ವೈದ್ಯರ ಸಲಹೆಯಿಲ್ಲದೆ ಆಂಟಿಬಯೋಟಿಕ್‌ ಮಾತ್ರೆಗಳ ಸೇವನೆ ಬೇಡ

By Sathish Kumar KHFirst Published Nov 20, 2022, 6:17 PM IST
Highlights

ಸೂಕ್ಷ್ಮಜೀವಿ (ಆಂಟಿಮೈಕ್ರೊಬಿಯಲ್) ನಿರೋಧಕ ದೋಷಗಳಿಂದ ಸೋಂಕುಗಳಿಗೆ ಯಾವುದೇ ವ್ಯಕ್ತಿ ಬಲಿಯಾಗಬಹುದು. ಸೂಕ್ತ ಮೇಲ್ವಿಚಾರಣೆ, ಸಲಹೆಯಿಲ್ಲದೆ ನೀವು ಹೆಚ್ಚು ಪ್ರತಿಜೀವಕಗಳನ್ನು (ಆಂಟಿಬಯೋಟಿಕ್‌ ಮಾತ್ರೆ) ತೆಗೆದುಕೊಂಡರೆ, ನಿಮ್ಮ ಸೋಂಕಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಕಷ್ಟವಾಗುತ್ತದೆ. 

ಉಡುಪಿ (ನ.20) : ಸೂಕ್ಷ್ಮಜೀವಿ (ಆಂಟಿಮೈಕ್ರೊಬಿಯಲ್) ನಿರೋಧಕ ದೋಷಗಳಿಂದ ಸೋಂಕುಗಳಿಗೆ ಯಾವುದೇ ವ್ಯಕ್ತಿ ಬಲಿಯಾಗಬಹುದು. ಸೂಕ್ತ ಮೇಲ್ವಿಚಾರಣೆ, ಸಲಹೆಯಿಲ್ಲದೆ ನೀವು ಹೆಚ್ಚು ಪ್ರತಿಜೀವಕಗಳನ್ನು (ಆಂಟಿಬಯೋಟಿಕ್‌ ಮಾತ್ರೆ) ತೆಗೆದುಕೊಂಡರೆ, ನಿಮ್ಮ ಸೋಂಕಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಕಷ್ಟವಾಗುತ್ತದೆ.

ವಿಶ್ವ ಆಂಟಿಮೈಕ್ರೊಬಿಯಲ್ ಪ್ರತಿರೋಧಕ  ಜಾಗೃತಿ  ಸಪ್ತಾಹ (WAAW) 2022ರ ಮೂಲಕ  ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕರಲ್ಲಿ ಆಂಟಿಮೈಕ್ರೊಬಿಯಲ್ (Antimicrobial) ಪ್ರತಿರೋಧದ ಕುರಿತು ಜಾಗೃತಿ ಮೂಡಿಸುತ್ತಿದೆ. ಒಬ್ಬ ಆರೋಗ್ಯ ನೀತಿ ರೂಪಕರು ಆಂಟಿಮೈಕ್ರೊಬಿಯಲ್ ಪ್ರತಿರೋಧದ ಪರಿಚಯ ಮತ್ತು ಹರಡುವಿಕೆ ತಡೆಯಲು ನಿರ್ಣಾಯಕರಾಗಿದ್ದಾರೆ. 'ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ಒಟ್ಟಿಗೆ ಸೇರಿ ತಡೆಗಟ್ಟುವುದು' ಈ ವರ್ಷದ ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ  ಸಪ್ತಾಹದ ಧ್ಯೇಯ ವಾಕ್ಯ (Mission statement)ವಾಗಿದೆ ಎಂದು ಹೇಳಿದರು. 

