ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಅಮೂಲ್ಯ, ಬೇಕಿದೆ ನಿಮ್ಮ ನೆರವಿನ ಹಸ್ತ

By Suvarna News  |  First Published Jun 7, 2022, 6:47 PM IST

* 10 ವರ್ಷದ ಬಾಲಕಿಗೆ ವಕ್ಕರಿಸಿದ ಮಾರಣಾಂತಿಕ ಖಾಯಿಲೆ.
* ಪ್ರತೀ ತಿಂಗಳಿಗೆ ಎರಡು ಬಾರಿ ಮಗುವಿಗೆ ರಕ್ತ ಏರಿಸಬೇಕೆಂದು ಎಂದು ತಾಯಿ ನರಳಾಟ.
* ಲಕ್ಷದಲ್ಲಿ ಒಬ್ಬರಿಗೆ ವಕ್ಕರಿಸಲಿರೋ ಈ ಮಾರಣಾಂತಿಕ ಖಾಯಿಲೆ.
* ಚಿಕಿತ್ಸೆಗೆ 35 ರಿಂದ 40 ಲಕ್ಷ ಖರ್ಚಾಗಲಿದೆ ಎಂದಿರೋ ವೈದ್ಯರು.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ, (ಜೂನ್.07):
ಆಕೆ ಹತ್ತು ವರ್ಷದ ಪುಟ್ಟ ಬಾಲಕಿ. ಶಾಲೆಗೆ ಹೋಗುತ್ತಾ, ಗೆಳತಿಯರೊಂದಿಗೆ ಆಡಿ ಬೆಳೆಯಬೇಕಾದ ವಯಸ್ಸು. ಆದರೆ ಆ ಪುಟ್ಟ ಬಾಲಕಿಗೆ ವಕ್ಕರಿಸಿದ ಮಾರಣಾಂತಿಕ ಖಾಯಿಲೆಯಿಂದ ನರಳುತ್ತಿದ್ದರೆ, ಬಡ ಪೋಷಕರು ಮಗಳ ಆರೋಗ್ಯಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಆ ಕುರಿತು ಒಂದು ಸ್ಪೆಷಲ್‌ ರಿಪೋರ್ಟ್ ಇಲ್ಲಿದೆ.

 ಈ ತಾಯಿ ಮಗು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಗ್ರಾಮದ ನಾಯಕನಹಟ್ಟಿ ಗ್ರಾಮದವರು. ಮಗುವಿಗಾಗಿ ಹೀಗೆ ಕಣ್ಣೀರಿಡುತ್ತೀರೋ ತಾಯಿಯ ಹೆಸರು ಲಲಿತಮ್ಮ. ತನ್ನ ಹತ್ತು ವರ್ಷದ ಮಗಳು ಅಮೂಲ್ಯಳಿಗೆ ವಕ್ಕರಿಸಿರುವ ಥಲೆಸ್ಸೇಮಿಯಾ ಎಂಬ ಮಾರಣಾಂತಿಕ ಖಾಯಿಲೆ ತಾಯಿ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿದರೆ, ಪುಟ್ಟ ಮಗುವಿನ ಸುಂದರ ಬಾಲ್ಯಕ್ಕೆ ಕೊಡಲಿ ಪೆಟ್ಟು ನೀಡಿದೆ‌. ಭವಿಷ್ಯದ ಮೇಲೆ ಕರಿನೆರಳು ಆವರಿಸುವಂತೆ ಮಾಡಿದೆ. ರಕ್ತ ಸಂಬಂಧಿ ಖಾಯಿಲೆಯಾದ ಥಲೆಸ್ಸೇಮಿಯಾದಿಂದ ರಕ್ತದ ಸಮಸ್ಯೆ, ಮೂಳೆಯ ಸಮಸ್ಯೆ ಉಂಟಾಗಿ ಮಗು ಪರದಾಡುವಂತಾಗಿದೆ. ಮೊದಲೇ ಕೂಲಿ ನಾಲಿ ಮಾಡಿಕೊಂಡು ಬದುಕುವ ಪೋಷಕರು ಇದರಿಂದ ದಿಕ್ಕೇ ತೋಚದಂತಾಗಿದ್ದಾರೆ. ಪ್ರತೀ ತಿಂಗಳು ಎರಡು ಬಾರಿ ರಕ್ತ ಬದಲಿಸಬೇಕಾದ ಪರಿಸ್ಥಿತಿ ಮಗುವಿನ ಪೋಷಕರಿಗೆ ಬಂದೊದಗಿದೆ. ಹೀಗಾಗಿ ದಿಕ್ಕೇ ತೋಚದಂತಾಗಿದೆ ಎಂಬುದು ಮಗುವಿನ ತಾಯಿಯ ಅಳಲು. 

