
ನವದೆಹಲಿ (ಜುಲೈ 13): ಶುಕ್ರವಾರದಿಂದ ಮುಂದಿನ 75 ದಿನಗಳ ವಿಶೇಷ ಅಭಿಯಾನದ ಅಡಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯಸ್ಕರರಿಗೆ ಕೊರೋನಾ ವೈರಸ್ ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಬುಧವಾರ ಮಹತ್ವದ ಘೋಷಣೆ ಮಾಡಿದೆ. ಮೂರನೇ ಡೋಸ್ ವ್ಯಾಪ್ತಿಯನ್ನು ಸುಧಾರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಸರ್ಕಾರದ 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಯ ಭಾಗವಾಗಿ ಈ ಅಭಿಯಾನ ನಡೆಯಲಿದೆ. ಇಲ್ಲಿಯವರೆಗೆ, 18-59 ವಯೋಮಾನದ 77 ಕೋಟಿ ಜನಸಂಖ್ಯೆಯ ಗುರಿಯ ಶೇಕಡಾ 1 ಕ್ಕಿಂತ ಕಡಿಮೆ ಜನರಿಗೆ ಬೂಸ್ಟರ್ ಡೋಸ್ ಅನ್ನು ನೀಡಲಾಗಿದೆ. ಹಾಗಿದ್ದರೂ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಂದಾಜು 16 ಕೋಟಿ ಅರ್ಹ ಜನಸಂಖ್ಯೆಯ ಸುಮಾರು 26 ಪ್ರತಿಶತ ಮತ್ತು ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಬೂಸ್ಟರ್ ಡೋಸ್ ಅನ್ನು ಸ್ವೀಕರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ವಿಶೇಷ ಆಂದೋಲನ: "ಭಾರತೀಯ ಜನಸಂಖ್ಯೆಯ ಬಹುಪಾಲು ಜನರು ಒಂಬತ್ತು ತಿಂಗಳ ಹಿಂದೆ ತಮ್ಮ ಎರಡನೇ ಡೋಸ್ ಅನ್ನು ಪಡೆದಿದ್ದರು. ಐಸಿಎಂಆರ್ (Indian Council of Medical Research- ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಮತ್ತು ಇತರ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಲ್ಲಿನ ಅಧ್ಯಯನಗಳು ಪ್ರಾಥಮಿಕ ವ್ಯಾಕ್ಸಿನೇಷನ್ ಆದ ಆರು ತಿಂಗಳ ನಂತರ ಎರಡೂ ಡೋಸ್‌ಗಳೊಂದಿಗೆ ಪ್ರತಿಕಾಯ ಮಟ್ಟಗಳು ಕಡಿಮೆಯಾಗುತ್ತವೆ ಎಂದು ಸೂಚಿಸಿವೆ. ಬೂಸ್ಟರ್ ನೀಡುವುದರಿಂದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ" ಎಂದು ಅಧಿಕಾರಿ ತಿಳಿಸಿದ್ದಾರೆ ಆದ್ದರಿಂದ ಸರ್ಕಾರವು 75 ದಿನಗಳ ಕಾಲ ವಿಶೇಷ ಆಂದೋಲನವನ್ನು ಪ್ರಾರಂಭಿಸಲು ಯೋಜಿಸುತ್ತಿದೆ, ಈ ಅವಧಿಯಲ್ಲಿ 18 ರಿಂದ 59 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಜುಲೈ 15 ರಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಎಲ್ಲಾ ಫಲಾನುಭವಿಗಳಿಗೆ ಕೋವಿಡ್-19 ಲಸಿಕೆಯ ಎರಡನೇ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರವನ್ನು ಒಂಬತ್ತರಿಂದ ಆರು ತಿಂಗಳವರೆಗೆ ಕಡಿಮೆ ಮಾಡಿದೆ. ಇದು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಶಿಫಾರಸನ್ನು ಆಧರಿಸಿ ನಿರ್ಧಾರ ಮಾಡಲಾಗಿದೆ. ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸಲು ಮತ್ತು ಬೂಸ್ಟರ್ ಡೋಸ್‌ಗಳನ್ನು ಉತ್ತೇಜಿಸಲು, ಸರ್ಕಾರವು ಜೂನ್ 1 ರಂದು ರಾಜ್ಯಗಳಾದ್ಯಂತ 'ಹರ್ ಘರ್ ದಸ್ತಕ್ ಅಭಿಯಾನ 2.0' ನ ಎರಡನೇ ಸುತ್ತನ್ನು ಪ್ರಾರಂಭಿಸಿತು. ಎರಡು ತಿಂಗಳ ಕಾರ್ಯಕ್ರಮವು ಪ್ರಸ್ತುತ ನಡೆಯುತ್ತಿದೆ.
ಇದನ್ನೂ ಓದಿ: ದುಡ್ಡು ಕೊಡ್ತೀನಿ ಅಂದ್ರೂ ಸಿಗ್ತಿಲ್ಲ ಬೂಸ್ಟರ್ ಡೋಸ್..!
ಶೇ. 87ರಷ್ಟು ಜನರಿಗೆ ಡಬಲ್ ಡೋಸ್: ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ.96ರಷ್ಟು ಜನರಿಗೆ ಈಗಾಗಲೇ ಕೋವಿಡ್ ಲಸಿಕೆಯ ಮೊದಲ ಡೋಸ್‌ಅನ್ನು ಯಶಸ್ವಿಯಾಗಿ ನೀಡಲಾಗಿದ್ದರೆ, ಶೇ. 87ರಷ್ಟು ಜನರಿಗೆ ಎರಡೂ ಡೋಸ್‌ಗಳನ್ನೂ ಸರ್ಕಾರ ನೀಡಿದೆ.
ಇದನ್ನೂ ಓದಿ: ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪಡೆದವರಿಗೆ ನೆಮ್ಮದಿಯ ಸುದ್ದಿ, ಅಧ್ಯಯನದಲ್ಲಿ ಬಯಲಾಯ್ತು ಅಚ್ಚರಿಯ ವಿಚಾರ!
ಈ ವರ್ಷದ ಏಪ್ರಿಲ್ 10 ರಂದು, ಭಾರತವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆಗಳ ಬೂಸ್ಟರ್ ಡೋಸ್‌ಗಳನ್ನು ನೀಡಲು ಪ್ರಾರಂಭಿಸಿತು. ಕಳೆದ ವರ್ಷ ಜನವರಿ 16 ರಂದು ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಡೋಸ್‌ಗಳನ್ನು ನೀಡಲಾಗಿತ್ತು. ನಂತರ ಮುಂಚೂಣಿ ಕಾರ್ಯಕರ್ತರಿಗೆ ಕಳೆದ ವರ್ಷದ ಫೆಬ್ರವರಿ 2 ರಿಂದ ಲಸಿಕೆ ನೀಡಲು ಆರಂಭಿಸಲಾಗಿತ್ತು. ಕಳೆದ ವರ್ಷ ಮಾರ್ಚ್ 1 ರಂದು, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನಿರ್ದಿಷ್ಟ ಕೊಮೊರ್ಬಿಡ್ ಪರಿಸ್ಥಿತಿಗಳೊಂದಿಗೆ ಕೋವಿಡ್-19 ಲಸಿಕಾ ಕಾರ್ಯಕ್ರಮ ಆರಂಭಿಸಲಾಗಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.