
ಹೃದಯದ ಕಾಯಿಲೆಗೂ ಕಿಡ್ನಿ ಕಾಯಿಲೆಗೂ ಹತ್ತಿರದ ಸಂಬಂಧ ಇದೆ. ಕಿಡ್ನಿಗೆ ಸಮಸ್ಯೆ ಆಗಿರೋದು ಎಷ್ಟೋ ಜನರಿಗೆ ಕೊನೆ ಹಂತದಲ್ಲಿ ಗೊತ್ತಾಗುತ್ತೆ. ಆದರೆ, ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿಸಿದರೆ, ಹೃದಯದ ಸಮಸ್ಯೆ ಇರುವವರು ಕಿಡ್ನಿ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚಬಹುದು. ಇದರಿಂದ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬಹುದು.
ಹೃದಯವು ಕಿಡ್ನಿಗಳಿಗೆ ರಕ್ತವನ್ನು ಪಂಪ್ ಮಾಡುತ್ತೆ. ಆಗ ಕಿಡ್ನಿಗಳು ನಮ್ಮ ದೇಹದಲ್ಲಿನ ದ್ರವ, ಎಲೆಕ್ಟ್ರೋಲೈಟ್ಸ್ ಮತ್ತು ರಕ್ತದೊತ್ತಡವನ್ನು (ಬಿಪಿ) ನಿಯಂತ್ರಿಸುತ್ತವೆ. ಇವೆರಡರಲ್ಲಿ ಒಂದಕ್ಕೆ ಸಮಸ್ಯೆಯಾದರೂ ಇನ್ನೊಂದರ ಮೇಲೆ ಒತ್ತಡ ಬೀಳುತ್ತೆ. ಹೃದಯದ ಕಾಯಿಲೆಯಿಂದ ಕಿಡ್ನಿ ಸಮಸ್ಯೆ ಬರಬಹುದು, ಹಾಗೆಯೇ ಕಿಡ್ನಿ ಸಮಸ್ಯೆಯಿಂದ ಹೃದಯದ ಕಾಯಿಲೆಯೂ ಬರಬಹುದು ಅಂತ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಶುಗರ್ (ಮಧುಮೇಹ) ಮತ್ತು ಹೈ ಬಿಪಿ ಇದ್ದರೆ ಈ ಎರಡೂ ಕಾಯಿಲೆಗಳು ಬರುವ ಅಪಾಯ ಹೆಚ್ಚಾಗಿರುತ್ತೆ.
ಇದರಲ್ಲಿರೋ ದೊಡ್ಡ ಸಮಸ್ಯೆ ಅಂದ್ರೆ, ದೀರ್ಘಕಾಲದ ಕಿಡ್ನಿ ಕಾಯಿಲೆ (Chronic Kidney Disease) ಆರಂಭದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ನೋವು, ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ ಅಥವಾ ಬೇರೆ ಯಾವುದೇ ಸ್ಪಷ್ಟ ಲಕ್ಷಣಗಳು ಇಲ್ಲದೆಯೇ ಕಿಡ್ನಿ ಹಾಳಾಗಬಹುದು. ಹೀಗಾಗಿ, ಹೃದಯದ ಕಾಯಿಲೆ, ಹೈ ಬಿಪಿ ಅಥವಾ ಶುಗರ್ ಇರುವವರು ನಿಯಮಿತವಾಗಿ ಕಿಡ್ನಿ ಕಾರ್ಯವೈಖರಿಯನ್ನು ಪರೀಕ್ಷೆ ಮಾಡಿಸುವುದು ಬಹಳ ಮುಖ್ಯ. ಕಿಡ್ನಿ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚಲು ಸಹಾಯ ಮಾಡುವ ಪ್ರಮುಖ ಪರೀಕ್ಷೆಗಳು ಇಲ್ಲಿವೆ.
'ಸೀರಮ್ ಕ್ರಿಯಾಟಿನಿನ್' ಅನ್ನೋದು ನಮ್ಮ ದೇಹದ ಒಂದು ತ್ಯಾಜ್ಯ. ಕಿಡ್ನಿಗಳು ಇದನ್ನು ಹೊರಹಾಕುತ್ತವೆ. ಒಂದು ಸಾಮಾನ್ಯ ರಕ್ತ ಪರೀಕ್ಷೆಯಿಂದ ಇದರ ಮಟ್ಟವನ್ನು ಕಂಡುಹಿಡಿಯಬಹುದು. ಈ ಪರೀಕ್ಷೆಯ ಫಲಿತಾಂಶವನ್ನು ಇಟ್ಟುಕೊಂಡು, ವೈದ್ಯರು 'ಎಸ್ಟಿಮೇಟೆಡ್ ಗ್ಲೋಮೆರುಲಾರ್ ಫಿಲ್ಟ್ರೇಶನ್ ರೇಟ್' (eGFR) ಅನ್ನು ಲೆಕ್ಕ ಹಾಕುತ್ತಾರೆ. ಇದು ಕಿಡ್ನಿಗಳು ರಕ್ತವನ್ನು ಎಷ್ಟು ಚೆನ್ನಾಗಿ ಫಿಲ್ಟರ್ ಮಾಡುತ್ತಿವೆ ಅಂತ ತೋರಿಸುತ್ತೆ. eGFR ಮಟ್ಟವು ಮೂರು ತಿಂಗಳಿಗಿಂತ ಹೆಚ್ಚು ಕಾಲ 60 mL/min/1.73 m2 ಗಿಂತ ಕಡಿಮೆ ಇದ್ದರೆ, ಅದು ದೀರ್ಘಕಾಲದ ಕಿಡ್ನಿ ಕಾಯಿಲೆಯ (CKD) ಸಂಕೇತವಾಗಿರಬಹುದು.