Latest Videos

undefined

ಕ್ಯಾನ್ಸರ್‌ ಬಗ್ಗೆ ಇನ್ನು ಭಯ ಬೇಕಿಲ್ಲ,ಔ‍ಷಧಿಯಿಂದ ಸಂಪೂರ್ಣ ಗುಣವಾಗುತ್ತೆ ಈ ಕಾಯಿಲೆ

ಮಗುವಿನ ಚಿಕಿತ್ಸೆಯ ದೃಷ್ಟಿಯಿಂದ ಪೋಷಕರು ಈಗಾಗಲೇ ಬೆಂಗಳೂರಿನ ನಾರಾಯಣ ಹೃದಯಾಲಯ, ಶಿವಮೊಗ್ಗದ ದೊಡ್ಡ ಆಸ್ಪತ್ರೆಗಳಿಗೂ  ಓಡಾಡಿದ್ದಾರೆ. ಪ್ರತೀ ತಿಂಗಳು ಎರಡು ಬಾರಿ ರಕ್ತ ಬದಲಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದೆ. ಇನ್ನು ಥಲೆಸ್ಸೇಮಿಯಾ ರೋಗದಿಂದ ಪುಟ್ಟ ಬಾಲಕಿಯ ದೇಹದೊಳಗಿನ ಮೂಳೆ ಸಂಬಂಧಿ ಖಾಯಿಲೆಗಳು ಉಲ್ಬಣವಾಗಿದ್ದು, ತಂದೆ-ತಾಯಿ ದಿನಂಪ್ರತಿ ಅಳುವಂತಾಗಿದೆ. ಈ ರೋಗವನ್ನು ಸಂಪೂರ್ಣ ಗುಣವಾಗಿಸಲು ನುರಿತ ವೈದ್ಯರು 35 ರಿಂದ 40 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎನ್ನುತ್ತಿದ್ದಾರಂತೆ. ದುಡಿದು ತಿನ್ನುವ ಪೋಷಕರು ಇದರಿಂದ ಧೃತಿಗೆಟ್ಟಿದ್ದಾರೆ‌. ಸ್ಥಳೀಯ ಶಾಸಕ, ಸಚಿವ ಬಿ.ಶ್ರೀರಾಮುಲು ನೆರವಿಗೆ ಧಾವಿಸಬೇಕು ಎಂಬುದು ಸ್ಥಳೀಯರು ಮನವಿ ಮಾಡಿದ್ದಾರೆ.

ಬಹಳ ಅಪರೂಪದ ಖಾಯಿಲೆಯಾದ ಥಲೆಸ್ಸೇಮಿಯಾ ಬಡ ಪೋಷಕರ ಮಗಳಿಗೆ ಧೃಡಪಟ್ಟಿರುವುದು ದುರಂತವೇ ಸರಿ. ಆಡುತ್ತಾ ನಲಿದು, ಬಾಲ್ಯ ಕಳೆಯಬೇಕಾದ ಬಾಲೆ ಇದೀಗ ನರಳುವಂತಾಗಿದೆ‌. ಪುಟ್ಟ ಮಗುವಿನ ಭವಿಷ್ಯಕ್ಕಾಗಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ, ಸಚಿವ ಬಿ‌.ಶ್ರೀರಾಮುಲು, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ 
ದಾನಿಗಳು ನೆರವಾಗಬೇಕಿದೆ‌. ಆ ಮೂಲಕ ಬಡ ಪೋಷಕರ ನೋವಿಗೆ ಹೃದಯವಂತರು ನೆರವಾಗಲಿ, ಬಾಲಕಿ ಅಮೂಲ್ಯಾ ಥಲೆಸ್ಸೇಮಿಯಾ ವಿರುದ್ಧ ಗೆದ್ದು ಎಲ್ಲ ಮಕ್ಕಳಂತಾಗಲಿ ಎಂಬುದೇ ನಮ್ಮ ಆಶಯ.

click me!