Kids Health: ಮಕ್ಕಳಿಗೆ ಬಲವಂತವಾಗಿ ಆಹಾರ ತಿನ್ನಿಸಿದ್ರೆ ಏನಾಗುತ್ತೆ ಗೊತ್ತಾ?

By Suvarna NewsFirst Published Sep 20, 2022, 5:57 PM IST
Highlights

Children Health Tips: ಮಕ್ಕಳಿಗೆ ಬಲವಂತವಾಗಿ ಆಹಾರ ತಿನ್ನಿಸುವ ಪಾಲಕರು ನೀವಾದ್ರೆ ಎಚ್ಚೆತ್ತುಕೊಳ್ಳಿ. ಯಾಕೆಂದ್ರೆ ಬಲವಂತವಾಗಿ ಆಹಾರ ತಿನ್ನಿಸಿದ್ರೆ ಮಕ್ಕಳಿಗೆ ಹೊಟ್ಟೆ ತುಂಬಿ, ಅವರ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ಸೇರುವ ಬದಲು ಅವರು ಅನಾರೋಗ್ಯಕ್ಕೆ ಒಳಗಾಗ್ತಾರೆ. 
 

ಮಗು ಆಹಾರವನ್ನು ಸರಿಯಾಗಿ ತಿನ್ನೋದಿಲ್ಲ, ಆಹಾರ ತಿನ್ನಿಸೋದು ದೊಡ್ಡ ತಲೆನೋವಿನ ಕೆಲಸ, ಮಕ್ಕಳು ಸರಿಯಾಗಿ ಆಹಾರ ತಿನ್ನದ ಕಾರಣ ಅವರಿಗೆ ಬೇಕಾದಷ್ಟು ಪೌಷ್ಟಿಕಾಂಶ ಅವರ ದೇಹ ಸೇರೋದಿಲ್ಲ, ಇದು ಅನೇಕ ತಾಯಂದಿರ ಗೋಳು.     ಮಗು ಆಹಾರ ಸೇವನೆ ಮಾಡೋದಿಲ್ಲ ಎಂದು ಚಿಂತಿಸುವ ಬದಲು ಮಗು ಯಾಕೆ ಆಹಾರ ತಿನ್ನೋದಿಲ್ಲ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಿ. ಮಗುವಿಗೆ ಇಷ್ಟವಾಗುವ ಆಹಾರವನ್ನು ನೀವು ತಯಾರಿಸ್ತಿಲ್ಲವಾ? ಅವರಿಗೆ ಯಾವ ಆಹಾರ ಸೇವನೆ ಮಾಡುವುದು ಇಷ್ಟ? ಸೇರಿದಂತೆ ಈ ಎಲ್ಲಾ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ. ನಂತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ಮಗು ಆಹಾರ ಸೇವನೆ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಮಗುವಿಗೆ ಬಲವಂತವಾಗಿ ಆಹಾರ ನೀಡಬೇಡಿ. ತಜ್ಞರ ಪ್ರಕಾರ, ಮಕ್ಕಳಿಗೆ ಬಲವಂತವಾಗಿ ಆಹಾರ ತಿನ್ನಿಸುವುದು  ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಬಲವಂತವಾಗಿ ಆಹಾರ ತಿನ್ನಿಸುವುದು ಅಂದ್ರೇನು ಹಾಗೆ ಅದರಿಂದ ಮಕ್ಕಳ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಇಂದು ಹೇಳ್ತೇವೆ.  

ಬಲವಂತವಾಗಿ ಆಹಾರ (Food) ತಿನ್ನಿಸುವುದು ಅಂದ್ರೇನು? : ಮಕ್ಕಳು (Children) ನಾಲ್ಕೈದು ತುತ್ತು ಆಹಾರ ಸೇವನೆ ಮಾಡಿದ ನಂತ್ರ ಮುಂದೆ ಆಹಾರ ಸೇವನೆ ಮಾಡಲು ನಿರಾಕರಿಸುತ್ತಾರೆ. ಆಗ ಪಾಲಕರು ಬಲವಂತವಾಗಿ ಮಕ್ಕಳ ಬಾಯಿಗೆ ಆಹಾರ ತುರುಕುತ್ತಾರೆ. ಇದನ್ನು ಬಲವಂತದ ಫೀಡಿಂಗ್ (Force Feeding) ಎಂದು ಕರೆಯಲಾಗುತ್ತದೆ. ನೀವು ಮಕ್ಕಳಿಗೆ ಬಲವಂತವಾಗಿ ಆಹಾರ ನೀಡಿದಾಗ ಅದು ಅವರ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಆಹಾರದ ಮೇಲೆ ಅವರ ಆಸಕ್ತಿ ಕಡಿಮೆಯಾಗುತ್ತದೆ. 

