ದೇಹದ ಕೊಬ್ಬು ಕರಗಬೇಕೆಂದು ಆಹಾರ ಕಡಿಮೆ ತಿನ್ನುವುದು, ವ್ಯಾಯಾಮ ಮಾಡುವುದರಿಂದ ಮಾತ್ರವೇ ಸಾಧ್ಯವಿಲ್ಲ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎನ್ನುವುದೂ ಮುಖ್ಯ. ಕೆಂಪು ಮೆಣಸಿನಕಾಯಿ, ಕಾಳುಮೆಣಸು, ಶುಂಠಿ, ತೆಂಗಿನ ಎಣ್ಣೆ ಮುಂತಾದ ಪದಾರ್ಥಗಳನ್ನು ಹದವಾಗಿ ಬಳಸಿದರೆ ಹೊಟ್ಟೆಯ ಸುತ್ತ ಸೇರುವ ಕೊಬ್ಬು ಸುಲಭವಾಗಿ ಕರಗುತ್ತದೆ.
ಹೊಟ್ಟೆ (Belly), ತೊಡೆ, ಕೈತೋಳು ಹಾಗೂ ದೇಹದ ಇತರ ಭಾಗದಲ್ಲಿ ಸೇರಿರುವ ಬೊಜ್ಜನ್ನು (Fat) ಕಡಿಮೆ ಮಾಡಲು ಕೆಲವರು ಶತಾಯಗತಾಯ ಪ್ರಯತ್ನ ಪಡುತ್ತಾರೆ. ಆಹಾರ (Food) ಸೇವನೆಯಲ್ಲೂ ಕಟ್ಟುನಿಟ್ಟು ನಿಯಮ ಪಾಲನೆ ಮಾಡುತ್ತಾರೆ. ಅಂಥವರು ಅನೇಕ ಬಾರಿ ಕ್ಯಾಲರಿ (Calorie) ಕೊರತೆಯಲ್ಲಿರುತ್ತಾರೆ. ಏಕೆಂದರೆ, ಸೇವಿಸುವ ಆಹಾರದಲ್ಲಿರುವ ಕ್ಯಾಲರಿಗಳ ಮೇಲೆ ಅವರು ಭಾರೀ ಎಚ್ಚರಿಕೆ ವಹಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹೊಟ್ಟೆ (Belly) ಕರಗಿಸುವುದು ಸುಲಭವಲ್ಲ. ಹೊಟ್ಟೆ ಹಾಗೂ ಸೊಂಟದ ಸುತ್ತ ಸೇರುವ ಹೆಚ್ಚುವರಿ ಕೊಬ್ಬು ದೇಹವನ್ನೂ ಅಸಹ್ಯ ಮಾಡುತ್ತದೆ, ಅಷ್ಟೇ ಅಲ್ಲ, ಹೃದ್ರೋಗ, ಮಧುಮೇಹ, ಪಾರ್ಶ್ವವಾಯು (Stroke) ಸೇರಿದಂತೆ ಹಲವು ಸಮಸ್ಯೆಗಳ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರೊಂದಿಗೆ ಇನ್ನಷ್ಟು ಮುಜುಗರ, ಕಿರಿಕಿರಿಯನ್ನೂ ಅವರು ಎದುರಿಸುತ್ತಾರೆ. ಅದೇನೆಂದರೆ, ಅವರಿಗೆ ಸರಿಯಾಗಿ ಫಿಟ್ ಆಗುವ ಡ್ರೆಸ್ ಗಳು ಸಹ ಸಿಗುವುದಿಲ್ಲ. ಅಂತಹ ಸಮಯದಲ್ಲಿ ನಿಧಾನವಾಗಿ ಆತ್ಮವಿಶ್ವಾಸ ಕುಗ್ಗಲು ಆರಂಭವಾಗುತ್ತದೆ.
ತಜ್ಞರ ಪ್ರಕಾರ, ಆರೋಗ್ಯಕರ ಡಯೆಟ್ (Diet) ಅನುಸರಿಸಿದರೆ ಹೊಟ್ಟೆಯ ಸುತ್ತ ಬೆಳೆದಿರುವ ಕೊಬ್ಬನ್ನು ಕರಗಿಸಬಹುದು. ಜತೆಗೆ, ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು. ಏಕೆಂದರೆ, ಅಂತಹ ಆಹಾರಗಳು “ತಿನ್ನುವ ಬಯಕೆ’ (Cravings)ಯನ್ನು ಹತ್ತಿಕ್ಕುತ್ತವೆ. ಕೆಲವು ಆಹಾರಗಳು ಶೇ.60ರಷ್ಟು ಕ್ರೇವಿಂಗ್ಸ್ ಅನ್ನು ಹತೋಟಿಯಲ್ಲಿಡುತ್ತವೆ ಎಂದರೆ ನಂಬಲೇಬೇಕು. ಹೀಗಾಗಿ, ಅಂಥವುಗಳನ್ನು ಸೇವಿಸಬೇಕು. ಅವುಗಳಿಂದ ಹೊಟ್ಟೆಯ ಕೊಬ್ಬು ಕರಗಲು ಸಹಾಯವಾಗುತ್ತದೆ.