ಪ್ರತಿ ವರ್ಷ, ಆಂಟಿಮೈಕ್ರೊಬಿಯಲ್ ಪ್ರತಿರೋಧವು ಭಾರತದಲ್ಲಿ ಶೇ.5 ರಿಂದ 10 ರಷ್ಟು ಹೆಚ್ಚಾಗುತ್ತಿದೆ. 2019 ರಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧದ ಸಾವುಗಳು ಜಗತ್ತಿನಾದ್ಯಂತ 1.27 ಮಿಲಿಯನ್ ಆಗಿದ್ದು, ಕೋವಿಡ್‌ನಿಂದ ಡಿಸೆಂಬರ್ 2020 ರಲ್ಲಿ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಉಡುಪಿಯ ಡಾ. ಟಿ.ಎಂಎ ಪೈ ಆಸ್ಪತ್ರೆಯ ನುರಿತ ವೈದ್ಯರ ತಂಡ ತಿಳಿಸಿದೆ. ವೈದ್ಯರ ಚೀಟಿ ಇಲ್ಲದೇ ಆಂಟಿ ಬಯೋಟಿಕ್‌ ಮಾತ್ರೆ (Tablet) ತೆಗೆದುಕೊಳ್ಳಲು ಬರುವವರಿಗೆ ಮಾತ್ರೆ ನೀಡಬಾರದು. ಈ ವಾರ ವೈದ್ಯಕೀಯ ಔಷಧಿಕಾರರಿಗೆ ಕಾರ್ಯಾಗಾರ ಆಯೋಜಿಸಲಾಗಿದ್ದು, ಆಂಟಿಬಯೋಟಿಕ್‌ಗಳ ವಿತರಣಾ (Distribution) ಅಭ್ಯಾಸದ ಬಗ್ಗೆ ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದರು.

ವಿವಿಧ ಸಂಸ್ಥೆಗಳಿಂದ ಅಭಿಯಾನಕ್ಕೆ ಬೆಂಬಲ: ಆ್ಯಂಟಿಬಯೋಟಿಕ್‌ಗಳ ಜವಾಬ್ದಾರಿಯುತ ಬಳಕೆ ಬೆಂಬಲಿಸಲು ಮತ್ತು ಆಂಟಿಮೈಕ್ರೊಬಿಯಲ್ ಪ್ರತಿರೋಧ  ತಡೆಗಟ್ಟುವ ತಂತ್ರ ಅಭಿವೃದ್ಧಿಪಡಿಸಲು ವಿವಿಧ ವಲಯಗಳು ಒಂದು ಚೌಕಟ್ಟಿನಡಿ (Frame) ಸೇರಿ ಅಭಿಯಾನ ನಡೆಸಬೇಕಿದೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲವು ಸಮುದಾಯಕ್ಕೆ ಜಾಗೃತಿ ಮೂಡಿಸಲು ಹಲವಾರು ಚಟುವಟಿಕೆಗಳೊಂದಿಗೆ ಕೈ ಜೋಡಿಸಲಿದೆ.  ಸೆಂಟರ್ ಫಾರ್ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಅಂಡ್ ಎಜುಕೇಶನ್ (CARE)ಅಡಿಯಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧಕವನ್ನು ಎದುರಿಸಲು ಚಟುವಟಿಕೆಗಳ ಮುಖ್ಯಸ್ಥರಿರುವ ತಜ್ಞರ ಗುಂಪನ್ನು (Experts group) ಸಂಸ್ಥೆ ಹೊಂದಿದೆ. ಈ ವರ್ಷ ಕೇಂದ್ರವು ಮಣಿಪಾಲ-ಬಯೋಮೆರಿಯಕ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಜೊತೆಗೆ ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಮತ್ತು ಪ್ರಮುಖ ಸೈಕ್ಲಿಂಗ್ ಕ್ಲಬ್‌ಗಳಾದ ರೈಡ್ ಫಾರ್ ಹೆಲ್ತ್, ಉಡುಪಿ ಸೈಕ್ಲಿಂಗ್ ಕ್ಲಬ್‌ನೊಂದಿಗೆ ಕೈಜೋಡಿಸಿ ಜಾಗೃತಿ ಸರಣಿ ಚಟುವಟಿಕೆಗಳನ್ನು ಆಯೋಜಿಸುತ್ತಿದೆ.

