ನಾಯಿನಾ ದುರುಗುಟ್ಟಿ ನೋಡ್ತೀರಾ? ಹಾಗಿದ್ರೆ ಕಾದಿದೆ ನಿಮಗೆ ಗ್ರಹಚಾರ!

By Suvarna NewsFirst Published Jan 3, 2020, 3:20 PM IST
Highlights

ಮನೆಯಲ್ಲಿ ನಾಯಿ ಸಾಕೋ ಕ್ರೇಜ್‌ ಇದ್ದವರಿಗಷ್ಟೇ ಗೊತ್ತಿರುತ್ತೆ, ಅವುಗಳ ಪ್ರೀತಿ ಎಂಥಾದ್ದು ಅಂತ. ಗದರಿದರೆ ದೂರದಲ್ಲೇ ನಿಂತು ಕುಂಯಿ ಕುಂಯಿ ಅನ್ನೋ ಮುದ್ದು ಮರಿ ಅಕ್ಕರೆಯಿಂದ ಕೂಗಿದ್ರೆ ಕ್ಷಣ ಮಾತ್ರದಲ್ಲಿ ತೊಡೆಯೇರುತ್ತೆ. ಇಂತಿಪ್ಪ ಮರಿಗೆ ಇಷ್ಟ ಆಗ್ದೇ ಇರೋ ನಮ್ಮ ಸ್ವಭಾವ ಯಾವ್ದು ಗೊತ್ತಾ..
 

‘ಬ್ರೌನೀ...’

ಮನೆಯಲ್ಲಿರುವ ಪುಟ್ಟ ಪಾಪು ಹೀಗೆ ಕೂಗಿದ್ರೂ ಕ್ಷಣದಲ್ಲಿ ಓಡೋಡಿ ಬರುವ ಮುದ್ದು ಪಪ್ಪಿಯಿದು. ಸದಾ ನಮ್ಮ ಪ್ರೀತಿಗೆ ಹಂಬಲಿಸುವ, ನಾವು ಸಿಟ್ಟು ಮಾಡಿದರೆ ಬಾಲ ಮುದುಡಿಕೊಂಡು ದೂರು ಹೇಳುವಂತೆ ವಿಚಿತ್ರ ಶಬ್ದ ಮಾಡುತ್ತಾ ಮೂಲೆ ಸೇರುವ ಈ ಪಪ್ಪಿ ಅಂದ್ರೆ ಮನೆಯವರಿಗೆ ಒಂಥರಾ ಅಕ್ಕರೆ. ನಾಯಿಯನ್ನು ಕಂಡರೆ ಆಗದವರು, ಹೆದರಿ ದೂರ ಓಡುವವರೂ, ಮನೆಗೊಂದು ನಾಯಿ ತಂದರೆ ಅದನ್ನು ಇಷ್ಟ ಪಡಲಾರಂಭಿಸುತ್ತಾರೆ. ಇದಕ್ಕೆಲ್ಲ ಕಾರಣ ಮತ್ತೇನಲ್ಲ, ನಾಯಿಗಳ ನಿಷ್ಕಾರಣ ಪ್ರೀತಿ.

ಪ್ರೀತಿಯಿಂದ ಸಾಕೋ ನಾಯಿ ಆಹಾರ ಹೀಗಿರಲಿ

ಎಷ್ಟೋ ಸಲ ನಾಯಿಯ ಅನೇಕ ಸ್ವಭಾವಗಳನ್ನು ನಾವು ತಿದ್ದಲು ಪ್ರಯತ್ನಿಸುತ್ತೇವೆ. ಪುಟ್ಟ ಮರಿಯಾಗಿದ್ದಾಗ ಮನೆಯೊಳಗೇ ಒಂದು ಎರಡು ಎಲ್ಲ ಮಾಡುತ್ತಿದ್ದ ಮರಿಗೆ ಕ್ರಮೇಣ ಅವೆಲ್ಲವನ್ನೂ ಮನೆಯಾಚೆ ಮಾಡೋದನ್ನು ಅಭ್ಯಾಸ ಮಾಡಿಸುತ್ತೇವೆ. ಗದರಿದರೆ ಸುಮ್ಮನಿರುವಂತೆ ಟ್ರೈನ್‌ ಮಾಡುತ್ತೇವೆ. ಎಲ್ಲೇ ಇದ್ದರೂ ಕೂಗಿದ ಕೂಡಲೇ ಓಡೋಡಿ ಬರುವಂತೆ ಅಭ್ಯಾಸ ಮಾಡಿಸುತ್ತೇವೆ.

