ಅಡುಗೆ ಮನೆಯಲ್ಲಿರುವ ಕೆಲವು ಮಸಾಲೆ ಪದಾರ್ಥಗಳು ಕೂಡ ತೂಕ ಇಳಿಕೆಗೆ ಸಹಾಯ ಮಾಡುತ್ತವೆ. ಮೆಂತೆ ಮತ್ತು ಅರಿಶಿನ ಟೀಗಳು ತೂಕ ಇಳಿಸುವಲ್ಲಿ ಪರಿಣಾಮಕಾರಿ.
ತೂಕ ಇಳಿಸೋದು, ಈ ದಿನಗಳಲ್ಲಿ ತುಂಬಾ ಜನರನ್ನು ಕಾಡ್ತಿರೋ ಸಮಸ್ಯೆ. ಸೂಕ್ತ ಜೀವನ ಶೈಲಿ ಪಾಲಿಸದಿರುವುದು ಇದಕ್ಕೆ ಮುಖ್ಯ ಕಾರಣ. ಇತರೆ ಆರೋಗ್ಯ ಸಮಸ್ಯೆಗಳಿಂದಲೂ ಹೆಚ್ಚಬಹುದು ತೂಕ. ಹೆಚ್ಚಾಗ್ತಿರೋ ಅಧಿಕ ತೂಕವನ್ನು ಇಳಿಸಿಕೊಳ್ಳಳು ಜನರು ಪರದಾಡುತ್ತಾರೆ. ಆದರೆ, ಮನೇಲಿ ಇರೋ ಕೆಲವು ಮಸಾಲೆ ಪದಾರ್ಥಗಳು ಆರೋಗ್ಯದ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ. ನಿಮ್ಮ ಅಡುಗೆ ಮನೇಲಿ ಸಿಗೋ ಎರಡು ವಸ್ತುಗಳನ್ನು ಟೀ ರೂಪದಲ್ಲಿ ಕುಡಿದರೆ, ಅಧಿಕ ತೂಕದ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡು ಕೊಳ್ಳಬಹುದು.
ಮಸಾಲೆ ಡಬ್ಬಿಯಲ್ಲಿರುವ ಎಲ್ಲ ಪದಾರ್ಥಗಳಲ್ಲಿಯೂ ಔಷಧೀಯ ಗುಣಗಳಿರುವುದರಿಂದಲೇ ನಮ್ಮ ಪೂರ್ವಿಕರು ಪ್ರತಿ ಅಡುಗೆಗೆ ಒಗ್ಗರಣೆ ಹಾಕುವ ಮೂಲಕ ಸೂಕ್ತ ಡಯಟ್ ಪಾಲಿಸುವಂತೆ ಮಾಡಿದರು. ತೂಕ ಇಳಿಸೋದ್ರಿಂದ ಹಿಡಿದು, ಜೀರ್ಣಕ್ರಿಯೆಯನ್ನು ಬಲ ಪಡಿಸೋವರೆಗೂ ಈ ಮಸಾಲೆಗಳಲ್ಲಿ ಹಲವು ಪ್ರಯೋಜನಗಳಿವೆ. ತೂಕ ಇಳಿಸಲು ಮೊದಲು ಯಾವ ರೀತಿಯ ಆಹಾರ ಸೇವಿಸಬೇಕು? ಯಾವುದನ್ನ ಎಷ್ಟು ಸೇವಿಸಬೇಕು? ಯಾವುದರಿಂದ ದೂರವಿದ್ದರೆ ಒಳಿತು ಅನ್ನೋದನ್ನ ತಿಳಿದುಕೊಳ್ಳಬೇಕು. ಅದೇ ರೀತಿ ಕೆಲವು ಮಸಾಲೆ ಪದಾರ್ಥಗಳಿಂದ ಮಾಡಿದ ಟೀ ಕೂಡ ತೂಕ ಇಳಿಸುತ್ತೆ. ತೂಕ ಇಳಿಸೋದ್ರಲ್ಲಿ ಸಹಾಯ ಮಾಡೋ ಅಂಥ ಎರಡು ಟೀ ಮಾಡೋ ವಿಧಾನ ಇಲ್ಲಿದೆ.
ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡೋ ಹಣ್ಣುಗಳಿವು!
