ರಾತ್ರಿ ನಿಮ್ಮ ಹಲ್ಲಿಂದ್ಲೂ ಕಟ ಕಟ ಶಬ್ಧ ಬರುತ್ತಾ? ಹಲ್ಲು ಕಡಿಯೋಕೆ ಕಾರಣ ತಿಳಿದ್ರೆ ಪರಿಹಾರ ಸುಲಭ

Published : Oct 29, 2026, 12:51 PM IST
Teeth grinding

ಸಾರಾಂಶ

ಅನೇಕರು ರಾತ್ರಿ ಹಲ್ಲು ಕಡಿಯುವ ಅಭ್ಯಾಸ ಹೊಂದಿರುತ್ತಾರೆ. ನೀವೂ ಹಲ್ಲು ಕಡಿಯುತ್ತಿದ್ದರೆ ಅದಕ್ಕೆ ಕಾರಣ ಏನು, ಅದರಿಂದ ಆಗುವ ನಷ್ಟವೇನು, ಅದಕ್ಕೆ ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳಿ.

ಬೆಳಿಗ್ಗೆ ಎದ್ದ ತಕ್ಷಣ ದವಡೆಯಲ್ಲಿ ನೋವು, ತಲೆ ಭಾರವಾದ ಅನುಭವ ಅಥವಾ ಹಲ್ಲು ಜುಮ್ಮೆನ್ನುವ ಅನುಭವ ನಿಮಗೆ ಆಗ್ತಿದ್ಯಾ? ಇದಕ್ಕೆ ಕಾರಣ ರಾತ್ರಿ ನಿದ್ರೆಯಲ್ಲಿ ನೀವು ಮಾಡೋ ಕೆಲ್ಸ. ರಾತ್ರಿ ನಿದ್ರೆಯಲ್ಲಿ ಅನೇಕರು ಹಲ್ಲು ಕಡಿತಿರ್ತಾರೆ. ಇದ್ರಿಂದ ಏನೆಲ್ಲ ಸಮಸ್ಯೆ ಆಗುತ್ತೆ, ಇದಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

ನಿದ್ರೆಯಲ್ಲಿ ಹಲ್ಲು ಕಡಿತೀರಾ?

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಆ್ಯಂಡ್ ಕ್ರೇನಿಯೋಫೇಶಿಯಲ್ ರಿಸರ್ಚ್ (NIH)ನ ಸಂಶೋಧನೆಯ ಪ್ರಕಾರ, ಭಾರತದಲ್ಲಿ ಪ್ರತಿ 10 ಜನರಲ್ಲಿ ಒಬ್ಬರು ಸ್ಲೀಪ್ ಬ್ರಕ್ಸಿಸಂ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಶೇ. 80ರಷ್ಟು ಜನರಿಗೆ ತಾವು ನಿದ್ರೆಯಲ್ಲಿ ಹಲ್ಲು ಕಡಿಯುತ್ತಿರುವುದು ತಿಳಿಯೋದಿಲ್ಲ. ಈ ಅಭ್ಯಾಸವು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಯಾರಲ್ಲಿಯೂ ಕಾಣಿಸಿಕೊಳ್ಳುತ್ತೆ.

ಹಲ್ಲು ಕಡಿಯಲು ನಿಜವಾದ ಕಾರಣವೇನು?

ಒತ್ತಡ ಮತ್ತು ಆತಂಕ ಪ್ರಮುಖ ಕಾರಣಗಳು : ದಿನವಿಡೀ ಎದುರಿಸುವ ಸಮಸ್ಯೆಗಳು, ಕೆಲಸದ ಒತ್ತಡ ಮತ್ತು ಆತಂಕವು ಕೆಲವರಲ್ಲಿ ಹಲ್ಲು ಕಡಿಯುವ ಸಮಸ್ಯೆಗೆ ಕಾರಣವಾಗುತ್ತೆ. ಒತ್ತಡದಿಂದಾಗಿ ಕೆಲವರು ಎಚ್ಚರವಾಗಿದ್ದಾಗಲೂ ಅರಿವಿಲ್ಲದೆ ದವಡೆಗಳನ್ನು ಬಿಗಿಯಾಗಿ ಹಿಡಿದಿರುತ್ತಾರೆ.

