
ತಲೆಯ ಒಂದೇ ಭಾಗದಲ್ಲ ಬಿಟ್ಟೂ ಬಿಡದೆ ಕಾಡಿಸುವ ನೋವು, ತಾತ್ಕಾಲಿಕವಾದ ಗೊಂದಲ, ಮಾತನಾಡಲು ಹಿಂಸೆ ಎನಿಸುವುದು, ಮರಗಟ್ಟಿದಂತಾಗುವುದು, ತಲೆ ತಿರುಗುವುದು, ಸೈನಸ್ ಗಳಲ್ಲಿ ಒತ್ತಡ, ದೇಹದ ಯಾವುದೇ ಭಾಗ ತಾತ್ಕಾಲಿಕವಾಗಿ ಪ್ಯಾರಾಲೈಸ್ ಆಗುವ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಅಷ್ಟೇ ಅಲ್ಲ, ಈ ಸಮಯದಲ್ಲಿಕಿವಿ ನೋವು, ವಾಕರಿಕೆ, ಜೋರಾದ ಶಬ್ದ ಮತ್ತು ಬೆಳಕನ್ನು ಕಂಡರೆ ಹಿಂಸೆ ಆಗಬಹುದು. ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸಲು ಸಹ ಕಷ್ಟವಾಗಬಹುದು. ಇವೆಲ್ಲವೂ ಮೈಗ್ರೇನ್ ನಿಂದ ಉಂಟಾಗಬಹುದಾದ ಸಮಸ್ಯೆ. ಮೈಗ್ರೇನ್ ತಲೆನೋವಿಗೆ ಹಲವಾರು ಕಾರಣಗಳನ್ನು ಗುರುತಿಸಲಾಗಿದೆಯಾದರೂ ಇಂಥದ್ದೇ ಕಾರಣದಿಂದ ಮೈಗ್ರೇನ್ ತಲೆನೋವು ಉಂಟಾಗುತ್ತದೆ ಎನ್ನುವುದಕ್ಕೆ ಖಾತ್ರಿಯಿಲ್ಲ. ವ್ಯಕ್ತಿಯ ದೇಹದ ಪ್ರಕೃತಿಯನ್ನು ಆಧರಿಸಿ ಮೈಗ್ರೇನ್ ಪ್ರಭಾವ ಹೆಚ್ಚುಕಡಿಮೆ ಆಗುತ್ತಿರುತ್ತದೆ. ಅಂದ ಹಾಗೆ, ನಿಮಗೆ ಅಚ್ಚರಿಯಾಗಬಹುದು. ಮೈಗ್ರೇನ್ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ. ಮಹಿಳೆಯರು ಮೈಗ್ರೇನ್ ಸಮಸ್ಯೆಯನ್ನು ಪುರುಷರಿಗಿಂತ ಮೂರು ಪಟ್ಟು ಅಧಿಕ ಮಟ್ಟದಲ್ಲಿ ಅನುಭವಿಸುತ್ತಾರೆ. ಮೈಗ್ರೇನ್ ತಲೆನೋವು ಬಂದಾಗ ಮಿದುಳಿನ ಸುತ್ತಮುತ್ತ ಅಸಹಜ ಕ್ರಿಯೆಗಳು ಜರುಗುತ್ತವೆ. ಮಿದುಳಿನ ನೋವು ಮತ್ತು ಸಂವೇದನೆಗಳಿಗೆ ಸ್ಪಂದಿಸುವ ಭಾಗದಲ್ಲಿ ಅತಿಯಾದ ಚಟುವಟಿಕೆ ಕಂಡುಬರುತ್ತದೆ.