ಕಿಡ್ನಿಗೆ ಹಾನಿಯಾಗಿದೆಯಾ ಅಂತ ಆರಂಭದಲ್ಲೇ ಪತ್ತೆಹಚ್ಚಲು ಇದು ಸುಲಭವಾದ ದಾರಿ. ಆರೋಗ್ಯವಂತ ಕಿಡ್ನಿಗಳು 'ಆಲ್ಬುಮಿನ್' ಅನ್ನೋ ಪ್ರೋಟೀನ್ ಅನ್ನು ರಕ್ತದಲ್ಲೇ ಉಳಿಸಿಕೊಳ್ಳುತ್ತವೆ. ಆದರೆ ಕಿಡ್ನಿಯ ಫಿಲ್ಟರ್‌ಗಳಿಗೆ ಹಾನಿಯಾದಾಗ, ಈ ಪ್ರೋಟೀನ್ ಮೂತ್ರದ ಮೂಲಕ ಹೊರಹೋಗಲು ಶುರುವಾಗುತ್ತೆ. eGFR ಮಟ್ಟ 60ಕ್ಕಿಂತ ಹೆಚ್ಚಿದ್ದರೂ, uACR ಮಟ್ಟ 30 mg/g ಗಿಂತ ಹೆಚ್ಚಿದ್ದರೆ, ಅದು ಕಿಡ್ನಿ ಹಾನಿಯಾಗಿದೆ ಎಂಬುದನ್ನು ಸೂಚಿಸುತ್ತೆ.
ಈ ಬೇಸಿಕ್ ಮೂತ್ರ ಪರೀಕ್ಷೆಯು ಮೂತ್ರದಲ್ಲಿ ರಕ್ತ, ಪ್ರೋಟೀನ್ ಅಥವಾ ಇತರ ಅಸಹಜತೆಗಳಿವೆಯೇ ಎಂಬ ಬಗ್ಗೆ ಹೆಚ್ಚುವರಿ ಸುಳಿವುಗಳನ್ನು ನೀಡುತ್ತೆ. ಇದು uACR ಮತ್ತು eGFR ಪರೀಕ್ಷೆಗಳಿಗೆ ಬದಲಿಯಲ್ಲ. ಆದರೆ, ಮುಂದಿನ ಪರೀಕ್ಷೆಗಳು ಬೇಕೇ ಬೇಡವೇ ಎಂದು ನಿರ್ಧರಿಸಲು ವೈದ್ಯರಿಗೆ ಸಹಾಯ ಮಾಡುತ್ತೆ.
ಬಿಪಿ ಲೆವೆಲ್, ಹೃದಯ ಮತ್ತು ಕಿಡ್ನಿ ಎರಡರ ಆರೋಗ್ಯದ ಸೂಚಕ. ದೀರ್ಘಕಾಲದ ಹೈ ಬಿಪಿ ಸಮಸ್ಯೆಯು ಕಿಡ್ನಿಯೊಳಗಿನ ಸಣ್ಣ ರಕ್ತನಾಳಗಳನ್ನು ಹಾಳುಮಾಡಬಹುದು. ಅದೇ ರೀತಿ, ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ, ಬಿಪಿಯನ್ನು ಕಂಟ್ರೋಲ್ ಮಾಡುವುದು ಕೂಡ ಕಷ್ಟವಾಗುತ್ತೆ.
ಹೃದಯ ಮತ್ತು ಕಿಡ್ನಿ ಕಾಯಿಲೆಗೆ ಶುಗರ್ ಒಂದು ಪ್ರಮುಖ ಕಾರಣ. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ, ಅದು ನಿಧಾನವಾಗಿ ಕಿಡ್ನಿಯ ಫಿಲ್ಟರ್ ಮಾಡುವ ಘಟಕಗಳನ್ನು ಹಾಳುಮಾಡುತ್ತೆ. ಇದರ ಆರಂಭಿಕ ಲಕ್ಷಣವೇ 'ಆಲ್ಬುಮಿನೂರಿಯಾ' (ಮೂತ್ರದಲ್ಲಿ ಆಲ್ಬುಮಿನ್ ಪ್ರೋಟೀನ್ ಹೋಗುವುದು). ಟೈಪ್ 2 ಡಯಾಬಿಟಿಸ್ ಇರುವವರು ವರ್ಷಕ್ಕೊಮ್ಮೆಯಾದರೂ eGFR ಮತ್ತು uACR ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಅಂತ ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.