
ಬೆಳಗ್ಗೆ (morning) ಎದ್ದ ತಕ್ಷಣ ಟೀ ಕುಡಿಯುವುದು ಕೆಲವರ ಅಭ್ಯಾಸ. ಆದರೆ, ಮಧ್ಯವಯಸ್ಸಿಗೆ ಬರುವ ವೇಳೆಗೆ ಬಹಳಷ್ಟು ಜನ ಬೆಳಗ್ಗೆ ಟೀ ಸೇವನೆ ಮಾಡುವುದನ್ನು ಬಿಟ್ಟುಬಿಡುತ್ತಾರೆ. ಏಕೆಂದರೆ, ಆಸಿಡಿಟಿ (acidity) ಹೆಚ್ಚಾಗುವುದು ಅವರ ಗಮನಕ್ಕೆ ಬಂದಿರುತ್ತದೆ. ಬೆಳಗ್ಗೆ ಮಾತ್ರವಲ್ಲ, ಖಾಲಿ ಹೊಟ್ಟೆ (empty stomach)ಯಲ್ಲಿ ಟೀ, ಕಾಫಿ ಸೇವನೆ ಮಾಡುವುದು ಒಳ್ಳೆಯದಲ್ಲ. ಅನೇಕರು ಬೆಳಗ್ಗೆ ಎದ್ದಾಕ್ಷಣ ಬಾಯಿಗೆ ತಂಬಾಕು ಹಾಕಿಕೊಳ್ಳುತ್ತಾರೆ. ಮತ್ತೆ ಕೆಲವರು ಸಿಗರೇಟು ಬಾಯಿಗಿಡುತ್ತಾರೆ. ಗುಟ್ಕಾವೋ, ಜರ್ದಾವನ್ನೋ ಅಗಿಯುವ ಚಟವುಳ್ಳವರು ದಿನವಿಡೀ ಆಗಾಗ ಹಸಿದ ಹೊಟ್ಟೆಯಲ್ಲೇ ಅವುಗಳನ್ನು ಅಗಿಯುತ್ತಿರುತ್ತಾರೆ. ಇವೆಲ್ಲ ಆರೋಗ್ಯಕ್ಕೆ ಅಪಾಯ ಒಡ್ಡಬಲ್ಲ ಕ್ರಿಯೆಗಳು. ಅಷ್ಟಕ್ಕೂ ಖಾಲಿ ಹೊಟ್ಟೆಯಲ್ಲಿ ಏನೇನ್ ಮಾಡಬಾರ್ದು ಗೊತ್ತೇ?
ಖಾಲಿ ಹೊಟ್ಟೆಗೆ ಕರಿದ ತಿಂಡಿ (fried food) ಬೇಡ
ಹೊಟ್ಟೆ ಖಾಲಿಯಿರುವಾಗ ಕರಿದ ತಿನಿಸುಗಳನ್ನು ಸೇವಿಸಬಾರದು. ಊಟದೊಂದಿಗೆ, ಬೇರೆ ಯಾವುದಾದರೂ ತಿಂಡಿಯೊಂದಿಗೆ ಸೇವಿಸಿದರೆ ಪರಿಣಾಮ ಹೆಚ್ಚು ಹಾನಿಕರವಾಗಿರುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಮಾತ್ರ ಚರ್ಮದ ಅಲರ್ಜಿ (skin allergy) ಉಂಟಾಗುವ ಸಾಧ್ಯತೆ ಹೇರಳ. ಹಾಗೆಯೇ, ಏನಾದರೂ ತಿನ್ನಬೇಕೆಂಬ ಆಸೆಯಿಂದ ಖಾಲಿ ಹೊಟ್ಟೆಯಲ್ಲಿ ಚ್ಯೂಯಿಂಗ್ ಗಮ್ ಅಗಿಯಬಾರದು. ಇದರಿಂದ ಆಮ್ಲದ ಅಂಶ ಹೆಚ್ಚಾಗಿ ಅಲ್ಸರ್ ಗೆ ಕಾರಣವಾಗಬಲ್ಲದು.
ಮದ್ಯಪಾನ (alcohol drinking)ವೇಕೆ?
ಸಾಮಾನ್ಯವಾಗಿ ಸಂಜೆಯ ಸಮಯದಲ್ಲಿ ಹಲವರು ಮದ್ಯಪಾನ ಮಾಡುವುದನ್ನು ನೋಡುತ್ತೇವೆ. ಖಾಲಿ ಹೊಟ್ಟೆಯಲ್ಲಿ ಮದ್ಯಪಾನ ಮಾಡಿದಾಗ ಆಲ್ಕೋಹಾಲಿಕ್ ಅಂಶ ನೇರವಾಗಿ ರಕ್ತನಾಳಗಳನ್ನು ಪ್ರವೇಶ ಮಾಡುತ್ತದೆ. ದೇಹ ಬೆಚ್ಚಗಾಗುತ್ತದೆ. ಹಿತವಾದ ಭಾವನೆ ಉಂಟಾಗುತ್ತದೆ. ಹೊಟ್ಟೆ, ಮೂತ್ರಪಿಂಡ, ಶ್ವಾಸಕೋಶ, ಯಕೃತ್ತು ಮತ್ತು ಮಿದುಳಿಗೂ ನೇರವಾಗಿ ಪ್ರವೇಶ ಪಡೆಯುತ್ತದೆ. ಒಂದು ನಿಮಿಷದೊಳಗೆ ಈ ಕ್ರಿಯೆ ನಡೆಯುತ್ತದೆ. ಅಷ್ಟೇ ವೇಗವಾಗಿ ದೇಹಕ್ಕೆ ಹಾನಿಯಾಗುತ್ತದೆ.
