ನೀವೇಕೆ ಸಂತೋಷವಾಗಿಲ್ಲ ಗೊತ್ತಾ?

By Web DeskFirst Published Oct 18, 2019, 4:14 PM IST
Highlights

ಬದುಕಿನಲಲ್ಲಿ ಬಹುತೇಕ ಬಾರಿ ನಮ್ಮ ಯೋಚನಾ ಲಹರಿಯಿಂದಾಗಿಯೇ ದುಃಖಿತರಾಗಿ, ಬೇಸರದಿಂದ ಬದುಕುತ್ತಿರುತ್ತೇವೆ. ನಮ್ಮ ಸಂತೋಷವನ್ನು ನಾವೇ ಹರಣ ಮಾಡಿಕೊಂಡಿರುತ್ತೇವೆ. ಅದನ್ನು ಸರಿಪಡಿಸಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. 

ಬದುಕೇ ಅಲ್ಪಾವಧಿಯದು. ಅದರಲ್ಲೂ ನಾವು ಮುಕ್ಕಾಲು ಭಾಗ ನೋವಿನಲ್ಲಿ, ಸಂತೋಷವನ್ನು ಅರಸುತ್ತಲೇ ಕಳೆದುಬಿಡುತ್ತೇವೆ. ಇನ್ನುಳಿದ ಭಾಗವಾದರೂ ಖುಷಿಯಾಗಿಯೇ ಕಳೆದಿರುತ್ತೇವೆಯೇ? ಅದೂ ಗ್ಯಾರಂಟಿಯಿಲ್ಲ. ಆದರೆ, ಹೀಗೆ ಸಂತೋಷವನ್ನು ಹುಡುಕುವ ಸಂದರ್ಭದಲ್ಲಿ ನಾವು ನಮ್ಮ ಯೋಚನೆಗಳಲ್ಲಿ, ನಮ್ಮ ವ್ಯಕ್ತಿತ್ವದಲ್ಲಿ ಸ್ವಲ್ಪ ಬದಲಾವಣೆ ತಂದುಕೊಂಡರೆ ಬೇಗ ಅದನ್ನು ಪಡೆದುಬಿಡಬಹುದು. ಹೆಚ್ಚಿನ ಬಾರಿ ನೀವೇಕೆ ಸಂತೋಷವಾಗಿರುವುದಿಲ್ಲ ಗೊತ್ತೇ? 

ಕ್ವೀನ್ ಬೀ ಸಿಂಡ್ರೋಮ್ ಬಗ್ಗೆ ಕೇಳಿದ್ದೀರಾ?

1. ವಾಸ್ತವದಲ್ಲಿ ಬದುಕುತ್ತಿಲ್ಲ

ಆಗಿ ಹೋದದ್ದರ ಕುರಿತು ಅಥವಾ ಮುಂದೆ ಆಗಲಿರುವುದರ ಕುರಿತು ಅತಿಯಾಗಿ ಯೋಚಿಸುವುದರಿಂದ ನಿಮಗೆ ಖಂಡಿತಾ ಉತ್ತಮ ನಿದ್ರೆ ಬರಲು ಸಾಧ್ಯವಿಲ್ಲ. ಆಗ ನೀವು ರಿಫ್ರೆಶ್ ಆಗಿ, ಮತ್ತೆ ಎನರ್ಜಿ ಪಡೆದು ನಿದ್ದೆಯಿಂದ ಏಳುವುದೂ ದೂರದ ಮಾತು. ವರ್ತಮಾನದಲ್ಲಿ ಬದುಕದೆ ಕೇವಲ ಮುಂದಿನ ಅಥವಾ ಗತ ಸಂಗತಿಗಳನ್ನೇ ಯೋಚಿಸುತ್ತಿದ್ದರೆ - (ಉದಾಹರಣೆಗೆ ನಾನು ಹಾಗೆ ಮಾಡಬಾರದಿತ್ತು, ತಪ್ಪು ಮಾಡಿಬಿಟ್ಟೆ, ನನ್ನ ಬದುಕಲ್ಲಿ ಯಾವುದೂ ಸರಿಯಾಗಲಿಲ್ಲ, ಮುಂದೆ ತಪ್ಪು ಮಾಡಿಬಿಟ್ಟರೆ, ನಾನು ಏನಾದರೂ ಕಳೆದುಕೊಳ್ಳಬೇಕಾಗಿ ಬಂದರೆ)- ವರ್ತಮಾನವೆಂಬುದು ಹೇಳಹೆಸರಿಲ್ಲದೆ ಕಳೆದುಹೋಗುತ್ತಿರುತ್ತದೆ. ಆದರೆ ಸಂತೋಷವೆಂಬುದಕ್ಕೂ ವರ್ತಮಾನಕ್ಕೂ ಗಟ್ಟಿಯಾದ ಲಿಂಕ್ ಇದೆ. ಆಯಾ ಸಂದರ್ಭದಲ್ಲಿ ಬದುಕುವುದರಿಂದ ಮಾತ್ರ ಸಂತೋಷವಾಗಿರಲು ಸಾಧ್ಯ. 