ಬಲವಂತವಾಗಿ ಆಹಾರ ನೀಡುವುದ್ರ ಅಡ್ಡಪರಿಣಾಮ : 

ಜೀರ್ಣಕ್ರಿಯೆಯಲ್ಲಿ ಸಮಸ್ಯೆ : ಮಗುವಿಗೆ ಬಲವಂತವಾಗಿ ಆಹಾರ ತಿನ್ನಿಸಿದಾಗ ಅದು ಅವರ ಜೀರ್ಣ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.  ಮಕ್ಕಳು ಬಲವಂತವಾಗಿ ಆಹಾರವನ್ನು ಸೇವಿಸಿದಾಗ ಅವರು ಅದನ್ನು ಅಗಿಯುವುದಿಲ್ಲ. ಆಹಾರವನ್ನು ನೇರವಾಗಿ ನುಂಗುತ್ತಾರೆ. ಇದರಿಂದಾಗಿ ಜೀರ್ಣ ಸರಿಯಾಗಿ ಆಗುವುದಿಲ್ಲ. ಪ್ರತಿ ದಿನ ಆಹಾರ ಜಗಿದು ಸೇವನೆ ಮಾಡುವ ಬದಲು ನುಂಗಿದ್ರೆ ಮಗುವಿಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಶುರುವಾಗುತ್ತದೆ. 

ಬೊಜ್ಜಿನ ಸಮಸ್ಯೆ: ಮಗುವಿಗೆ ಈಗಾಗಲೇ ಹೊಟ್ಟೆ ತುಂಬಿರುತ್ತದೆ. ಆದ್ರೂ ಪಾಲಕರು ಅವರನ್ನು ಒತ್ತಾಯ ಪೂರ್ವಕವಾಗಿ ತಿನ್ನಿಸುತ್ತಾರೆ. ಇದ್ರಿಂದ ಮಕ್ಕಳು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಾರೆ. ಇದ್ರಿಂದ ಅವರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತದೆ. ತೂಕ ಹೆಚ್ಚಾಗುತ್ತದೆ. ತೂಕ ಹೆಚ್ಚಾದಂತೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ.

ಇದನ್ನೂ ಓದಿ: ಮನೇಲಿ ಪುಟ್ಟ ಮಕ್ಕಳಿದ್ದಾರಾ ? ಅನಾಹುತವಾಗ್ಬಾರ್ದು ಅಂದ್ರೆ ಹೀಗ್ ಮಾಡಿ

ಆಹಾರ ಸೇವನೆಯಲ್ಲಿ ಕಡಿಮೆಯಾಗುತ್ತೆ ಆಸಕ್ತಿ : ಮಗುವಿಗೆ ಬಲವಂತವಾಗಿ ಆಹಾರ ನೀಡಿದ್ರೆ ಹಾಗೂ ಪದೇ ಪದೇ ಮಕ್ಕಳಿಗೆ ಆಹಾರ ನೀಡುತ್ತಿದ್ದರೆ ಮಕ್ಕಳಿಗೆ ಹಸಿವಾಗುವುದಿಲ್ಲ. ಹಾಗೆಯೇ ಅವರಿಗೆ ಆಹಾರ ಸೇವನೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಬಲವಂತವಾಗಿ ಆಹಾರ ತಿನ್ನಿಸುವುದ್ರಿಂದ ಅವರು ಆಹಾರ ಸೇವನೆ ಮಾಡಲು ಮತ್ತಷ್ಟು ಹಠ ಮಾಡ್ತಾರೆ. 

ಇದನ್ನೂ ಓದಿ: ಮಕ್ಕಳು ಮುದ್ದು ಅಂತ ಹೆಚ್ಚು ಮುತ್ತು ಕೊಡೋದು ಸರೀನಾ ?

ಬಲವಂತವಾಗಿ ಆಹಾರ ಸೇವನೆ ಮಾಡಿದ್ರೆ ಕಾಡಬಹುದು ವಾಂತಿ ಸಮಸ್ಯೆ : ಮಕ್ಕಳಿಗೆ ಬಲವಂತವಾಗಿ ಆಹಾರ ನೀಡಿದ್ರೆ ಅವರು ವಾಂತಿ ಮಾಡ್ತಾರೆ. ಅಗತ್ಯಕ್ಕಿಂತ ಹೆಚ್ಚು ಆಹಾರ ಹೊಟ್ಟೆ ಸೇರುವುದ್ರಿಂದ ಅದನ್ನು ಅರಗಿಸಿಕೊಳ್ಳಲು ಅವರಿಗೆ ಆಗುವುದಿಲ್ಲ. ಹೊಟ್ಟೆ ತುಂಬಿರುವ ಕಾರಣ ಹೆಚ್ಚಿನ ಆಹಾರವನ್ನು ವಾಂತಿ ಮಾಡ್ತಾರೆ. ಕಷ್ಟಪಟ್ಟ ಮೊದಲು ತಿನ್ನಿಸಿದ ಆಹಾರ ಕೂಡ ವಾಂತಿಯಾಗುತ್ತದೆ. ಹಾಗಾಗಿ ಬಲವಂತವಾಗಿ ಹೆಚ್ಚಿನ ಆಹಾರ ತಿನ್ನಿಸಬೇಡಿ. ಜೊತೆಗೆ ಮಕ್ಕಳಿಗೆ ಯಾವುದು ಇಷ್ಟ ಎಂಬುದನ್ನು ತಿಳಿದುಕೊಂಡು ಆಹಾರ ನೀಡಿ. ಕೆಲ ಮಕ್ಕಳಿಗೆ ರೊಟ್ಟಿ ಇಷ್ಟವಾಗದೆ ಹೋಗಬಹುದು. ಅದನ್ನು ನೀವು ಬಲವಂತವಾಗಿ ತಿನ್ನಿಸಿದ್ರೆ ಅವರು ವಾಂತಿ ಮಾಡ್ತಾರೆ. 

click me!