Hair Care Tips: ಉದ್ದದ ಕೂದಲಿಗೆ ಪೇರಲೆ ಎಲೆ ರಾಮಬಾಣ, ಬಳಸೋದು ಹೇಗೆ?

Suvarna News   | Asianet News
Published : Dec 03, 2021, 08:58 PM IST
Hair Care Tips: ಉದ್ದದ ಕೂದಲಿಗೆ ಪೇರಲೆ ಎಲೆ ರಾಮಬಾಣ, ಬಳಸೋದು ಹೇಗೆ?

ಸಾರಾಂಶ

ಸುಂದರ ಕೂದಲು ಪ್ರತಿಯೊಬ್ಬರ ಬಯಕೆ. ಕಪ್ಪಾದ, ಉದ್ದನೆಯ ಕೂದಲಿಗಾಗಿ ಪಾರ್ಲರ್ ಮೊರೆ ಹೋಗುವವರು ಸಾಕಷ್ಟು ಮಂದಿ. ಆದರೆ ಬಡವರ ಸೇಬು ಎಂದೇ ಹೆಸರು ಪಡೆದಿರುವ ಸೀಬೆ ಹಣ್ಣಿನ ಎಲೆಯಲ್ಲಿ ಕೂದಲಿನ ಆರೋಗ್ಯದ ಗುಟ್ಟು ಅಡಗಿದೆ. ಸೀಬೆ ಎಲೆ ಹೇರ್ ಪ್ಯಾಕ್ ಹೇಗೆ ಮಾಡೋದು ಗೊತ್ತಾ?  

ಚಂದದ ಕೂದಲಿನ (hair) ನಾರಿ ಎಲ್ಲರನ್ನೂ ಆಕರ್ಷಿಸುತ್ತಾಳೆ. ಇದರಲ್ಲಿ ಎರಡು ಮಾತಿಲ್ಲ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಕೂದಲು ಚಿಕ್ಕದಾಗುತ್ತಿದೆ. ಫ್ಯಾಷನ್ ಹೆಸರಿನಲ್ಲಿ ಕೆಲ ಮಹಿಳೆಯರು ಕೂದಲಿಗೆ ಕತ್ತರಿ ಹಾಕಿದರೆ, ಮತ್ತೆ ಕೆಲ ಮಹಿಳೆಯರು ಕೂದಲು ಉದುರುತ್ತಿದೆ ಎಂಬ ಕಾರಣ ಹೇಳಿ ಹೇರ್ ಕಟ್ ಮಾಡಿಸಿಕೊಳ್ತಾರೆ. ಕೂದಲ ಸೌಂದರ್ಯಕ್ಕೆ ಪದೇ ಪದೇ ಪಾರ್ಲರ್ ಮೆಟ್ಟಿಲೇರಿ,ದುಡ್ಡು ಸುರಿಯುವವರೂ ಸಾಕಷ್ಟು ಮಂದಿ. ಈಗಿನ ಒತ್ತಡ ಜೀವನದಲ್ಲಿ ಕೂದಲು ಉದುರುವುದು,ಕವಲೊಡೆಯುವುದು,ಬಣ್ಣ ಮಾಸುವುದು,ಶುಷ್ಕವಾಗುವುದು ಸಾಮಾನ್ಯ ಸಂಗತಿಯಾಗಿದೆ. ಅನೇಕ ಕಾರಣಕ್ಕೆ ಕೂದಲು ಉದುರುತ್ತದೆ. ಕೂದಲಿನ ಸೌಂದರ್ಯ (Beauty) ವರ್ಧಕವಾಗಿ ಮಾರುಕಟ್ಟೆಗೆ ಅನೇಕ ಉತ್ಪನ್ನಗಳು ಲಗ್ಗೆಯಿಟ್ಟಿವೆ. ಅದರಲ್ಲಿ ಹೆಚ್ಚು ರಾಸಾಯನಿಕ ಅಂಶಗಳಿರುವ ಕಾರಣ ಕೂದಲು ವೃದ್ಧಿಸುವ ಬದಲು ಉದುರುವ ಅಪಾಯ ಹೆಚ್ಚು.ಕೆಲವರಿಗೆ ಇದು ಅಲರ್ಜಿಯನ್ನುಂಟು ಮಾಡುತ್ತದೆ. ನಿಮ್ಮ ಕೂದಲು ವಿಪರೀತ ಉದುರುತ್ತಿದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ. ಯಾವುದೇ ರಾಸಾಯನಿಕ ಬಳಸದೆ, ಮನೆಯಲ್ಲಿಯೇ ಸುಲಭವಾಗಿ ದಟ್ಟ,ಉದ್ದದ,ಕೆಪ್ಪಾದ ಕೂದಲನ್ನು ಪಡೆಯಬಹುದು. ಇದಕ್ಕಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಮನೆಯ ತೋಟದಲ್ಲಿರುವ ಪೇರಲೆ ಗಿಡದ ಹಸಿರು ಎಲೆಗಳು (Guava Leaves) ಕೂದಲಿನ ಆರೋಗ್ಯಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತವೆ.   

