Loneliness and Aging: ಹೀಗೆ ಬದುಕಿದ್ರೆ ಬೇಗ ವೃದ್ಧರಾಗ್ತೀರಿ, ಎಚ್ಚರ

By Contributor AsianetFirst Published Oct 1, 2022, 4:02 PM IST
Highlights

ಇಂದು ಹಲವು ಕಾರಣದಿಂದ ವೃದ್ಧಾಪ್ಯ ಬಹುಬೇಗ ಆಗಮಿಸುತ್ತಿದೆ. ಒಂಟಿತನವೂ ಇದಕ್ಕೆ ಬಹುಮುಖ್ಯ ಕಾರಣ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಒಂಟಿಯಾಗಿರುವುದರಿಂದ ಸುಮಾರು ಎರಡು ವರ್ಷಗಳಷ್ಟು ಬೇಗ ವೃದ್ಧಾಪ್ಯ ಬರುತ್ತದೆ. 
 

ತಂತ್ರಜ್ಞಾನದ ಕಾರಣದಿಂದ ಇಂದು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಯಾರನ್ನು ಬೇಕಿದ್ದರೂ ಸಂಪರ್ಕಿಸಬಹುದು. ಹೀಗಾಗಿ, ದೂರದ ದೇಶದಲ್ಲಿರುವವರು ಸಹ ಸನಿಹಕ್ಕೆ ಬಂದಂತೆ ಭಾಸವಾಗುತ್ತದೆ. ಅಷ್ಟೇ ಏಕೆ? ಸಂಬಂಧಿಗಳಲ್ಲದವರು ಸಹ ಸ್ನೇಹಿತರಾಗುತ್ತಾರೆ, ಮುಖವನ್ನೇ ನೋಡದೆ ಜನ್ಮಾಂತರದ ಅನುಬಂಧ ಇರುವವಂತೆ ಭಾಸವಾಗುತ್ತಾರೆ. ಆದರೆ, ಇದೇ ಸಮಯದಲ್ಲಿ ಇಷ್ಟೇ ಅನುಭಾವವನ್ನು ನಮ್ಮವರ ಜತೆ ಅಂದರೆ, ನಮ್ಮ ಕುಟುಂಬ, ಕುಟುಂಬದ ಸದಸ್ಯರು, ಸಮೀಪದ ಸಂಬಂಧಿಗಳ ಜತೆ ಹೊಂದಿದ್ದೇವಾ ಎಂದರೆ ಅದಕ್ಕೆ ಉತ್ತರ ನಕಾರಾತ್ಮಕವಾಗಿದೆ. ದೂರದಲ್ಲಿ ಎಲ್ಲೋ ಇರುವವರೊಂದಿಗೆ ಚೆನ್ನಾಗಿರುವ ನಾವು ನಮ್ಮ ಸಮೀಪದಲ್ಲೇ ಇರುವವರೊಂದಿಗೆ ದೂರ ಇರುತ್ತೇವೆ. ಹೀಗಾಗಿ, ಮನುಷ್ಯರು ಇಂದು ಒಂಟಿಯಾಗುತ್ತಿದ್ದಾರೆ. ಕುಟುಂಬವಿದ್ದರೂ ಏಕಾಂಗಿಗಳಂತೆ ಜೀವಿಸುವವರಿದ್ದಾರೆ. ಮಕ್ಕಳು ದೂರವಿದ್ದರಂತೂ ಕೇಳುವುದೇ ಬೇಡ, ಏಕಾಂಗಿತನವೇ ಜತೆಗಾತಿ ಆಗಿರುತ್ತದೆ. ಒಟ್ಟಿನಲ್ಲಿ ಒಂಟಿತನ ನಮ್ಮ ಜೀವನಕ್ಕೆ ಭಾರೀ ಸಮೀಪವರ್ತಿಯಾಗಿದೆ. ಅವಿಭಕ್ತ ಕುಟುಂಬಗಳು ನಾಶವಾಗಿರುವುದು, ಕುಟುಂಬದವರ ಮೇಲೆ ವಿಶ್ವಾಸ ಇಲ್ಲದಿರುವುದು, ಅತಿಯಾದ ಸ್ವಾರ್ಥ ಮನೋಭಾವ ಮುಂತಾದವುಗಳಿಂದ ಮನುಷ್ಯ ಒಂಟಿಯಾಗುತ್ತಿದ್ದಾನೆ. ಆದರೆ, ಇದರ ಪರಿಣಾಮ ಮಾತ್ರ ನಮ್ಮ ಊಹೆಗೆ ನಿಲುಕದ್ದು. ಇತ್ತೀಚಿನ ಅಧ್ಯಯನಗಳ ಪ್ರಕಾರ, ಒಂಟಿತನದಿಂದಾಗಿ ಅವಧಿಪೂರ್ವ ವೃದ್ಧಾಪ್ಯ ಆಗಮಿಸುತ್ತಿದೆ. 

