕ್ತಿಯ ಮೇಲೆ ಮರುಬಳಕೆ ಮಾಡಿದರೆ ವೈರಸ್ ಹರಡುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರತಿ ವರ್ಷ 10.2 ಲಕ್ಷ ಹೆಪಟೈಟಿಸ್ ಬಿ ಸೋಂಕುಗಳು ಸಂಭವಿಸುತ್ತವೆ. 2022 ರಲ್ಲಿ ಇದು ಅಂದಾಜು 10.1 ಲಕ್ಷ ಸಾವುಗಳಿಗೆ ಕಾರಣವಾಗಿದೆ. ಹೆಚ್ಚಾದ ಹೆಪಟೈಟಿಸ್ ಬಿ ಹೊಂದಿರುವ ಹೆಚ್ಚಿನ ವಯಸ್ಕರು ಸಂಪೂರ್ಣವಾಗಿ ಚೇತರಿಸಿಕೊಂಡರೂ, ಕೆಲವರಲ್ಲಿ ಇದು ದೀರ್ಘಕಾಲದ ವರೆಗೆ ಇರುತ್ತದೆ, ಇದು ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್‌ನಂತಹ ಗಂಭೀರ ಯಕೃತ್ತಿನ ಸಮಸ್ಯೆಗೆ ಕಾರಣವಾಗಬಹುದು.
ಸಲೂನ್‌ಗಳಲ್ಲಿ ಹೆಪಟೈಟಿಸ್ ಬಿ ಸೋಂಕುಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮಗಳು
ಸಲೂನ್‌ಗೆ ಭೇಟಿ ನೀಡಿದಾಗ ಸ್ವಚ್ಚತೆ ಅನುಸರಿಸುವ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಸಲೂನ್‌ಗಳನ್ನ ಯಾವಾಗಲೂ ಆಯ್ಕೆ ಮಾಡುವುದು ಬಹಳ ಮುಖ್ಯ.
ಸಲೂನ್‌ಗಳಲ್ಲಿ ಹ್ಯಾಂಡ್‌ಬೌಸ್‌ಗಳನ್ನ ಬಳಸುತ್ತಾರೆಯೇ ಎಂಬುದನ್ನ ಗಮನಿಸಿ ಜೊತೆಗೆ ಪ್ರತಿ ಬಳಕೆಯ ನಂತರ ಉಪಕರಣಗಳನ್ನು ಸ್ವಚ್ಚಗೊಳಿಸುತ್ತಾರೆಯೇ ಎಂಬುದನ್ನೂ ಸಹ ಗಮನಿಸಿ
ಪ್ರತಿ ಕ್ಲೈಂಟ್‌ಗೆ ಹೊಸ ದಾರವನ್ನು ಬಳಸುತ್ತಾರೆಯೇ ಮತ್ತು ಪ್ರತಿ ಬಳಕೆಯ ನಂತರ ಉಪಕರಣಗಳನ್ನು ಸೋಂಕುರಹಿತಗೊಳಿಸಲಾಗಿದೆಯೇ ಎಂದು ಬ್ಯೂಟಿಷಿಯನ್ ಅವರನ್ನು ಕೇಳುವುದು ಸೂಕ್ತವಾಗಿದೆ.
ಥ್ರೆಡ್ಡಿಂಗ್(Threading) ಮಾಡಿಸುವಾಗ ಅನುಸರಿಸುವ ಕ್ರಮಗಳು
ಮುಟ್ಟಿನ ಸಮಯದಲ್ಲಿ ಮುಖದ ಕೂದಲನ್ನು ಥ್ರೆಡ್ಡಿಂಗ್ ಮಾಡುವುದನ್ನು ಆದಷ್ಟು ತಪ್ಪಿಸಿ. ಮುಟ್ಟಿನ ಸಮಯದಲ್ಲಿ ದೇಹವು ಸಾಕಷ್ಟು ಬದಲಾವಣೆಗೆ ಒಳಗಾಗಿರುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಥ್ರೆಡ್ಡಿಂಗ್ ಮಾಡಿಸಿಕೊಳ್ಳದೇ ಇರುವುದು ಉತ್ತಮ.
ಅನಾರೋಗ್ಯದಿಂದ ಬಳಲುತ್ತಿರುವಾಗ, ಕೆಮ್ಮು ಅಥವಾ ಶೀತ ಇರುವಾಗ ಥ್ರೆಡ್ಡಿಂಗ್ ಮಾಡಿಸಬೇಡಿ.
ಹೆಚ್ಚಾಗಿ ಸಂಜೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಥ್ರೆಡ್ಡಿಂಗ್ ಮಾಡಿಸಿ, ಆದಷ್ಟು ಬೆಳಗ್ಗಿನ ಸಮಯದಲ್ಲಿ ಥ್ರೆಡ್ಡಿಂಗ್ ಮಾಡಿಸಬೇಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.