
ಸಾವಿಗೀಡಾಗಿದ್ದಾನೆ ಎಂದು ಭಾವಿಸಿದ ವ್ಯಕ್ತಿ ಮತ್ತೆ ಮೇಲೆದ್ದು ಬರುವುದು ಅಪರೂಪದ ವಿದ್ಯಮಾನ. ವೈದ್ಯಕೀಯವಾಗಿ ಡೆಡ್ ಎಂದು ಘೋಷಿಸಿದ ವ್ಯಕ್ತಿ ಮುಂದಿನ ಕೆಲವು ಗಂಟೆಗಳಲ್ಲಿ ಎಚ್ಚರವಾಗಿ ಸಹಜ ಸ್ಥಿತಿಗೆ ಬಂದು, ಮುಂದೆ ಮತ್ತಷ್ಟು ಕಾಲ ಬದುಕುವುದು ಅಚ್ಚರಿದಾಯಕ ಸಂಗತಿ. ಇಂತಹ ಘಟನೆಗಳು ಹಿಂದೆಯೂ ಅಲ್ಲಲ್ಲಿ ನಡೆದಿವೆ. ಇದೀಗ, ಹರಿಯಾಣದಲ್ಲಿ ಇಂಥದ್ದೇ ಘಟನೆ ವರದಿಯಾಗಿದೆ. ಕೆಲವೊಮ್ಮೆ ಇಂತಹ ಅನುಭವಕ್ಕೆ ತುತ್ತಾದ ಹಲವರು ವಿವಿಧ ರೀತಿಯ ಕತೆಗಳನ್ನೂ ಹೇಳುವುದಿದೆ. ಸಾವಿನ ನಂತರದ ಜೀವನದ ಬಗ್ಗೆ ನಾವು ಹೊಂದಿರುವ ನಂಬಿಕೆ, ಶ್ರದ್ಧೆಗಳಿಗೆ ಅನುಗುಣವಾಗಿ ಇಂತಹ ಕತೆಗಳು ಮೂಡಬಹುದು ಅಥವಾ ನಿಜಕ್ಕೂ ಸಂಭವಿಸುತ್ತವೆಯೋ ಯಾರಿಗೆ ಗೊತ್ತು? ಹೀಗಾಗಿ, ಸಾವಿನ ನಂತರ ಏನಾಗುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿ ದೃಢಪಡಿಸಲು ಯಾವುದೇ ಆಧಾರಗಳಿಲ್ಲ. ಅದು ಬರೀ ನಂಬಿಕೆ ಮತ್ತು ಶ್ರದ್ಧೆಗೆ ಸಂಬಂಧಿಸಿದ ಅಂಶವಾಗಿ ಉಳಿಯುತ್ತದೆ. ಅದೇನೆ ಇರಲಿ, ಇಂತಹ ಅನುಭವಕ್ಕೆ ಒಳಗಾದವರು ಮಾತ್ರ ಮೈನವಿರೇಳಿಸುವಂತಹ ಸುದ್ದಿಯನ್ನು ಹೇಳುತ್ತಾರೆ. ಸ್ವರ್ಗ, ನರಕಗಳ ಕಲ್ಪನೆ ನಮ್ಮಲ್ಲಿರುವುದರಿಂದ ಅದಕ್ಕನುಗುಣವಾದ ಅನುಭವಗಳಿಗೆ ಅವರು ಒಳಗಾಗಿರುವುದು ಕಂಡುಬರುತ್ತದೆ. ಆದರೆ, ಈಗಿನ ವಿಚಾರ ಅದಲ್ಲ ಬಿಡಿ. ಈಗ, ಹರಿಯಾಣದಲ್ಲಿ ಸಾವಿಗೆ ತುತ್ತಾಗಿದ್ದ ವೃದ್ಧರೊಬ್ಬರು ಇದ್ದಕ್ಕಿದ್ದ ಹಾಗೆ ಎದ್ದು ಕುಳಿತಿದ್ದಾರೆ, ಈಗ ಉಸಿರಾಡಿಸುತ್ತಿದ್ದಾರೆ ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
