ಕ್ಯಾನ್ಸರ್ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿರುತ್ತವೆ. ಈಗ ಹೊರಬಿದ್ದ ಅಧ್ಯಯನವೊಂದರ ವರದಿ ಸ್ವಲ್ಪ ನೆಮ್ಮದಿ ನೀಡಿದೆ. ಹೊಸ ಅಧ್ಯಯನದಲ್ಲಿ ವಾಕಿಂಗ್, ಡಾನ್ಸಿಂಗ್ ಸೇರಿದಂತೆ ಕೆಲ ಏರೋಬಿಕ್ಸ್ ವ್ಯಾಯಾಮದಿಂದ ಕ್ಯಾನ್ಸರ್ ನಿಯಂತ್ರಣ ಸಾಧ್ಯ ಎನ್ನಲಾಗಿದೆ.
ವಿಶ್ವದಾದ್ಯಂತ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕ್ಯಾನ್ಸರ್ ನಲ್ಲಿ ನಾನಾ ವಿಧಗಳಿವೆ. ಕೆಲವೊಂದು ಕ್ಯಾನ್ಸರ್ ಯಾವ ಕಾರಣಕ್ಕೆ ಬಂದಿದೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟ. 2020ರಲ್ಲಿ ಪ್ರಪಂಚದಾದ್ಯಂತ ಕ್ಯಾನ್ಸರ್ ರೋಗಕ್ಕೆ 1 ಕೋಟಿಗೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಈ ವರದಿ ಎಲ್ಲರನ್ನು ಬೆಚ್ಚಿ ಬೀಳಿಸುವುದು ಸತ್ಯ. ಕ್ಯಾನ್ಸರ್ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದ್ರೆ ಅನೇಕ ಬಾರಿ ಕೊನೆ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಹೊಸ ಅಧ್ಯಯನವೊಂದು ಕ್ಯಾನ್ಸರ್ ರೋಗಿಗಳಿಗೆ ಹೊಸ ಭರವಸೆ ಮೂಡಿಸಿದೆ.
ಕ್ಯಾನ್ಸರ್ (Cancer) ಕೊನೆ ಹಂತ ತಲುಪಬಾರದು ಅಂದ್ರೆ ಏನು ಮಾಡ್ಬೇಕು ಎಂಬುದನ್ನು ಅಧ್ಯಯನ (Study) ದಲ್ಲಿ ಪತ್ತೆ ಮಾಡಲಾಗಿದೆ. ಅಧ್ಯಯನದ ಪ್ರಕಾರ, ಏರೋಬಿಕ್ (Aerobic ) ವ್ಯಾಯಾಮ ಮಾಡುವುದರಿಂದ ಕ್ಯಾನ್ಸರ್ ಕೊನೆಯ ಹಂತ ತಲುಪುವುದಿಲ್ಲವಂತೆ.
ಅಧ್ಯಯನ ಹೇಳೋದೇನು ? : ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಹ್ಯೂಮನ್ ಜೆನೆಟಿಕ್ಸ್ ಮತ್ತು ಬಯೋಕೆಮಿಸ್ಟ್ರಿ ಇಲಾಖೆಯ ಇಬ್ಬರು ವಿಜ್ಞಾನಿಗಳು ಈ ಅಧ್ಯಯನ ನಡೆಸಿದ್ದಾರೆ. ಏರೋಬಿಕ್ ವ್ಯಾಯಾಮ ಮಾಡುವುದ್ರಿಂದ ಮೆಟಾಸ್ಟಾಟಿಕ್ ಕ್ಯಾನ್ಸರ್ ಅಪಾಯ ಶೇಕಡಾ 72ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ತೀವ್ರವಾದ ಏರೋಬಿಕ್ ವ್ಯಾಯಾಮ ಮಾಡುವುದರಿಂದ ದೇಹದ ಭಾಗಗಳು ಹೆಚ್ಚು ಗ್ಲೂಕೋಸ್ ಅನ್ನು ಸೇವಿಸುತ್ತವೆ. ಇದ್ರಿಂದ ಗಡ್ಡೆ ಹರಡುವ ಶಕ್ತಿ ಕಳೆದುಕೊಳ್ಳುತ್ತದೆಯಂತೆ.
Winter Tips: ಮಕ್ಕಳ ಬಗ್ಗೆ ಹೆಚ್ಚು ಕಾಳಜಿಯಿರಲಿ, ಇಮ್ಯುನಿಟಿ ಹೆಚ್ಚಿಸೋದು ಹೇಗೆ ತಿಳ್ಕೊಳ್ಳಿ
ಮೆಟಾಸ್ಟಾಟಿಕ್ ಕ್ಯಾನ್ಸರ್ ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಆಗಿದೆ. ಕ್ಯಾನ್ಸರ್ ಗಡ್ಡೆ ತನ್ನ ಮೂಲ ಸ್ಥಳದಿಂದ ಇತರ ಅಂಗಗಳಿಗೆ ಹರಡಿದಾಗ ಅದನ್ನು ಮೆಟಾಸ್ಟಾಟಿಕ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಕೊನೆಯ ಹಂತವನ್ನು ಮೆಟಾಸ್ಟಾಟಿಕ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಮೂತ್ರಪಿಂಡದ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಎಲ್ಲವೂ ಮೆಟಾಸ್ಟಾಟಿಕ್ ಕ್ಯಾನ್ಸರ್ ಆಗಿ ಬದಲಾಗುತ್ತದೆ.
