
ಇಯರ್ ಬಡ್ಸ್ (Ear Buds) ಕಿವಿಗಿಟ್ಟರೆ ಅದೇನೋ ಆನಂದ. ಕೆಲವರಂತೂ ದಿನವೂ ಸ್ನಾನದ (Bath) ಬಳಿಕ ಕಿವಿಯನ್ನು ಬಡ್ ನಿಂದ ಸ್ವಚ್ಛಗೊಳಿಸುವ ಅಭ್ಯಾಸ ಹೊಂದಿರುತ್ತಾರೆ. ಕಿವಿಯಲ್ಲಿ ತುರಿಕೆ ಬಂದಾಗ, ನೀರು ಹೋದ ಅನುಭವ ಆದಾಗಲೂ ಬಡ್ ಕಿವಿಗಿಡುವುದು ಅತ್ಯಂತ ಸಾಮಾನ್ಯ ಅಭ್ಯಾಸ. ಕಿವಿಯನ್ನು ಸ್ವಚ್ಛಗೊಳಿಸಿಕೊಳ್ಳಲು ಕೆಲವರಂತೂ ಬಡ್ ಮಾತ್ರವಲ್ಲ, ಯಾವ್ಯಾವುದೋ ವಸ್ತುಗಳನ್ನು ಕಿವಿಗಿಡುತ್ತಾರೆ. ಕಡ್ಡಿ, ಕಾಗದದ ಚೂರನ್ನು ಕಿವಿಗಿಡುತ್ತಾರೆ. ಆದರೆ, ಈ ಎಲ್ಲ ವಸ್ತುಗಳನ್ನು ಬಳಕೆ ಮಾಡುವುದು ಕಿವಿಯ ಆರೋಗ್ಯಕ್ಕೆ ಎಷ್ಟು ಹಾನಿಯಾಗಬಹುದು ಎನ್ನುವ ಅಂದಾಜು ಬಹುತೇಕರಿಗೆ ಇಲ್ಲ.
ಕಿವಿಯಲ್ಲಿ ಉತ್ಪಾದನೆಯಾಗುವ ಅಂಟಿನಂತಹ ದ್ರವ (ಇದಕ್ಕೆ ಇಯರ್ ವ್ಯಾಕ್ಸ್ (Ear Wax) ಎನ್ನುತ್ತಾರೆ) ಅಥವಾ ಗುಗ್ಗೆ ನಮ್ಮ ಕಿವಿಯನ್ನು ರಕ್ಷಿಸುತ್ತದೆ. ಅಷ್ಟಕ್ಕೂ ನಮ್ಮ ಕಿವಿ (Ear) ಇದೆಯಲ್ಲ? ಅದು ತುಂಬ ನಾಜೂಕಿನ ಅಂಗ. ನೀವು ನೋಡಿರಬಹುದು, ಕೆಲವು ಜನ ಪದೇ ಪದೆ ಕಿವಿಗೆ ಕಡ್ಡಿಯನ್ನು ತೂರಿಸಿಕೊಳ್ಳುತ್ತಾರೆ. ತುರಿಸಿಕೊಳ್ಳುತ್ತಾರೆ. ಭಾರೀ ಕಸ ಬರುವಂತೆ ಕೆರೆಯುತ್ತಾರೆ. ನಿಜವಾಗಿ ಹೇಳಬೇಕೆಂದರೆ, ಕಿವಿಯನ್ನು ಅಷ್ಟೆಲ್ಲ ಸ್ವಚ್ಛಗೊಳಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಒಂದೊಮ್ಮೆ ಕಿವಿಯಲ್ಲಿ ವ್ಯಾಕ್ಸ್ ಬಂದಾಗ ತುಂಬ ಎಚ್ಚರಿಕೆಯಿಂದ ಸ್ವಚ್ಛ (Clean) ಮಾಡಿಕೊಳ್ಳಬೇಕು.