ಹೊಸ ಅಧ್ಯಯನದ (New Study) ಪ್ರಕಾರ, ಏಕಾಂಗಿಯಾಗಿದ್ದರೆ (Loneliness) ಆ ವ್ಯಕ್ತಿಯ ವಯಸ್ಸು (Age) ಒಂದು ವರ್ಷದ ಎಂಟು ತಿಂಗಳಿನಷ್ಟು ಹೆಚ್ಚುತ್ತದೆ. ಅಂದರೆ, ಅಷ್ಟು ಮೊದಲೇ ವೃದ್ಧಾಪ್ಯ (Old Age) ಆರಂಭವಾಗುತ್ತದೆ. ತನ್ನ ವಯೋಮಾನದವರಿಗಿಂತ ಮೊದಲೇ ಆತನಿಗೆ ವೃದ್ಧಾಪ್ಯ ಉಂಟಾಗುತ್ತದೆ. ಒಂಟಿತನದಿಂದ ಇತರ ರೋಗಗಳೂ ಬರುತ್ತವೆ. ಆನುವಂಶಿಕ ಹಾಗೂ ಮೊದಲೇ ಇರುವ ಆರೋಗ್ಯ ಸಮಸ್ಯೆಗಳು (Healt Problems) ಬಿಗಡಾಯಿಸಬಹುದು. ಹಾಗೆಯೇ, ವಯಸ್ಸಾಗುತ್ತಿದ್ದಂತೆ ಮರೆವಿನ ಕಾಯಿಲೆ (Memory Loss) ಕಂಡುಬರುತ್ತದೆ. ನಿಮಗೆ ಗೊತ್ತೇ? ಭಾರತದಲ್ಲಿ ಸರಿಸುಮಾರು 50 ಲಕ್ಷಕ್ಕೂ ಅಧಿಕ ಜನ ಏಕಾಂಗಿತನದಿಂದ ನರಳುತ್ತಿದ್ದಾರೆ. ಇವರಲ್ಲಿ ಹೆಚ್ಚು ಜನ ನಗರ ಪ್ರದೇಶಗಳಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಸಮಸ್ಯೆ ಇನ್ನೂ ಗಂಭೀರವಾಗಿದೆ. ಸರಿಸುಮಾರು ಶೇ.33ರಷ್ಟು ಜನ ಒಂಟಿಯಾಗಿ ಬದುಕುತ್ತಿದ್ದಾರೆ. 

ಬೊಜ್ಜು (Obese), ಉರಿಯೂತ (Inflammation)
ಏಕಾಂಗಿಯಾಗಿ ಬದುಕುವುದರಿಂದ ಬೊಜ್ಜು ಹೆಚ್ಚುತ್ತದೆ. ಸ್ಥೂಲಕಾಯಕ್ಕೂ ಏಕಾಂಗಿತನಕ್ಕೂ ಕಾರಣವೇನೆಂದು ಅಚ್ಚರಿಯಾಗಬಹುದು. ಆದರೆ ಹಲವಾರು ಅಧ್ಯಯನಗಳು ಇದನ್ನು ಸಾಬೀತುಪಡಿಸಿವೆ. ಉರಿಯೂತದ ಸಮಸ್ಯೆ ಕೂಡ ಹೆಚ್ಚುತ್ತದೆ. ದೇಹದಲ್ಲಿ ಉಂಟಾಗುವ ಉರಿಯೂತ ದೀರ್ಘ ಸಮಯ ಇದ್ದಾಗ ಜೀವಕೋಶ ಮತ್ತು ಕೆಲವು ಮಹತ್ವಪೂರ್ಣ ಅಂಗಾಂಗಗಳಿಗೆ ಹಾನಿಯಾಗುತ್ತದೆ. 

ಇದನ್ನೂ ಓದಿ: ಭೀತಿ ಹುಟ್ಟಿಸಿದೆ ಡೇಂಜರಸ್ ಸ್ಕ್ರಬ್​ ಟೈಫಸ್ ಸೋಂಕು, ರೋಗ ಲಕ್ಷಣಗಳೇನು?