ಮೆದುಳಿಗೆ ನೀವು ಈಗ ಅನುಭವಿಸುತ್ತಿರುವ ಭಾವನೆಗೂ, ನೆನಪಿನಲ್ಲಿ ಅನುಭವಿಸುವ ಭಾವನೆಗೂ ವ್ಯತ್ಯಾಸ ತಿಳಿಯುವುದಿಲ್ಲ. ನೀವು ಹಿಂದೆ ನಡೆದ ಒಂದು ವಿಷಯ ಯೋಚಿಸುವಾಗ ಅಂದಿನದೇ ಸಿಟ್ಟು, ಅಳು ಎಲ್ಲವೂ ಇಂದು ಬರಬಹುದು. ಇದೊಂತರಾ ದನಗಳು ತಾವು ತಿಂದದ್ದನ್ನೇ ಮತ್ತೆ ಮತ್ತೆ ಬಾಯಿಗೆ ತಂದುಕೊಂಡು ತಿನ್ನುವಂತೆ. ನೆಗೆಟಿವ್ ಯೋಚನೆಗಳ ಬಗ್ಗೆ ನೀವೇನು ಮಾಡುತ್ತೀರೋ ಪಾಸಿಟಿವ್ ಯೋಚನೆಗಳ ಬಗ್ಗೆಯೂ ಅದನ್ನೇ ಮಾಡಬಹುದದು. ಅವನ್ನು ಎಷ್ಟು ಬಾರಿ ಬೇಕಾದರೂ ಮತ್ತೆ ಮತ್ತೆ ಮಾಡಿ. ಇದರಿಂದ ಸ್ಟ್ರಾಂಗ್ ಆಗುತ್ತಲೇ ಹೋಗುತ್ತೀರಿ. ಪಾಸಿಟಿವ್ ಯೋಚನೆಗಳಿಲ್ಲದೆ ಸಂತೋಷವೆಂಬುದನ್ನು ಹುಡುಕಲು ಹೋದರೆ ಅದೆಂದಿಗೂ ನಿಮಗೆ ಸಿಗಲಾರದು. 

ದುಃಖಿಸಲು ನೂರು ಕಾರಣ, ನಗು ವಿನಾಕಾರಣ; ಮನಸಾರೆ ನಕ್ಕುಬಿಡಿ!

2. ನಿಮ್ಮನ್ನು ಸಂತ್ರಸ್ತರೆಂದು ಭಾವಿಸುತ್ತೀರಿ

ಹೆಚ್ಚಿನ ಬಾರಿ ಜನರು ಯಾವುದೇ ಕಷ್ಟನೋವು ಬಂದಾಗ ತಮ್ಮನ್ನು ಸಂತ್ರಸ್ತರೆಂದೇ ಭಾವಿಸುವುದು. ನನಗೇ ಏಕೆ ಹೀಗಾಯಿತು, ನನಗೇ ಏಕೆ ಯಾವಾಗಲೂ ಮೋಸವಾಗುತ್ತದೆ, ಕಷ್ಟ ಬರುತ್ತದೆ ಎಂದೆಲ್ಲ ಗೋಳಾಡುತ್ತಾರೆ. ಆದರೆ ಕಷ್ಟನೋವುಗಳು ಯಾರಿಗೆ ತಾನೇ ಬರುವುದಿಲ್ಲ? ಸುಖದಲ್ಲೇ ತೇಲಾಡುವವರಂತೆ ಕಂಡವರ ಬಳಿಯೂ ಹೇಳಲು ಹಲವು ನೋವಿನ ಕತೆಗಳಿರುತ್ತವೆ. ಅಂದ ಮೇಲೆ ನಾನೇ ಏಕೆ ಎಂಬುದರ ಬದಲು ನಾನೂ ಏಕಾಗಿರಬಾರದು ಎಂದು ಯೋಚಿಸುವುದು ಸರಿಯಾದ ಲಹರಿ. 