ಕಿವಿಯಲ್ಲಿ ಉಂಟಾಗುವ ವ್ಯಾಕ್ಸ್ ಅನ್ನು ತುಂಬ ಜನ ಏನೂ ಪ್ರಯೋಜನಕ್ಕೆ ಬಾರದ ಅನುತ್ಪಾದಕ ಅಂಶ ಎಂದು ಭಾವಿಸುತ್ತಾರೆ. ಆದರೆ, ಇದು ಕಿವಿಯ ಆರೋಗ್ಯ ಕಾಪಾಡುವಲ್ಲಿ ಭಾರೀ ಪ್ರಮುಖ ಪಾತ್ರ ವಹಿಸುತ್ತದೆ. ಕಿವಿಯಲ್ಲಿ ಅಂಟಿನಂತಹ ದ್ರವ ಉಂಟಾಗುವುದು ದೇಹದ ಅತ್ಯಂತ ಸಹಜ ಕ್ರಿಯೆ. ಇದು ಕಿವಿ ಶುಷ್ಕವಾಗದಂತೆ ನೋಡಿಕೊಂಡು ಅವುಗಳ ರಕ್ಷಣೆ ಮಾಡುತ್ತದೆ. ಒಂದೊಮ್ಮೆ ಸೂಕ್ತ ಪ್ರಮಾಣದಲ್ಲಿ ವ್ಯಾಕ್ಸ್ ಉಂಟಾಗದಿದ್ದಾಗ ಕಿವಿಗಳು ಶುಷ್ಕವಾಗುತ್ತವೆ. ಆಗ ತುರಿಕೆ ಕಂಡುಬರುತ್ತದೆ.
ಅಚ್ಚರಿಯೆಂದರೆ, ಇಯರ್ ವ್ಯಾಕ್ಸ್ ಆಂಟಿಬ್ಯಾಕ್ಟೀರಿಯಲ್ (Antibacterial) ಅಂಶಗಳನ್ನು ಒಳಗೊಂಡಿರುತ್ತದೆ. ಇದರ ಕಾರಣದಿಂದ ಕಿವಿ ತನ್ನ ಸ್ವಚ್ಛತೆಯನ್ನು ತಾನೇ ಮಾಡಿಕೊಳ್ಳುತ್ತದೆ. ಇಯರ್ ವ್ಯಾಕ್ಸ್ ಕಿವಿಗಳಿಗೆ ಒಂದು ಫಿಲ್ಟರ್ ನಂತೆ ಕೆಲಸ ಮಾಡುತ್ತದೆ. ಕಸ, ಧೂಳುಗಳಿಂದ ನಮ್ಮ ಕಿವಿಗಳನ್ನು ರಕ್ಷಣೆ ಮಾಡುತ್ತದೆ ಹಾಗೂ ಅವು ಕಿವಿಯೊಳಗೆ ಪ್ರವೇಶಿಸದಂತೆಯೂ ನೋಡಿಕೊಳ್ಳುತ್ತದೆ.
ಇದನ್ನೂ ಓದಿ: Know your Health: ನಿಮ್ಮಲ್ಲಿ ಈ ಲಕ್ಷಣಗಳಿವೆಯೇ? ಎಚ್ಚರಿಕೆ ವಹಿಸಿ
ಕೆಲ ಕಾಲ ಕಿವಿಗಳಿಗೆ ನೀವು ಏನೂ ಹಾಕದಿದ್ದರೂ ಅಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಹಳೆಯ ವ್ಯಾಕ್ಸ್ ಗಟ್ಟಿಯಾಗಿ ತನ್ನಿಂತಾನೇ ಕಿವಿಯಿಂದ ಹೊರಗೆ ಬರುವಾಗ ಹೊಸ ವ್ಯಾಕ್ಸ್ ಉತ್ಪಾದನೆಯಾಗುತ್ತದೆ. ನೀವು ಕಿವಿಯನ್ನು ಸ್ವಚ್ಛಗೊಳಿಸಿಕೊಳ್ಳಲು ಯತ್ನಿಸುವಾಗ ಇಯರ್ ವ್ಯಾಕ್ಸ್ ಇನ್ನಷ್ಟು ಒಳಗೆ ತಳ್ಳಲ್ಪಡಬಹುದು. ಅದರಿಂದ ಕಿವಿ ಬ್ಲಾಕ್ ಆಗಬಹುದು. ಹತ್ತಿ ಅಥವಾ ಇನ್ನಿತರ ವಸ್ತುಗಳಿಂದ ಸೋಂಕು ಉಂಟಾಗಬಹುದು. ಕಿವಿಗಳ ಒಳಭಾಗದಲ್ಲಿ ಗಾಯವಾಗಬಹುದು, ಪೊರೆಗೆ ಧಕ್ಕೆಯಾಗಬಹುದು. ಆಗ ಕಿವಿಯ ದಕ್ಷತೆ ಕಡಿಮೆಯಾಗಬಹುದು.
