
ಕೆಲವರು ಎಂಥದ್ದೇ ಕಠಿಣ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿ ಯೋಚಿಸುವ ಶಕ್ತಿ ಹೊಂದಿರುತ್ತಾರೆ. ಅವರೊಂದಿಗೆ ಮಾತನಾಡಿದ್ರೆ, ಅವರ ಜೊತೆಗಿದ್ರೆ ಏನೋ ಧೈರ್ಯ, ಉತ್ಸಾಹ. ಎಲ್ಲವೂ ಒಳ್ಳೆಯದಾಗುತ್ತೆ ಎಂಬ ನಂಬಿಕೆ. ನಕಾರಾತ್ಮಕವಾಗಿ ಯೋಚಿಸುತ್ತಿದ್ದ ನಮ್ಮ ಮನಸ್ಸೂ ಪಾಸಿಟಿವ್ ಥಿಂಕಿಂಗ್‍ನತ್ತ ವಾಲುತ್ತದೆ. ಇನ್ನು ಇಂಥ ವ್ಯಕ್ತಿ ನಮ್ಮ ಜೀವನ ಸಂಗಾತಿಯಾದ್ರೆ ಕೇಳಬೇಕೇ? ನಾವು ಅದೆಷ್ಟೇ ನಕಾರಾತ್ಮಕ ಮನೋಭಾವ ಹೊಂದಿದ್ರು ಅವರೊಂದಿಗೆ ಮಾತನಾಡಿದಾಗ ಏನೋ ಧೈರ್ಯ, ಆಶಾಭಾವನೆ ಮೂಡುತ್ತದೆ. ವೈದ್ಯವಿಜ್ಞಾನ ಕೂಡ ಇದನ್ನು ದೃಢಪಡಿಸಿದೆ. ನಿಮ್ಮ ಸಂಗಾತಿ ಸಕಾರಾತ್ಮಕ ಮನೋಭಾವ ಹೊಂದಿದ್ದರೆ ನಿಮ್ಮ ಮಾನಸಿಕ ಆರೋಗ್ಯಕ್ಕೆ ಬೂಸ್ಟ್ ಸಿಗುವ ಜೊತೆಗೆ ಮಿದುಳು ಕೂಡ ಶಾರ್ಪ್ ಆಗುತ್ತದೆ. ಅಷ್ಟೇ ಅಲ್ಲ,ವಯಸ್ಸಾಗುತ್ತಿದ್ದಂತೆ ನಿಮ್ಮನ್ನು ಕಾಡುವ ಸ್ಮರಣಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ದೂರವಾಗಿಸುತ್ತದೆ ಎನ್ನುವುದು ಇತ್ತೀಚೆಗೆ ನಡೆದ ಹೊಸ ಅಧ್ಯಯನದಲ್ಲಿ ಸಾಬೀತಾಗಿದೆ.
ಮಿಚಿಗನ್ ಸ್ಟೇಟ್ ಯುನಿವರ್ಸಿಟಿ ಸಂಶೋಧಕರು ಇತ್ತೀಚೆಗೆ ಒಂದು ಅಧ್ಯಯನ ನಡೆಸಿದ್ದರು. ಅದರಲ್ಲಿ ಬದುಕಿನೆಡೆಗೆ ಸಕಾರಾತ್ಮಕ ದೃಷ್ಟಿಕೋನ ಹೊಂದಿರುವ ವ್ಯಕ್ತಿಗಳು ಮಿದುಳಿನ ಉತ್ತಮ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಆರೋಗ್ಯಕರ ವರ್ತನೆಗಳನ್ನು ತೋರ್ಪಡಿಸುತ್ತಾರೆ ಎಂಬುದು ಸಾಬೀತಾಗಿದೆ. ಇಂಥ ವ್ಯಕ್ತಿಗಳು ತಮ್ಮ ಸಂಗಾತಿ ಕೂಡ ಮಿದುಳಿನ ಆರೋಗ್ಯವರ್ಧನೆಗೆ ಪೂರಕವಾದ ಉತ್ತಮ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸುತ್ತಾರೆ. ಇದು ವಯಸ್ಸಾಗುತ್ತಿದ್ದಂತೆ ಕೈ ಕೊಡುವ ನೆನಪಿನ ಶಕ್ತಿ ಸೇರಿದಂತೆ ಮಿದುಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ದೂರವಿರಲು ನೆರವು ನೀಡುತ್ತದೆ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ.
