3 ದಿನಗಳ ಚೀನಾ ಪ್ರವಾಸ ಮುಗಿಸಿದ ಡೊನಾಲ್ಡ್ ಟ್ರಂಪ್ ಅವರ ತಂಡ, ಭದ್ರತಾ ಮತ್ತು ಹ್ಯಾಕಿಂಗ್ ಭೀತಿಯಿಂದಾಗಿ ತಮಗೆ ನೀಡಿದ್ದ ಮೊಬೈಲ್ ಸೇರಿದಂತೆ ಎಲ್ಲಾ ಚೀನಿ ವಸ್ತುಗಳನ್ನು ಕಸದಬುಟ್ಟಿಗೆ ಎಸೆದಿದೆ. ಇದೇ ವೇಳೆ, ನಿರ್ಬಂಧವಿದ್ದ ಅಮೆರಿಕದ ಸಚಿವ ಮಾರ್ಕೋ ರುಬಿಯೊ ಅವರ ಹೆಸರನ್ನು ಬದಲಿಸಿ ಪ್ರವೇಶ ನೀಡಲಾಗಿದೆ.
ವಾಷಿಂಗ್ಟನ್: 3 ದಿನಗಳ ಚೀನಾ ಭೇಟಿ ಮುಗಿಸಿ ಅಮೆರಿಕಕ್ಕೆ ಮರಳುವ ಮುನ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಗಡ ಬಂದಿದ್ದ ಸಚಿವರು ಮತ್ತು ಅಧಿಕಾರಿ ಬಳಗ ತಮಗೆ ನೀಡಲಾಗಿದ್ದ ಚೀನಿ ವಸ್ತುಗಳನ್ನು ಅಲ್ಲೇ ಕಸದಬುಟ್ಟಿಗೆ ಎಸೆದು ಹೋಗಿದ್ದಾರೆ ಎಂದು ವರದಿಯಾಗಿದೆ. ಭದ್ರತೆಯ ದೃಷ್ಟಿಯಿಂದ ಹೀಗೆ ಮಾಡಲಾಗಿದೆ ಎನ್ನಲಾಗಿದೆ.
25
ಮೊಬೈಲ್‌ಗಳನ್ನೂ ತಂದಿರದ ಅಮೆರಿಕನ್ ಅಧಿಕಾರಿಗಳು!
ಹ್ಯಾಕಿಂಗ್ ಭೀತಿಯಿಂದ ವೈಯಕ್ತಿಕ ಮೊಬೈಲ್‌ಗಳನ್ನೂ ತಂದಿರದ ಅಮೆರಿಕನ್ ಅಧಿಕಾರಿಗಳು, ತಾತ್ಕಾಲಿಕ ಬಳಕೆಗೆ ನೆಚ್ಚಿಕೊಂಡಿದ್ದ ಫೋನ್‌ಗಳನ್ನೂ ಬಿಟ್ಟು ಬಂದಿದ್ದಾರೆ. ಜತೆಗೆ, ಚೀನಾದಲ್ಲಿ ತಮಗೆ ನೀಡಲಾಗಿದ್ದ ಬ್ಯಾಡ್ಜ್, ಲೇಪಲ್ ಪಿನ್, ಕಾಣಿಕೆ ಇತ್ಯಾದಿಗಳನ್ನು ವಿಮಾನ ಏರುವ ಮುನ್ನ ಕದಸ ಬುಟ್ಟಿಗೆ ಹಾಕಿದರು. ಚೀನಾದ ಯಾವುದೇ ವಸ್ತು ವಿಮಾನವನ್ನು ಏರಬಾರದು ಹಾಗೂ ಅಮೆರಿಕಕ್ಕೆ ಬರಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಲಾಯಿತು ಎಂದು ಅಮೆರಿಕದ ಪತ್ರಕರ್ತರೊಬ್ಬರು ಹೇಳಿದ್ದಾರೆ.
35
ಹೀಗ್ಯಾಕೆ ಮಾಡಿದ್ರು?
