ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕನ್ನಡತಿ (Kannadathi), ತನ್ನ ಕಥೆ, ಪಾತ್ರ, ನಟರ ಅದ್ಭುತ ಅಭಿನಯದಿಂದ ಕನ್ನಡಿಗರ ಮನಸ್ಸು ಗೆಲ್ಲುವುದರಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ಅಮ್ಮಮ್ಮನ ಪಾತ್ರವನ್ನಂತೂ ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಸೊಸೆಯನ್ನು ಮಗಳಂತೆ ನೋಡಿಕೊಳ್ಳುವ, ಸೊಸೆಯ ಹೆಸರಲ್ಲಿ ಎಲ್ಲಾ ಆಸ್ತಿಯನ್ನು ಬರೆದಿಟ್ಟಂತಹ ಅಮ್ಮಮ್ಮನ ಪಾತ್ರ ಅದಾಗಿತ್ತು.
ಕನ್ನಡತಿಯಲ್ಲಿ ಅಮ್ಮಮ್ಮನ ಪಾತ್ರಕ್ಕೆ ಜೀವ ತುಂಬಿದ ನಟಿ ಚಿತ್ಕಳಾ ಬಿರಾದಾರ್(Chitkala Biradar). ಇದ್ರೆ ಇಂತಹ ಅತ್ತೆ ಇರಬೇಕು ಎಂದು ಕನ್ನಡತಿ ನೋಡಿದೋರೆಲ್ಲಾ ಹೇಳಿದ್ದಾರೆ. ಆದ್ರೆ ನಿಮಗೊತ್ತಾ, ನಿಜ ಜೀವನದಲ್ಲೂ ಚಿತ್ಕಳಾ ಬಿರಾದಾರ್ ಸೂಪರ್ ಅತ್ತೆ. ಸೊಸೆಗಾಗಿ ಮಿಡಿಯುವ ಅತ್ತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮ ಸೊಸೆ, ಮಗನ ಮದುವೆ, ಸಂಬಂಧಗಳ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದರು. ಅವರು ಏನ್ ಹೇಳಿದ್ರು ನೋಡೋಣ.
ಚಿತ್ಕಳಾ ಬಿರಾದಾರ್ ಅವರ ಮಗ ಸೌರಭ್, ಇವರ ಮದ್ವೆ ಆಗಿ ಈಗಾಗಲೇ ಒಂದು ವರ್ಷ ಆಗ್ತಾ ಬಂದಿದೆ. ಇವರ ಪತ್ನಿ ದೇವಾಂಶಿ ಜಾರ್ಖಂಡ್ ಮೂಲದವರು. ಸೊಸೆಯನ್ನು ಮಗಳಂತೆ ನೋಡುವ ಚಿತ್ಕಳಾ, ಅಂತರ್ ರಾಜ್ಯ ಮದುವೆ, ಲವ್ ಮ್ಯಾರೇಜ್, ಮಕ್ಕಳ ಆಸೆ, ಆಕಾಂಕ್ಷೆಗಳ್ ಬಗ್ಗೆ ತುಂಬಾನೆ ಹೇಳಿದ್ದಾರೆ. ಇವರು ಹೇಳಿರೋದನ್ನ ಈಗಿನ ಕಾಲದ ಜನರು ಪಾಲಿಸಿದ್ದೆ ಆದ್ರೆ, ಮನೆಯಲ್ಲಿ ಅತ್ತೆ ಸೊಸೆ ಜಗಳ, ಮನೆಯವರ ಒಪ್ಪಿಗೆ ಸಿಗದೇ ಓಡಿ ಹೋಗಿ ಮದ್ವೆ ಆಗೋ ಸಂದರ್ಭಾನೆ ಬರೋದಿಲ್ಲ.
