ಪಾಕಿಸ್ತಾನದಲ್ಲೂ ಘರ್ ವಾಪ್ಸಿ; ರಾಜಧಾನಿ ಲಾಹೋರ್‌ನಲ್ಲಿ ಇಸ್ಲಾಂಪುರ ಈಗ ಕೃಷ್ಣನಗರ, ಆ ಚೌಕದ ಹೆಸರೂ ಬದಲು!

Published : May 19, 2026, 01:37 PM IST

ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಲಾಹೋರ್‌ನಲ್ಲಿ, ಮರ್ಯಮ್ ನವಾಜ್ ಸರ್ಕಾರವು ವಿಭಜನೆ ಪೂರ್ವದ ಐತಿಹಾಸಿಕ ಹೆಸರುಗಳನ್ನು ಮರುಸ್ಥಾಪಿಸುತ್ತಿದೆ. ಈ ಯೋಜನೆಯ ಭಾಗವಾಗಿ, ಇಸ್ಲಾಂಪುರವನ್ನು 'ಕೃಷ್ಣನಗರ' ಮತ್ತು 'ಬಾಬರಿ ಮಸೀದಿ ಚೌಕ್' ಅನ್ನು 'ಜೈನ ಮಂದಿರ ಚೌಕ್' ಎಂದು ಮರುನಾಮಕರಣ ಮಾಡಲಾಗಿದೆ.  

PREV
18
ಸಾಂಸ್ಕೃತಿಕ ರಾಜಧಾನಿ ಲಾಹೋರ್‌ನಲ್ಲಿ ಮೂಲ ಸಂಸ್ಕೃತಿ

ಲಾಹೋರ್: ಪಾಕಿಸ್ತಾನ ರಚನೆಯಾದ 79 ವರ್ಷಗಳ ನಂತರ, ಅಲ್ಲಿನ ಸಾಂಸ್ಕೃತಿಕ ರಾಜಧಾನಿ ಲಾಹೋರ್‌ನಲ್ಲಿ ನಡೆದಿರುವ ಒಂದು ಐತಿಹಾಸಿಕ ಬೆಳವಣಿಗೆಯು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತದ ಅಮೃತಸರದಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಲಾಹೋರ್, ದಶಕಗಳ ಕಾಲ ತೀವ್ರ ಇಸ್ಲಾಮೀಕರಣದ ಹಿಡಿತದಲ್ಲಿದ್ದ ನಂತರ ಈಗ ಮರಳಿ ತನ್ನ ಸಾಂಸ್ಕೃತಿಕ ಹಳೆಯ ಬೇರುಗಳಿಗೆ ಮರಳುತ್ತಿದೆ.

28
ಹಳೆ ಹೆಸರು ಮರು ಸ್ಥಾಪನೆ

ವಿಭಜನೆಗೂ ಮುನ್ನ ಲಾಹೋರ್‌ನಲ್ಲಿದ್ದ ಐತಿಹಾಸಿಕ ಬೀದಿಗಳು ಹಾಗೂ ಲೇನ್‌ಗಳ ಹಳೆಯ ಹೆಸರುಗಳನ್ನು ಮರುಸ್ಥಾಪಿಸುವ ಬೃಹತ್ ಯೋಜನೆಯೊಂದಕ್ಕೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ನೇತೃತ್ವದ ಸರ್ಕಾರ ಅನುಮೋದನೆ ನೀಡಿದೆ. ನಗರದ ವಿಭಜನೆ ಪೂರ್ವದ ಪರಂಪರೆಯನ್ನು ಪುನರುಜ್ಜೀವನಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ, ಲಾಹೋರ್‌ನಲ್ಲಿದ್ದ ಒಂಬತ್ತು ಪ್ರಮುಖ ಇಸ್ಲಾಮಿಕ್ ಹೆಸರುಗಳ ಸ್ಥಳಗಳಿಗೆ ಅವುಗಳ ಮೂಲ ಹಿಂದೂ, ಸಿಖ್ ಅಥವಾ ಬ್ರಿಟಿಷ್ ಕಾಲದ ಹೆಸರುಗಳನ್ನು ಮರುನಾಮಕರಣ ಮಾಡಲಾಗಿದೆ.

38
ಬಾಬರಿ ಮಸೀದಿ ಚೌಕ್ ಈಗ ಅಧಿಕೃತವಾಗಿ ಜೈನ ಮಂದಿರ ಚೌಕ್!