ಇದಲ್ಲದೆ, ಎಲ್ಲವನ್ನೂ ಜೆನರಲೈಸ್ ಮಾಡುವ ಅಬ್ಯಾಸವಿದ್ದರಂತೂ ನೀವು ಸಂತೋಷವಾಗಿರುವುದು ಸಾಧ್ಯವೇ ಇಲ್ಲ. ಉದಾಹರಣೆಗೆ, ಪ್ರತಿಯೊಬ್ಬರೂ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂದು ನೀವೆನ್ನುವಾಗ, ಇನ್ನೊಮ್ಮೆ ಯೋಚಿಸಿ. ನಿಮ್ಮನ್ನು ಪ್ರೀತಿಸುವವರು ಯಾರೆಲ್ಲ ಇದ್ದಾರೆ ಎಂದು. ಖಂಡಿತಾ ಇದ್ದೇ ಇರುತ್ತಾರೆ. ಪ್ರತಿ ದಿನ ನಿಮ್ಮೊಂದಿಗೆ ಉತ್ತಮವಾಗಿ ನಡೆದುಕೊಂಡ ಒಬ್ಬರಾದರೂ ಸಿಕ್ಕಿಯೇ ಸಿಗುತ್ತಾರೆ. ನೀವು ನಿಮ್ಮನ್ನು ಸಂತ್ರಸ್ತರೆಂದು ಭಾವಿಸಿಕೊಳ್ಳುವ ಮೂಲಕ ಎರಡನೇ ಬಾರಿ ಸಂತ್ರಸ್ತರಾಗುತ್ತೀರಿ.  ಏಕೆಂದರೆ ನಿಮ್ಮನ್ನು ನೀವೇ ಕಡೆಗಣಿಸಿ ನೋಡುತ್ತೀರಿ. 

ಆಫೀಸ್‌ನಲ್ಲಿ ನಗ್ತಾ ಇದ್ರೆ ಪ್ರಮೋಶನ್ ಗ್ಯಾರಂಟಿ ಅಂತೆ!

3. ಏಕಾಂಗಿಯಾಗಿರಲು ಬರುವುದಿಲ್ಲ

ಬಹಳಷ್ಟು ಜನರ ಮೊದಲ ಪ್ರೀತಿ ಯಶಸ್ವಿಯಾಗುವುದಿಲ್ಲ. ಅಲ್ಲೊಂದು ಬ್ರೇಕಪ್ ಇರುವುದೇ ಹೆಚ್ಚು. ಆದರೆ, ಬ್ರೇಕಪ್‌ಗಿಂತ ಬಹುತೇಕರನ್ನು ಹೆದರಿಸುವುದು ಒಂಟಿಯಾಗಿರಬೇಕಾಗುವುದು. ಇದೇ ಏಕಾಂಗಿತನದ ಭಯದಿಂದಲೇ ಬಹಳಷ್ಟು ಜನ ಪದೇ ಪದೇ ಸಂಗಾತಿಯನ್ನು ಬಯಸುತ್ತಾರೆ. ಒಂಟಿಯಾಗಿರುವುದಕ್ಕಿಂತಾ ತಪ್ಪಾದ ವ್ಯಕ್ತಿಯೊಡನೆ ಇರುವುದೇ ಲೇಸು ಎಂಬುದು ಅವರ ಭಾವನೆ. ಆದರೆ, ಏಕಾಂಗಿಯಾಗಿರುವುದನ್ನು ಒಮ್ಮೆ ಕಲಿತಿರೆಂದರೆ ಧೀರ್ಘಕಾಲದಲ್ಲಿ ಅದು ನಿಮ್ಮನ್ನು ಸಂತೋಷವಾಗಿಡುತ್ತದೆ. ಅಷ್ಟೇ ಅಲ್ಲ, ಭವಿಷ್ಯದ ನಿಮ್ಮ ಸಂಬಂಧಗಳಿಗೆ ಕೂಡಾ ಇದು ಪ್ರಯೋಜನಕಾರಿ. 

