Dry or Itchy Skin: ಚರ್ಮದಲ್ಲಿ ತುರಿಕೆಯೇ? ಹಲವು ತೊಂದರೆಗಳ ಲಕ್ಷಣ ಇರ್ಬೋದು

By Suvarna NewsFirst Published Sep 11, 2022, 5:56 PM IST
Highlights

ತುರಿಕೆ ಅಥವಾ ನವೆಯಂತಹ ಸಮಸ್ಯೆ ಭಾರೀ ದೊಡ್ಡ ಸಮಸ್ಯೆ ಏನಲ್ಲ. ಆದರೆ, ಅಪಾರ ಕಿರಿಕಿರಿ ತಂದೊಡ್ಡುತ್ತವೆ. ಅಲ್ಲದೆ, ಇದು ಬೇರೆ ಬೇರೆ ಅನಾರೋಗ್ಯದ ಲಕ್ಷಣವೂ ಆಗಿರಬಹುದು.
 

ಮುಖ, ಮೈ, ಕೈ, ತೋಳು, ಸೊಂಟ, ಬೆನ್ನು, ಹೊಟ್ಟೆ ಎಲ್ಲೆಲ್ಲೂ ತುರಿಕೆ, ನವೆಯಾಗಿ ಸಾಕಪ್ಪಾ ಸಾಕು ಎಂದೆನಿಸಿಬಿಡುತ್ತದೆ. ನವೆಯಾಗಿ ಕೆಲವೊಮ್ಮೆ ಕೆಂಪಗಿನ ಎಳೆಗಳು, ಗುಳ್ಳೆಗಳು ಮೂಡಬಹುದು. ಈ ಸಮಸ್ಯೆಯನ್ನು ಎಲ್ಲರೂ ಒಂದಿಲ್ಲೊಂದು ಬಾರಿ ಅನುಭವಿಸುತ್ತಾರೆ, ಅಷ್ಟು ಸಾಮಾನ್ಯ ತೊಂದರೆ ಇದು. ಇದಕ್ಕೆ ಕಾರಣಗಳು ಹಲವು. ಕೆಲವೊಮ್ಮೆ ಚರ್ಮದ ಈ ಲಕ್ಷಣ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ತೋರಬಹುದು. ಶುಷ್ಕ ಚರ್ಮ ಮತ್ತು ತುರಿಕೆ ಕಂಡುಬರುವುದು ಮಳೆಯ ಸಮಯದಲ್ಲಿ ಸಾಮಾನ್ಯ. ಹವಾಮಾನ ನಿರಂತರವಾಗಿ ಬದಲಾಗುತ್ತಿರುತ್ತದೆ. ಇದರಿಂದ ಸಾಕಷ್ಟು ಜನ ಚರ್ಮ ಒಣಗುವ ಸಮಸ್ಯೆ ಎದುರಿಸುತ್ತಾರೆ. ಆದರೆ, ನಿರಂತರವಾಗಿ ಈ ತೊಂದರೆ ಕಂಡುಬಂದರೆ ಎಚ್ಚೆತ್ತುಕೊಳ್ಳಿ. ಏಕೆಂದರೆ, ಚರ್ಮಕ್ಕೆ ಸಂಬಂಧಿಸಿದ ಸೋಂಕು, ಚರ್ಮದ ಬಣ್ಣ ಬದಲಾಗುವುದು, ಅತಿಯಾದ ತುರಿಕೆ ಇವೆಲ್ಲವೂ ಮಧುಮೇಹ, ಕಿಡ್ನಿ,  ಥೈರಾಯ್ಡ್ ಅಥವಾ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಲಕ್ಷಣವಾಗಿರಬಹುದು. ಹೀಗಾಗಿ, ಚರ್ಮಕ್ಕೆ ಸಂಬಂಧಿಸಿದ ಮೇಲಿನ ಯಾವುದೇ ತೊಂದರೆ ಎರಡು ವಾರಗಳಿಗಿಂತ ಹೆಚ್ಚು ಸಮಯ ಕಂಡುಬಂದರೆ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು ಮುಖ್ಯ. ತುರಿಕೆ ಮತ್ತು ನವೆಯಾಗುವ ಸಮಸ್ಯೆಗೆ ಈ ಕೆಳಗಿನ ಹಲವಾರು ಕಾರಣಗಳಿರಬಹುದು.