ಮೇಲ್ನೋಟಕ್ಕೆ ಚೀನಾಗೆ ತೋರಿದ ಅವಮರ್ಯಾದೆಯಂತೆ ಕಂಡರೂ ಈ ಕ್ರಮವು ಅಧ್ಯಕ್ಷ ಹಾಗೂ ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಂಡದ್ದಾಗಿತ್ತು. ಚೀನಾ ತಮಗೆ ಕೊಟ್ಟ ವಸ್ತುಗಳ ಮೂಲಕ ತಮ್ಮ ಮೇಲೆ ಕಣ್ಗಾವಲು ಇಡಬಹುದು. ತಮ್ಮ ನಡೆಗಳನ್ನು ಕದ್ದು ನೋಡಿ, ನುಡಿಗಳನ್ನು ಕೇಳಬಹುದು ಅಥವಾ ಹೋದಲ್ಲೆಲ್ಲಾ ಟ್ರ್ಯಾಕ್ ಮಾಡಬಹುದು ಎಂಬುದು ಅಮೆರಿಕನ್ನರ ಆತಂಕ. ಜತೆಗೆ, ಚೀನಿ ವಸ್ತುಗಳಲ್ಲಿ ಯಾವುದಾದರೂ ಸ್ಫೋಟಕದಂತಹ ಅಪಾಯಕಾರಿ ವಸ್ತುವಿದ್ದು, ಟ್ರಂಪ್ ಪ್ರಯಾಣಿಸುವ ಏರ್‌ಫೋರ್ಸ್ ಒನ್ ವಿಮಾನ ಆಗಸದಲ್ಲಿದ್ದಾಗ ಅದು ತನ್ನ ನಿಜಬಣ್ಣ ತೋರುವ ಸಾಧ್ಯತೆಯೂ ಇರುತ್ತದೆ. ಇದನ್ನು ತಪ್ಪಿಸಲು ಚೀನಿ ವಸ್ತುಗಳನ್ನು ಚೀನಾದಲ್ಲೇ ಬಿಟ್ಟು ಬರಲಾಗಿದೆ.
ನಿರ್ಬಂಧದಿಂದ ಪಾರಾಗಲು ಅಮೆರಿಕದ ಸಚಿವರ ರುಬಿಯೋ ಹೆಸರೇ ಬದಲು!
ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೊ ಅವರಿಗೆ ಚೀನಾ ಪ್ರವೇಶಕ್ಕೆ ನಿರ್ಬಂಧವಿರುವುದರಿಂದ, ಅವರ ಹೆಸರಿನ ಮೊದಲಕ್ಷರವನ್ನೇ ಬದಲಿಸಿ ಪ್ರವೇಶಕ್ಕೆ ಅನುಮತಿಸಿದ ವಿಚಿತ್ರ ಘಟನೆ ಗುರುವಾರ ನಡೆದಿದೆ. ಚೀನಾದ ಕ್ಸಿನ್‌ಜಿಯಾಂಗ್ ಹಾಗೂ ಹಾಂಕಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ರುಬಿಯೋ ಟೀಕಿಸಿದ್ದರು. ಹೀಗಾಗಿ ಅವರ ವಿರುದ್ಧ 2020ರಲ್ಲಿ 2 ಬಾರಿ ಚೀನಾ ನಿರ್ಬಂಧ ಹೇರಿತ್ತು. ಈ ನಿಯಮದ ಪ್ರಕಾರ ಅವರು ಚೀನಾ ಪ್ರವೇಶಿಸುವಂತಿಲ್ಲ. ಹಾಗಾಗಿ ಅವರ ಉಪನಾಮ ‘ರುಬಿಯೋ’ದಲ್ಲಿ ‘ರು’ ಬದಲು ‘ಲು’ ಎಂದು ಸೇರಿಸಿದೆ. ಬಳಿಕ ಚೀನಾ ಪ್ರವೇಶಿಸಲು ಅನುಮತಿ ನೀಡಿದೆ.
55
ಟ್ರಂಪ್ 3 ದಿನದ ಭೇಟಿ ಬಳಿಕ ಚೀನಾಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಪ್ರವಾಸ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ದಿನ ಚೀನಾ ಪ್ರವಾಸ ಮುಗಿದ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಡ್ರ್ಯಾಗನ್ ರಾಷ್ಟ್ರದ ಪ್ರವಾಸ ಆಯೋಜಿಸಿದ್ದಾರೆ. ಪುಟಿನ್ ಮೇ 19, 20ಕ್ಕೆ 2 ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಕ್ರೆಮ್ಲಿನ್ ಖಚಿತಪಡಿಸಿದೆ. ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಪ್ರಮುಖ ಅಂತಾರಾಷ್ಟ್ರೀಯ, ಪ್ರಾದೇಶಿಕ ಸಮಸ್ಯೆ ಮತ್ತು ಆರ್ಥಿಕ ಸಹಕಾರದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಕ್ರೆಮ್ಲಿನ್ ಹೇಳಿಕೊಂಡಿದೆ. ಟ್ರಂಪ್ ಮೇ 13 ರಿಂದ 3 ದಿನ ಚೀನಾ ಪ್ರವಾಸದಲ್ಲಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