ನಿಮ್ಮ ಸಂಗಾತಿ ಬೆವರುತ್ತಿದ್ದರೆ ನಿಮ್ಮಿಂದ 'ಅದನ್ನು' ಬಯಸುತ್ತಿರಬಹುದು!
ಜೀವನಶೈಲಿ ಪ್ರಭಾವ: ಮಾನಸಿಕ ಆರೋಗ್ಯ ಅನೇಕ ಅಂಶಗಳನ್ನು ಆಧರಿಸಿದೆ. ಅಲ್ಲದೆ, ಮನಸ್ಸಿನಲ್ಲಿರುವ ಭಾವನೆಗಳು, ಹೊಯ್ದಾಟಗಳು ಶಾರೀರಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ವಯಸ್ಸಾಗುತ್ತಿದ್ದಂತೆ ಸಹಜವಾಗಿ ಮಿದುಳಿನ ಕಾರ್ಯಕ್ಷಮತೆಯೂ ತಗ್ಗುವ ಕಾರಣ ಸ್ಮರಣಶಕ್ತಿ ಕುಗ್ಗುತ್ತದೆ. ಆದ್ರೆ ಆಹಾರ ಹಾಗೂ ದೈಹಿಕ ಚಟುವಟಿಕೆಗಳು ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ಕೆಲವೊಂದು ಅಂಶಗಳು ಕೂಡ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಬದುಕಿನ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಹೊಂದಿರುವ ಹಾಗೂ ಪಾಸಿಟಿವ್ ಆಗಿ ಯೋಚಿಸುವ ವ್ಯಕ್ತಿಗಳು ಪೌಷ್ಟಿಕ ಆಹಾರವನ್ನೇ ಸೇವಿಸುತ್ತಾರೆ ಎನ್ನುತ್ತದೆ ವಿಜ್ಞಾನ. ಇಂಥ ವ್ಯಕ್ತಿಗಳು ಸದಾ ಚಟುವಟಿಕೆಯಿಂದ ಕೂಡಿರುವ ಜೊತೆಗೆ ಉತ್ತಮ ಆರೋಗ್ಯ ಕಾಳಜಿಯನ್ನೂ ಹೊಂದಿರುತ್ತಾರೆ. ಇಂಥ ಉತ್ತಮ ಅಭ್ಯಾಸಗಳು ಮಿದುಳನ್ನು ದೀರ್ಘಕಾಲದ ತನಕ ಆರೋಗ್ಯವಾಗಿಡುತ್ತವೆ. ಆ ಮೂಲಕ ಸ್ಮರಣಶಕ್ತಿ ಕುಗ್ಗದಂತೆ ತಡೆಯುತ್ತವೆ.ಇಂಥ ವ್ಯಕ್ತಿಗಳನ್ನು ಸಂಗಾತಿಯಾಗಿ ಪಡೆಯುವವರು ಕೂಡ ಇವರಿಂದ ಪ್ರಭಾವಿತರಾಗಿ ಉತ್ತಮ ಆರೋಗ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ ಎನ್ನುತ್ತದೆ ಅಧ್ಯಯನ.
ಮಂಡೆಬಿಸಿ ಮಾಡುವ Monday ಬ್ಲೂಸ್‍ಗೆ ಮದ್ದೇನು?