ಹಸಿವು ಕಡಿಮೆ (Hungry) ಮಾಡುವ ಆಹಾರ ಪದಾರ್ಥ
ತಿನ್ನುವ ಬಯಕೆ ಕಡಿಮೆ ಮಾಡುವ ಹಾಗೂ ದೇಹದ ಕೊಬ್ಬನ್ನು ಕರಗಿಸುವ ಅತ್ಯುತ್ತಮ ಸರಳ ವಿಧಾನವೆಂದರೆ, ಧಾರಾಳವಾಗಿ ನೀರು (Water) ಕುಡಿಯುವುದು. ಸ್ಪ್ರಿಂಗರ್ ಓಪನ್ ಎನ್ನುವ ಮ್ಯಾಗಜೀನ್ ನಲ್ಲಿ ಪ್ರಕಟವಾದ ಒಂದು ಅಧ್ಯಯನ ಮಾಹಿತಿಯಂತೆ, ಪ್ರತಿದಿನವೂ ವ್ಯಾಯಾಮ (Exercise) ಮಾಡುವುದರಿಂದ ಮತ್ತು ಥರ್ಮೋಜೆನಿಕ್ ಆಹಾರಗಳನ್ನು ಸೇವಿಸುವುದರಿಂದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.
ಏನಿದು ಥರ್ಮೋಜೆನಿಕ್ (Thermogenic) ?
ದೇಹದಲ್ಲಿ ಥರ್ಮೋಜೆಸಿಸ್ ಪ್ರಕ್ರಿಯೆಯನ್ನು ಹೆಚ್ಚಿಸಿ ಕ್ಯಾಲರಿ ಕರಗಿಸಲು ಸಹಾಯ ಮಾಡುವ ಕೆಲವು ಆಹಾರ ಪದಾರ್ಥಗಳಿವೆ. ನಾವು ಸೇವಿಸುವ ಆಹಾರ ನಮ್ಮ ದೇಹಕ್ಕೆ ಬಳಕೆಯಾಗಲು ಅಥವಾ ಉಪಯೋಗಯಾಗಲು ದೇಹ ಕ್ಯಾಲರಿಯನ್ನು ಕರಗಿಸಬೇಕಾಗುತ್ತದೆ. ಈ ಪ್ರಕ್ರಿಯೆಯೇ ಥರ್ಮೊಜೆಸಿಸ್. ನಾವು ನಡೆದುವ ದೈಹಿಕ ಚಟುವಟಿಕೆಯಿಂದಲೂ ಕ್ಯಾಲರಿ ಕರಗುತ್ತದೆ. ಹಾಗೆಯೇ ಥರ್ಮೋಜೆಸಿಸ್ ಪ್ರಕ್ರಿಯೆಯಲ್ಲೂ ಬಹುದೊಡ್ಡ ಪ್ರಮಾಣದ ಕ್ಯಾಲರಿ ಕರಗುತ್ತದೆ. ಹೀಗಾಗಿ, ಇದಕ್ಕೆ ಅನುವು ಮಾಡಿಕೊಡುವ ಆಹಾರವನ್ನೇ ನಾವು ಸೇವಿಸಬೇಕು.
ಯಾವುದೆಲ್ಲ ಥರ್ಮೋಜೆನಿಕ್ ಆಹಾರ?
ಕೆಲವು ಆಹಾರ ಪದಾರ್ಥ ಸೇವನೆ ಮಾಡುವುದರಿಂದ ಥರ್ಮೋಜೆಸಿಸ್ ಪ್ರಕ್ರಿಯೆ ಚುರುಕಾಗುತ್ತದೆ. ಇವುಗಳಿಂದ ಹೊಟ್ಟೆಯ ಸುತ್ತ ಸೇರಿಕೊಳ್ಳುವ ಕೊಬ್ಬು ಕರಗುತ್ತದೆ. ಅವು ಯಾವುವೆಂದರೆ, ಕೆಂಪು ಅಥವಾ ಹಸಿ ಮೆಣಸಿನಕಾಯಿ (Red Mirchi), ಕರಿಮೆಣಸು ಅರ್ಥಾತ್ ಕಾಳುಮೆಣಸು (Pepper), ಶುಂಠಿ, ತೆಂಗಿನ ಎಣ್ಣೆ (Coconut Oil) ಹಾಗೂ ಪ್ರೊಟೀನ್ (Protein).
ಕೊಬ್ಬು ಕರಗಿಸಲು ಪ್ರೊಟೀನ್ ಭರಿತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಪ್ರೊಟೀನ್ ನ ಮೊದಲ ಕೆಲಸವೆಂದರೆ, ಮಾಂಸಖಂಡಗಳ ಕೋಶದ ರಿಪೇರಿ ಮಾಡುವುದು. ಸಂಶೋಧನೆಯ ಪ್ರಕಾರ, ಪ್ರೊಟೀನ್ ಯುಕ್ತ ಆಹಾರ ಹೊಟ್ಟೆಯನ್ನು ತುಂಬಿದ ಭಾವನೆ ನೀಡುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ ಹಾಗೂ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಊಟ, ತಿಂಡಿಯಲ್ಲಿ ಪ್ರೊಟೀನ್ ಅಂಶವುಳ್ಳ ಪದಾರ್ಥವಿದ್ದರೆ ಹೊಟ್ಟೆ ಬೇಗ ತುಂಬುತ್ತದೆ. ಹೆಚ್ಚು ಪ್ರೊಟೀನ್ ಸೇವನೆ ಮಾಡುವವರಿಗೆ ಶೇ.60ರಷ್ಟು ಹಸಿವೆ ಕಡಿಮೆಯಾಗುತ್ತದೆ. ಇನ್ನು, ಕೆಂಪುಮೆಣಸಿನಕಾಯಿ, ಶುಂಠಿ, ಕರಿಮೆಣಸು, ತೆಂಗಿನ ಎಣ್ಣೆಗಳು ಕೊಬ್ಬನ್ನು ಕರಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎನ್ನುವುದನ್ನು ಅನೇಕ ಸಂಶೋಧನೆಗಳು ಹೇಳಿವೆ. ನಮ್ಮ ಸಾಂಪ್ರದಾಯಿಕ ಆಹಾರದಲ್ಲೂ ಇವುಗಳ ಬಳಕೆ ಇರುವುದನ್ನು ನೋಡಬಹುದು.