ಸ್ವಚ್ಛ ಮಾಡಲೇಬೇಕಾ?
ನೀವಾಗಿಯೇ ಕಿವಿಗಳನ್ನು ಸ್ವಚ್ಛ ಮಾಡುವ ಅಗತ್ಯವೇ ಇಲ್ಲ. ಏಕೆಂದರೆ ಕಿವಿಯ ನಾಳಗಳಿಗೆ ಸ್ವಚ್ಛತೆಯ ಅಗತ್ಯವಿಲ್ಲ. ಒಂದೊಮ್ಮೆ ಕಿವಿಯಲ್ಲಿ ವ್ಯಾಕ್ಸ್ ತುಂಬಿ ಹೋಗಿದ್ದರೆ ಅದು ಸೆರುಮೆನ್ (Cerumen) ಸೋಂಕು ಆಗಿರಬಹುದು. ಆಗ ತುಂಬ ಎಚ್ಚರಿಕೆಯಿಂದ ಸ್ವಚ್ಛ ಮಾಡಬೇಕು. ಇಲ್ಲವಾದಲ್ಲಿ ತಜ್ಞರನ್ನು ಭೇಟಿಯಾಗಬೇಕು.
ಇದನ್ನೂ ಓದಿ: Health Tips: ಆರೋಗ್ಯಕ್ಕೆ ಕಲ್ಲಂಗಡಿ ಹಣ್ಣು ಮಾತ್ರವಲ್ಲ, ಬೀಜ ಕೂಡಾ ಒಳ್ಳೆಯದೇ
ಸೆರುಮೆನ್ ಸೋಂಕಿನ ಲಕ್ಷಣ
ನೋವು ಅಥವಾ ಕಿವಿಯಲ್ಲಿ ಏನೋ ತುಂಬಿಕೊಂಡಿರುವ ಭಾವನೆ, ಕೇಳಿಸುವಲ್ಲಿ ಸಮಸ್ಯೆ, ದಿನ ಕಳೆದಂತೆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಕಿವಿಯಲ್ಲಿ ಏನೋ ಸದ್ದು ಕೇಳಿಸಿದಂತಾಗುವುದು. ಕಿವಿಯಿಂದ ವಿಚಿತ್ರ ವಾಸನೆ ಬರುವುದು.
ಹಾಗಿದ್ದರೆ ಸ್ವಚ್ಛತೆ ಹೇಗೆ?
ಸ್ವಚ್ಛವಾದ ಬಟ್ಟೆಯಿಂದ ಸ್ವಚ್ಛ ಮಾಡಬೇಕು. ಕಿವಿಗೆ ಬೇಬಿ ಆಯಿಲ್, ಮಿನರಲ್ ಆಯಿಲ್ ಅಥವಾ ಗ್ಲಿಸರಿನ್ ಗಳನ್ನು ಸವರಿಕೊಂಡು ಸ್ವಚ್ಛ ಮಾಡಬಹುದು. ಬಡ್ಸ್ ಹಾಕುವುದರಿಂದ ಸೋಂಕು (Infection) ಉಂಟಾಗುವ ಸಾಧ್ಯತೆ ಅಧಿಕವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.