
ಸುತನ್ ಕೇವಳ, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ ಉಜಿರೆ
ಶಿರಸ್ತ್ರಾಣವು ಸಾಮಾನ್ಯವಾಗಿ ಎಲ್ಲರ ಬಾಯಲ್ಲಿಯೂ ಹೆಲ್ಮೆಟ್ ಎಂದೇ ಕರೆಸಿಕೊಳ್ಳುತ್ತದೆ. ಹೌದು, ಈ ಹೆಲ್ಮೆಟ್ ಜೀವ ಉಳಿಸುತ್ತದೆ ಎಂದರೆ ಎಲ್ಲರೂ ಹೌದು ಎನ್ನುತ್ತಾರೆ. ಆದರೆ ಅದೇ ಹೆಲ್ಮೆಟ್ ಕೆಲವೊಮ್ಮೆ ಜೀವವನ್ನು ತೆಗೆಯುವುದೂ ಇದೆ ಎಂದರೆ ಅತಿಶಯೋಕ್ತಿಯಲ್ಲ. ವಾಸ್ತವದಲ್ಲಿ ಹೆಲ್ಮೆಟ್ ಅದೆಷ್ಟೋ ಜೀವಗಳನ್ನು ಕಾಪಾಡಿದೆ, ವಾಹನ ಚಲಾವಣೆಯಲ್ಲಿ ಮಾತ್ರವಲ್ಲದೆ, ಕ್ರಿಕೆಟ್, ಹಾಕಿಯಂತಹ ಆಟಗಳಲ್ಲಿ ಮತ್ತು ವಿವಿಧ ಫ್ಯಾಕ್ಟರಿಗಳಲ್ಲೂ ತನ್ನ ಕರ್ತವ್ಯ ನಿರ್ವಹಿಸಿದೆ.
ದ್ವಿಚಕ್ರ ವಾಹನ ಚಲಾವಣೆಯ ಸಂದರ್ಭದಲ್ಲಿ ಹೆಲ್ಮೆಟ್ ಧಾರಣೆ ಕಡ್ಡಾಯ ಮಾತ್ರವಲ್ಲ ಅನಿವಾರ್ಯವೂ ಹೌದು. ಆದರೆ ಔದಾಸೀನ್ಯದಿಂದ ಅಥವಾ ಫ್ಯಾಶನ್‌ಗೋಸ್ಕರ ಬಳೆ ಹಾಕಿಕೊಂಡಂತೆ ಹೆಲ್ಮೆಟ್ಟನ್ನು ಕೈಗೆ ಹಾಕಿಕೊಂಡು ದ್ವಿಚಕ್ರ ವಾಹನಗಳನ್ನು ಚಲಾಯಿಸುವ ವಿವೇಚನಾರಹಿತ ನಡೆಯಿಂದ ಇಂದು ನಾವು ಅನೇಕ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ.
ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಎಲ್ಲಾ ಬಗೆಯ ಸುರಕ್ಷತೆಗಳನ್ನು ಮಾಡಿಕೊಂಡರೂ ಯಾವುದೋ ಒಂದು ಬಗೆಯ ಕ್ರಮವನ್ನು ಮಾಡದಿದ್ದರೂ ಸಹ ಆ ಒಂದು ಕಾರಣದಿಂದಲೇ ಜೀವಕ್ಕೆ ಕುತ್ತು ಬರಬಹುದು. ಹಾಗೆಯೇ ಹೆಲ್ಮೆಟ್ಟನ್ನು ತಲೆಗೆ ಹಾಕುವ ಬದಲು ಕೈಗೆ ಹಾಕಿದರೆ ಅಥವಾ ವಾಹನದ ಮುಂಭಾಗಲ್ಲಿ ಇರಿಸಿಕೊಂಡರೆ ದಾರಿ ಮಧ್ಯೆ ಹಠಾತ್ತಾಗಿ ಎದುರಾಗುವ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಅನೇಕಬಾರಿ ಬೀಳುತ್ತಿರುವ ಹೆಲ್ಮೆಟ್ಟನ್ನು ರಕ್ಷಿಸಲು ಹೋಗಿ ಜೀವವನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಗಮನಿಸಿ, ಇಂತದ್ದೇ ಘಟನೆಗಳಿಂದಾಗಿ ನಾನು ಈ ಲೇಖನವನ್ನು ಬರೆಯುವ ವೇಳೆಗೆ ನನ್ನ ಇಬ್ಬರು ಸ್ನೇಹಿತರನ್ನು ಕಳೆದುಕೊಂಡಿದ್ದೇನೆ.