ಕೂದಲ ರಕ್ಷಣೆಗಾಗಿ ಇದನ್ನು ನಿಯಮಿತವಾಗಿ ಬಳಸಿದರೆ ಕೂದಲು ಆರೋಗ್ಯಕರ ಮತ್ತು ಸುಂದರವಾಗುವುದು ಮಾತ್ರವಲ್ಲ, ಕೂದಲು ವೇಗವಾಗಿ ಬೆಳೆಯುಲು ನೆರವಾಗುತ್ತದೆ. ಪೇರಲೆ ಎಲೆಗಳನ್ನು ಅನೇಕ ವಿಧಗಳಲ್ಲಿ ಸೌಂದರ್ಯ ವರ್ಧಕವಾಗಿ ಬಳಸಬಹುದು.

ಪೇರಲೆ ಎಲೆಗಳ ಉಪಯೋಗ ಹೇಗೆ (Hair Pack) :
ಸೀಬೆ ಎಲೆಗಳ ಹೇರ್ ಪ್ಯಾಕ್ ಮಾಡುವುದು ಬಹಳ ಸುಲಭ. ಮೊದಲನೆಯದಾಗಿ 15 ರಿಂದ 20 ಸೀಬೆ ಎಲೆಗಳನ್ನು ತೊಳೆದು ಒಣಗಿಸಿ. ನಂತರ ಅದನ್ನು ಮಿಕ್ಸಿಯಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟನ್ನು ಒಂದು ಬಟ್ಟಲಿನಲ್ಲಿ ಹಾಕಿ. ಅದನ್ನು ನಿಮ್ಮ ಕೂದಲಿನ ಬುಡಕ್ಕೆ ನಿಧಾನವಾಗಿ ಹಚ್ಚಿ. ಕೆಲವು ನಿಮಿಷಗಳ ಕಾಲ ಬೆರಳುಗಳಿಂದ ನಿಧಾನವಾಗಿ ಮಸಾಜ್ ಮಾಡಿ. 30-40 ನಿಮಿಷಗಳ ಕಾಲ ಕೂದಲನ್ನು ಹಾಗೆಯೇ ಬಿಡಿ. ಅದು ಒಣಗಿದಾಗ, ಅದನ್ನು ನೀರಿನಿಂದ ತೊಳೆಯಿರಿ. ಕೂದಲನ್ನು ತೊಳೆಯಲು ಹೆಚ್ಚು ರಾಸಾಯನಿಕವಿಲ್ಲದ ಶಾಂಪೂ ಬಳಸಿ.  ವಾರಕ್ಕೆ ಎರಡು ಬಾರಿ ಕೂದಲಿಗೆ ಸೀಬೆ ಎಲೆ ಪೇಸ್ಟ್ ಹಚ್ಚಿ ಮಸಾಜ್ ಮಾಡಬೇಕು. 

ಸೀಬೆ ಹಣ್ಣಿನಿಂದ ಏನು ಉಪಯೋಗ?

ಸೀಬೆ ಎಲೆ ನೀರಿನಲ್ಲಿದೆ ಕೂದಲ ಆರೋಗ್ಯ (Guava Leaves Water) : ಕೆಲವು ಪೇರಲೆ ಎಲೆಗಳನ್ನು ತೊಳೆದು ಒಂದು ಲೀಟರ್ ನೀರಿನಲ್ಲಿ ಕುದಿಸಿ. 15 ರಿಂದ 20 ನಿಮಿಷಗಳ ಕಾಲ ಕುದಿಸಿದ ನಂತರ ತಣ್ಣಗಾಗಲು ಬಿಡಿ. ಅದು ತಣ್ಣಗಾದ ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಿ. ತಲೆ ಸ್ನಾನದ ನಂತ್ರ ಕೂದಲನ್ನು ಒಣಗಲು ಬಿಡಿ. ಕೂದಲು ಒಣಗಿದ ನಂತರ ಪೇರಲ ಎಲೆ ನೀರಿನ  ಸ್ಪ್ರೇ ಮಾಡಿ, ನಿಧಾನವಾಗಿ ಮಸಾಜ್ ಮಾಡಿ.10 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಕೆಲ ಸಮಯದ ನಂತ್ರ ಮತ್ತೆ ತಲೆ ತೊಳೆದುಕೊಳ್ಳಿ.

ಸೀಬೆ ಎಲೆ ಎಣ್ಣೆ (oil) : ಸೀಬೆ ಎಲೆಯಿಂದ ಮಾಡಿದ ಎಣ್ಣೆ ಕೂಡ ಕೂದಲಿಗೆ ಒಳ್ಳೆಯದು. ಪೇರಲೆ ಎಲೆಗಳನ್ನು ಪೇಸ್ಟ್ ಮಾಡಿ ಅದಕ್ಕೆ ಈರುಳ್ಳಿ ರಸವನ್ನು ಹಾಕಿ, ಈರುಳ್ಳಿ ರಸಕ್ಕೆ ಪೇಸ್ಟ್ ಮತ್ತು ತೆಂಗಿನ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಬೇಕು.ಇದನ್ನು ಕೂದಲು,ನೆತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು.ನಿಯಮಿತವಾಗಿ ಕೂದಲಿಗೆ ಇದನ್ನು ಬಳಸುವುದರಿಂದ ಕೂದಲು ದಟ್ಟವಾಗಿ,ಉದ್ದವಾಗಿ ಬೆಳೆಯುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?