ನಿದ್ರೆಯಲ್ಲಿ ಬದಲಾವಣೆ : ಗೊರಕೆ ಹೊಡೆಯುವುದು, ಪದೇಪದೇ ನಿದ್ರೆಯಿಂದ ಎಚ್ಚರವಾಗುವುದು ಮತ್ತು ಸ್ಲೀಪ್ ಅಪ್ನಿಯಾದಂತಹ ಸಮಸ್ಯೆಗಳು ನಿದ್ರೆಯಲ್ಲಿ ಹಲ್ಲು ಕಡಿಯಲು ಕಾರಣವಾಗುತ್ತೆ.

ಚಹಾ, ಕಾಫಿ ಮತ್ತು ಮದ್ಯದ ಸೇವನೆ : ವಿಶೇಷವಾಗಿ ಸಂಜೆ ಅಥವಾ ರಾತ್ರಿ ಹೆಚ್ಚು ಕೆಫೀನ್ ಸೇವಿಸುವುದು ಮತ್ತು ಮದ್ಯಪಾನ ಮಾಡುವುದರಿಂದ ಕೆಲವರಲ್ಲಿ ಹಲ್ಲು ಕಡಿಯುವ ಸಮಸ್ಯೆ ಹೆಚ್ಚಾಗಬಹುದು. ಧೂಮಪಾನವೂ ಈ ಸಮಸ್ಯೆಯ ಅಪಾಯವನ್ನು ಹೆಚ್ಚಿಸುವ ಅಂಶಗಳಲ್ಲಿ ಒಂದಾಗಿದೆ.

ಕೆಲ ಔಷಧಿಗಳು : ಕೆಲವು ಔಷಧಿಗಳು ಅದ್ರಲ್ಲೂ ವಿಶೇಷವಾಗಿ ಕೆಲವು ಖಿನ್ನತೆ ನಿವಾರಕ ಔಷಧಿಗಳ ಬಳಕೆಯಿಂದ ಹಲ್ಲು ಕಡಿಯುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಔಷಧಿ ಆರಂಭಿಸಿದ ನಂತರ ಈ ಸಮಸ್ಯೆ ಕಾಣಿಸಿಕೊಂಡಿದ್ದರೆ ಡಾಕ್ಟರ್‌ ಜೊತೆ ಮಾತನಾಡುವುದು ಸೂಕ್ತ.

ಹಲ್ಲು ಕಡಿಯುವ ಲಕ್ಷಣ ಗುರುತಿಸೋದು ಹೇಗೆ?

ನೀವು ರಾತ್ರಿ ನಿದ್ರೆಯಲ್ಲಿ ಹಲ್ಲು ಕಡಿಯುತ್ತಿದ್ದರೆ, ಬೆಳಿಗ್ಗೆ ಎದ್ದಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ದವಡೆಯಲ್ಲಿ ನೋವು ಅಥವಾ ಬಿಗಿತ. ಬೆಳಿಗ್ಗೆ ತಲೆನೋವು ಅಥವಾ ಮುಖದ ಸ್ನಾಯುಗಳಲ್ಲಿ ಸೆಳೆತ. ಹಲ್ಲುಗಳಿಗೆ ತಣ್ಣಗಿನ ಅಥವಾ ಬಿಸಿಯಾದ ಪದಾರ್ಥಗಳು ತಾಗಿದಾಗ ಜುಮ್ಮೆನಿಸುವಿಕೆ. ಹಲ್ಲುಗಳು ಸವೆಯುವುದು, ಮುರಿಯುವುದು ಅಥವಾ ಬಿರುಕು ಬಿಡುವುದು. ಕಿವಿಯ ಸುತ್ತಲೂ ನೋವು ಕಾಣಿಸಿಕೊಳ್ಳುವುದು. ನಿದ್ರೆಯಲ್ಲಿ ಹಲ್ಲುಗಳನ್ನು ಪರಸ್ಪರ ಉಜ್ಜುವ ಶಬ್ದ ಕೇಳಿಸುವುದು.