ಸರ್ಕಾರದ ಆದೇಶದ ಬೆನ್ನಲ್ಲೇ ಸ್ಥಳೀಯ ಆಡಳಿತವು ಹೊಸ ನಾಮಫಲಕಗಳನ್ನು ಸಹ ಅಳವಡಿಸಿದೆ. ಇದರಲ್ಲಿ ಪ್ರಮುಖವಾಗಿ ಇಸ್ಲಾಂಪುರ' ಪ್ರದೇಶವನ್ನು ಈಗ ಅಧಿಕೃತವಾಗಿ ಅದರ ಹಳೆಯ ಹೆಸರಾದ 'ಕೃಷ್ಣನಗರ' ಎಂದು ಬದಲಾಯಿಸಲಾಗಿದೆ.'ಬಾಬರಿ ಮಸೀದಿ ಚೌಕ್' ಅನ್ನು ಈಗ ಮರಳಿ 'ಜೈನ ಮಂದಿರ ಚೌಕ್' ಎಂದು ಮರುನಾಮಕರಣ ಮಾಡಲಾಗಿದೆ. ವಿಶೇಷವೆಂದರೆ, ಈ ಹೆಸರು ಬದಲಾವಣೆಗಳ ವಿರುದ್ಧ ಪಾಕಿಸ್ತಾನದ ಯಾವುದೇ ಮೂಲಭೂತವಾದಿ ಸಂಘಟನೆಗಳಿಂದ ಸದ್ಯಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ.

48
1990ರ ದಶಕದಲ್ಲಿ ರಾಜಕೀಯ ಕಾರಣಗಳಿಗಾಗಿ ಬದಲಾಗಿದ್ದ ಹೆಸರು

ಜೈನ ದೇವಾಲಯದ ಸಮೀಪದ ಅನಾರ್ಕಲಿ ಪ್ರದೇಶದ ನಿವಾಸಿ ಮೌಲಾನಾ ವಾಜಿದ್ ಖಾದ್ರಿ ಈ ಕುರಿತು ಪ್ರತಿಕ್ರಿಯಿಸಿ, ಯಾವುದೇ ಇಸ್ಲಾಮಿಕ್ ಧರ್ಮಕ್ಕೆ ದೇವಾಲಯ ಅಥವಾ ಗುರುದ್ವಾರದ ಹೆಸರಿಡುವುದರಿಂದ ತೊಂದರೆಯಿಲ್ಲ. 1990ರ ದಶಕದಲ್ಲಿ ರಾಜಕೀಯ ಕಾರಣಗಳಿಗಾಗಿ ಜೈನ ಮಂದಿರ ಚೌಕ್ ಅನ್ನು ಬಾಬರಿ ಮಸೀದಿ ಚೌಕ್ ಎಂದು ಬದಲಾಯಿಸಲಾಗಿತ್ತು. ಆದರೆ ಸ್ಥಳೀಯರಾದ ನಾವು ಅದನ್ನು ಎಂದಿಗೂ ಆ ಹೆಸರಿನಿಂದ ಕರೆಯಲಿಲ್ಲ. ನಮ್ಮ ಪೂರ್ವಜರು ಮುಸ್ಲಿಮರಾಗಿದ್ದಾಗಲೂ ಈ ಹಿಂದೂ ಹೆಸರುಗಳೇ ಇದ್ದವು, ಇದರಿಂದ ಅವರ ನಂಬಿಕೆಗೆ ಯಾವುದೇ ಧಕ್ಕೆ ಬಂದಿರಲಿಲ್ಲ ಎಂದಿದ್ದಾರೆ.