ಶಾಪಿಂಗ್ (shopping) ಹೋಗ್ಲೇಬೇಡಿ
ದಿನದ ಯಾವುದೇ ಸಮಯವಾಗಿರಲಿ, ಹಸಿದಿರುವಾಗ ಹೊರಗೆ ಅಂಡಿಗಳಿಗೆ, ಶಾಪಿಂಗ್ ಕಾಂಪ್ಲೆಕ್ಸುಗಳಿಗೆ, ಮಾಲ್ ಗಳಿಗೆ ಹೋಗುವುದು ಬೆಸ್ಟ್ ಐಡಿಯಾವಲ್ಲ! ಅಧ್ಯಯನಗಳ ಪ್ರಕಾರ, ಶಾಂಪಿಂಗ್ ಮಾಡುವಾಗ ಹೊಟ್ಟೆ ಹಸಿದುಕೊಂಡಿದ್ದರೆ ಅನಗತ್ಯ ಶಾಪಿಂಗ್ ಮಾಡುವ ಹಪಾಹಪಿ ಕಂಡುಬರುತ್ತದೆ. ಬೇಕಿರಲಿ, ಬೇಡವಾಗಿರಲಿ, ಎಲ್ಲವನ್ನೂ ಖರೀದಿಸುವ ಧಾವಂತ ಉಂಟಾಗುತ್ತದೆ. ಸ್ನ್ಯಾಕ್ಸ್, ಜಂಕ್ ಆಹಾರದ ಬಯಕೆಯಾಗುತ್ತದೆ. ಆಗ ದೇಹಕ್ಕೆ ಬೇಡವಾದ ಆಹಾರ ಸೇವನೆ ಅಧಿಕವಾಗುತ್ತದೆ. ಹೀಗಾಗಿ, ಹೊರಗೆ ಹೋಗುವ ಮುನ್ನ ಹೊಟ್ಟೆಗೆ ಏನಾದರೂ ಹಿತವಾಗಿ ಸೇವನೆ ಮಾಡಿಕೊಂಡೇ ಹೊರಡಿ.
ವಾದ (argument) ಮಾಡ್ಲೇಬೇಡಿ
ಹಸಿದಿರುವಾಗ ಯಾರೊಂದಿಗೂ ಹೆಚ್ಚು ಚರ್ಚೆ ಮಾಡಬಾರದು. ಇದು ವಾದ-ವಾಗ್ವಾದಕ್ಕಿಳಿಯುವ ಸಾಧ್ಯತೆ ಹೆಚ್ಚು. ಹಸಿದಿರುವಾಗ ಕೋಪ ಹೆಚ್ಚಾಗಿ ಬರುತ್ತದೆ. ಇದರಿಂದಾಗಿ, ಯಾರೊಂದಿಗಾದರೂ ಗಂಭೀರ ಮಾತುಕತೆ ನಡೆಸುವ ಮುನ್ನ ಆಹಾರ ಸೇವಿಸುವುದು ಉತ್ತಮ ಅಭ್ಯಾಸ. ಹೊಟ್ಟೆ ಹಸಿದಿರುವಾಗ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಆಗಿರುವುದೇ ಕೋಪಕ್ಕೆ ಮೂಲ. ಆ ಸಮಯದಲ್ಲಿ ಕೋಪ ತಣಿಸಿಕೊಳ್ಳಲು ತಕ್ಷಣ ಆಹಾರ ಸೇವಿಸಬೇಕು.
ಔಷಧ (medicine) ಸೇವನೆ ಬೇಡ
ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಲೆಂದೇ ವೈದ್ಯರು ಕೆಲವು ಔಷಧ ನೀಡುತ್ತಾರೆ. ಅಂತವುಗಳನ್ನು ಹೊರತುಪಡಿಸಿ ಬೇರೆ ಔಷಧಗಳನ್ನು ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇದರಿಂದ ಹೊಟ್ಟೆ ಉರಿಯಾಗುತ್ತದೆ. ಅಡ್ಡ ಪರಿಣಾಮಗಳೂ ಕಂಡುಬರಬಹುದು.
ಹಾಗಿದ್ದರೆ ಏನು ಮಾಡಬೇಕು?
ಬೆಳಗ್ಗೆ ಎದ್ದಾಕ್ಷಣ ಕನಿಷ್ಠ ಅರ್ಧ ಲೀಟರ್ ನೀರನ್ನು ಕುಡಿಯಬೇಕು (Have a glass of water soon after you get up). ದಿನದ ಯಾವುದೇ ಸಮಯದಲ್ಲೂ ಒಂದು ಗುಟುಕು ನೀರನ್ನು ಕುಡಿದೇ ಆಹಾರ ಸೇವನೆ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.