ಸೈಕಲ್‌ ಜಾಥಾಕ್ಕೆ ಚಾಲನೆ: ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ವಿರುದ್ಧದ ನಮ್ಮ ಹೋರಾಟವು ಸಾರ್ವಜನಿಕರು,  ವೈದ್ಯರು, ಔಷಧಿಕಾರರು, ಪಶುವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ಜಾಗೃತಿ (Awareness) ಮೂಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇಂದು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ (Cycle Jatha) ನಡೆಸಲಾಯಿತು. ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಯ (Hospital) ಹೊರರೋಗಿ ವಿಭಾಗದ ಮುಂಭಾಗದಲ್ಲಿ ಮಾಹೆ ಮಣಿಪಾಲದ  ಉಪಕುಲಪತಿ,  ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ.ವೆಂಕಟೇಶ್ ಅವರು ಬೆಳಗ್ಗೆ 6.45ಕ್ಕೆ ಸೈಕಲ್ ಜಾಥಾಕ್ಕೆ  ಚಾಲನೆ ನೀಡಿದರು. ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಲೆ. ಜ. (ಡಾ ) ಮಾಧುರಿ ಕಾನಿಟ್ಕರ್,ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕ ಡಾ. ಶಶಿಕಿರಣ್,  ಡಾ. ಶರತ್ ಕುಮಾರ್ ರಾವ್, ಡಾ. ಚಿರೊಂಜೋಯ್ ಮುಖ್ಯಪಾಧ್ಯಾಯ, ಡಾ. ವಂದನಾ, ಡಾ. ಮುರಳಿಧರ್ ಉಪಸ್ಥಿತರಿದ್ದರು. 

ಆಂಟಿಬಯೋಟಿಕ್‌ ಮಾತ್ರೆ ಸೇವನೆ ಮುಂಜಾಗ್ರತೆ:
ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ತಡೆಗಟ್ಟುವುದು ಎಲ್ಲರ  ಜವಾಬ್ದಾರಿಯಾಗಿದೆ. 
ವೈದ್ಯರ  ಔಷಧ ಚೀಟಿ ಇಲ್ಲದೆ ಪ್ರತಿಜೀವಕಗಳನ್ನು (ಆ್ಯಂಟಿಬಯೋಟಿಕ್) ತೆಗೆದು ಕೊಳ್ಳಬಾರದು. 
ವೈದ್ಯರ ಸಲಹೆಯಂತೆ ಡೋಸ್ ಅನ್ನು ಪೂರ್ಣಗೊಳಿಸಬೇಕು. 
ವೈದ್ಯರ  ಔಷಧ ಚೀಟಿ  ಇಲ್ಲದೆ ಔಷಧಾಲಯಗಳಿಂದ ಪ್ರತಿಜೀವಕಗಳನ್ನು ಖರೀದಿಸಬಾರದು. 
ಹಿಂದಿನ ಉಳಿದ ಪ್ರತಿಜೀವಕಗಳನ್ನು ತೆಗೆದುಕೊಳ್ಳಬಾರದು. 
ನಿಮ್ಮ ಪ್ರತಿಜೀವಕಗಳನ್ನು ನಿಮ್ಮ ಕುಟುಂಬದ ಇತರರೊಂದಿಗೆ ಹಂಚಿಕೊಳ್ಳಬಾರದು. 
ಪ್ರತಿ ಸಣ್ಣ ಪ್ರಯತ್ನವು ಆಂಟಿಮೈಕ್ರೊಬಿಯಲ್ ಪ್ರತಿರೋಧ ಮತ್ತು ಸಾವನ್ನು ತಡೆಯಲು ಮಾಡುತ್ತದೆ.
 

click me!