ನಾಯಿಗಳಿಗೆ ನಮ್ಮ ಭಾಷೆ ಬರೋದಿಲ್ಲ ನಿಜ, ಆದರೆ ನಮ್ಮ ದನಿಯಲ್ಲಿರುವ ಭಾವವನ್ನು ಅವು ಬಹಳ ಬೇಗ ಗ್ರಹಿಸುತ್ತವೆ. ನಾವು ಪ್ರೀತಿಯಿಂದ ಕರೆದಾಗ ಓಡೋಡೊ ಬರುವ ಮರಿ, ಸಿಟ್ಟಿಂದ ಕಿರುಚಾಡಿದಾಗ ಮೂಲೆಯಲ್ಲಿ ಶಿಕ್ಷೆಯ ಭಯದಲ್ಲಿ ನಿಂತಿರುತ್ತದೆ.

ಇಷ್ಟೆಲ್ಲ ಮಾಡೋ ನಾವು ಅದರ ಜೊತೆಗೆ ಮಾತ್ರ ನಮಗೆ ಬೇಕಾದ ಹಾಗೆ ಇದ್ದು ಬಿಡುತ್ತೇವೆ. ನಮ್ಮ ಸ್ವಭಾವ ಅದಕ್ಕೆ ಇಷ್ಟ ಆಗುತ್ತಾ, ಇಲ್ವಾ, ಮರಿಗೆ ಏನು ಮಾಡಿದ್ರೆ ಇರಿಟೇಟ್‌ ಆಗುತ್ತೆ ಅನ್ನೋದನ್ನೆಲ್ಲ ನೋಡೋದೇ ಇಲ್ಲ. ನಿಮ್ಮ ನಮ್ಮ ಎಲ್ಲರ ಮನೆಯ ನಾಯಿ ಮರಿ ಅಥವಾ ದೊಡ್ಡ ನಾಯಿಗೆ ಇಷ್ಟ ಆಗದ ನಮ್ಮ ಸ್ವಭಾವಗಳೂ ಬಹಳ ಇವೆ. ಅವು ಪ್ರಾಣಿಗಳ್ವಾ, ಅದೆಲ್ಲ ಅವಕ್ಕಿರಲ್ಲ ಅಂದಕೊಂಡಿರುತ್ತೇವೆ. ಆದರೆ ನಿಜಕ್ಕೂ ಅವಕ್ಕೂ ನಮ್ಮಂತೆ ಕೆಲವೊಂದು ವಿಷಯಗಳು ಇಷ್ಟ ಆಗಲ್ಲ. ಸಿಟ್ಟು ತರಿಸುತ್ತವೆ. ಕಿರಿಕಿರಿ ಉಂಟು ಮಾಡುತ್ತವೆ.

ನೀವು ಸಾಕೋ ನಾಯಿ ಬಗ್ಗೆ ನಿಮಗೆಷ್ಟು ಗೊತ್ತು

1. ಕಿರುಚಾಟ ಬೇಡವೇ ಬೇಡ, ಹೇಳೋದನ್ನ ಕೂಲ್‌ ಆಗಿ ಹೇಳಿ

ನಾಯಿಮರಿಗೆ ಏನೇ ಹೇಳೋದಿದ್ರೂ ಸಮಾಧಾನದ ದನಿಯಲ್ಲಿ ಹೇಳಿ. ಅದು ಕೇಳುತ್ತೆ. ದ್ವನಿ ಏರಿಸಿದಂತೆ ಅದಕ್ಕೆ ಗೊಂದಲಗಳು ಶುರುವಾಗುತ್ತವೆ. ಏನು ಮಾಡಬೇಕು ಅಂತಲೇ ತೋಚೋದಿಲ್ಲ. ದಿನಾ ಮನೆಯೊಳಗೇ ಮೂತ್ರ ವಿಸರ್ಜಿಸುತ್ತಿದ್ದ ನಾಯಿಮರಿ ಒಂದಿನ ಮನೆಯಾಗಿ ಮೂತ್ರ ಮಾಡಿದರೆ ‘ಗುಡ್‌ ಗರ್ಲ್‌’ ಅಥವಾ ‘ಗುಡ್‌ ಬಾಯ್‌’ ಅಂತ ಕೂಲ್‌ ಆಗಿ ಹೇಳಿ. ಅದಕ್ಕೊಂದು ಬಿಸ್ಕೆಟ್‌ ಚೂರು ಅಥವಾ ಫುಡ್‌ ಏನಾದ್ರೂ ಹಾಕಿ. ಆಗ ಅದಕ್ಕೆ ಅರ್ಥ ಆಗುತ್ತೆ ತಾನೀಗ ಮಾಡಿರೋದು ಸರಿ ಅಂತ.

