ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕಾಂಟ್ರವರ್ಸಿಗೆ ಒಳಗಾಗಿ, ಅತಿ ಹೆಚ್ಚು ಟ್ರೋಲ್ ಆದ ಧಾರಾವಾಹಿ ಅಂದ್ರೆ ಅದು ಶ್ರೀರಸ್ತು ಶುಭಮಸ್ತು (Srirastu Subhamastu). ಕಾರಣ ಏನು ಅನ್ನೋದು ನಿಮಗೂ ಗೊತ್ತಿರಬಹುದು. ಮದುವೆಯಾಗಿರುವ ನಾಲ್ಕು ಮಕ್ಕಳ ಪೋಷಕರಾಗಿರುವ ತುಳಸಿ -ಮಾಧವ ಇದೀಗ ಮತ್ತೆ ತಂದೆ-ತಾಯಿ ಆಗ್ತಿರೋದು.
50 ವಯಸ್ಸಿನ ನಂತರ ಅದರಲ್ಲೂ, ಮದುವೆಯಾಗಿರುವ ನಾಲ್ಕು ಜನ ಮಕ್ಕಳಿದ್ದು, ಅವರಿಗೆ ಮಕ್ಕಳಾಗದೇ ಇರುವಂತಹ ಸಮಯದಲ್ಲಿ ತುಳಸಿ ಗರ್ಭಿಣಿಯಾಗಿರೋದನ್ನ ಜನರಿಗೆ ಸಹಿಸಿಕೊಳ್ಳೋದಕ್ಕೆ ಇಷ್ಟ ಆಗಿಲ್ಲ. ಇದೆಂತಹ ಕೀಳು ಮಟ್ಟದ ಧಾರಾವಾಹಿ, ಇದರಿಂದ ಜನರಿಗೆ ಏನು ಸಂದೇಶ ಕೊಡ್ತೀರಿ, ಸೀರಿಯಲ್ ನೋಡೋದಕ್ಕೆ ಅಸಹ್ಯ ಆಗ್ತಿದೆ, ಇದು ಒಂದು ಕಥೆನಾ ಎಂದು ವೀಕ್ಷಕರು ಸಾಕಷ್ಟು ಟೀಕಿಸಿದ್ದರು.
ಅಷ್ಟೇ ಅಲ್ಲ ತುಳಸಿ ಪಾತ್ರ ನಿರ್ವಹಿಸುತ್ತಿರುವ ನಟಿ ಸುಧಾರಾಣಿಯವರ ವಿರುದ್ಧವೂ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಈ ರೀತಿ ಪಾತ್ರ ಮಾಡೋದಕ್ಕೆ ನಾಚಿಕೆ ಆಗಲ್ವಾ? ನಿಮ್ಮ ಮೇಲಿನ ಗೌರವ ಕಡಿಮೆ ಆಯ್ತು, ನೀವು ಇದಕ್ಕೆಲ್ಲಾ ಒಪ್ಕೊತ್ತೀರಿ ಅನ್ನೋದನ್ನ ಯೋಚ್ನೆ ಮಾಡೋದಕ್ಕೂ ಆಗ್ತಿಲ್ಲ ಅಂತೆಲ್ಲಾ ಕಾಮೆಂಟ್ ಮಾಡುವ ಮೂಲಕ ಸೀರಿಯಲ್ ವಿರುದ್ಧವೇ ಕಿಡಿ ಕಾರಿದ್ದರು ಜನ.
ಇದಾದ ನಂತರ ಧಾರಾವಾಹಿಯಲ್ಲಿ ವೈದ್ಯರು ತುಳಸಿ ಮಗುವನ್ನ ತೆಗೆಸಬೇಕು, ಇಲ್ಲಾಂದ್ರೆ ಅಪಾಯ ಉಂಟಾಗುತ್ತೆ ಅಂತ ಹೇಳಿದ್ರು. ಆವಾಗ ವೀಕ್ಷಕರು, ಈವಾಗ್ಲಾದ್ರೂ ನಿರ್ದೇಶಕರಿಗೆ ಬುದ್ದಿ ಬಂತು, ಅಂತೂ ಕಥೆಯನ್ನು ಬದಲಾಯಿಸಿದ್ರು ಎಂದು ಹೇಳಿದ್ದರು ಜನರು. ಆದರೆ ಇದೀಗ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದು, ತುಳಸಿ ಮಗುವನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡಿದ್ದು, ಪೂರ್ಣಿಗೋಸ್ಕರನಾದ್ರೂ ತನ್ನ ಜೀವ ಹೋದ್ರೂ ಸರಿ ಮಗುವನ್ನ ಉಳಿಸಿಕೊಳ್ಳುವೆ ಎಂದು ಪಣ ತೊಟ್ಟಿದ್ದಾರೆ ತುಳಸಿ.
