
ನವದೆಹಲಿ(ಮೇ.16): ಕೊರೋನಾ ಸೋಂಕಿತ ಕೆಲ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮ್ಯೂಕೋಮೈಕೋಸಿಸ್ ಅಂದರೆ ಬ್ಲ್ಯಾಕ್ ಫಂಗಸ್‌ನಿಂದಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಶಿಲೀಂಧ್ರ ಸಾಮಾನ್ಯವಾಗಿ ಮಣ್ಣು, ಗಿಡ, ಗೊಬ್ಬರ, ಕೊಳೆತ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹುಟ್ಟಿಕೊಳ್ಳುತ್ತದೆ. ಆದರೀಗ ಮನುಷ್ಯರಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಈ ಶಿಲೀಂಧ್ರ ಕಣ್ಣು, ಮೂಗು, ಮೆದುಳು ಹಾಗೂ ಶ್ವಾಸಕೋಶವನ್ನು ಹಾಳು ಮಾಡುತ್ತದೆ. ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಲ್ಲಿ ಇದರ ಅಡಡ್ಡ ಪರಿಣಾಮ ಹೆಚ್ಚು ಕಂಡು ಬರುತ್ತದೆ. ಕೊರೋನಾದಿಂದ ಚೇತರಿಸಿಕೊಳ್ಳಲು ಯಾವೆಲ್ಲಾ ರೋಗಿಗಳಿಗೆ ವೆಂಟಿಲೇಟರ್ ಅಥವಾ ಆಕ್ಸಿಜನ್ ಸಪೋರ್ಟ್ ನಿಡಲಾಗಿತ್ತೋ ಅವರೂ ಈ ಕಪ್ಪು ಶಿಲೀಂಧ್ರದ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ.
ಲಕ್ಷಣಗಳೇನು?
* ಮುಖದಲ್ಲಿ ಒಂದು ಬಗೆಯ ಊತ, ನೋವು
* ಮೂಗು ಅಥವಾ ಮುಖದ ಮೇಲೆ ಕಪ್ಪು ಕಲೆಗಳಾಗುವುದು
* ಕಣ್ಣುಗಳಲ್ಲಿ ಊತ ಅಥವಾ ನೋವು, ದೃಷ್ಟಿ ಮಂದವಾಗುವುದು
* ತಲೆನೋವು
* ದವಡೆ ಮತ್ತು ಮುಖದ ಭಾಗಗಳಲ್ಲಿ ಊತ
ಯಾರಿಗೆ ಹೆಚ್ಚು ಅಪಾಯ?
* ಮಧುಮೇಹ ಸಮಸ್ಯೆ ಇದ್ದವರಿಗೆ ಇದು ಹೆಚ್ಚು ಕಾಡುತ್ತದೆ. ಶುಗರ್ ಲೆವೆಲ್ ಕಂಟ್ರೋಲ್ ಇರದವರಿಗೆ ಹೆಚ್ಚು ಅಪಾಯ
* ಕೊರೋನಾ ಚಿಕಿತ್ಸೆ ವೇಳೆ ಹೆಚ್ಚು ಸ್ಟಿರಾಯ್ಡ್ ನೀಡಿದವರಿಗೆ ಹಾಗೂ ವೆಮಟಿಲೇಟರ್ ಸಪೋರ್ಟ್‌ನಲ್ಲಿದ್ದವರಿಗೆ
* ಕ್ಯಾನ್ಸರ್ ಅಥವಾ ಟ್ರಾನ್ಸ್‌ಪ್ಲಾಂಟ್ ರೋಗಿಗಳಿಗೆ ಅಪಾಯ
ಬ್ಲ್ಯಾಕ್ ಫಂಗಸ್ ಹುಟ್ಟಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಬಹಳ ಕಡಿಮೆಯಾಗುತ್ತದೆ. ಹೀಗಾಗಿ ಈ ಮೇಲಿನ ರೋಗಿಗಳು ಕೊರೋನಾದಿಂದ ಚೇತರಿಸಿಕೊಂಡ ಬಳಿಕ ಮೂಗು ಕಟ್ಟಿದಂತಾಗುವುದು, ಮೂಗಿನಿಂದ ಕಪ್ಪು ಕಣಗಳು ಬಂದಂತಾಗುವುದು, ಮುಖದಲ್ಲಿ ಕಪ್ಪು ಕಲೆಗಳು ಅಥವಾ ಊತ ಕಾಣಿಸಿಕೊಳ್ಳುವುದು ಇಂತಹ ಲಕ್ಷಣ ಕಲಂಡು ಬಂದವರು ಕೂಡಲೇ ವೈದ್ಯರನ್ನು ಕಾಣಬೇಕು.
ಈ ವಿಚಾರದ ಬಗ್ಗೆ ಎಚ್ಚರವಹಿಸಿ
ವ್ಯಕ್ತಿಯೊಬ್ಬರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಣಿಸಿಕೊಂಡರೆ ಭಯ ಪಡಬೇಡಿ, ಬದಲಾಗಿ ಎಲ್ಲಕ್ಕಿಂತ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ. ವೈದ್ಯರ ಸಲಹೆ ಪಡೆಯದೆ ಔಷಧ ತೆಗೆದುಕೊಳ್ಳಬೇಡಿ. ಧೂಳು, ಮಣ್ಣು, ಗಾರ್ಡನ್ ಇಂತಹ ಸ್ಥಳಗಳಲ್ಲಿ ಶೂ, ಸಾಕ್ಸ್, ಮಾಸ್ಕ್ ಧರಿಸಿಕೊಂಡು ಹೋಗಿ.
ಬ್ಲ್ಯಾಕ್ ಫಂಗಸ್‌ನಿಂದ ಏನಾಗುತ್ತದೆ?
ಈ ಶಿಲೀಂಧ್ರವು ಸೋಂಕಿತ ಭಾಗದಲ್ಲಿ ರಕ್ತ ಚಲನೆ ನಿಲ್ಲಿಸುತ್ತದೆ, ಇದರಿಂದಾಗಿ ಜೀವಕೋಶಗಳು ನಿಷ್ಕ್ರಿಯಗೊಳ್ಳುತ್ತವೆ. ಇದಕ್ಕಾಗಿ ಆಂಟಿಫಂಗಲ್ ಔಷಧಿಗಳನ್ನು ನೀಡಲಾಗುತ್ತದೆ. ಕೆಲವೊಮ್ಮೆ, ಶಸ್ತ್ರಚಿಕಿತ್ಸೆಯ ನಂತರ ಪೀಡಿತ ಭಾಗವನ್ನು ತೆಗೆದುಹಾಕಬೇಕಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.