2. ನಾಯಿಗಳನ್ನು ಅಪ್ಪಿಕೊಳ್ಳೋದು ಬೇಡ

ಅಪ್ಪುಗೆಯ ಮೂಲಕ ಪ್ರೀತಿ ತೋರಿಸೋದು ಮನುಷ್ಯ ಸ್ವಭಾವ. ಅದು ಪ್ರಾಣಿಗಳ ಸ್ವಭಾವದಲ್ಲಿ ಇಲ್ಲ. ನಾವು ಅದರ ಮೈಯ ಮೇಲೆ ಭಾರ ಹಾಕಿ ತಬ್ಬಿದರೆ ಅದಕ್ಕೆ ತನ್ನ ಮೇಲೆ ಆಕ್ರಮಣ ಮಾಡುತ್ತಿದ್ದಾರೇನೋ ಅನ್ನುವ ಫೀಲ್‌ ಬರುವ ಸಾಧ್ಯತೆ ಇದೆ. ಈ ಟೈಮ್‌ನಲ್ಲಿ ಅದು ಸಿಟ್ಟು ತೋರಿಸಬಹುದು ಅಥವಾ ನುಣುಚಿಕೊಳ್ಳಲು ಯತ್ನಿಸಬಹುದು.

3. ನಿಮ್ಮ ಸ್ಪರ್ಶ ಇಷ್ಟ ಆಗುತ್ತಾ ಪರೀಕ್ಷಿಸಿ

ಕೆಲವೊಂದು ನಾಯಿಮರಿಗಳಿಗೆ ಮುದ್ದಾಡಿಸಿಕೊಳ್ಳೋದು ಬಹಳ ಇಷ್ಟ. ಮತ್ತೆ ಕೆಲವಕ್ಕೆ ದೂರದಲ್ಲೇ ನಿಂತು ಪ್ರೀತಿಮಾತು ಕೇಳಿಸಿಕೊಳ್ಳೋದು ಇಷ್ಟ. ನಿಮ್ಮ ನಾಯಿಗೆ ಯಾವುದಿಷ್ಟ ಅಂತ ಪರೀಕ್ಷಿಸಿ.

4. ದುರುಗುಟ್ಟಿ ನೋಡಬೇಡಿ

ದಾರಿಯಲ್ಲಿ ಯಾರಾದರೂ ನಿಮ್ಮನ್ನು ದುರುಗುಟ್ಟಿ ನೋಡಿದರೆ ಹೇಗಿರುತ್ತೆ, ನೀವೂ ಅಷ್ಟೆ, ಅದು ಮನೆ ನಾಯಿಯಾಗಿರಲಿ, ಬೇರೆ ನಾಯಿಯಾಗಿರಲಿ, ಯಾವ ಕಾರಣಕ್ಕೂ ದುರುಗುಟ್ಟಿ ನೋಡಬೇಡಿ. ಅದು ಅವಕ್ಕೆ ಇರಿಟೇಟ್‌ ಮಾಡುತ್ತೆ. ಭಯವಾಗಿ ಅವು ನಿಮ್ಮ ಮೇಲೆ ಅಟ್ಯಾಕ್‌ ಮಾಡೋ ಸಾಧ್ಯತೆಯೂ ಇರುತ್ತೆ.

5. ವಾಕಿಂಗ್‌ಗೆ ಕರ್ಕೊಂಡು ಹೋದಾಗ ಫ್ರೀ ಬಿಡಿ

ನಾಯಿಯನ್ನು ಲಾಂಗ್‌ ವಾಕ್‌ಗೆ ಕರ್ಕೊಂಡು ಹೋಗುವ ಕೆಲವರು ಅದೆಲ್ಲಿ ತನ್ನ ನಿಯಂತ್ರಣ ತಪ್ಪಿ ಓಡಿಬಿಡುತ್ತೋ ಅನ್ನೋ ಭಯದಲ್ಲಿ ಬಿಗಿಯಾಗಿ ಹಿಡಿದುಕೊಂಡಿರುತ್ತಾರೆ. ಇದು ನಾಯಿಗಳಿಗೆ ಇಷ್ಟ ಆಗಲ್ಲ. ಅವು ಹೋದಲ್ಲಿ ನೀವೂ ಹೋಗಿ . ಅವುಗಳನ್ನು ಫ್ರೀ ಯಾಗಿ ಓಡಾಡಲು ಬಿಡಿ.

click me!