ಮನೆಮದ್ದು

ಮಲಗುವ ಮುನ್ನ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಅದಕ್ಕೆ ರಾತ್ರಿ ಮಲಗುವ ಮೊದಲು ಆಳವಾದ ಉಸಿರಾಟದ ವ್ಯಾಯಾಮ, ಧ್ಯಾನ ಅಥವಾ ಲಘು ಯೋಗ ಮಾಡಿ. ನಿಮಗೆ ಇಷ್ಟವಾದ ಶಾಂತ ಸಂಗೀತ ಕೇಳುವುದರಿಂದಲೂ ಮನಸ್ಸು ನಿರಾಳವಾಗಲು ಸಹಾಯವಾಗುತ್ತದೆ.

ಅಲ್ಲದೆ ಪ್ರತಿದಿನ ಸರಿಸುಮಾರು ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಬೆಳೆಸಿಕೊಳ್ಳಿ. ಮಲಗುವ ಮೊದಲು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ಸಂಜೆಯ ನಂತರ ಚಹಾ, ಕಾಫಿ ಮತ್ತು ಎನರ್ಜಿ ಡ್ರಿಂಕ್ಸ್ ಸೇವನೆಯನ್ನು ಕಡಿಮೆ ಮಾಡಿ. ಮದ್ಯ ಮತ್ತು ತಂಬಾಕಿನಿಂದಲೂ ದೂರವಿರಿ.

ಹಗಲಿನಲ್ಲಿ ನಿಮ್ಮ ಹಲ್ಲುಗಳು ನಿರಂತರವಾಗಿ ಒಂದಕ್ಕೊಂದು ಒತ್ತಿಕೊಂಡಿವೆಯೇ ಎಂಬುದನ್ನು ಗಮನಿಸಿ. ದವಡೆಯನ್ನು ಸಡಿಲವಾಗಿರಿಸಿ ಮತ್ತು ಹಲ್ಲುಗಳ ನಡುವೆ ಸ್ವಲ್ಪ ಅಂತರವಿರಲಿ. ದವಡೆಯಲ್ಲಿ ನೋವಿದ್ದರೆ ಚ್ಯೂಯಿಂಗ್ ಗಮ್ ಜಗಿಯುವುದನ್ನು ಮತ್ತು ತುಂಬಾ ಗಟ್ಟಿಯಾದ ಆಹಾರ ತಿನ್ನುವುದನ್ನು ತಪ್ಪಿಸಿ.

ದವಡೆಯ ಸ್ನಾಯುಗಳಲ್ಲಿ ನೋವಿದ್ದರೆ ಬಟ್ಟೆಯಲ್ಲಿ ಸುತ್ತಿದ ಬಿಸಿ ಅಥವಾ ತಣ್ಣನೆಯ ಪ್ಯಾಕ್ನಿಂದ ಶಾಖ ನೀಡುವುದರಿಂದ ಸ್ವಲ್ಪ ಪರಿಹಾರ ಸಿಗಬಹುದು. ಪ್ಯಾಕ್ ಅನ್ನು ನೇರವಾಗಿ ಬಾಯಿಯೊಳಗೆ ಇಡಬೇಡಿ. ಈ ವಿಧಾನವು ನೋವನ್ನು ಕಡಿಮೆ ಮಾಡಬಹುದು. ಆದರೆ ಹಲ್ಲು ಕಡಿಯುವ ಮೂಲ ಕಾರಣಕ್ಕೆ ಇದು ಚಿಕಿತ್ಸೆಯಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವಾಗ್ಲೂ ಹೆಲ್ತಿಯಾಗಿರಬೇಕು, ಆಸ್ಪತ್ರೆಯಿಂದ ದೂರ ಇರಬೇಕು ಅಂದ್ರೆ ಈ ದಿನಚರಿ ನಿಮ್ಮದಾಗಿರಲಿ
60 ದಿನದಲ್ಲಿ 6 ಕೆಜಿ ತೂಕ ಇಳಿಸಿ, ವಯಸ್ಸಾಗೋದನ್ನ ತಡೆಯಿರಿ, ಹೆಲ್ತ್ ಸಪ್ಲಿಮೆಂಟ್ ಜಾಹೀರಾತುಗಳ ಬಣ್ಣ ASCI ನಿಂದ ಬಯಲು