ಸಂಗಾತಿ ಪಾಸಿಟಿವ್ ಥಿಂಕರ್ ಆದ್ರೆ ದಾಂಪತ್ಯ ಸೂಪರ್: ನೀವು ಸಕಾರಾತ್ಮಕ ಮನೋಭಾವದ ಸಂಗಾತಿಯನ್ನು ಹೊಂದಿದ್ರೆ ನಿಮ್ಮ ಮಾನಸಿಕ ಆರೋಗ್ಯ ಮಾತ್ರವಲ್ಲ, ನಿಮ್ಮ ದಾಂಪತ್ಯವೂ ಇತರರಿಗೆ ಹೊಟ್ಟೆಕಿಚ್ಚು ಮೂಡಿಸುವಷ್ಟು ಚೆನ್ನಾಗಿರುತ್ತೆ. ಹಾಗಂತ ಪಾಸಿಟಿವ್ ವ್ಯಕ್ತಿತ್ವದ ಸಂಗಾತಿಯಿದ್ರೆ ಭಿನ್ನಾಭಿಪ್ರಾಯ, ವೈಮನಸ್ಸು ಮೂಡುವುದೇ ಇಲ್ಲ ಎಂದಲ್ಲ. ಭಿನ್ನಾಭಿಪ್ರಾಯ ಅಥವಾ ವೈ ಮನಸ್ಸು ಮೂಡಿದಾಗ ಅದಕ್ಕೆ ತಕ್ಷಣ ಸೂಕ್ತ ಪರಿಹಾರ ಕಂಡುಹಿಡಿಯುವ ಚಾಕಚಕ್ಯತೆ ಸಕಾರಾತ್ಮಕವಾಗಿ ಯೋಚಿಸುವ ವ್ಯಕ್ತಿಗಳಿಗಿರುತ್ತದೆ. ಸಂಗಾತಿಯನ್ನು ಗೌರವಿಸುವ, ಸೂಕ್ತ ಸಮಯದಲ್ಲಿ ಸರಿಯಾದ ಸಲಹೆಗಳನ್ನು ನೀಡುವ ಗುಣವನ್ನು ಕೂಡ ಇವರು ಹೊಂದಿರುತ್ತಾರೆ. ಹೀಗಾಗಿ ಸಂಬಂಧದಲ್ಲಿ ಒತ್ತಡ ಸೃಷ್ಟಿಯಾಗೋದಿಲ್ಲ. ಇದರಿಂದ ವೈಯಕ್ತಿಕ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ. ಇನ್ನು ಉದ್ಯೋಗ ಸ್ಥಳದಲ್ಲಿನ ಸಮಸ್ಯೆಗಳು, ಒತ್ತಡಗಳನ್ನು ಇವರ ಬಳಿ ಹಂಚಿಕೊಂಡಾಗ ಸಾಂತ್ವನದ ಜೊತೆಗೆ ಸೂಕ್ತ ಪರಿಹಾರವೂ ಸಿಗುತ್ತದೆ. ಮಹಿಳೆ ಪಾಸಿಟಿವ್ ವ್ಯಕ್ತಿತ್ವದ ಪತಿಯನ್ನು ಹೊಂದಿದ್ರೆ ವೃತ್ತಿ ಬದುಕಿನ ಅನೇಕ ಏರಿಳಿತಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾಳೆ. ಹಾಗಾಗಿ ಮದುವೆಯಾಗುವಾಗ ಸಂಗಾತಿಯ ಉದ್ಯೋಗ, ಸಂಬಳ, ಗುಣಗಳನ್ನು ಪರಿಶೀಲಿಸುವಾಗ ಆತ ಅಥವಾ ಆಕೆ ಪಾಸಿಟಿವ್ ಥಿಂಕರ್ ಹೌದೋ, ಅಲ್ಲವೋ ಎಂಬುದನ್ನು ತಿಳಿಯಲು ಮರೆಯಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.