ಖಿನ್ನತೆ (Depression)
ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯದ ಒಂದು ಅಧ್ಯಯನದ ಪ್ರಕಾರ, ಏಕಾಂಗಿತನದಿಂದ ಒತ್ತಡ (Stress), ಖಿನ್ನತೆ ಹೆಚ್ಚುತ್ತದೆ. ಸಮೀಪವರ್ತಿಗಳೊಂದಿಗೆ ಒಡನಾಟವಿಲ್ಲದೆ, ಅಭದ್ರತೆಯಿಂದಾಗಿ ಖಿನ್ನತೆ ಸಾಮಾನ್ಯ. ಈ ಸ್ಥಿತಿಯಲ್ಲೂ ದೇಹಕ್ಕೆ ಬೇಗ ವಯಸ್ಸು ಉಂಟಾಗುತ್ತದೆ. ಒತ್ತಡದಿಂದಾಗಿ ಬೀಳುವ ಅಪಾಯ ಹೆಚ್ಚುತ್ತದೆ.  

ಧೂಮಪಾನದಿಂದಲೂ (Smoking) ವೃದ್ಧಾಪ್ಯ
ಧೂಮಪಾನದಿಂದಲೂ ಅವಧಿಗೆ ಮುನ್ನವೇ ವೃದ್ಧಾಪ್ಯ ಕಾಣಿಸಿಕೊಳ್ಳುತ್ತದೆ. ನಿರಂತರವಾಗಿ ಧೂಮಪಾನ ಮಾಡುವವರು ತಮ್ಮ ವಯೋಮಾನದ ಇತರ ವ್ಯಕ್ತಿಗಳಿಗಿಂತ ಒಂದು ವರ್ಷ ಮೂರು ತಿಂಗಳ ಮೊದಲೇ ವೃದ್ಧಾಪ್ಯಕ್ಕೆ ತುತ್ತಾಗುತ್ತಾರೆ. 

ಇದನ್ನೂ ಓದಿ: ಕಾಫಿ ಸೇವನೆ ಮಾಡ್ತಿದ್ರೆ ಟೈಪ್-2 ಮಧುಮೇಹದ ಅಪಾಯವಿಲ್ಲ

ಪರಿಹಾರವೇನು?
•    ವಿವಿಧ ಕಾರಣದಿಂದ ಒಂಟಿಯಾಗಿರುವುದು ಅನಿವಾರ್ಯವಾಗಿದ್ದರೆ ಸಾಧ್ಯವಾದಷ್ಟೂ ಕ್ರಿಯಾಶೀಲ ಬದುಕನ್ನು (Active Lifestyle) ರೂಢಿಸಿಕೊಳ್ಳಿ. 
•    ದಿನವೂ ನಡಿಗೆ (Walking), ಪಾರ್ಕ್‌ (Park) ಎಂದು ಸುತ್ತಾಡಿದರೆ ಅಲ್ಲಿಯೇ ಸಾಕಷ್ಟು ಸ್ನೇಹ ಬಳಗ ದೊರೆಯುತ್ತದೆ. 
•    ನಿಮ್ಮ ವಯಸ್ಸಿಗೆ ತಕ್ಕಂತೆ ಸೇವಾಕಾರ್ಯದಲ್ಲಿ (Service) ತೊಡಗಿಕೊಳ್ಳುವುದು ಅತ್ಯುತ್ತಮ ಮಾರ್ಗ.
•    ಸುತ್ತಮುತ್ತಲಿನವರ ಸ್ನೇಹ (Friendship) ಸಂಪಾದಿಸಿ, ಮುಕ್ತ ಮನದಿಂದ ಅವರೊಂದಿಗೆ ಒಡನಾಡಿ. ಆದರೆ, ಯಾರನ್ನು ನಂಬಬೇಕು, ನಂಬಬಾರದು ಎನ್ನುವ ಬಗ್ಗೆ ಗಮನವಿರಲಿ.
•    ಒಂಟಿಯಾಗಿರುವಾಗ ಒಂದಿಷ್ಟು ಭಯ, ಆತಂಕ ಕಾಡುವುದು ಸಹಜ. ತುಂಬ ಹಣವನ್ನು (Money) ಬಳಿ ಇರಿಸಿಕೊಳ್ಳಬೇಡಿ. ಅಗತ್ಯಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿದ್ದರೆ ಆತಂಕ ಹೆಚ್ಚು, ಅಪಾಯವೂ ಹೆಚ್ಚು. ಅದು ಯಾರನ್ನೂ ನಂಬದಿರುವಂತೆ ಮಾಡುತ್ತದೆ.   
•    ವಯಸ್ಸಾಗಿ ಒಂಟಿಯಾಗಿದ್ದರೆ ಡೇ ಕೇರ್‌ ಸೆಂಟರ್‌ ಅಥವಾ ಒಳ್ಳೆಯ ವೃದ್ಧಾಶ್ರಮಗಳಿಗೆ ಸೇರಿಕೊಂಡುಬಿಡಿ. ಇದರಿಂದ ಒಂಟಿತನ ನೀಗುತ್ತದೆ.

click me!