ಕ್ಯಾನ್ಸರ್ ಕೊನೆ ಹಂತ ತಲುಪಿದಾಗ ವ್ಯಕ್ತಿ ಬದುಕುವ ಸಾಧ್ಯತೆ ಕಡಿಮೆಯಿರುತ್ತದೆ. ಕೊನೆ ಹಂತದಲ್ಲಿ ಆತ ಯಾವೆಲ್ಲ ಸಮಸ್ಯೆ ಎದುರಿಸುತ್ತಾನೆ ಎಂಬುದು ಆತನಿಗೆ ಯಾವ ಕ್ಯಾನ್ಸರ್ ಬಂದಿದೆ ಎಂಬುದನ್ನು ಅವಲಂಭಿಸಿರುತ್ತದೆ. ಮೂಳೆ ಕ್ಯಾನ್ಸರ್ ಕೊನೆ ಹಂತದಲ್ಲಿ ಮೂಳೆ ನೋವು ಹಾಗೂ ಮುರಿತವುಂಟಾಗುತ್ತದೆ. ಕ್ಯಾನ್ಸರ್ ಮೆದುಳನ್ನು ತಲುಪಿದರೆ ತಲೆನೋವು, ತಲೆತಿರುಗುವಿಕೆ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್ ಶ್ವಾಸಕೋಶವನ್ನು ತಲುಪಿದಾಗ ಉಸಿರಾಟದ ತೊಂದರೆ ಕಾಡುತ್ತದೆ.
ಏರೋಬಿಕ್ ವ್ಯಾಯಾಮ ಎಂದರೇನು? : ಏರೋಬಿಕ್ ವ್ಯಾಯಾಮ ಮಾಡುವವರಿಗೆ ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪುವ ಮುನ್ನವೇ ವಾಸಿಯಾಗುತ್ತದೆ ಎಂದು ಹೇಳಲಾಗಿದೆ. ಹಾಗಿದ್ರೆ ಏರೋಬಿಕ್ ವ್ಯಾಯಾಮ ಎಂದರೇನು ಎಂಬುದನ್ನು ತಿಳಿಯುವ ಅಗತ್ಯವಿದೆ. ಏರೋಬಿಕ್ ವ್ಯಾಯಾಮವೆಂದ್ರೆ ಹೃದಯ ಬಡಿತ ಹೆಚ್ಚಾಗುವ ಮತ್ತು ಉಸಿರಾಟ ಕ್ರಿಯೆ ವೇಗವಾಗುವ ಎಲ್ಲ ವ್ಯಾಯಾಮವನ್ನು ಏರೋಬಿಕ್ ವ್ಯಾಯಾಮ ಎಂದು ಕರೆಯಲಾಗುತ್ತದೆ. ಏರೋಬಿಕ್ ವ್ಯಾಯಾಮ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಕಾರ್ಡಿಯೋ ಎಂದೂ ಕರೆಯುತ್ತಾರೆ. ಏರೋಬಿಕ್ ವ್ಯಾಯಾಮವನ್ನು ನೀವು ಮನೆ, ಜಿಮ್ ಎಲ್ಲಿ ಬೇಕಾದ್ರೂ ಮಾಡಬಹುದು. ಸ್ಕಿಪ್ಪಿಂಗ್, ಸ್ವಿಮ್ಮಿಂಗ್, ಜುಂಬಾ, ಬೇಗವಾದ ವಾಕಿಂಗ್, ಡಾನ್ಸ್, ಸೈಕ್ಲಿಂಗ್ ಇವೆಲ್ಲವನ್ನೂ ಏರೋಬಿಕ್ ವ್ಯಾಯಾಮದಲ್ಲಿ ಸೇರಿಸಲಾಗುತ್ತದೆ.
ಡಿಫರೆಂಟ್ ಸ್ಟೈಲಲ್ಲಿ ಗಡ್ಡ ಬಿಡೋದು ಚಂದ, ಮೆಂಟೇನ್ ಮಾಡದಿದ್ದರೆ ಅನಾರೋಗ್ಯ ಗ್ಯಾರಂಟಿ
ಏರೋಬಿಕ್ ವ್ಯಾಯಾಮದಿಂದ ಏನು ಪ್ರಯೋಜನ? : ದೇಹ ಮತ್ತು ಮನಸ್ಸನ್ನು ಸದೃಢವಾಗಿಡಲು ಇದು ನೆರವಾಗುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ನಿದ್ರಾಹೀನತೆ, ಬೊಜ್ಜು ಮುಂತಾದ ಕಾಯಿಲೆಗಳಿಂದ ನಮ್ಮ ದೇಹವನ್ನು ದೂರವಿಡುತ್ತದೆ. ಶಕ್ತಿ ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ. ಏರೋಬಿಕ್ ವ್ಯಾಯಾಮವನ್ನು ವ್ಯಕ್ತಿ ಪ್ರತಿದಿನ ಕನಿಷ್ಠ 30 ನಿಮಿಷ ಮಾಡಬೇಕು. ವಾರದಲ್ಲಿ ಐದರಿಂದ ಆರು ದಿನ ಮಾಡಿದ್ರೆ ಒಳ್ಳೆಯದು. ಒಂದೇ ದಿನ ಅರ್ಧಗಂಟೆ ವ್ಯಾಯಾಮಕ್ಕೆ ಸಮಯ ನೀಡಲು ಸಾಧ್ಯವಾಗ್ತಿಲ್ಲ ಎಂದಾದ್ರೆ ನೀವು ಹತ್ತು ಹತ್ತು ನಿಮಿಷದಂತೆ ಸಮಯ ಹೊಂದಿಸಿಕೊಳ್ಳಬಹುದು.