ಮಗ ತಾನೊಬ್ಬ ಹುಡುಗೀನ ನೋಡಿದಿನಿ, ಎರಡು ಮೂರು ತಿಂಗಳು ಕೊಡಿ ಡಿಸೈಡ್ ಮಾಡಿ ಹೇಳ್ತಿನಿ ಎಂದು ಹೇಳಿದಾಗ, ಮೊದಲಿಗೆ ಚಿತ್ಕಳಾ ಕೂಡ ಒಪ್ಪಿಕೊಂಡಿರಲಿಲ್ವಂತೆ, ಆ ಟೈಮಲ್ಲಿ ಊರ ಕಡೆಯಿಂದನೂ ತುಂಬಾ ಮದ್ವೆ ಪ್ರೊಪೋಸಲ್ ಬರ್ತಿದ್ದವಂತೆ, ಹಾಗಾಗಿ ಮಗನಿಗೆ ಆ ಹುಡುಗಿನ ನೋಡು, ಅದ್ರ ಜೊತೆಗೆ ನಾವು ಕಳಿಸಿರೋ ಪ್ರೊಪೋಸಲ್ (proposal) ನೋಡಿ, ನಿಂಗೆ ಇಷ್ಟ ಆಗಿದ್ದನ್ನು ಆಗಬಹುದು ಎಂದಿದ್ರಂತೆ. ಆದ್ರೆ ಮಗ ಮಾತ್ರ ಆ ಹುಡುಗಿಯ ಜೊತೆ ಮಾತು ಕತೆ ನಡೆಸಿ ಡಿಸೈಡ್ ಮಾಡೊದಾಗಿ ಹೇಳಿದ್ರಂತೆ.
ಮೊದಲಿಗೆ ಮಗ ಆಯ್ಕೆ ಮಾಡಿದ ಹುಡುಗಿ ಹೇಗಿರ್ತಾಳೆ, ಅವಳ ಫ್ಯಾಮಿಲಿ ಹೇಗಿರತ್ತೋ ಏನೊ ಎಂಬ ಭಯ ಇತ್ತಂತೆ. ಆದ್ರೆ ಈಗ ನಾವೇ ಹುಡುಕಿದ್ರೂ ಇಷ್ಟು ಒಳ್ಳೆ ಹುಡುಗೀನ ಹುಡುಕೋದಕ್ಕೆ ಸಾಧ್ಯ ಇಲ್ಲವಾಗಿತ್ತು ಅನಿಸುತ್ತೆ ಅಂತೆ, ಅಷ್ಟೇ ಅಲ್ಲ ಹುಡುಗಿ ತುಂಬು ಕುಟುಂಬದಲ್ಲಿ ಬೆಳೆದಿದ್ದು, ಫ್ಯಾಮಿಲಿ ಕೂಡ ತುಂಬಾ ಚೆನ್ನಾಗಿದೆ. ಮದುವೆಯಾದ ಸಮಯದಲ್ಲಿ ಮಗ ಸೊಸೆ ಜೊತೆ ಸಮಯ ಕಳೆಯೋದಕ್ಕೆ ಸಾಧ್ಯ ಆಗಿಲ್ಲ. ಈವಾಗ ಅವರ ಜೊತೆ ಇದ್ದು ಬಂದೆ, ತುಂಬಾನೆ ಖುಷಿ ಇದೆ ಎಂದಿದ್ದಾರೆ ಚಿತ್ಕಳಾ.
ನಮ್ಮ ಫ್ಯಾಮಿಲಿಯಲ್ಲಿ ಇಂಟರ್ ಕಾಸ್ಟ್, ಇಂಟರ್ ರಿಲಿಜಿಯನ್ ಮದ್ವೆಗಳೆಲ್ಲಾ ಆಗಿದೆ. ಹಾಗಾಗಿ ಅದ್ಯಾವುದು ನಂಗೆ ಸಮಸ್ಯೆ ಆಗಿಯೇ ಇಲ್ಲ. ಸಂಬಂಧವನ್ನು ಹೊಂದಿಸಿಕೊಂಡು ಹೋಗೋದು ಮುಖ್ಯ. ಜಾಯಿಂಟ್ ಫ್ಯಾಮಿಲಿಯಲ್ಲಿ (joint family) ಬೆಳೆದೋರಿಗೆ ಅಂತಹ ಗುಣ ಇರುತ್ತೆ. ಅದು ನನ್ನ ಸೊಸೆಯಲ್ಲಿದೆ ಎಂದಿದ್ದಾರೆ ಚಿತ್ಕಳಾ.
