
“ಬೆಳಗ್ಗೆ ಎದ್ದಾಕ್ಷಣ ಕಾಫಿ (Cofee) ಕುಡಿಯದೇ ಇದ್ದರೆ ಏನೋ ಕಳೆದುಕೊಂಡಂತೆ’ ಎನ್ನುವವರನ್ನು ನೋಡಿದ್ದೇವೆ. ಬೆಳಗಿನ ಒಂದು ಕಪ್ ಕಾಫಿ ಅವರನ್ನು ಖುಷಿಯಾಗಿಡುತ್ತದೆ. ಅಷ್ಟೇ ಅಲ್ಲ, ಬೆಳಗ್ಗೆ ಹಣ್ಣುಗಳ ಜ್ಯೂಸ್ (Juice) ಮಾಡಿಕೊಂಡು ಸೇವನೆ ಮಾಡಿ ಮಧ್ಯಾಹ್ನದವರೆಗೂ ಹಾಗೆಯೇ ಇರುವವರಿದ್ದಾರೆ. ಇದು ಅನೇಕರ ಡಯೆಟ್ (Diet) ಕೂಡ ಆಗಿರಬಹುದು. ಆದರೆ, ಖಾಲಿ ಹೊಟ್ಟೆಯಲ್ಲಿ ಕಾಫಿ, ಜ್ಯೂಸ್ ಮುಂತಾದವುಗಳನ್ನು ಕುಡಿಯುವುದು, ಕೆಲವು ಆಹಾರ (Food) ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು.
ನಮ್ಮ ಹೊಟ್ಟೆ ರಾತ್ರಿ ಊಟದ ಬಳಿಕ ಸರಿಸುಮಾರು ಆರೇಳು ಗಂಟೆಗಳ ರೆಸ್ಟ್ ನಲ್ಲಿರುತ್ತದೆ. ಪಚನಕ್ರಿಯೆ (Digestion) ಇನ್ನೂ ಆರಂಭವಾಗಬೇಕಿರುತ್ತದೆ. ಹೀಗಾಗಿ, ಹೊಟ್ಟೆಗೂ ಸ್ವಲ್ಪ ಸಮಯ ನೀಡಬೇಕಾಗುತ್ತದೆ. ತಜ್ಞರ ಪ್ರಕಾರ, ಎದ್ದ ಬಳಿಕ ಎರಡು ಗಂಟೆಗಳ ಬಳಿಕ ತಿಂಡಿ ಸೇವನೆ ಮಾಡಬೇಕು. ಹಾಗೂ ಬೆಳಗ್ಗೆ ಖಾಲಿ (Empty) ಹೊಟ್ಟೆ (Stomach)ಯಲ್ಲಿ ಕೆಲವು ಆಹಾರಗಳನ್ನು ಸೇವಿಸಲೇಬಾರದು.
ಹಾಗಿದ್ದರೆ, ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಏನೇನು ಸೇವಿಸಬಾರದು ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯ.
• ಮಸಾಲೆಯುಕ್ತ (Spicy) ಆಹಾರ
ಖಾಲಿ ಹೊಟ್ಟೆಯಲ್ಲಿ ಮಸಾಲೆಯುಕ್ತ ಪಲಾವ್ ಮುಂತಾದ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯುರಿ ಉಂಟಾಗಬಹುದು. ಆಸಿಡಿಟಿ ತೀವ್ರವಾಗಬಹುದು. ಮಸಾಲೆ ಪದಾರ್ಥಗಳಿಗೆ ಸಾಮಾನ್ಯವಾಗಿ ಎಣ್ಣೆ ಬೆರೆಸುವುದು ಹೆಚ್ಚು, ಇದರಿಂದ ಆಹಾರ ಜೀರ್ಣವಾಗದೆ ಅಜೀರ್ಣವಾಗಬಹುದು. ಸಾಕಷ್ಟು ಜನರು ಬೆಳಬೆಳಗ್ಗೆಯೇ ಮಸಾಲೆಯುಕ್ತ ರೈಸ್ ಬಾತ್ ಗಳ ಸೇವನೆ ಮಾಡುತ್ತಾರೆ. ಇದರಿಂದ ಹೊಟ್ಟೆಗೆ ಹಾನಿ ನಿಶ್ಚಿತ.
• ಹಣ್ಣುಗಳ ಜ್ಯೂಸ್
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳ ಜ್ಯೂಸ್ ಕುಡಿಯುವುದು ಆರೋಗ್ಯಕಾರಿ ಎನ್ನುವುದು ಸಾಮಾನ್ಯ ನಂಬಿಕೆ. ಹೀಗಾಗಿ, ಅಚ್ಚರಿಯಾಗಬಹುದು. ಜ್ಯೂಸ್ ಸೇವನೆ ಆರೋಗ್ಯಕ್ಕೆ ಉತ್ತಮವೇನೋ ಹೌದು. ಆದರೆ, ಬಹಳಷ್ಟು ತಜ್ಞರ ಪ್ರಕಾರ, ಹಣ್ಣುಗಳ ಜ್ಯೂಸ್ ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಡ. ಪಚನಕ್ರಿಯೆಗೆ ಇದರಿಂದ ತೊಂದರೆಯಾಗುತ್ತದೆ. ಹಣ್ಣುಗಳಲ್ಲಿ ಫ್ರಕ್ಟೋಸ್ ಅಂಶದಿಂದ ಖಾಲಿ ಹೊಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ.