ತಜ್ಞರ ಪ್ರಕಾರ, ಚರ್ಮದಲ್ಲಿ (Skin) ನಿರಂತರವಾಗಿ ಕಂಡುಬರುವ ತುರಿಕೆಯಿಂದ (Itchy) ನಿದ್ರೆಯ (Sleep) ಸಮಸ್ಯೆ ಉಂಟಾಗಬಹುದು. ಇದರಿಂದಾಗಿ ವ್ಯಕ್ತಿಯಲ್ಲಿ ಆತಂಕ (Anxiety) ಮತ್ತು ಖಿನ್ನತೆಯ (Depression) ಸಮಸ್ಯೆ ಸೃಷ್ಟಿಯಾಗಬಹುದು. ಹಾಗೂ ಇದರಿಂದಾಗಿ ದೈನಂದಿನ ಕೆಲಸಕಾರ್ಯಗಳಿಗೆ ಧಕ್ಕೆ ಉಂಟಾಗಬಹುದು.  

•     ಚರ್ಮದ ಸೋಂಕು (Skin Infection)
ತಜ್ಞರ ಪ್ರಕಾರ, ಚರ್ಮದ ಯಾವಾಗ ಶುಷ್ಕವಾಗುತ್ತದೆಯೋ ಆಗ ತುರಿಕೆ ಅಧಿಕವಾಗುತ್ತದೆ. ಪದೇ ಪದೆ ಹೀಗಾಗುತ್ತಿದ್ದರೆ ಚರ್ಮವು ನಿಧಾನವಾಗಿ ಒರಟಾಗುತ್ತದೆ ಹಾಗೂ ವಯಸ್ಸಾದಂತೆ (Aged) ಕಂಡುಬರುತ್ತದೆ, ಚರ್ಮದ ಮೇಲೆ ಸುಕ್ಕುಗಳಾಗುತ್ತವೆ. ಇದರಿಂದಾಗಿ ಬ್ಯಾಕ್ಟೀರಿಯಾ (Bacteria) ಸೋಂಕು ಮತ್ತು ಚರ್ಮದ ಬಣ್ಣ ಬದಲಾಗುವ ಸಮಸ್ಯೆಯನ್ನೂ ಅನುಭವಿಸಬೇಕಾಗಿ ಬರಬಹುದು. 

•    ದೀರ್ಘಕಾಲಿಕ ರೋಗ (Chronic Disease) 
ಚರ್ಮದ ತುರಿಕೆಯು ಥೈರಾಯ್ಡ್, ಮಧುಮೇಹ (Diabetes), ಕಿಡ್ನಿ, ಲಿವರ್ (Liver)ಗೆ ಸಂಬಂಧಿಸಿದ ಸಮಸ್ಯೆಗಳ ಲಕ್ಷಣವಾಗಿರಬಹುದು ಎನ್ನುತ್ತಾರೆ ತಜ್ಞರು. ಇವುಗಳಿಂದಾಗಿ ಚರ್ಮ ಶುಷ್ಕ(Dry)ವಾಗುತ್ತದೆ. ಧೂಮಪಾನ ಮಾಡುವವರ ಚರ್ಮ ನವೆಯಾಗುವುದು ಹೆಚ್ಚು. ಹಾಗೆಯೇ ಇವರ ಚರ್ಮ ಬೇಗ ಶುಷ್ಕವೂ ಆಗುತ್ತದೆ.