58
ಲಕ್ಷ್ಮಿ ಚೌಕ್ ನಮ್ಮ ತಲೆಮಾರುಗಳ ಪರಂಪರೆ

ಲಾಹೋರ್‌ನ ಬೀಕನ್‌ಹೌಸ್ ವಿಶ್ವವಿದ್ಯಾಲಯದ ಉಪನ್ಯಾಸಕ ಸಾದ್ ಮಲಿಕ್ ಸರ್ಕಾರದ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಇದು ಅತ್ಯಂತ ಆಹ್ಲಾದಕರ ಬದಲಾವಣೆ. ಮುನ್ಸಿಪಲ್ ಕಾರ್ಪೊರೇಷನ್ ದಾಖಲೆಗಳಲ್ಲಿ ಇದನ್ನು ಮೌಲಾನಾ ಜಾಫರ್ ಅಲಿ ಚೌಕ್ ಎಂದು ಹೆಸರಿಸಿದ್ದರೂ, ನನ್ನ ತಂದೆಯ ಕಾಲದಿಂದಲೂ ನಾವೆಲ್ಲರೂ ಇದನ್ನು 'ಲಕ್ಷ್ಮಿ ಚೌಕ್' ಎಂದೇ ಕರೆಯುತ್ತಿದ್ದೆವು. ಈ ಹೆಸರು ನಮ್ಮ ತಲೆಮಾರುಗಳ ಪರಂಪರೆಯ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.

68
₹5,000 ಕೋಟಿ ವೆಚ್ಚದ ಹೆರಿಟೇಜ್ ಯೋಜನೆ

ಈ ಮರುನಾಮಕರಣ ಅಭಿಯಾನವು 'ಲಾಹೋರ್ ಅಥಾರಿಟಿ ಫಾರ್ ಹೆರಿಟೇಜ್ ರಿವೈವಲ್' (LAHR) ಎಂಬ ಬೃಹತ್ ನಗರ ಸಂರಕ್ಷಣಾ ಯೋಜನೆಯ ಭಾಗವಾಗಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಇದರ ಮುಖ್ಯ ಪೋಷಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಮರ್ಯಮ್ ನವಾಜ್ 2025 ರಲ್ಲಿ 50 ಬಿಲಿಯನ್ ಪಾಕಿಸ್ತಾನಿ ರೂಪಾಯಿ (ಸುಮಾರು ₹5,000 ಕೋಟಿ) ವೆಚ್ಚದ ಈ ಯೋಜನೆಯನ್ನು ಪ್ರಾರಂಭಿಸಿದ್ದರು.

ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರ ಪ್ರಕಾರ, ದೆಹಲಿ ಗೇಟ್ ಸೇರಿದಂತೆ ಲಾಹೋರ್‌ನ ಹಳೆಯ ಕೋಟೆಯ ಎಂಟೂ ದ್ವಾರಗಳನ್ನು ನವೀಕರಿಸಲಾಗುವುದು. ಹೆಸರು ಬದಲಾವಣೆಯ ಮುಂದಿನ ಹಂತದಲ್ಲಿ, ಪಾಕಿಸ್ತಾನದ ಸಿಂಧ್ ಮತ್ತು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯಗಳಲ್ಲೂ ಇಂತಹದ್ದೇ ಐತಿಹಾಸಿಕ ಹೆಸರುಗಳನ್ನು ಮರುಸ್ಥಾಪಿಸುವ ಸಾಧ್ಯತೆಯಿದೆ. ಐತಿಹಾಸಿಕ ಹೆಸರುಗಳನ್ನು ಹಾಳು ಮಾಡದ ಯುರೋಪ್ ರಾಷ್ಟ್ರಗಳಿಂದ ನಾವು ಕಲಿಯಬೇಕು. ಲಾಹೋರ್‌ನ ಇತಿಹಾಸವೇ ಅದರ ಗುರುತು ಎಂದು ನವಾಜ್ ಷರೀಫ್ ಅಭಿಪ್ರಾಯಪಟ್ಟಿದ್ದಾರೆ.

78
ಮರುನಾಮಕರಣಗೊಂಡ ಪ್ರಮುಖ ಸ್ಥಳಗಳ ಪಟ್ಟಿ:

ಇಸ್ಲಾಂಪುರ(ಕೃಷ್ಣನಗರ)

ಸುನ್ನತ್ ನಗರ (ಸಂತನಗರ)

ಮೌಲಾನಾ ಜಾಫರ್ ಚೌಕ್ (ಲಕ್ಷ್ಮಿ ಚೌಕ್)

ಬಾಬರಿ ಮಸೀದಿ ಚೌಕ್ (ಜೈನ ಮಂದಿರ ಚೌಕ್)

ಮುಸ್ತಫಾಬಾದ್ (ಧರ್ಮಪುರ)

ಸರ್ ಅಘಾ ಖಾನ್ ಚೌಕ್ (ಡೇವಿಸ್ ರಸ್ತೆ)

