ಅವಳಿ ಎಂದ ಮಾತ್ರಕ್ಕೆ ಅಪ್ಪ ಒಬ್ಬರೇ ಆಗಿರಬೇಕಿಲ್ಲ; ಅವಳಿ ಲೋಕದಲ್ಲಿ ಅಚ್ಚರಿಗಳಿಗೆ ಬರವಿಲ್ಲ

By Suvarna News  |  First Published May 10, 2020, 11:35 AM IST

ಅವಳಿಗಳು ಅಂದ್ರೇನೆ ಅಲ್ಲೊಂದು ಸಂಭ್ರಮ,ಕುತೂಹಲ. ಅವಳಿ-ಜವಳಿ ಕುರಿತು ಅದೆಷ್ಟು ನಂಬಿಕೆಗಳು,ಅಚ್ಚರಿಗಳಿವೆ. ವೈಜ್ಞಾನಿಕವಾಗಿಯೂ ಅವಳಿ ಮಕ್ಕಳ ಕುರಿತು ಒಂದಿಷ್ಟು ಅಚ್ಚರಿಯ ಸಂಗತಿಗಳಿವೆ.


ಅವಳಿ ಮಕ್ಕಳು ಗರ್ಭದಲ್ಲಿವೆ ಎಂಬುದು ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರು, ಅಕ್ಕಪಕ್ಕದ ಮನೆಯವರು ಗರ್ಭಿಣಿಗೆ ಸಾಕಷ್ಟು ಸಲಹೆಗಳನ್ನು ನೀಡಲು ಪ್ರಾರಂಭಿಸುತ್ತಾರೆ.ಕೆಲವರಂತೂ ಒಂದಿಷ್ಟು ನಂಬಿಕೆಗಳ ಆಧಾರದಲ್ಲಿ ಅವಳಿ-ಜವಳಿ ಮಕ್ಕಳು ಹುಟ್ಟಲು ಕಾರಣ,ಅವರ ರೂಪ, ವರ್ತನೆ ಕುರಿತು ನಾನಾ ಕಥೆಗಳನ್ನು ಹಣೆಯುತ್ತಾರೆ.ಆದ್ರೆ ಅವಳಿ-ಜವಳಿ ಮಕ್ಕಳ ಪ್ರೆಗ್ನನ್ಸಿ ಕುರಿತು ವೈಜ್ಞಾನಿಕವಾಗಿ ಸಾಬೀತಾಗಿರುವ ಅನೇಕ ಆಸಕ್ತಿಕರ ಸಂಗತಿಗಳು ಕೂಡ ಇವೆ.

ಅವಳಿ ಮಕ್ಕಳ ಭಾಷೆ

Latest Videos

undefined

ಅರೇ, ಇದೇನಿದು ಎಂದು ಅಚ್ಚರಿಪಡಬೇಡಿ. ಒಂದು ವರ್ಷದೊಳಗಿನ ಅವಳಿ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಇಬ್ಬರನ್ನು ಅಕ್ಕಪಕ್ಕ ಮಲಗಿಸಿರುವಾಗ ಅಥವಾ ಇಬ್ಬರು ಜೊತೆಯಾಗಿ ಆಟವಾಡುವಾಗ ಪರಸ್ಪರ ಏನೋ ಸಂಭಾಷಣೆಯಲ್ಲಿ ನಿರತರಾಗಿರುತ್ತಾರೆ. ಇದನ್ನು ನೀವು ಎಲ್ಲ ಪುಟ್ಟ ಮಕ್ಕಳು ಮಾತನಾಡುವ ಅಸ್ಪಷ್ಟ ಪದಮಾಲಿಕೆ ಎಂದು ಭಾವಿಸಿದ್ರೆ ತಪ್ಪು. ಇನ್ಸ್‍ಟಿಟ್ಯೂಟ್ ಆಫ್ ಜನರಲ್ ಲಿಂಗ್ಯುಸ್ಟಿಕ್ಸ್ ಜರ್ನಲ್‍ನಲ್ಲಿ ಪ್ರಕಟವಾದ ಸಂಶೋಧನಾ ಲೇಖನದ ಪ್ರಕಾರ ಅವಳಿಗಳು ಕ್ರಿಪ್ಟೋಫೇಸಿಯಾ ಎಂಬ ಭಾಷೆಯಲ್ಲಿ ಪರಸ್ಪರ ಸಂವಹನ ನಡೆಸುತ್ತಾರಂತೆ. ಅಷ್ಟೇ ಅಲ್ಲ, ಈ ಭಾಷೆ ಅವರಿಗೆ ಮಾತ್ರ ಅರ್ಥವಾಗುತ್ತಂತೆ. ಆದ್ರೆ ಅವಳಿ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಈ ಭಾಷೆಯನ್ನು ಮರೆಯುತ್ತಾರೆ ಹಾಗೂ ಇತರ ಭಾಷೆಗಳನ್ನು ಕಲಿಯಲು ಪ್ರಾರಂಭಿಸುತ್ತಾರೆ.  