ಒಂಟಿಯಾಗಿದ್ದಾಗ ನಿಮ್ಮನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲಿರಿ, ನಿಮ್ಮನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಂಡಾಗ ಬೇರೆಯವರನ್ನೂ ಅರ್ಥ ಮಾಡಿಕೊಳ್ಳುವುದು ಸುಲಭ. ಅದು ಬಿಟ್ಟು ನಿಮಗೆ ನೀವೇ ಅರ್ಥವಾಗದೆ, ಮತ್ತೊಬ್ಬರು ನಿಮ್ಮನ್ನು ಅರ್ಥ ಮಾಡಿಕೊಳ್ಳಲಿ ಎಂದು ಬಯಸುವುದು ಸರಿಯಲ್ಲ. ಅಷ್ಟೇ ಅಲ್ಲ, ಏಕಾಂಗಿಯಾಗಿ ಇರುವುದನ್ನು ಕಲಿಯದೆ ಅವಲಂಬನೆ ಹೆಚ್ಚಿದ್ದಾಗ ನಿರೀಕ್ಷೆಗಳು ಹೆಚ್ಚು. ನಿರೀಕ್ಷೆಗಳು ಹೆಚ್ಚಾದಷ್ಟು ದುಃಖ ಕೂಡಾ ಹೆಚ್ಚು. 

4. ನಿಮ್ಮ ದೇಹಕ್ಕೆ ಬೇಕಾದುದು ಸಿಗುತ್ತಿಲ್ಲ

ನೀವು ಸದಾ ದುಃಖಿತರಾಗಿದ್ದೀರಿ ಎಂದರೆ ಮೊದಲು ನಿಮ್ಮ ದೇಹದ ಯೋಗಕ್ಷೇಮ ಸರಿಯಾಗಿ ವಿಚಾರಿಸಿಕೊಳ್ಳುತ್ತಿದ್ದೀರಾ ಗಮನಿಸಿ. ನಿಮ್ಮ ದೇಹಕ್ಕೆ ಬೇಕಾದ ನಿದ್ದೆ ಸರಿಯಾಗಿ ಸಿಗುತ್ತಿಲ್ಲ, ಉತ್ತಮ ಆಹಾರ ಸಿಗುತ್ತಿಲ್ಲ, ಸಂಬಂಧಗಳನ್ನು ಸರಿಯಾಗಿ ಕಾಳಜಿಯಿಂದ ನೋಡಿಕೊಳ್ಳುತ್ತಿಲ್ಲ ಎಂದಾಗ ಖುಷಿ ಕೈತಪ್ಪುತ್ತದೆ. ದೇಹ ನಿಮ್ಮದೇ. ಅದನ್ನು ಪ್ರೀತಿಯಿಂದ ನೋಡಿಕೊಳ್ಳಿ. ಮನುಷ್ಯರೊಂದಿಗೆ ಬೆರೆಯಿರಿ, ಪರಿಸರದೊಂದಿಗೆ ಸಂಬಂಧ ಬೆಳೆಸಿ, ಪ್ರಾಣಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ. ಇದಕ್ಕಾಗಿ ಹೊರಗೆ ವಾಕ್ ಮಾಡಿ. ದೇಹ ಇದನ್ನೂ ಕೇಳುತ್ತದೆ. 

5. ನಿಮ್ಮ ಭಾವನೆಗಳು ನಿಮ್ಮನ್ನು ನಿಯಂತ್ರಿಸುತ್ತಿವೆ

ನಿಮ್ಮ ಮೈಂಡ್ ಎಂಬುದು ಜಗತ್ತನ್ನು ನೋಡಲು, ಅನುಭವಿಸಲು ನಿಮಗೆ ನೀಡಲಾಗಿರುವ ಸಂಗತವೇ ಹೊರತು, ನಿಮ್ಮನ್ನು ನಿಯಂತ್ರಿಸುವ ಶಕ್ತಿಯಲ್ಲ. ಆದರೆ, ನಿಮಗೆ ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ತಪ್ಪಿದಾಗ ಭಾವನೆಗಳೇ ನಿಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬಿಡುತ್ತವೆ. ಆಗ ನೀವು ದಾಸರಾಗಿ ಬದುಕುತ್ತೀರಿ, ಅದು ಎಳೆದತ್ತ ಸಾಗುತ್ತೀರಿ. ನಾನು ಜೀವಿಸಿ ಪ್ರಯೋಜನವಿಲ್ಲ ಎನಿಸುತ್ತದೆ. ಅದೇ ಮೈಂಡ್ ನಮ್ಮ ಕಂಟ್ರೋಲ್‌ನಲ್ಲಿದ್ದಾಗ ಪಜಲ್ ಬಿಡಿಸಬಹುದು, ಅಟಾಮಿಕ್ ಬಾಂಬ್ ಕೂಡಾ ತಯಾರಿಸಬಹುದು, ಚಂದ್ರನತ್ತಲೂ ಹೋಗಬಹುದು. 

click me!