1.ಮೆಂತೆ ಟೀ:
ಬೆಳಗ್ಗೆ ಒಂದು ಕಪ್ ಮೆಂತೆ ಟೀ ಕುಡಿದ್ರೆ, ಕಡಿಮೆ ಸಮಯದಲ್ಲೇ ತೂಕ ಇಳಿಯುತ್ತೆ. ಮೆಂತ್ಯ ಟೀ ನಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಕ್ಯಾಲೋರಿಗಳನ್ನು ಬೇಗನೆ ಕರಗಿಸುತ್ತೆ. ಪರಿಣಾಮ ತೂಕ ಸಹಜವಾಗಿಯೇ ಕಡಿಮೆಯಾಗುತ್ತೆ. ಮೆಂತೆಯಲ್ಲಿ ಇರೋ ಫೈಬರ್, ಇತರೆ ಪೋಷಕಾಂಶಗಳು ಮೆಟಾಬಾಲಿಸಂ ಹೆಚ್ಚಿಸುತ್ತೆ. ಇದು ಕೊಬ್ಬನ್ನೂ ಕರಗಿಸುತ್ತೆ. ಮೆಂತೆ ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನೂ ನಿಯಂತ್ರಿಸಬಲ್ಲದು. ಅಷ್ಟೇ ಅಲ್ಲ ಮೆಂತೆ ಗ್ಯಾಸ್, ಅಜೀರ್ಣ, ಹೊಟ್ಟೆ ಉಬ್ಬರದಂತಹ ಸಮಸ್ಯೆಯಿಂದಲೂ ಮುಕ್ತಿ ನೀಡುತ್ತೆ. ಇದು ಕೊಬ್ಬನ್ನು ಕರಗಿಸಿ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಲ್ಲದು.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಟೀ ಕುಡಿಯಲು ನೀರನ್ನು ಕಾಯಿಸಿ, ಸುಮಾರು 1 ಟೀ ಚಮಚ ಮೆಂತೆ ಸೇರಿಸಿ. 5 ನಿಮಿಷ ಕುದಿಸಿ, ಸೋಸಿ ಕುಡಿಯಿರಿ.
2.ಅರಿಶಿನ ಟೀ:
ಮೆಂತೆ ಟೀ ತುಸು ಕಹಿ. ಇದನ್ನು ಕುಡಿಯೋಕೆ ಕಷ್ಟ ಅನ್ನೋರು, ಈ ಅರಿಶಿನ ಟೀ ಕುಡಿಯೋ ಅಭ್ಯಾಸ ಮಾಡ್ಕೋಬಹುದು. ಇದೂ ಸುಲಭವಾಗಿ ತೂಕ ಇಳಿಸುತ್ತೆ. ಹೊಟ್ಟೆ ಸುತ್ತ ಇರೋ ಕೊಬ್ಬನ್ನೂ ಕರಗಿಸುತ್ತೆ. ರಾತ್ರಿ ಅರಿಶಿನ , ಕರಿಮೆಣಸು ಟೀ ಕುಡಿದ್ರೆ, ಮೆಟಾಬಾಲಿಸಂ ಹೆಚ್ಚಿಸುತ್ತೆ. ತೂಕವೂ ಸುಲಭವಾಗಿ ಇಳಿಸೋದ್ರಲ್ಲಿ ಅನುಮಾನವೇ ಇಲ್ಲ.
ರಾತ್ರಿ 8 ಗಂಟೆ ಒಳಗೆ ಊಟ ಮುಗಿಸಬೇಕು ಅನ್ನೋದು ಯಾಕೆ?
ಅರಿಶಿನದಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಇದು ತೂಕ ನಿಯಂತ್ರಿಸುತ್ತೆ. ಹೊಟ್ಟೆ ಕೊಬ್ಬನ್ನು ಕರಗಿಸಿಕೊಳ್ಳಲು ದಿನಾಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಅರಿಶಿನ ಟೀ ಕುಡಿಯಬಹುದು. ಅರಿಶಿನ ಟೀ ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.
ನೀರನ್ನು ಕಾಯಿಸಿ. ಅದಕ್ಕೆ ಅರ್ಧ ಟೀ ಚಮಚ ಅರಿಶಿನ , 4-5 ಕರಿಮೆಣಸು ಹಾಕಬೇಕು. ಚೆನ್ನಾಗಿ ಕುದಿಸಿ, ಸೋಸಿ ಕುಡಿಯಿರಿ.