ಇಂಟರ್ ಸ್ಟೇಟ್ ಮ್ಯಾರೇಜ್ ಬಗ್ಗೆ ಮಾತನಾಡಿದ ಚಿತ್ಕಳಾ ಬಿರಾದಾರ್ ಯಾವಾಗ ಒಬ್ರಲ್ಲಿ ಇದು ನಮ್ಮ ಮನೆ, ಇವ್ರು ನನ್ನೋರು ಅಂತ ಮನಸಿಗೆ ಬರುತ್ತೋ, ಆವಾಗಾ ಆಚಾರ, ವಿಚಾರ, ಸಂಸ್ಕೃತಿ ಯಾವುದೂ ಅಡ್ಡ ಬರೋದಿಲ್ಲ. ಅದೆಲ್ಲಾ ಬೇಕು, ನಾವು ಮದ್ವೆಯನ್ನೂ ಸಂಪ್ರದಾಯ ಬದ್ಧವಾಗಿಯೇ ಮಾಡ್ಸಿದ್ದೀವಿ, ಆದ್ರೆ ಅದು ಮಾಡ್ಸೋದು ನಮ್ಮ ಸಮಾಧಾನಕ್ಕೆ, ಅವರು ನೆಮ್ಮದಿಯಾಗಿರೋದಕ್ಕೆ. ಅದ್ರೆ ಅವರಿಬ್ಬರು ಜೊತೆಯಾಗಿ ದಿನನಿತ್ಯದ ಜೀವನ ಹೇಗೆ ಸಾಗಿಸ್ತಾರೆ ಅನ್ನೋದು ಮುಖ್ಯ ಎನ್ನುತ್ತಾರೆ ಕನ್ನಡತಿಯ ನಟಿ.
ನಮ್ಮ ಅಪ್ಪ-ಅಮ್ಮ ಬೆಳೆದು ಬಂದಿರೊ ರೀತಿಗೂ, ನಾವು ಬೆಳೆದು ಬಂದಿರೋ ರೀತಿಗೂ, ನಮ್ಮ ಮಕ್ಕಳ ಜನರೇಶನ್ ಗೂ ತುಂಬಾನೆ ವ್ಯತ್ಯಾಸ ಇದೆ. ನಾವು ಗಂಡನಿಗೆ ಬೇಕಾದ್ದನ್ನೆಲ್ಲಾ ಕೈಗೆ ತಂದು ಕೊಡ್ತಿವಿ. ಆದ್ರೆ ಈಗಿನ ಜನರೇಶನ್ ಜೊತೆಯಾಗಿ ಕೂಡಿ ಮಾಡೊದನ್ನು ಇಷ್ಟಪಡ್ತಾರೆ, ಅದರಲ್ಲೂ ಅಮೇರಿಕಾದಲ್ಲಿ ಇಬ್ಬರು ಜೊತೆಯಾಗಿ ಮನೆ ಕೆಲಸ ಮಾಡಿದ್ರೇನೆ ಜೀವನ ನಡೆಸೋಕೆ ಆಗೋದು, ನನ್ನ ಮಗ ಮತ್ತು ಸೊಸೆ ಜೊತೆಯಾಗಿ ಸೇರಿ ಮನೆ ಕೆಲಸ ಮಾಡೋವಾಗ ಖುಷಿಯಾಗುತ್ತೆ, ಹಾಗೆಯೇ ಇರಬೇಕು. ಜನರೇಶನ್ ಟು ಜನರೇಶನ್ ನಾವು ಅಪ್ ಡೇಟ್ ಆಗದೇ ಹೋದರೆ ಬಿರುಕು ಬಿಡೋದು ಗ್ಯಾರಂಟಿ ಎಂದಿದ್ದಾರೆ ಅಮ್ಮಮ್ಮ.
ಇನ್ನು ಚಿತ್ಕಳಾ ಬಿರಾದಾರ್ ಅವರ ಸೊಸೆಯ ಮನೆ ಕಡೆ ಮದುವೆಯಲ್ಲಿ ಮಾಂಗಲ್ಯಧಾರಣೆ ಇಲ್ಲವಂತೆ, ಅವರಿಗೆ ಸಿಂಧೂರ ಮುಖ್ಯ, ನಮ್ಮಲ್ಲಿ ಮಾಂಗಲ್ಯ ಮುಖ್ಯ ಹಾಗಾಗಿ ಎರಡು ಕಡೆಯವರು ಕೂತು, ಯಾವ ರೀತಿ ಮದುವೆ ಮಾಡಬೇಕು ಅನ್ನೋದನ್ನ ಯೋಚನೆ ಮಾಡಿ, ಎರಡೂ ಸಂಪ್ರದಾಯವನ್ನೂ ಸೇರಿಸಿ ಮದ್ವೆ ಮಾಡಿರೋದಾಗಿ ಹೇಳಿರುವ ಚಿತ್ಕಳಾ, ಸಂಸಾರ ಚೆನ್ನಾಗಿರಲು ಮುಖ್ಯವಾಗಿ ಬೇಕಾದುದು, ಗೌರವ, ಅರ್ಥಮಾಡಿಕೊಳ್ಳುವ ಮನೋಭಾವ, ಮತ್ತು ಎಲ್ಲರ ಮೇಲಿನ ಪ್ರೀತಿ ಎಂದಿದ್ದಾರೆ.