ತೆಳ್ಳಗಿರುವ ಹುಡುಗಿಯ ಕಷ್ಟಸುಖಗಳು; ಬಿ ಹ್ಯಾಪಿ ವಿತ್‌ ವಾಟ್‌ ಯು ಹ್ಯಾವ್‌

ಅವಳಿಗಳಿಂದ ಅಮ್ಮನ ಆಯಸ್ಸು ಹೆಚ್ಚುತ್ತೆ

ಯುಟ್ಹ ವಿಶ್ವವಿದ್ಯಾಲಯದ ಸಂಶೋಧಕರು 1800 ಹಾಗೂ 1970ರ ನಡುವೆ ನಡೆದ ಸಾವು ಹಾಗೂ ಹುಟ್ಟಿನ ದಾಖಲಾತಿಗಳನ್ನು ಪರೀಕ್ಷಿಸಿದಾಗ ಅವಳಿ ಮಕ್ಕಳ ತಾಯಿ ಉಳಿದವರಿಗಿಂತ ಹೆಚ್ಚು ವರ್ಷ ಬದುಕಿರೋದು ಪತ್ತೆಯಾಗಿದೆ. ಹಾಗಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸುದೀರ್ಘ ಕಾಲ ಬದುಕುತ್ತಾರೆ.

ವ್ಯಾನಿಶ್ ಟ್ವಿನ್ ಸಿಂಡ್ರೋಮ್

ಅಧ್ಯಯನಗಳ ಪ್ರಕಾರ ಶೇ.10-15ರಷ್ಟು ಭ್ರೂಣಗಳು ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಅವಳಿಗಳಾಗಿರುತ್ತವೆ. ಆದ್ರೆ ಗರ್ಭಧಾರಣಿಯ ಪ್ರಾರಂಭಿಕ ಹಂತದಲ್ಲೇ ಒಂದು ಭ್ರೂಣ ನಾಶವಾಗುತ್ತದೆ. ಇದನ್ನು ವ್ಯಾನಿಶಿಂಗ್ ಟ್ವಿನ್ ಸಿಂಡ್ರೋಮ್ ಎನ್ನುತ್ತಾರೆ. 

ಅವಳಿಯೆಂದ ಮಾತ್ರಕ್ಕೆ ಅಪ್ಪ ಒಬ್ಬರೇ ಆಗಿರಬೇಕಿಲ್ಲ

ಅರೇ, ಇದೇನಿದು ಅವಳಿ ಮಕ್ಕಳಿಗೆ ಬೇರೆ ಬೇರೆ ತಂದೆ ಇರಲು ಸಾಧ್ಯವೆ ಎಂದು ಮೂಗಿನ ಮೇಲೆ ಬೆರಳಿಡಬೇಡಿ. ಇಂಥದೊಂದು ಸಾಧ್ಯತೆಯೂ ಇದೆ. ಮಹಿಳೆಯಲ್ಲಿ ಒಂದು ಅಂಡಾಣು ಬದಲು ಎರಡು ಅಂಡಾಣುಗಳು ಬಿಡುಗಡೆಯಾದ ತಿಂಗಳಲ್ಲಿ ಇಂಥದೊಂದು ಅಚ್ಚರಿ ಘಟಿಸಲು ಅವಕಾಶವಿದೆ. ಈ ಎರಡೂ ಅಂಡಾಣುಗಳು ಇಬ್ಬರು ಪುರುಷರ ವೀರ್ಯಾಣುಗಳಿಂದ ಫಲಿತಗೊಂಡರೆ ಮಹಿಳೆ ಜನ್ಮ ನೀಡುವ ಅವಳಿಗಳ ತಂದೆ ಬೇರೆ ಬೇರೆಯಾಗಿರುವ ಸಾಧ್ಯತೆಯಿದೆ. ಆದ್ರೆ ಇಂಥ ಸಾಧ್ಯತೆ ತುಂಬಾನೇ ಕಡಿಮೆ.

ಯೋಗದೊಂದಿಗೆ ಕಿಕ್ ಸ್ಟಾರ್ಟ್ ಆಗಲಿ ದಿನ!

