
ನಮ್ಮ ದೇಹಕ್ಕೆ ಸಕ್ಕರೆಯ ಅಂಶ ಅಗತ್ಯವಿದ್ದದ್ದೇ. ಒಬ್ಬೊಬ್ಬರ ದೇಹದ ರಚನೆ ಒಂದೊಂದು ರೀತಿಯದ್ದಾಗಿರುವ ಕಾರಣ, ಪ್ರತಿಯೊಬ್ಬರ ದೇಹದಲ್ಲಿಯೂ ಇಂತಿಷ್ಟೇ ಸಕ್ಕರೆ ಅಂಶ ಇರಬೇಕು ಎಂದು ಹೇಳುವುದು ತಪ್ಪು ಎನ್ನುತ್ತದೆ ಹೋಮಿಯೋಪಥಿ ವೈದ್ಯಕೀಯ. ಆದರೆ, ಸಾಮಾನ್ಯವಾಗಿ ಶುಗರ್ ಲೆವೆಲ್ ಪ್ರತಿಯೊಬ್ಬರಲ್ಲಿಯೂ ಇಷ್ಟೇ ಇರಬೇಕು ಎನ್ನುತ್ತದೆ ಅಲೋಪಥಿ ವೈದ್ಯಕೀಯ. ಅದೇನೇ ಆದರೂ, ಅತಿಯಾದರೆ ಅಮೃತವೂ ವಿಷ ಎನ್ನುವಂತೆ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಕ್ಕರೆ ಅಂಶ ಸೇರಿದರೆ ಅದು ಯಾವ ರೀತಿಯ ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಈಗಂತೂ ಸಕ್ಕರೆ ಕಾಯಿಲೆ ಎನ್ನುವುದು ಬಹಳ ಮಾಮೂಲಾಗಿಬಿಟ್ಟಿದೆ. ಹಿಂದೆಲ್ಲಾ ಒಂದಷ್ಟು ವಯಸ್ಸಾದ ಮೇಲೆ ಬರುತ್ತಿದ್ದ ಈ ಸಮಸ್ಯೆ, ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳನ್ನೂ ಆವರಿಸಿಕೊಂಡು ಬಿಟ್ಟಿದೆ.
ಈ ಸಮಸ್ಯೆಗೆ ಆನುವಂಶೀಯತೆ ಕಾರಣ ಎನ್ನುವುದು ಒಂದೆಡೆಯಾದರೆ, ಇಂದಿನ ಆಹಾರ ಪದ್ಧತಿ, ಪರಿಸರ ಎಲ್ಲವೂ ಇದಕ್ಕೆ ಕೊಡುಗೆ ನೀಡುತ್ತಿವೆ. ದೈಹಿಕ ವ್ಯಾಯಾಮ ಇಲ್ಲದೇ ಇರುವುದು ಕೂಡ ಇದಕ್ಕೆ ದೊಡ್ಡ ಕಾರಣವಾಗಿದೆ. ಯಾರನ್ನು ಕೇಳಿದರೂ ಟೈಮ್ ಇಲ್ಲ ಎನ್ನುವ ಮಾತು. ಆದರೆ ಸಕ್ಕರೆಯ ಮಟ್ಟ ಹೆಚ್ಚಾದರೆ ಕೊನೆಗೆ ಸಂಪೂರ್ಣವಾಗಿ ಹಾಸಿಗೆಯ ಮೇಲೆಯೇ ಇರಬೇಕಾದ ಪ್ರಸಂಗವನ್ನು ಹಲವರು ತಂದಿಟ್ಟುಕೊಂಡಿದ್ದಾರೆ. ಆದ್ದರಿಂದ ದೈಹಿಕ ವ್ಯಾಯಾಮ ಅತ್ಯಗತ್ಯ ಎಂದೇ ವೈದ್ಯರು ಹೇಳುತ್ತಾರೆ.
