ತಿನ್ನುವಾಗ ಆಹಾರದಲ್ಲಿ ಕೆಲವೊಮ್ಮೆ ಕೂದಲು ಸಿಗೋದು ಕಾಮನ್. ಆದರೆ ಕೂದಲನ್ನೇ ಆಹಾರವಾಗಿ ಮಾಡ್ಕೊಂಡ್ರೆ..ಹೌದು, ಇಲ್ಲೊಂದೆಡೆ ಅಂಥದ್ದೇ ಘಟನೆ ನಡೆದಿದೆ. ಮಹಿಳೆಯ ಹೊಟ್ಟೆಯಿಂದ ಎರಡೂವರೆ ಕೆಜಿಗೂ ಹೆಚ್ಚು ಕೂದಲನ್ನು ವೈದ್ಯರು ಸರ್ಜರಿ ಮಾಡಿ ಹೊರತೆಗೆದಿದ್ದಾರೆ.
ಮಧ್ಯಪ್ರದೇಶ: 25 ವರ್ಷದ ಮಹಿಳೆಯ ಹೊಟ್ಟೆಯಿಂದ ಎರಡೂವರೆ ಕೆಜಿಗೂ ಹೆಚ್ಚು ಕೂದಲನ್ನು ವೈದ್ಯರು ಸರ್ಜರಿ ಮಾಡಿ ಹೊರತೆಗೆದಿದ್ದಾರೆ. ಮಧ್ಯಪ್ರದೇಶದ ಚಿತ್ರಕೂಟದ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಹೊಟ್ಟೆಯೊಳಗಿದ್ದ ಕೂದಲಿನ ಪ್ರಮಾಣವನ್ನು ನೋಡಿ ಸ್ವತಃ ವೈದ್ಯರೇ ಶಾಕ್‌ಗೆ ಒಳಗಾದರು. ವರದಿಗಳ ಪ್ರಕಾರ, ಮಹಿಳೆ ಕೂದಲನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದಳು, ಅದು ಅವಳಿಗೆ ತೀವ್ರವಾದ ಹೊಟ್ಟೆನೋವನ್ನು ಉಂಟುಮಾಡಿತು ಎಂದು ತಿಳಿದುಬಂದಿದೆ.
ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ ಮಹಿಳೆಯನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಆಕೆಯನ್ನು ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಹಲವು ಪರೀಕ್ಷೆಗಳ ನಂತರ ಆಕೆಯ ಹೊಟ್ಟೆಯಲ್ಲಿ ಕೂದಲಿನ ಉಂಡೆಯಿರೋದು ತಿಳಿದುಬಂತು.
ಚಿತ್ರಕೂಟದ ಕುಂದ್ ಸದ್ಗುರು ಆಸ್ಪತ್ರೆಯ ಹಿರಿಯ ವೈದ್ಯ ಡಾ.ನಿರ್ಮಲಾ ಗೆಹಾನಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ 2.5 ಕೆಜಿ ಕೂದಲನ್ನು ಹೊರತೆಗೆದಿದ್ದಾರೆ. ಮಹಿಳೆ ಯುಪಿಯ ಮಹೋಬಾ ನಿವಾಸಿ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮದುವೆ ಬೆನ್ನಲ್ಲೇ ಪತ್ನಿಗೆ ನಿದ್ದೆ ಮಾತ್ರೆ ನೀಡಿ ಕೂದಲು ಕತ್ತರಿಸಿದ ಪತಿ, ಸಾವಿನ ದವಡೆಯಿಂದ ಪಾರು!
ಡಾ.ಗೆಹಾನಿ ಅವರ ಪ್ರಕಾರ, ಇಂತಹ ರೋಗವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಟ್ರೈಕೊಬೆಜೋರ್ ಎಂದು ಕರೆಯಲಾಗುತ್ತದೆ. ಅಂತಹ ರೋಗಿಗಳಿಗೆ ಕೆಲವು ಮಾನಸಿಕ ಸಮಸ್ಯೆಗಳಿರುತ್ತವೆ, ಈ ರೋಗವು ಶೇಕಡಾ ಒಂದರಷ್ಟು ಜನರಲ್ಲಿ ಕಂಡುಬರುತ್ತದೆ ಎಂದು ಅವರು ಹೇಳಿದರು. ಮಹಿಳೆ ತನ್ನ ಕೂದಲನ್ನು ಕಿತ್ತು ತಿನ್ನುತ್ತಿದ್ದಳು. ಮಾತ್ರವಲ್ಲ ಇತರರ ಕೂದಲನ್ನು ಸಹ ಕಿತ್ತು ತೆಗೆದು ತಿನ್ನುತ್ತಿದ್ದಳು ಎಂದು ತಿಳಿದುಬಂದಿದೆ.
ಹೆಚ್ಚಾಗಿ ಸಣ್ಣ ವಯಸ್ಸಿನ ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. ಡಾ.ನಿರ್ಮಲಾ ಗೆಹಾನಿ ಇಂಥಾ ಮೂವರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾಗಿ ತಿಳಿಸಿದ್ದಾರೆ. ಅವರಲ್ಲಿ ಒಬ್ಬ ಒಂಬತ್ತು ವರ್ಷದ ಹುಡುಗ, ಇನ್ನೊಬ್ಬಳು 18 ವರ್ಷದ ಹುಡುಗಿ, ಮೂರನೆಯವರು 25 ವರ್ಷದ ಮಹಿಳೆ ಎಂದು ಅವರು ಹೇಳಿದರು.
ಕಂಕುಳ ಕೂದಲು ಮಾರಿ ಲಕ್ಷ ಗಳಿಸ್ತಿದ್ದಾಳೆ.. ಖರೀದಿಸೋದು ಯಾರು?
ಮೂರು ಮಕ್ಕಳನ್ನು ಹೊಂದಿರುವ ಮಹಿಳೆ ತನ್ನ ಮೂರನೇ ಗರ್ಭಾವಸ್ಥೆಯಲ್ಲಿ ಕೂದಲು ತಿನ್ನಲು ಪ್ರಾರಂಭಿಸಿದಳು ಎಂದು ಡಾ.ಗೆಹಾನಿ ಹೇಳಿದರು. ಎರಡನೇ ಹೆರಿಗೆಯ ನಂತರ, ಕೂದಲು ತಿನ್ನುವುದನ್ನು ನಿಲ್ಲಿಸಿದಾಗ ಆಕೆಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿತು ಮತ್ತು ವಾಕರಿಕೆ ಕಂಡು ಬಂತು. ಅವರು ಯುಪಿಯ ಬಂದಾ ಜಿಲ್ಲೆಯ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದರು. ಆದರೆ ಅಲ್ಲಿ ಅವರ ಸಮಸ್ಯೆಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಡಾಕ್ಟರ್ ಗೆಹಾನಿ ಅವರಿಗೆ ಸಿಟಿ ಸ್ಕ್ಯಾನ್ ಮಾಡುವಂತೆ ಸಲಹೆ ನೀಡಿದಾಗ ಆಕೆಯ ಹೊಟ್ಟೆಯಲ್ಲಿ ಕೂದಲಿನ ಗಡ್ಡೆಯಿರೋದು ಪತ್ತೆಯಾಗಿದೆ.