ಕಥೆಯಲ್ಲೂ ಕೂಡ ವಯಸ್ಸಾದ ಬಳಿಕ ಮಗುವಾಗುವ ಬಗ್ಗೆ ಮಾಹಿತಿ ನೀಡಿದ್ದು, ಆ ಮೂಲಕ ಟೀಕೆ ಮಾಡುತ್ತಿದ್ದ ವೀಕ್ಷಕರಿಗೆ ನಿರ್ದೇಶಕರು ನೇರವಾಗಿ ತಿರುಗೇಟು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಮೆಸೇಜ್ ಕೂಡ ನೀಡಿದ್ದಾರೆ. ನಮ್ಮ ಸಮಾಜದಲ್ಲಿ ಇಂತಹ ವಯಸ್ಸಲ್ಲಿ ಮಕ್ಕಳಾಗಬೇಕು ಎನ್ನುವ ಕಟ್ಟಳೆಗಳೇನು ಇಲ್ಲ, ಆಚಾರಗಳೂ ಇಲ್ಲ, ಒಂದು ಮಗುವಿಗೆ ಜನ್ಮ ನೀಡೋದು ಅಂದ್ರೆ ಅದು ದೈವದತ್ತವಾದ ಕ್ರಿಯೆ ಅದನ್ನ ಸಮಾಜ ಸ್ವೀಕರಿಸಬೇಕು ಎಂದು ವೈದ್ಯರು ತುಳಸಿಗೆ ಹೇಳ್ತಿದ್ದಾರೆ.
ಜೊತೆಗೆ ವಯಸ್ಸಲ್ಲದ ವಯಸ್ಸಲ್ಲಿ ಮಗುವಿಗೆ ಜನ್ಮ ನೀಡಿರುವ ಮಹಿಳೆಯರ ಬಗ್ಗೆಯೂ ಉದಾಹರಣೆ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ತನ್ನ ಸೊಸೆ ಗರ್ಭಿಣಿಯಾಗೋದಕ್ಕೆ ಸಾಧ್ಯ ಇಲ್ಲ ಅಂತ ಗೊತ್ತಾದಾಗ, ಅತ್ತೆಯೇ ಸೊಸೆಗಾಗಿ ಮಗುವನ್ನು ಪಡೆದ ಘಟನೆ ನಡೆದಿದೆ. ಅಷ್ಟೇ ಅಲ್ಲ 2019ರಲ್ಲಿ ಹೈದರಾಬಾದಿನಲ್ಲಿ ಇರಮಟ್ಟಿ ಮಂಗಮ್ಮ ಅನ್ನುವವರು ತಮ್ಮ 74ನೇ ವಯಸ್ಸಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ರು, ಆ ಮಕ್ಕಳು ಕೂಡ ಆರೋಗ್ಯವಾಗಿದ್ದಾರೆ. ಇದೆಲ್ಲಾ ಆಗೋದು ಅಪರೂಪ, ಅಂತಹ ಅಪರೂಪದ ಘಟನೆಯೇ ನಿಮ್ಮ ಜೀವನದಲ್ಲೂ ನಡೆದದ್ದು, ಅದಕ್ಕಾಗಿ ಪಶ್ಚಾತ್ತಾಪ ಪಡುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ವೈದ್ಯೆ. ಆ ಮೂಲಕ ನಿರ್ದೇಶಕರು ತುಳಸಿ ಗರ್ಭಿಣಿಯಾಗೋದ್ರಲ್ಲಿ ಯಾವ ತಪ್ಪು ಇಲ್ಲ ಎನ್ನುವ ಸಂದೇಶವನ್ನು ಜನರಿಗೆ ನೀಡಿದ್ದಾರೆ.
ಇದನ್ನ ನೋಡಿ, ಇಲ್ಲಿವರೆಗೆ ಟೀಕೆ ಮಾಡುತ್ತಿದ್ದ ಜನರು ಕೂಡ ತುಳಸಿ ಮಗು ಪಡೆಯೋದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಒಂದು ರೀತಿ ಇಂದ ನೊಡೊದಾದ್ರೆ ಸಮಾಜಕ್ಜೆ ಒಳ್ಳೆಯ ಸಂದೇಶ ಕೊಡ್ತಾ ಇದೆ. ಎಷ್ಟೋ ಜನರಿಗೆ ಮದುವೆ ಆಗಿ ಎಷ್ಟೋ ವರ್ಷಗಳು ಮಕ್ಕಳು ಇರೋದಿಲ್ಲ, ಆಮೇಲೆ ಮಕ್ಕಳು ಆಗಿದ್ದು ಇದೆ ಇವರಿಗೂ ಆಗ್ಲಿ ಬಿಡಿ ಅಂತಾನೂ ಹೇಳಿದ್ದಾರೆ ಕೆಲವರು. ನಿಮ್ಮಂತ ಅಮ್ಮ ಮತ್ತೆ ನಿಮ್ಮಂತ ಅತ್ತೆ ನ ಪಡಿಯೋಕೆ ಆ ಮಗ ಸೊಸೆ ತುಂಬಾ ಪುಣ್ಯ ಮಾಡಿದರೆ ತುಳಸಿ ಅಮ್ಮ ಅಂತಾನೂ ಹಾರೈಸಿದ್ದಾರೆ ಜನ.