•    ಮಾನಸಿಕ ಸಮಸ್ಯೆಗಳು (Mental Problems)
ಆತಂಕ, ಆಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ-OCD) ಮತ್ತು ಖಿನ್ನತೆಯ ಕಾರಣದಿಂದಲೂ ಚರ್ಮದಲ್ಲಿ ಶುಷ್ಕತೆ ಹೆಚ್ಚುತ್ತದೆ. ಕೆಲವು ಬಾರಿ ನರಗಳ ಸಮಸ್ಯೆಯಿಂದ ಮಲ್ಟಿಪಲ್ ಸ್ಕೆಲೆರೋಸಿಸ್, ಸರ್ಪಸುತ್ತು ಉಂಟಾದಾಗಲೂ ಶುಷ್ಕ ಚರ್ಮದ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು. 

•    ವಯಸ್ಸು ಮತ್ತು ಆನುವಂಶಿಕತೆ (Genes)
ತಜ್ಞರ ಪ್ರಕಾರ, ಶುಷ್ಕ ಮತ್ತು ನವೆಯುಳ್ಳ ಚರ್ಮಕ್ಕೆ ವಯಸ್ಸಾಗುವಿಕೆಯೂ ಕಾರಣವಾಗುತ್ತದೆ. ಸಾಮಾನ್ಯವಾಗಿ 25 ವರ್ಷದವರೆಗೆ ಈ ಸಮಸ್ಯೆ ಕಾಣುವುದಿಲ್ಲ. ಅಲ್ಲದೆ, ಆನುವಂಶಿಕ ಕಾರಣವೂ ಇರಬಹುದು. ಹಾಗೆಯೇ, ಬದಲಾಗುತ್ತಿರುವ ಹವಾಮಾನದಿಂದ (Environment) ಶುಷ್ಕ ಚರ್ಮ ಉಂಟಾಗುತ್ತದೆ. 

ಚರ್ಮದ ಶುಷ್ಕತೆ ನಿವಾರಣೆಗೆ ಟಿಪ್ಸ್
•    ನೀವು ಅಧಿಕ ಸಮಯ ಸ್ನಾನ (Bathing) ಮಾಡುತ್ತೀರಾದರೆ ಆ ಅವಧಿಯನ್ನು ಕಡಿತಗೊಳಿಸಿ. ಹೆಚ್ಚು ಸಮಯ ಸ್ನಾನ ಮಾಡುವುದರಿಂದ ಚರ್ಮ ಶುಷ್ಕವಾಗುತ್ತದೆ. ಏಕೆಂದರೆ, ಚರ್ಮದಲ್ಲಿನ ನೈಸರ್ಗಿಕ ತೈಲದ (Natural Oil) ಅಂಶ ಕಡಿಮೆಯಾಗುತ್ತದೆ.
•    ಚರ್ಮದ ಶುಷ್ಕತೆಗೆ ಪೆಟ್ರೋಲಿಯಂ ಜೆಲ್ಲಿಯನ್ನು ಬಳಕೆ ಮಾಡಬಹುದು. ಯಾವಾಗ ಚರ್ಮ ಶುಷ್ಕವೆನಿಸುತ್ತದೆಯೋ ಆಗ ಜೆಲ್ಲಿ ಬಳಕೆ ಮಾಡಬಹುದು. 
•    ಸ್ನಾನದ ಬಳಿಕ ಉತ್ತಮ ಮಾಯಿಶ್ಚರೈಸ್ ಕ್ರೀಮ್ ಬಳಕೆ ಮಾಡಿ.
•    ಸ್ನಾನಕ್ಕೆ ಸೋಪು ಬಳಸಬೇಡಿ. ಸೋಪಿನಿಂದ ಚರ್ಮದ ಪಿಎಚ್ ಮಟ್ಟಕ್ಕೆ ತೊಂದರೆ ಮಾಡುತ್ತದೆ. 
•    ದೇಹ ಡಿಹೈಡ್ರೇಟ್ (Dehydrate) ಆಗದಂತೆ ನೋಡಿಕೊಳ್ಳಿ. ಸಾಕಷ್ಟು ನೀರು, ದ್ರವಾಹಾರ ಸೇವನೆ ಮಾಡಿ. 
 

click me!