
ದಶಕಗಳ ಹಿಂಸಾಚಾರ, ಬಲವಂತದ ಕಣ್ಮರೆಗಳು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ತೀವ್ರವಾಗಿ ವಿರೋಧಿಸಿ, ಬಲೂಚಿಸ್ತಾನ ನಾಯಕರು ಇದೀಗ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಬಲೂಚಿಸ್ತಾನದಲ್ಲಿ ಸ್ವಾತಂತ್ರ್ಯ ಚಳವಳಿ ಮತ್ತೆ ಭುಗಿಲೆದ್ದಿದೆ. ಪ್ರಸ್ತಾವಿತ ಧ್ವಜ ಹಾಗೂ "ಸ್ವತಂತ್ರ ಬಲೂಚಿಸ್ತಾನದ ನಕ್ಷೆ"ಗಳ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, 'ರಿಪಬ್ಲಿಕ್ ಆಫ್ ಬಲೂಚಿಸ್ತಾನ್' ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ. ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದಾದ್ಯಂತ ಸಾವಿರಾರು ಜನರು ಬೀದಿಗಿಳಿದು, "ಬಲೂಚಿಸ್ತಾನ್ ಪಾಕಿಸ್ತಾನವಲ್ಲ!" ಎಂದು ಘೋಷಣೆ ಕೂಗುತ್ತಾ, ಭಾರೀ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಪ್ರಮುಖ ಬಲೂಚ್ ನಾಯಕ ಮತ್ತು ಲೇಖಕರಾದ ಮೀರ್ ಯಾರ್ ಬಲೂಚ್ ಅವರ ಹೇಳಿಕೆಯನ್ನು ಆಲ್ ಇಂಡಿಯಾ ರೇಡಿಯೋ ವರದಿ ಮಾಡಿದೆ. ಬಲೂಚಿಸ್ತಾನ ಪ್ರಜಾಸತ್ತಾತ್ಮಕ ಗಣರಾಜ್ಯ"ವನ್ನು ಸಾರ್ವಭೌಮ ರಾಷ್ಟ್ರವೆಂದು ಗುರುತಿಸಲು ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮಿರ್ ಬಲೂಚ್ ಮನವಿ ಮಾಡಿದ್ದಾರೆ.
ಅಫ್ಘಾನ್ ನಾಯಕರಿಂದ ಪಾಕಿಸ್ತಾನದ ಟೀಕೆ
ಪಾಕಿಸ್ತಾನ ಸರ್ಕಾರದ ಹಿಂಸಾತ್ಮಕ ನಿಲುವಿಗೆ ಅಫ್ಘಾನಿಸ್ತಾನದ ಮಾಜಿ ಸಂಸತ್ ಸದಸ್ಯೆ ಮರಿಯಮ್ ಸೊಲೈಮಾಂಖಿಲ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. "ಇದು ವಸಾಹತುಶಾಹಿ ಧೋರಣೆ, ಬಲವಂತದ ಆಕ್ರಮಣ" ಎಂದು ಅವರು ವಾಸ್ತವವನ್ನು ಬಿಂಬಿಸಿದ್ದಾರೆ. "ಬಲೂಚಿಸ್ತಾನದಲ್ಲಿ ಶಾಂತಿಯುತ ಹೋರಾಟಗಾರರಾದ ಡಾ. ಮಹಾಂಗ್ ಬಲೂಚ್ ಜೈಲಿನಲ್ಲಿ ಇದ್ದಾಗ, ಉಗ್ರ ನಾಯಕ ಒಸಾಮಾ ಬಿನ್ ಲಾಡೆನ್ ಅಥವಾ ಲಷ್ಕರ್-ಎ-ತೈಬಾದಂತೆದವರು ಮುಕ್ತವಾಗಿ ಸುತ್ತಾಡುತ್ತಾರೆ ಎಂಬುದು ಎಷ್ಟೋ ಸಂಕಟದ ಸಂಗತಿ," ಎಂದು ಅವರು ANI ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಬಲೂಚಿಸ್ತಾನ್ ಸಮಸ್ಯೆಯ ಮೂಲವೇನು?
ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ಬಲೂಚಿಸ್ತಾನ ಪ್ರಾಂತ್ಯ, ಹಲವಾರು ವರ್ಷಗಳಿಂದ ಪ್ರತ್ಯೇಕತಾವಾದಿ ಚಳವಳಿಗಳ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ಆಗಾಗ್ಗೆ ಪಾಕಿಸ್ತಾನದ ಸರ್ಕಾರ, ಸೇನೆ ಮತ್ತು ಚೀನಾದ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡ ದಾಳಿಗಳು ನಡೆಯುತ್ತಿವೆ. ಪ್ರತ್ಯೇಕತಾವಾದಿಗಳು ಇಲ್ಲಿಯ ಸಂಪತ್ತುಗಳಲ್ಲಿ ತಮ್ಮ ಹಕ್ಕು ಕೇಳುತ್ತಿದ್ದಾರೆ. ವಿಶೇಷವಾಗಿ ಅನಿಲ, ಖನಿಜ ಸಂಪತ್ತಿನ ಮೇಲೆ ತಮ್ಮ ಪಾಲು ಸಿಕ್ಕಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿ (BLA) ಗುಂಪು, ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಪ್ರತ್ಯೇಕಗೊಳಿಸಬೇಕೆಂಬ ನಿಲುವಿನಲ್ಲಿ ಇದೆ. ಪಾಕಿಸ್ತಾನ ಈ ಪ್ರದೇಶದ ಸಂಪತ್ತನ್ನು ಅನ್ಯಾಯವಾಗಿ ಉಪಯೋಗಿಸುತ್ತಿದೆ ಎಂದು ಬಿಎಲ್‌ಎ ಆರೋಪಿಸುತ್ತಿದೆ.