ಮೈಗ್ರೇನ್ (Migraine) ತಲೆನೋವು ಕಂಡುಬಂದಾಗ ಮಿದುಳಿನಲ್ಲಿ ಹೈಪರಾಕ್ಟಿವಿಟಿ (Hyperactivity) ನಡೆದು ವ್ಯಕ್ತಿ ಅನೇಕ ವಿಚಾರಗಳಲ್ಲಿ ಸೂಕ್ಷ್ಮವಾಗುತ್ತಾನೆ. ನೋವಿನೊಂದಿಗೆ (Pain) ಕ್ರಿಯೆ ಮತ್ತು ಶಬ್ದ(Sound)ಗಳ ವಿಚಾರದಲ್ಲೂ ತಾಳಿಕೊಳ್ಳಲಾರದ ಹಿಂಸೆ ಅನುಭವಿಸುತ್ತಾನೆ. ಇವೆಲ್ಲದಕ್ಕೂ ಮೈಗ್ರೇನ್ ಸಮಸ್ಯೆಯೇ ಮೂಲ ಎಂದರೆ ವಿಚಿತ್ರ ಎನಿಸಬಹುದು. ಇನ್ನೂ ಅಚ್ಚರಿಯ ಸಂಗತಿ ಎಂದರೆ ದೃಷ್ಟಿಗೆ (Visual) ಸಂಬಂಧಿಸಿಯೂ ಸಮಸ್ಯೆ ಉಂಟಾಗಬಹುದು. ಅಸಹಜ ದೃಷ್ಟಿ, ಕಣ್ಣುಗಳಲ್ಲಿ ಮಿಂಚಿದಂತೆ ಆಗುವುದು, ಅಲೆಯಂತೆ ಎಳೆಗಳು ಮತ್ತು ಚುಕ್ಕೆ ಮೂಡುವುದು, ಅಪರೂಪದ ಪ್ರಕರಣದಲ್ಲಿ ದೃಷ್ಟಿನಾಶವೂ ಉಂಟಾಗಬಹುದು. ಸುಮಾರು 20 ನಿಮಿಷಗಳ ಕಾಲ ತಾತ್ಕಾಲಿಕ ಗೊಂದಲ (Confusion), ಮರಗಟ್ಟುವುದು (Numbness), ತಾತ್ಕಾಲಿಕವಾಗಿ ಪ್ಯಾರಲಿಸಿಸ್ (Paralysis) ಉಂಟಾಗಬಹುದು.
ಮೈಗ್ರೇನ್ ಕಾಡಬಾರದು ಅಂದ್ರೆ ಬಾಯಿ ಮುಚ್ಕೊಂಡು ಇರಲು ಹೇಳಿ?
ಮೈಗ್ರೇನ್ ಯಾಕಾಗಿ ಉಂಟಾಗುತ್ತದೆ?
ಪರಿಸರ (Environment), ಆಹಾರ (Food) ಮತ್ತು ಮಾನಸಿಕ ಸ್ಥಿತಿಗಳು (Mental) ಮೈಗ್ರೇನ್ ಗೆ ಕಾರಣ. ವಾತಾವರಣದಲ್ಲಾಗುವ ಬದಲಾವಣೆ, ಮೋಡದ ವಾತಾವರಣ, ಯಾವುದಾದರೂ ಪರಿಮಳ, ಅತಿಯಾದ ಬೆಳಕು (Light), ಗಲಾಟೆ (Sound), ಬಿಸಿಲು ಮೈಗ್ರೇನ್ ಗೆ ಕಾರಣವಾಗಬಲ್ಲವು. ಮೈಗ್ರೇನ್ ಸಮಸ್ಯೆ ಇರುವವರು ಆಹಾರದ ವಿಚಾರದಲ್ಲಿ ಭಾರೀ ಎಚ್ಚರಿಕೆಯಿಂದ ಇರಬೇಕು. ಹಳೆಯ ಬೆಣ್ಣೆ, ಬ್ರೆಡ್, ಇಡ್ಲಿ, ದೋಸೆ, ಮೊಸರುಗಳಲ್ಲಿರುವ ಯೀಸ್ಟ್, ಕಾಫಿ ಮತ್ತು ಚಾಕೋಲೇಟ್, ಪ್ಯಾಕೇಜ್ಡ್ ಆಹಾರದಲ್ಲಿರುವ ನೈಟ್ರೇಟ್‌ನಿಂದಲೂ ಮೈಗ್ರೇನ್ ತಲೆನೋವು ಬರಬಹುದು. ಇದರೊಂದಿಗೆ ಒತ್ತಡ (Stress), ಹಾರ್ಮೋನ್ ಬದಲಾವಣೆಯಿಂದಲೂ (Hormone Change) ಮೈಗ್ರೇನ್ ಸಾಮಾನ್ಯ.