ಹೆರಿಗೆ ವಿಧಾನ ಒಂದೇ ಆಗಿರಬೇಕಿಲ್ಲ

ಹೌದು, ಅವಳಿ ಎಂದ ಮಾತ್ರಕ್ಕೆ ಇಬ್ಬರೂ ಒಂದೇ ಹೆರಿಗೆ ವಿಧಾನದಲ್ಲಿ ಜನಿಸುತ್ತಾರೆ ಎಂದು ಭಾವಿಸಿದ್ರೆ ತಪ್ಪು. ಕೆಲವೊಂದು ಸಂದರ್ಭಗಳಲ್ಲಿ ಮೊದಲ ಮಗು ಸಹಜ ಹೆರಿಗೆ ಮೂಲಕ ಜನಿಸಿದ್ರೆ ಎರಡನೇ ಮಗು ಸಿಸೇರಿಯನ್ ಮೂಲಕ ಹುಟ್ಟಿರುವಂತಹ ನಿದರ್ಶನಗಳಿವೆ. ಎರಡನೇ ಮಗುವಿಗೆ ಸಹಜ ಹೆರಿಗೆ ಕಷ್ಟಕರವಾದ ಸಂದರ್ಭಗಳಲ್ಲಿ ಸಿಸೇರಿಯನ್ ಮಾಡಲಾಗುತ್ತದೆ. 

ಫೋಟೋ ಕಾಪಿ ಆಗಿರಬೇಕಿಲ್ಲ

ಅವಳಿಗಳು ಎಂದ ಮಾತ್ರಕ್ಕೆ ಇಬ್ಬರಲ್ಲೂ ಹೋಲಿಕೆ ಇರಲೇಬೇಕು ಎಂದೇನಿಲ್ಲ. ಕೆಲವು ಅವಳಿಗಳಲ್ಲಿ ಮಾತ್ರ ರೂಪ ಹಾಗೂ ಗುಣಗಳಲ್ಲಿ ಹೋಲಿಕೆ ಕಂಡುಬರುತ್ತದೆ. ಒಂದೇ ಫಲಿತ ಅಂಡಾಣು ವಿಭಜನೆಗೊಂಡ ಸಂದರ್ಭದಲ್ಲಿ ಮಾತ್ರ ಇಬ್ಬರಲ್ಲೂ ಹೋಲಿಕೆ ಕಂಡುಬರಲು ಸಾಧ್ಯ. 

ಗೋಡಂಬಿ ಇಷ್ಟ ಅನ್ನೋರಿಗೆ ಗೇರುಹಣ್ಣಿನ ಬಗ್ಗೆ ಏನ್ ಗೊತ್ತು?

37 ವಾರಗಳಿಗೂ ಮುನ್ನವೇ ಜನಿಸುತ್ತಾರೆ

ಹೊಟ್ಟೆಯಲ್ಲಿ ಅವಳಿ ಮಕ್ಕಳಿವೆ ಎಂದ ಮಾತ್ರಕ್ಕೆ ಹೆರಿಗೆ ತಡವಾಗಿ ಆಗುತ್ತದೆ ಎಂದೇನಿಲ್ಲ. ಹಾಗೆಯೇ ಅವಧಿಗೂ ಮುನ್ನ ಹೆರಿಗೆ ಆಗೋದಿಲ್ಲ ಎಂದು ಭಾವಿಸಬೇಕಾಗಿಲ್ಲ. ಅಧ್ಯಯನಗಳ ಪ್ರಕಾರ ಶೇ.50ಕ್ಕೂ ಹೆಚ್ಚು ಅವಳಿಗಳು 37 ವಾರಗಳಿಗೂ ಮುನ್ನವೇ ಜನಿಸುತ್ತಾರೆ.

ಐವಿಎಫ್‍ಗೂ ಅವಳಿಗೂ ಸಂಬಂಧ

ಚಿಕಿತ್ಸೆಯ ಪರಿಣಾಮವಾಗಿ ಗರ್ಭ ಧರಿಸಿದವರಲ್ಲಿ ಅವಳಿ ಮಕ್ಕಳು ಹೆಚ್ಚಾಗಿ ಜನಿಸುತ್ತಾರೆ. ಶೇ.30-50ರಷ್ಟು ಅವಳಿ ಗರ್ಭಧಾರಣೆಗೆ ಸಂತಾನ ಚಿಕಿತ್ಸೆಯೇ ಕಾರಣ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಅದರಲ್ಲೂ ಐವಿಎಫ್‍ಗೆ ಒಳಗಾದವರಲ್ಲಿ ಅವಳಿ ಮಕ್ಕಳು ಹೆಚ್ಚಾಗಿ ಜನಿಸುತ್ತಾರೆ.

click me!