80 ವರ್ಷದ ವೃದ್ಧರಾದ (Old Man) ದರ್ಶನ್ ಸಿಂಗ್ ಬ್ರಾರ್ ಎನ್ನುವವರು ಹುಷಾರಿಲ್ಲದೆ ಆಸ್ಪತ್ರೆಗೆ (Hospital) ಸೇರಿದ್ದರು. ಶ್ವಾಸಕೋಶದ (Lungs) ಸೋಂಕಿನಿಂದ ಅವರಿಗೆ ಉಸಿರಾಡಲು ಸಮಸ್ಯೆಯಾಗಿತ್ತು. ಪಟಿಯಾಲದ ಆಸ್ಪತ್ರೆಯಲ್ಲಿ ನಾಲ್ಕು ದಿನ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಬಳಿಕ, ಆಸ್ಪತ್ರೆ ವೈದ್ಯರು ಅವರು ಮೃತ (Dead) ಪಟ್ಟಿರುವುದಾಗಿ ತಿಳಿಸಿದ್ದರು. ಆಸ್ಪತ್ರೆಯಲ್ಲಿದ್ದ ವೃದ್ಧರ ಮೊಮ್ಮಗ ಅವರ ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ತಮ್ಮ ಊರಿಗೆ ಸಾಗಿಸಲು ಮುಂದಾಗಿದ್ದರು. ಆಂಬುಲೆನ್ಸ್ ನಲ್ಲಿ ವೃದ್ಧರ ಮೃತದೇಹವನ್ನಿಟ್ಟು ಅವರ ಪಕ್ಕದಲ್ಲಿ ಮೊಮ್ಮಗ ಬಲ್ವಾನ್ ಸಿಂಗ್ ಕುಳಿತಿದ್ದರು. ಇವರ ಗ್ರಾಮ ನಿಸಿಂಗ್ ಗೂ ಪಟಿಯಾಲಕ್ಕೂ (Patiala) ಸುಮಾರು ನೂರು ಕಿಲೋಮೀಟರ್ ದೂರ. ಅಲ್ಲಿಂದ ಕರೆತರುವ ಮಾರ್ಗದಲ್ಲಿ ದಂಡ್ ಎನ್ನುವ ಗ್ರಾಮದಲ್ಲಿ (Village) ರಸ್ತೆಗಳು (Roads) ಕೆಟ್ಟದಾಗಿದ್ದವು. ಒಂದು ಕಡೆಯಂತೂ ರಸ್ತೆಯಲ್ಲಿ ಎಷ್ಟು ದೊಡ್ಡ ಗುಂಡಿ ಬಿದ್ದಿತ್ತು ಎಂದರೆ ಆಂಬುಲೆನ್ಸ್ (Ambulance) ನೆಗೆದಂತೆ ಕಲುಕಾಡಿತ್ತು. ಅದಾದ ಕೆಲವೇ ಕ್ಷಣಗಳಲ್ಲಿ ಪಕ್ಕದಲ್ಲಿ ಕುಳಿತಿದ್ದ ಮೊಮ್ಮಗ ಬಲ್ವಾನ್ ಸಿಂಗ್ ಗೆ ತಾತ ಕೈಚಲನೆ ಮಾಡಿಸುತ್ತಿರುವುದು ಕಂಡುಬಂತು.
ತಕ್ಷಣವೇ ಆಂಬುಲೆನ್ಸ್ ಡ್ರೈವರ್ ಗೆ ಹತ್ತಿರ ಇರುವ ಯಾವುದಾದರೂ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಸಮೀಪದ ಕರ್ನಾಲ್ ಆಸ್ಪತ್ರೆಗೆ ಒಯ್ದಾಗ ದರ್ಶನ್ ಸಿಂಗ್ ಉಸಿರಾಡಿಸುತ್ತಿದ್ದರು! ಅವರು ಸತ್ತಿಲ್ಲ ಎಂದು ವೈದ್ಯರು ಹೇಳಿದರೆ ಮೊಮ್ಮಗನಿಗೆ ಅಚ್ಚರಿಯೋ ಅಚ್ಚರಿ.