ಕರುಳಿಗೂ ಮೈಗ್ರೇನ್‌ಗೂ ಸಂಬಂಧ
• ಮೈಗ್ರೇನ್ ಕರುಳಿನ (Gut) ಸಮಸ್ಯೆಯಿಂದ ಉಂಟಾಗಬಹುದು. ಒಂದೊಮ್ಮೆ ನಿಮ್ಮ ಕರುಳಿನಲ್ಲಿ ಉರಿಯೂತವಿದ್ದರೆ ರೋಗನಿರೋಧಕ ವ್ಯವಸ್ಥೆಯನ್ನು ಹಾಳುಗೆಡವಿ ತಲೆನೋವಿಗೆ ಕಾರಣವಾಗುತ್ತದೆ. ಬಹುತೇಕ ಸಮಯದಲ್ಲಿ ಆಸಿಡಿಟಿ (Acidity) ಸಮಸ್ಯೆಯಿಂದ ಮೈಗ್ರೇನ್ ಉಂಟಾಗುತ್ತದೆ. ಪಿತ್ತವಾದಾಗ ವಿಟಮಿನ್ ಬಿ1, ಬಿ2, ಬಿ12, ಬಿ6 ಮತ್ತು ಮ್ಯಾಗ್ನಿಸಿಯಂಗಳನ್ನು ಹೀರಿಕೊಳ್ಳುವುದರಲ್ಲಿ ವ್ಯತ್ಯಾಸವಾಗುತ್ತದೆ. ಈ ಸಮಯದಲ್ಲಿ ತೀವ್ರ ತಲೆನೋವು ಸಾಮಾನ್ಯ.
• ಈಸ್ಟ್ರೋಜೆನ್ (Estrogens) ಮಟ್ಟ ಏರಿಕೆಯಾದರೆ ಮಹಿಳೆಯರಲ್ಲಿ ಮೈಗ್ರೇನ್ ಉಂಟಾಗುತ್ತದೆ. ಹೀಗಾಗಿ, ಮಾಸಿಕ ಋತುಸ್ರಾವದ ಸಮಯದಲ್ಲಿ ಮೈಗ್ರೇನ್ ಸಾಮಾನ್ಯ.
• ಕೆಫೀನ್ (Caffeine) ನಿಂದಲೂ ಮೈಗ್ರೇನ್ ಉಂಟಾಗುವುದು ಕಂಡುಬರುತ್ತದೆ.
ನಿಮ್ಮನ್ನು ಕಾಡುತ್ತಿರುವುದು ಎಂಥ ತಲೆನೋವು?
• ಮೈಗ್ರೇನ್ ಸಮಸ್ಯೆ ಜತೆಗೆ ದೇಹದಲ್ಲಿ ದದ್ದುಗಳು ಏಳುತ್ತಿದ್ದರೆ ನಮ್ಮ ದೇಹವು ಹಿಸ್ಟಮಿನ್ (Histamine) ಅಂಶವನ್ನು ಒಡೆಯುವ ಸಾಮರ್ಥ್ಯ ಕಳೆದುಕೊಂಡಿದೆ ಎಂದರ್ಥ.
• ಒತ್ತಡವೂ ಮೈಗ್ರೇನ್ ಗೆ ಬಹುಮುಖ್ಯ ಕಾರಣವಾಗಬಲ್ಲದು. ಏಕೆಂದರೆ, ಒತ್ತಡವಾದಾಗ ಕಾರ್ಟಿಸೊಲ್ ಮತ್ತು ಎಪಿನೆಫ್ರಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗುತ್ತವೆ. ಇವು ತಲೆನೋವು ಉಂಟುಮಾಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.