
ಅನ್ನ ಶುಗರ್ (Sugar) ಜಾಸ್ತಿ ಮಾಡುತ್ತೆ ಎನ್ನುವ ಕಾರಣಕ್ಕೆ ಈಗ ಚಪಾತಿ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ದಿನದಲ್ಲಿ ಒಂದು ಟೈಂ ಆದ್ರೂ ಚಪಾತಿ ಬೇಕೇಬೇಕು ಎನ್ನುವವರಿದ್ದಾರೆ. ನಿಮ್ಮ ಮನೆಯಲ್ಲೂ ಚಪಾತಿ (Chapati) ಮಾಡ್ತೀರಿ ಎಂದಾದ್ರೆ ಬರೀ ಹಿಟ್ಟು ಕಲಿಸಿ, ಲಟ್ಟಿಸಿ ತಿನ್ನೋ ಬದಲು ಅದಕ್ಕೆ ಒಂದೇ ಒಂದು ಪದಾರ್ಥವನ್ನು ಸೇರಿಸಿ ನೀವು ಮಾಡೋ ಚಪಾತಿಯಿಂದ ಮತ್ತಷ್ಟು ಆರೋಗ್ಯ ಸುಧಾರಿಸಿಕೊಳ್ಬಹುದು. ನಿಮ್ಮ ದೇಹದಲ್ಲಿ ಬಿ 12 ಕಡಿಮೆ ಆಗದಂತೆ ನೋಡಿಕೊಳ್ಬಹುದು. ಅದಕ್ಕೆ ನೀವು ಹೆಚ್ಚು ಶ್ರಮಪಡಬೇಕಾಗಿಲ್ಲ. ಹೆಚ್ಚಿನ ಹಣ ಕೂಡ ಖರ್ಚು ಮಾಡ್ಬೇಕಾಗಿಲ್ಲ. ಅಡುಗೆ ಮನೆಯಲ್ಲಿರುವ, ಆಗಾಗ ಒಗ್ಗರಣೆಗೆ ಬಳಸುವ ಒಂದು ಮಸಾಲೆಯನ್ನು ನೀವು ಚಪಾತಿ ಹಿಟ್ಟು ಕಲಸುವ ವೇಳೆ ಹಾಕಿ.
ದೇಹಕ್ಕೆ ಬಿ 12 (B12) ಬಹಳ ಅಗತ್ಯ. ಅನೇಕರು ಬಿ 12 ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ನಿಮ್ಮ ದೇಹವು ಕೆಂಪು ರಕ್ತ ಕಣಗಳು ಮತ್ತು ಡಿಎನ್ಎಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹವು ವಿಟಮಿನ್ ಬಿ12 ಅನ್ನು ಸ್ವತಃ ಉತ್ಪಾದಿಸುವುದಿಲ್ಲ. ಅದನ್ನು ಪಡೆಯಲು ನೀವು ವಿಟಮಿನ್ ಬಿ12 ಹೊಂದಿರುವ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಕು. ವಿಟಮಿನ್ ಬಿ 12 ಕೊರತೆಯಿಂದಾಗಿ, ದೇಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ದೇಹದಲ್ಲಿ ಬಿ 12 ಕಡಿಮೆ ಆಗಿದ್ರೆ ವಾಕರಿಕೆ, ಕಿರಿಕಿರಿ ನಿಮ್ಮನ್ನು ಕಾಡುತ್ತದೆ. ಹಸಿವಿನ ಕೊರತೆ, ತೂಕ ಇಳಿಕೆ, ಬಾಯಿ ಅಥವಾ ನಾಲಿಗೆಯಲ್ಲಿ ನೋವು, ಚರ್ಮ ಹಳದಿಯಾಗುವುದು, ದೃಷ್ಟಿ ಸಮಸ್ಯೆ, ದೌರ್ಬಲ್ಯ, ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆ, ಮರೆವು ಈ ಎಲ್ಲ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ನೀವು ಆರೋಗ್ಯವಾಗಿರಬೇಕು, ಬಿ 12 ಸಮಸ್ಯೆ ನಿಮಗೆ ಕಾಡಬಾರದು ಅಂದ್ರೆ ಪ್ರತಿ ದಿನ ಮಾಡುವ ಚಪಾತಿ ಅಥವಾ ರೊಟ್ಟಿ ಹಿಟ್ಟಿಗೆ ಜೀರಿಗೆ ಪುಡಿಯನ್ನು ಹಾಕಿ. ಒಂದು ಟೀ ಚಮಚ ಜೀರಿಗೆ ಪುಡಿಯನ್ನು ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ. ಜೀರಿಗೆಯನ್ನು ನೀವು ಪುಡಿ ಮಾಡದೆ ಹಾಗೆಯೂ ಹಾಕಬಹುದು. ಜೀರಿಗೆಯನ್ನು ನೀವು ನಿತ್ಯ ಸೇವನೆ ಮಾಡುವುದ್ರಿಂದ ನಿಮ್ಮ ದೇಹದಲ್ಲಿ ಬಿ 12 ಕಡಿಮೆ ಆಗುವುದಿಲ್ಲ.
ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ರಂಜಕ ಮತ್ತು ಸತುವು ಮುಂತಾದ ಖನಿಜಗಳು ಜೀರಿಗೆಯಲ್ಲಿ ಕಂಡುಬರುತ್ತವೆ. ಇದರ ಜೊತೆಗೆ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಬಿ3 (ನಿಯಾಸಿನ್) ಸಹ ಇದರಲ್ಲಿ ಕಂಡುಬರುತ್ತವೆ. ಇದನ್ನು ಪ್ರತಿದಿನ ಸೇವಿಸುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಇದು ಜೀರ್ಣಕ್ರಿಯೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮ ತೂಕ ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಇದು ನೆರವಾಗುತ್ತದೆ., ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಕೂದಲನ್ನು ಬಲಪಡಿಸುತ್ತದೆ. ಹೃದಯದ ಆರೋಗ್ಯಕ್ಕೆ ಇದು ಪ್ರಯೋಜನಕಾರಿ. ಮಧುಮೇಹವನ್ನು ನಿಯಂತ್ರಿಸುತ್ತದೆ. ಸುಸ್ತನ್ನು ಕಡಿಮೆ ಮಾಡುವುದಲ್ಲದೆ ಸೂಕ್ತ ನಿದ್ರೆಗೆ ಜೀರಿಗೆ ಪ್ರಯೋಜನಕಾರಿ.
ಜೀರಿಗೆ ನೀರನ್ನು ಕೂಡ ನೀವು ಪ್ರತಿ ದಿನ ಕುಡಿಯಬಹುದು. ರಾತ್ರಿ ಜೀರಿಗೆಯನ್ನು ನೀರಿನಲ್ಲಿ ನೆನೆ ಹಾಕಿ. ಬೆಳಿಗ್ಗೆ ಅದನ್ನು ಸೋಸಿ ಕುಡಿಯುತ್ತ ಬನ್ನಿ. ಅದಕ್ಕೆ ನಿಂಬೆ ರಸವನ್ನು ಬೆರೆಸಿ ಕೂಡ ನೀವು ಕುಡಿಯಬಹುದು. ಬಿ 12 ಬಗ್ಗೆ ಹೇಳೋದಾದ್ರೆ ನಮ್ಮ ದೇಹಕ್ಕೆ ವಯಸ್ಕರಿಗೆ ದಿನಕ್ಕೆ ಸುಮಾರು 2.4 ಮೈಕ್ರೋಗ್ರಾಂಗಳಷ್ಟು (mcg) ವಿಟಮಿನ್ ಬಿ12 ಅಗತ್ಯವಿದೆ. ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರಿಗೆ ಇದ್ರ ಅಗತ್ಯ ಹೆಚ್ಚಿದೆ. ಮಾಂಸ, ಡೈರಿ ಮತ್ತು ಮೊಟ್ಟೆಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.