ಮೆಗಾ ಮನೆಮಗಳಿಗೆ ಇದೇನಾಯ್ತು? ಡಿವೋರ್ಸ್ ಬೆನ್ನಲ್ಲೇ ಕಾಡಿನಲ್ಲಿ ಅಲೆದಾಟ- ಆನೆಗೆ ಇಂಥ ರಿಕ್ವೆಸ್ಟಾ?
ಸಕಲ ತಯಾರಿ ಆಗಿತ್ತು
ವ್ಯಕ್ತಿಯೊಬ್ಬರು ಮೃತರಾದರೆ ಸಾಮಾನ್ಯವಾಗಿ ಹಳ್ಳಿ ಕಡೆ ಎಲ್ಲ ರೀತಿಯ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗುತ್ತದೆ. ಇಲ್ಲೂ ಅಷ್ಟೇ, ದರ್ಶನ್ ಸಿಂಗ್ ಮೃತದೇಹ ತವರಿಗೆ ಆಗಮಿಸುತ್ತಿದೆ ಎಂದು ತಿಳಿದಾಗ ಅವರ ಮಕ್ಕಳು ಸಕಲ ವ್ಯವಸ್ಥೆ ಮಾಡಿದ್ದರು. ಮೃತದೇಹ ಸುಡಲು ಕಟ್ಟಿಗೆ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದರು. ಸಂಬಂಧಿಕರಿಗೆ, ನೆರೆಯವರು, ಗ್ರಾಮದವರಿಗೆ ವಿಷಯ ತಿಳಿಸಿದ್ದರಿಂದ ನೂರಾರು ಜನ ಸೇರಿದ್ದರು. ಸಂಸ್ಕಾರದ ಬಳಿಕ ಎಲ್ಲರಿಗೂ ಊಟದ (Food) ವ್ಯವಸ್ಥೆ ಮಾಡಲಾಗಿತ್ತು. ಟೆಂಟ್ ಹಾಕಲಾಗಿತ್ತು. ಬಳಿಕ, ವೃದ್ಧರು ಜೀವಂತವಾಗಿದ್ದಾರೆ ಎಂದು ತಿಳಿದಾಗ ದುಃಖಿತರೆಲ್ಲರಲ್ಲೂ ಹರ್ಷ ಮೂಡಿತು. ಜತೆಗೆ, ಈ ಚಮತ್ಕಾರಕ್ಕೆ (Miracle) ಅಚ್ಚರಿಯೂ ಆಯಿತು.
ಗಳಿಸಿದ್ದ ಹಣವನ್ನೆಲ್ಲ ಸೀರೆಗೆ ಮೀಸಲಿಟ್ಟ : ಅಯೋಧ್ಯೆ ರಾಮ ಮಂದಿರಕ್ಕೆ ಸಿದ್ಧವಾಯ್ತು ದೊಡ್ಡ ರೇಷ್ಮೆ ಸೀರೆ
“ರೋಗಿ ಬಂದಾಗ ಅವರ ರಕ್ತದೊತ್ತಡ ಏರಿಕೆಯಾಗಿತ್ತು. ಆದರೆ, ಅವರು ಉಸಿರಾಡಿಸುತ್ತಿದ್ದರು. ಹಿಂದಿನ ಆಸ್ಪತ್ರೆಯಲ್ಲಿ ಏನಾಯಿತು ಎನ್ನುವುದು ತಿಳಿದಿಲ್ಲ. ಅದು ತಾಂತ್ರಿಕ (Technical) ದೋಷವಾಗಿತ್ತೇ ಅಥವಾ ಬೇರೆ ಏನಾದರೂ ಆಯಿತೇ ಎನ್ನುವುದು ಗೊತ್ತಿಲ್ಲʼ ಎಂದು ಕರ್ನಾಲ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.