ನವಜಾತ ಶಿಶು ಆರೈಕೆಗೆ ಪ್ರತಿಯೊಬ್ಬರು ಕಾಳಜಿವಹಿಸಿ: ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ

By Ravi JanekalFirst Published Nov 22, 2022, 8:07 PM IST
Highlights

ಹೆರಿಗೆಯನ್ನು ಸರಕಾರಿ ಆಸ್ಪತ್ರೆ ಅಥವಾ ಸಾಂಸ್ಥಿಕ ಸಂಸ್ಥೆಯಲ್ಲಿಯೇ ಮಾಡಿಸಿ. ನವಜಾತ ಶಿಶುವಿಗೆ ತಕ್ಷಣವೇ ಸ್ಥನ್ಯಪಾನವನ್ನು ಮಾಡುವುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ನವಜಾತ ಶಿಶುವಿನ ಆರೈಕೆಗೆ ಪ್ರತಿಯೊಬ್ಬರು ಕಾಳಜಿವಹಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದರು.

ಬಳ್ಳಾರಿ (ನ.22) : ಹೆರಿಗೆಯನ್ನು ಸರಕಾರಿ ಆಸ್ಪತ್ರೆ ಅಥವಾ ಸಾಂಸ್ಥಿಕ ಸಂಸ್ಥೆಯಲ್ಲಿಯೇ ಮಾಡಿಸಿ. ನವಜಾತ ಶಿಶುವಿಗೆ ತಕ್ಷಣವೇ ಸ್ಥನ್ಯಪಾನವನ್ನು ಮಾಡುವುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ನವಜಾತ ಶಿಶುವಿನ ಆರೈಕೆಗೆ ಪ್ರತಿಯೊಬ್ಬರು ಕಾಳಜಿವಹಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ನವಜಾತ ಶಿಶು ಆರೈಕೆ ಜಾಗೃತಿ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಮಗುವಿನ ಜನನದ ನಂತರ ಸ್ನಾನ ಮಾಡಿಸುವುದು ವಾಡಿಕೆ ರೂಪದಲ್ಲಿ ಕಂಡುಬರುತ್ತಿದ್ದು, ಯಾವುದೇ ಕಾರಣಕ್ಕೂ 8 ದಿನಗಳ ಕಾಲ ಅಥವಾ ವೈದ್ಯರ ಸೂಚನೆಯವರೆಗೂ ಸ್ನಾನ ಮಾಡಿಸದೇ ಕಾಳಜಿ ತೆಗೆದುಕೊಳ್ಳಬೇಕು. ಮಗುವಿನ 6 ತಿಂಗಳವರೆಗೆ ತಾಯಿಯ ಎದೆ ಹಾಲನ್ನು ಮಾತ್ರ ನೀಡಬೇಕು. 6 ತಿಂಗಳ ನಂತರ ಮಗುವಿಗೆ ಸುರಕ್ಷಿತವಾದ ದ್ರವ ರೂಪದ ಪೂರಕ ಪೌಷ್ಠಿಕ ಆಹಾರವನ್ನು ಆರಂಭಿಸಬೇಕು ಎಂದು ಅವರು ತಿಳಿಸಿದರು.

World Prematurity Day: ಅವಧಿ ಪೂರ್ವ ಜನಿಸಿದ ಶಿಶುವಿಗೆ ಎಕ್ಸ್ಟ್ರಾ ಕೇರಿಂಗ್ ಅಗತ್ಯವಿದೆಯಾ ?