• ಮೊಸರು ಬೇಡ (Yoghurt)
ಬೆಳಬೆಳಗ್ಗೆ ಮೊಸರು ಸೇವನೆ ಮಾಡುವುದರಿಂದ ಹೊಟ್ಟೆ ತಂಪಾಗಿರುತ್ತದೆ ಎನ್ನಲಾಗುತ್ತದೆ. ಆದರೆ, ಮೊಸರಿನಲ್ಲಿ ಲ್ಯಾಕ್ಟಿಕ್ ಆಸಿಡ್ ಇರುತ್ತದೆ. ಅದು ಹೊಟ್ಟೆಯಲ್ಲಿನ ಆಮ್ಲೀಯ ಪ್ರಮಾಣವನ್ನು ಹೆಚ್ಚಿಸಬಹುದು. ಹುಳಿ ಬಂದಿಲ್ಲದ ಮೊಸರನ್ನು, ಕೆನೆ ತೆಗೆದ ಮೊಸರನ್ನು ಸ್ವಲ್ಪ ಪ್ರಮಾಣದಲ್ಲಿ ಬಳಕೆ ಮಾಡಬಹುದು.
• ಪಿಯರ್ ಹಣ್ಣು (Pear)
ಪಿಯರ್ ನಲ್ಲಿರುವ ಕಚ್ಚಾ ಫೈಬರ್ ಅಂಶವು ಹೊಟ್ಟೆಯಲ್ಲಿರುವ ನಾಜೂಕು ಪೊರೆಗೆ ಹಾನಿಯುಂಟುಮಾಡುತ್ತದೆ. ಹೀಗಾಗಿ, ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ಹೊಟ್ಟೆನೋವು ಉಂಟಾಗಬಹುದು. ಒಂದೊಮ್ಮೆ ತಿನ್ನಲೇ ಬೇಕು ಎಂದಾದರೆ ಬೆಳಗ್ಗೆ ಎದ್ದು ಎರಡು ಗಂಟೆಯ ಬಳಿಕ ಸೇವಿಸಬಹುದು.
• ಸಿಟ್ರಸ್ (Cytrus) ಜಾತಿಯ ಎಲ್ಲ ಹಣ್ಣುಗಳು
ಹಣ್ಣುಗಳು ಆರೋಗ್ಯಕ್ಕೆ ಪೂರಕವೇನೋ ನಿಜ. ಆದರೆ, ಬಹುತೇಕ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಆಸಿಡ್ ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆಯಾಗಿ ಸಮಸ್ಯೆಯಾಗಬಹುದು. ಹಣ್ಣುಗಳಲ್ಲಿ ಅಧಿಕ ಪ್ರಮಾಣದಲ್ಲಿ ನಾರಿನಂಶ ಹಾಗೂ ಫ್ರಕ್ಟೋಸ್ ಅಂಶವಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದರೆ ಜೀರ್ಣಾಂಗಕ್ಕೆ ತೊಂದರೆಯಾಗುತ್ತದೆ.
• ಹಸಿ ತರಕಾರಿ (Raw Vegetables)
ತಜ್ಞರ ಪ್ರಕಾರ, ಬೆಳಗಿನ ಖಾಲಿ ಹೊಟ್ಟೆಯಲ್ಲಿ ಹಸಿ ತರಕಾರಿ ಸೇವನೆಯೂ ಉತ್ತಮವಲ್ಲ. ಏಕೆಂದರೆ, ಹಸಿ ತರಕಾರಿಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದರಿಂದ ಹೊಟ್ಟೆನೋವು ಕಾಣಿಸಿಕೊಳ್ಳಬಹುದು.
• ಕಾಫಿ
ಒಂದು ಕಪ್ ಕಾಫಿಯೊಂದಿಗೆ ದಿನದ ಆರಂಭವನ್ನು ಮಾಡುವವರು ಹೆಚ್ಚು. ಆದರೆ, ಆಹಾರ ತಜ್ಞರು ಹೇಳುವುದೇನೆಂದರೆ, ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಹೈಡ್ರೋಕ್ಲೋರಿಕ್ ಆಮ್ಲ ಹೆಚ್ಚು ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಕೆಲವರಿಗೆ ಇದರಿಂದ ಸಮಸ್ಯೆಯಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.