ಮಧುಮೇಹಕ್ಕೆ ಸಂಬಂಧಿಸಿದಂತೆ ಹಲವು ಅಧ್ಯಯನಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿಯೂ ಆಹಾರ ಸೇವನೆಯ ನಂತರ ಶುಗರ್ ಲೆವೆಲ್ ಹೆಚ್ಚುವುದನ್ನು ನೋಡಬಹುದು. ಆದ್ದರಿಂದ ಇದೀಗ ಮಾಡಿರುವ ಅಧ್ಯಯನದ ಪ್ರಕಾರ, ಕೊನೆಯ ಪಕ್ಷ ಊಟ ಮಾಡಿದ ನಂತರ ಎದ್ದು ನಡೆಯುವುದು ಅತ್ಯಗತ್ಯ ಎನ್ನಲಾಗಿದೆ. ಕನಿಷ್ಠ ಎರಡು ನಿಮಿಷಗಳಾದರೂ ವಾಕ್ ಮಾಡಿ. ಅದೂ ಸಾಧ್ಯವಿಲ್ಲದಿದ್ದರೆ, ಎರಡು ನಿಮಿಷ ಅಲ್ಲಿಯೇ ನಿಂತುಕೊಳ್ಳಿ. ಇದನ್ನು ಪ್ರತಿಬಾರಿಯೂ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದಿದೆ ಈ ಅಧ್ಯಯನ.
ಇದಾಗಲೇ ಈ ಬಗ್ಗೆ ಸಾಕಷ್ಟು ವೈದ್ಯರು ಕೂಡ ಮಧುಮೇಹಿಗಳಿಗೆ ಹೇಳಿರಬಹುದು. ರಾತ್ರಿ ಊಟವಾದ ಬಳಿಕ ವಾಕಿಂಗ್ ಮಾಡುವುದು ಸಹ ಪರಿಣಾಮಕಾರಿ ಎನ್ನಲಾಗುತ್ತದೆ. ಬೆಳಗಿನ ಸಮಯದಲ್ಲಿ ಮನೆಯೊಳಗೆ ಚಿಕ್ಕಪುಟ್ಟ ವ್ಯಾಯಾಮ, ಸಂಜೆಯಲ್ಲೂ ವ್ಯಾಯಾಮ, ಮಧ್ಯಾಹ್ನ ಮತ್ತು ರಾತ್ರಿ ಊಟವಾದ ಬಳಿಕ ನಡಿಗೆ ಮಾಡುವುದರಿಂದ ಮಧುಮೇಹಿಗಳಲ್ಲಿ ಸಕ್ಕರೆ ಪ್ರಮಾಣ ಇಳಿಮುಖವಾಗುತ್ತದೆ ಎನ್ನುತ್ತಾರೆ ತಜ್ಞರು. ಅಧ್ಯಯನದ ಪ್ರಕಾರ, ಮುಂಜಾನೆಯ ವಾಕಿಂಗ್ ಗಿಂತ ಸಂಜೆ ಹಾಗೂ ಮಧ್ಯಾಹ್ನದ ಬಳಿಕ ವಾಕಿಂಗ್ ಸೇರಿದಂತೆ ದೈಹಿಕ ಚಟುವಟಿಕೆ ನಡೆಸುವುದು ಮಧುಮೇಹಿಗಳ ಆರೋಗ್ಯಕ್ಕೆ ಉತ್ತಮ. ಮಧ್ಯಾಹ್ನದ ಬಳಿಕ ಹಾಗೂ ಸಂಜೆಯ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ಇನ್ಸುಲಿನ್ ಪ್ರತಿರೋಧಕ ತಗ್ಗುತ್ತದೆ. ಬೆಳಗಿನ ಹೊತ್ತು ವ್ಯಾಯಾಮ ಮಾಡುವುದಕ್ಕಿಂತ ಸಂಜೆಯ ಸಮಯದ ವ್ಯಾಯಾಮದಿಂದ ದೇಹದ ಕೆಲವು ವ್ಯವಸ್ಥೆಗೆ ಅನುಕೂಲವಾಗುತ್ತದೆ. ಇನ್ಸುಲಿನ್ ಗೆ ಪ್ರತಿರೋಧ ಒಡ್ಡುವ ಕೋಶಗಳ ನಿಯಂತ್ರಣ ಇದರಿಂದ ಸಾಧ್ಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.