ಮಗುವಿನ ಹತ್ತಿರ ಅನಗತ್ಯವಾಗಿ ಹೆಚ್ಚು ಜನ ಸೇರುವುದು, ಕುಳಿತುಕೊಳ್ಳುವುದು ಮುಂತಾದವುಗಳನ್ನು ಮಾಡದಂತೆ ಜವಾಬ್ದಾರಿ ನಿರ್ವಹಿಸಬೇಕು. ಈ ದಿಶೆಯಲ್ಲಿ ಮಕ್ಕಳ ಮತ್ತು ಪ್ರಸೂತಿ ತಜ್ಞರ ಸಲಹೆಗಳನ್ನು ಪಾಲಿಸುವ ಮೂಲಕ ಮಗುವಿನ ಆರೈಕೆಗೆ  ಪ್ರತಿಯೊಬ್ಬ ತಾಯಂದಿರು ಕಾಳಜಿವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್ ಅವರು ಮಾತನಾಡಿ, ಮಗುವಿನ ಜನನದ ನಂತರ ಮಗುವಿನ ಕಡಿಮೆ ತೂಕವಿದ್ದಲ್ಲಿ, ಹಾಲು ಕುಡಿಯುವಾಗ ತೊಂದರೆ ಕಂಡುಬಂದಲ್ಲಿ ಹಾಗೂ ಉಸಿರಾಟದಲ್ಲಿ ತೀವ್ರತೆ ಕಂಡುಬಂದರೆ ತಾಯಂದಿರು ಮತ್ತು ಪೋಷಕರು ತಕ್ಷಣವೇ ವೈದ್ಯರ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಅಲ್ಲದೇ ಹುಟ್ಟಿದ ಕೂಡಲೇ ನೀಡಲ್ಪಡುವ ಪೋಲಿಯೋ, ಬಿಸಿಜಿ, ಹೈಪಟೈಟೀಸ್-ಬಿ ಲಸಿಕೆಗಳೊಂದಿಗೆ ವಿಟಮಿನ್-ಕೆ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು. ಇವೆಲ್ಲವುಗಳಿಗೆ ಹೆರಿಗೆಯಾದ 24 ಗಂಟೆಗಳ ಅವಧಿಯೊಳಗೆ ಕೊಡಿಸಲು ಆದ್ಯತೆ ನೀಡಬೇಕು ಎಂದು ಹೇಳಿದ ಅವರು, ಕಡಿಮೆ ತೂಕ ಇರುವ ಮಗುವಿಗೆ ನವಜಾತ ಶಿಶು ಆರೈಕೆ ಘಟಕಗಳು ಇಂದು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದರ ಸದುಪಯೋಗ ಎಲ್ಲರೂ ಪಡೆಯಬೇಕೆಂದು ತಿಳಿಸಿದರು.

7 ತಿಂಗಳಲ್ಲಿ 42 ಲೀಟರ್ ಎದೆಹಾಲು ದಾನ ಮಾಡಿ ದಾಖಲೆ ಬರೆದ ಮಹಾತಾಯಿ

ಈ ಸಂದರ್ಭದಲ್ಲಿ ಮಕ್ಕಳ ತಜ್ಞರಾದ ಡಾ.ವೀರಶಂಕರ್, ಡಾ.ಮೋಹನಾ, ಡಾ.ಬಾಲವೆಂಕಟೇಶ್, ಡಾ.ಭಾವನಾ, ಪ್ರಸೂತಿ ತಜ್ಞರಾದ ಡಾ.ಸುಯಜ್ಞ ಜೋಶಿ, ಅರವಳಿಕೆ ತಜ್ಞರಾದ ಡಾ.ಮಲ್ಲಣ್ಣ, ಸ್ಥಾನಿಕ ವೈದ್ಯಾಧಿಕಾರಿ ಡಾ.ವಿಶ್ವನಾಥ್, ಡಾ.ಸುನೀಲ್, ಡಾ.ರಾಜೀವ್, ಡಾ.ವೆಂಕಟೇಶ್, ಡಾ.ಜಯಲಕ್ಷ್ಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ ಹಾಗೂ ಶುಶ್ರೂಷಣಾ ಮೇಲ್ವಿಚಾರಕಿ ರಾಜೇಶ್ವರಿ, ಸಹಾಯಕ ಆಡಳಿತ ಅಧಿಕಾರಿ ದೇಸಾಯಿ, ಮಕ್ಕಳ ಆಪ್ತ ಸಮಾಲೋಚಕರು ಅಸ್ರೀನ್, ರಾಜಶೇಖರ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ನಾತ್ತಕೋತ್ತರ ವೈದ್ಯರಾದ ಡಾ.ದಿನೇಶ್, ಡಾ.ಮನಸ್ವಿನಿ, ಡಾ.ಪೃಥ್ವಿ, ಡಾ.ತೇಜಶ್ವಿನಿ, ಡಾ.ಜಮೀಲ್ ಹಾಗೂ ಸಿಬ್ಬಂದಿಯವರಾದ ಮರಿಯಮ್ಮ ಹೆಚ್, ಶೃತಿ,  ಒಳಗೊಂಡ ತಂಡ ಮಗುವಿನ ಆರೈಕೆ ಕುರಿತು ಕಿರು ನಾಟಕವನ್ನು ಪ್ರದರ್ಶಿಸಿದರು.

click me!