ಇದರ ನಡುವೆ ಬಲೂಚಿಸ್ತಾನ ಎಂದಿಗೂ ಪಾಕಿಸ್ತಾನದ ಭಾಗವಾಗಿರಲಿಲ್ಲ ಎಂದು ಬಲೂಚಿ ನಾಯಕರಾದ ಮೀರ್ ಯಾರ್ ಬಲೂಚ್ ಬುಧವಾರ ಸ್ಪಷ್ಟಪಡಿಸಿದ್ದಾರೆ. ದಶಕಗಳ ಕಾಲ ಪಾಕಿಸ್ತಾನ ನಡೆಸಿದ "ವಿಮಾನ ದಾಳಿಗಳು, ಬಾಂಬ್ ದಾಳಿಗಳು, ಬಲವಂತದ ಕಣ್ಮರೆಗಳು ಹಾಗೂ ಸಾಮೂಹಿಕ ನರಮೇಧಗಳು" ಗಳನ್ನು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಭಾರತೀಯ ಮಾಧ್ಯಮ ಹಾಗೂ ಜನರಿಗೆ ಮನವಿ ಮಾಡಿಕೊಂಡಿರುವ ಅವರು, "ಬಲೂಚಿಸ್ತಾನವನ್ನು ಪಾಕಿಸ್ತಾನದ ಭಾಗ ಎಂದು ಹೇಳಬೇಡಿ" ಎಂದು ಹೇಳಿದರು. "ನಾವು ಪಾಕಿಸ್ತಾನೀಯರಲ್ಲ. ನಾವು ಬಲೂಚಿಸ್ತಾನೀಯರು. ಪಂಜಾಬಿಗಳೇ ಪಾಕಿಸ್ತಾನದ ಮೂಲವಾಸಿಗಳು. ಅವರು ಯಾವತ್ತೂ ಬಾಂಬ್ ದಾಳಿಗಳು ಅಥವಾ ದಮನಕಾರಿ ಕ್ರಮಗಳನ್ನು ಅನುಭವಿಸಿರುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯದ ಬಗ್ಗೆ ಸ್ಪಷ್ಟನೆ:
ಬಲೂಚಿಸ್ತಾನದ ಸ್ವಾತಂತ್ರ್ಯ ಕುರಿತಂತೆ ಮಾತನಾಡಿದ ಅವರು, "1947ರ ಆಗಸ್ಟ್ 11ರಂದು ನಾವು ಬಲೂಚಿಸ್ತಾನದ ಸ್ವಾತಂತ್ರ್ಯವನ್ನು ಘೋಷಿಸಿದ್ದೆವು. ಬ್ರಿಟಿಷರು ಉಪಖಂಡವನ್ನು ತೊರೆದಾಗಲೇ ನಾವು ಸ್ವತಂತ್ರರಾಗಿದ್ದೆವು" ಎಂದು ಹಿಂದಿನ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದರು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದ ಸಂದರ್ಭದಲ್ಲಿ, "ಬಲೂಚಿಸ್ತಾನ ಮತ್ತು ಜನತೆ ಭಾರತಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. "ಬಲೂಚಿಸ್ತಾನದ ಪ್ರಜಾಪ್ರಭುತ್ವದ ಜನತೆ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ, ಆದರೆ ನಾವು, ಬಲೂಚಿಸ್ತಾನದ ಜನರು, ಭಾರತ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬದ್ಧರಾಗಿದ್ದೇವೆ. ಮೋದಿ ಜೀ, ನೀವು ಒಬ್ಬರಲ್ಲ – ನಿಮ್ಮ ಹಿಂದೆ 60 ಮಿಲಿಯನ್ ಬಲೂಚ್ ದೇಶಭಕ್ತರು ನಿಂತಿದ್ದಾರೆ" ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಬಿಕ್ಕಟ್ಟು ಮತ್ತು ಬಲೂಚಿಸ್ತಾನದ ಸ್ಥಿತಿ
ಈ ಬೆಳವಣಿಗೆ ಪಾಕಿಸ್ತಾನ ತೀವ್ರ ಆರ್ಥಿಕ ಹಾಗೂ ಭದ್ರತಾ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ನಡೆದಿದೆ. ಇತ್ತೀಚೆಗೆ ಭಾರತೀಯ ಸೇನೆ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಒಂಬತ್ತು ಭಯೋತ್ಪಾದಕ ತಾಣಗಳನ್ನು ನಾಶಪಡಿಸಿದ್ದು, 100 ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಭಾರತ ಹೇಳಿದೆ. ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ನಿರಂತರವಾಗಿವೆ – ಬಲವಂತದ ಕಣ್ಮರೆ, ಕಾನೂನುಬಾಹಿರ ಹತ್ಯೆಗಳು, ಭಿನ್ನಾಭಿಪ್ರಾಯದ ದಮನ ಇವುಗಳು ಸಾಮಾನ್ಯವಾಗಿದೆ. ಪಾಕಿಸ್ತಾನದ ಸೇನೆ ಹಾಗೂ ಉಗ್ರ ಸಂಘಟನೆಗಳು ಈ ಕ್ರೂರತೆಯಲ್ಲಿ ಭಾಗಿಯಾಗಿವೆ ಎಂಬ ಆರೋಪಗಳು ಕೇಳಿಬಂದಿವೆ. ಜನರು ನಿತ್ಯ ಧ್ವಂಸದ ಜೀವನ ನಡೆಸುತ್ತಿದ್ದಾರೆ. ಮಾಧ್ಯಮದ ಸ್ವಾತಂತ್ರ್ಯ ಇಲ್ಲದಂತಿದೆ, ಕಾನೂನು ಸಹಾಯವೂ ಲಭ್ಯವಿಲ್ಲ.