ಅಲ್ಲಮ ಇಕ್ಬಾಲ್ ರಸ್ತೆ (ಜೈಲು ರಸ್ತೆ)

ಫಾತಿಮಾ ಜಿನ್ನಾ ರಸ್ತೆ (ಕ್ವೀನ್ಸ್ ರಸ್ತೆ)

ಬಾಗ್-ಎ-ಜಿನ್ನಾ (ಲಾರೆನ್ಸ್ ಗಾರ್ಡನ್)

ಐತಿಹಾಸಿಕ ಮಿಂಟೋ ಪಾರ್ಕ್ ಪುನರುಜ್ಜೀವನ

ಯೋಜನೆಯ ಭಾಗವಾಗಿ ಐತಿಹಾಸಿಕ 'ಮಿಂಟೋ ಪಾರ್ಕ್' (ಪ್ರಸ್ತುತ ಗ್ರೇಟರ್ ಇಕ್ಬಾಲ್ ಪಾರ್ಕ್) ನಲ್ಲಿ ಮೂರು ಕ್ರಿಕೆಟ್ ಮೈದಾನಗಳು ಮತ್ತು ಸಾಂಪ್ರದಾಯಿಕ ಕುಸ್ತಿ ಅಖಾಡವನ್ನು ಪುನಃಸ್ಥಾಪಿಸಲು ನವಾಜ್ ಷರೀಫ್ ಪ್ರಸ್ತಾಪಿಸಿದ್ದಾರೆ. 2015 ರಲ್ಲಿ ಇವರ ಸಹೋದರ ಹಾಗೂ ಪ್ರಸ್ತುತ ಪ್ರಧಾನಿ ಶಹಬಾಜ್ ಷರೀಫ್ ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ, ನಗರಾಭಿವೃದ್ಧಿಯ ಹೆಸರಿನಲ್ಲಿ ಈ ಐತಿಹಾಸಿಕ ಕ್ರೀಡಾಂಗಣ ಮತ್ತು ಅಖಾಡವನ್ನು ಧ್ವಂಸಗೊಳಿಸಿ ತೀವ್ರ ಟೀಕೆಗೆ ಒಳಗಾಗಿದ್ದರು. ಈಗ ಆ ತಪ್ಪನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ.

88
ದಿಗ್ಗಜರು ಇಲ್ಲಿಯೇ ಪಳಗಿದ್ದ

ವಿಭಜನೆಗೂ ಮುನ್ನ ಭಾರತದ ದಂತಕಥೆ ಕ್ರಿಕೆಟಿಗ ಲಾಲಾ ಅಮರನಾಥ್ ಇದೇ ಮಿಂಟೋ ಪಾರ್ಕ್‌ನ ಕ್ರೆಸೆಂಟ್ ಕ್ರಿಕೆಟ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದರು ಮತ್ತು ಈ ಕ್ಲಬ್ ಪರ ಆಡುತ್ತಿದ್ದರು. 1978 ರಲ್ಲಿ ಅವರು ಭಾರತ ತಂಡದೊಂದಿಗೆ ಲಾಹೋರ್‌ಗೆ ಭೇಟಿ ನೀಡಿದಾಗಲೂ ಈ ಮೈದಾನಕ್ಕೆ ಬಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು. ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಸೇರಿದಂತೆ ಹಲವು ದಿಗ್ಗಜರು ಇಲ್ಲಿಯೇ ಪಳಗಿದ್ದರು. ಅಷ್ಟೇ ಅಲ್ಲದೆ, ವಿಭಜನೆಗೂ ಮುನ್ನ ಹಿಂದೂಗಳು ಇಲ್ಲಿ ಅದ್ಧೂರಿಯಾಗಿ ದಸರಾ ಆಚರಿಸುತ್ತಿದ್ದರು ಮತ್ತು ಭಾರತದ ಖ್ಯಾತ ಕುಸ್ತಿಪಟುಗಳಾದ ಗರಿಮಾ ಪೆಹೆಲ್ವಾನ್, ಇಮಾಮ್ ಬಕ್ಷ್ ಮತ್ತು ಗುಂಗಾ ಪೆಹೆಲ್ವಾನ್ ಅವರ ಐತಿಹಾಸಿಕ ಕುಸ್ತಿ ಪಂದ್ಯಗಳಿಗೆ ಈ ಪಾರ್ಕ್ ಸಾಕ್ಷಿಯಾಗಿತ್ತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories