ಶಿರಸಿಯಲ್ಲಿ ಸಂಡೇ ವೈದ್ಯರೇ ಸಿಗಲ್ಲ; ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹ

By Kannadaprabha NewsFirst Published Sep 20, 2022, 12:37 PM IST
Highlights
  • ಶಿರಸಿಯಲ್ಲಿ ಸಂಡೇ ವೈದ್ಯರೇ ಸಿಗಲ್ಲ
  • ಪಂಡಿತ ಆಸ್ಪತ್ರೆ 250 ಹಾಸಿಗೆಯಾಗಿ ಮೇಲ್ದರ್ಜೆಗೆ
  • ಮುಂದುವರಿದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಚರ್ಚೆ

ಶಿರಸಿ (ಸೆ.20) : ನಗರ ಈಗ ದ್ವೀಪದಂತಾಗಿದೆ. ಒಂದೆಡೆ ರೋಗಿಗಳನ್ನು ಮಂಗಳೂರಿಗೆ ಒಯ್ಯಲು ಶಿರಸಿ ಕುಮಟಾ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇನ್ನೊಂದೆಡೆ ಧಾರವಾಡ, ಹುಬ್ಬಳ್ಳಿ ಕಡೆ ಕರೆದೊಯ್ಯಲು ಆ ರಸ್ತೆಯೂ ಬೃಹತ್‌ ಹೊಂಡಮಯ. ಇನ್ನು ಭಾನುವಾರ ಶಿರಸಿಯ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರೇ ಸಿಗುವುದಿಲ್ಲ! ಹೌದು. ಇಂತಹ ಸಮಸ್ಯೆ ಈ ವರ್ಷಕ್ಕೆ ಮಾತ್ರ ಸೀಮಿತವಲ್ಲ. ಪ್ರತಿ ವರ್ಷವೂ ಇದೇ ರೀತಿ ಆಗುತ್ತಿದ್ದು, ಜನಪ್ರತಿನಿಧಿಗಳು ಭರವಸೆ ನೀಡಿದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವನ್ನಾದರೂ ತುರ್ತಾಗಿ ಆರಂಭಿಸಲಿ ಎಂಬ ಕೂಗು ಕೇಳಿಬರುತ್ತಿದೆ.

ಶಿರಸಿ ವೈದ್ಯಕೀಯ ಕ್ಷೇತ್ರದ ಪ್ರಮುಖ ಸ್ಥಳವೆಂದೇ ಗುರುತಿಸಿಕೊಂಡಿದೆ. ಇಲ್ಲಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕೇವಲ ಶಿರಸಿ ಮಾತ್ರವಲ್ಲದೇ ಹಾನಗಲ…, ಶಿವಮೊಗ್ಗ ಜಿಲ್ಲೆಯ ಆನವಟ್ಟಿಭಾಗದಿಂದಲೂ ರೋಗಿಗಳು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೇ ಪ್ರತಿ ದಿನ ಸಾವಿರಕ್ಕೂ ಅಧಿಕ ರೋಗಿಗಳು ಭೇಟಿ ನೀಡುತ್ತಾರೆ.

ಆದರೆ, ಈಗ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ನಡೆದಿದೆ. ಶತಮಾನಗಳಷ್ಟುಹಳೆಯದಾದ ಕಟ್ಟಡ ತೆರವುಗೊಳಿಸಲಾಗುತ್ತಿದೆ. ಈಗ 100 ಹಾಸಿಗೆಯ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದಕ್ಕಾಗಿ .1.72 ಕೋಟಿ ಮಂಜೂರಾಗಿದೆ. ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಗೆಗೆ ಇನ್ನೂ ಎರಡು ವರ್ಷ ಸಮಯ ಬೇಕಾಗಲಿದೆ. ಅಲ್ಲಿಯವರೆಗೂ ಇಲ್ಲಿಯ ಮಕ್ಕಳ ಆಸ್ಪತ್ರೆಯಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಆಗಮಿಸಿದವರೆಲ್ಲ ಈಗ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆಯ ಬಗ್ಗೆಯೇ ಚರ್ಚೆ ನಡೆಸುತ್ತಿದ್ದಾರೆ.

ಆಂಬುಲೆನ್ಸ್‌ಗಳ ನಿತ್ಯ ಪಯಣ!:

ಶಿರಸಿಯಲ್ಲಿ 75ಕ್ಕೂ ಅಧಿಕ ಆ್ಯಂಬುಲೆ®್ಸ…ಗಳಿವೆ. ಆಸ್ಪತ್ರೆಗಳ ಆ್ಯಂಬುಲೆ®್ಸ… ಹೊರತುಪಡಿಸಿ ಖಾಸಗಿ ಸಂಘ ಸಂಸ್ಥೆಗಳು, ವ್ಯಕ್ತಿಗಳೂ ಆ್ಯಂಬುಲೆನ್ಸ್‌ ಹೊಂದಿದ್ದಾರೆ. ಆದರೆ, ಬಹುತೇಕ ಆ್ಯಂಬುಲೆ®್ಸ…ಗಳ ಪ್ರತಿದಿನದ ಪಯಣ ಮಂಗಳೂರು ಅಥವಾ ಹುಬ್ಬಳ್ಳಿ, ಬೆಳಗಾವಿ ಕಡೆ!

ಆಸ್ಪತ್ರೆ ಭರವಸೆ ಈಡೇರಲಿ:

ಎಲ್ಲರ ಬಾಯಲ್ಲೂ ಒಂದೇ ಮಾತು. ಜಿಲ್ಲೆಯಲ್ಲಿ ವಿಧಾನ ಸಭಾಧ್ಯಕ್ಷರು, ಇಬ್ಬರು ಸಚಿವರು, ಸಂಸದರು ಎಲ್ಲ ಇದ್ದು ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಎಂದೋ ನಿರ್ಮಾಣ ಆಗಿರಬೇಕಿತ್ತು. ಅಂತೂ ಈಗ ಆಸ್ಪತ್ರೆ ನಿರ್ಮಾಣದ ಮಾತುಗಳನ್ನಾಡುತ್ತಿದ್ದಾರೆ. ಕೇವಲ ಭರವಸೆ ಆಗದೇ ತುರ್ತಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ಎನ್ನುತ್ತಾರೆ ಜಿಲ್ಲೆಯ ಜನತೆ.

ದಕ್ಷಿಣ ಕನ್ನಡದಲ್ಲಿ ಆರೇಳು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿದ್ದರೆ ನಮ್ಮಲ್ಲಿ ಒಂದೂ ಇಲ್ಲ. ಆರೋಗ್ಯದ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ. ನಮ್ಮ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು.

-ಮಹಾದೇವ ನಾಯ್ಕ, ಸಾಮಾಜಿಕ ಹೋರಾಟಗಾರ:

ಶ್ರೀನಿವಾಸ ಹೆಬ್ಬಾರರ ಉಚಿತ ಆ್ಯಂಬುಲೆನ್ಸ್‌ ಸೇವೆ

ಒಂಕೊ, ತುರ್ತು ಸರ್ಜರಿ, ಎಮರ್ಜನ್ಸಿ ಸಂದರ್ಭದಲ್ಲಿ ಮಂಗಳೂರಿನ ಆಸ್ಪತ್ರೆಗೆ ತೆರಳುವುದು ಇಲ್ಲಿ ದಿನದ ಸಂಗತಿ. ವಾರಾಂತ್ಯದಲ್ಲಿ ಇಲ್ಲಿಯ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರೇ ಲಭಿಸುವುದಿಲ್ಲ. ಆಗಂತೂ ಆ್ಯಂಬುಲೆನ್ಸ್‌ ಚಾಲಕರು ಉಟ್ಟಬಟ್ಟೆಯಲ್ಲೇ ಮಂಗಳೂರಿನವರೆಗೆ ರೋಗಿಗಳನ್ನು ಕರೆದೊಯ್ಯುವುದು ಸಾಮಾನ್ಯವಾಗುತ್ತಿದೆ. ಇಂತಹ ಸ್ಥತಿ ಗಮನಿಸಿ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಹೆಬ್ಬಾರ ಬಡವರಿಗಾಗಿ ಉಚಿತ ಆ್ಯಂಬುಲೆನ್ಸ್‌ ಸಹ ಒದಗಿಸಿದ್ದಾರೆ. ರೋಗಿ ಕಡೆಯವರು ಇಂಧನ ತುಂಬಿಸಿಕೊಂಡು ಮಂಗಳೂರು, ಹುಬ್ಬಳ್ಳಿಗೆ ಒಯ್ಯುವ ಸೌಲಭ್ಯ ಕಲ್ಪಿಸಿದ್ದಾರೆ.

click me!