ಅದು ಯಾವುದೇ ಕುಟುಂಬವಾದರೂ ಸರಿ, ಮನೆಯಿಂದ ಹೊರ ಹೊರಟ ಪ್ರತಿಯೊಂದು ಜೀವವನ್ನೂ ಮತ್ತೆ ಸುಸ್ಥಿತಿಯಲ್ಲಿ ನೋಡುವುದಕ್ಕೆ ಅನವರತ ತುಡಿಯುತ್ತಿರುತ್ತದೆ. ನಮ್ಮ ಪ್ರೀತಿಯ ಅಪ್ಪ, ಅಮ್ಮ, ಅಣ್ಣ, ತಂಗಿ ಹೀಗೆಯೇ ಎಲ್ಲಾ ಬಂಧು ಬಾಂಧವರು ನಮಗಾಗಿ ಕಾಯುತ್ತಿರುತ್ತಾರೆ. ಭೌತಿಕವಾಗಿ ನಾವು ನಮ್ಮ ಮನೆಯಿಂದ, ಮನೆಯವರಿಂದ ದೂರವಿದ್ದರೂ ಭಾವನಾತ್ಮಕವಾಗಿ ಅವರ ಹೃದಯದಲ್ಲಿಯೇ ಇರುತ್ತೇವೆ ಎಂಬುದು ಉತ್ಪ್ರೇಕ್ಷೆಯಲ್ಲ. ಒಂದು ಜೀವ ಎಷ್ಟೇ ದೂರವಿದ್ದರೂ, ಆ ಜೀವವನ್ನು ಸಾಕಿ ಸಲುಹಿದ ಹಿರಿಯ ಜೀವಕ್ಕಾಗುವ ನೋವು ಊಹಿಸಲೂ ಅಸಾಧ್ಯ.
ನಾವು ಜಾಗೃತರಾಗಬೇಕಿದೆ, ಯಾಕೆಂದರೆ, ಒಂದು ಹೆಲ್ಮೆಟ್‌ನ ಸಮರ್ಪಕ ಬಳಕೆಯಿಂದ ಒಂದು ಜೀವ ಉಳಿಯುತ್ತದೆ ಎಂದಾದರೆ ಪರೋಕ್ಷವಾಗಿ ಅದರ ಜೊತೆಜೊತೆಗೆ ಆ ಮನೆಯ ಸಂತಸದ ಕ್ಷಣಗಳೂ ಹಾಗೆಯೇ ಉಳಿದುಕೊಂಡು ನೂರ್ಕಾಲ ಬಾಳುತ್ತವೆ. ಬದಲಾಗಿ ಅದೇ ಹೆಲ್ಮೆಟ್‌ನ ಅಸಮರ್ಪಕ ಬಳಕೆಯಿಂದ ಅದೆಲ್ಲವೂ ಮರೀಚಿಕೆಯಾಗಿಬಿಡುತ್ತದೆ. ಬನ್ನಿ ಜಾಗೃತರಾಗೋಣ ಸಂತಸದ ಕ್ಷಣಗಳನ್ನು ಕಾಪಾಡೋಣ, ನಮ್ಮದೂ, ನಮ್ಮವರದೂ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.