ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿ ಮಾಡುತ್ತಲೇ ಇರುತ್ತದೆ. ಜಯಂತ್ ಪಾತ್ರದಿಂದ ಒಂದು ಸಲ, ಸಿದ್ಧೇಗೌಡ್ರು - ಭಾವನಾ ಜೋಡಿ ಬಗ್ಗೆ ಇನ್ನೊಂದ್ಸಲ ಹೀಗೆ ಸೀರಿಯಲ್ ಪ್ರಿಯರ ಬಾಯಲ್ಲಿ ಸದಾ ಲಕ್ಷ್ಮೀ ನಿವಾಸದ್ದೆ ಸುದ್ದಿ.
ಇದೀಗ ವೆಂಕಿ ಪಾತ್ರದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಕ್ಷ್ಮಿಯ ಸಾಕು ಮಗನಾಗಿದ್ದರೂ ಸಹ, ಲಕ್ಷ್ಮೀ ನಿವಾಸದ ಮನೆಮಗನಾಗಿ, ಮನೆಯವರ ಖುಷಿಗಾಗಿ ಜೀವಸವೆಯುವ, ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಲು, ದಿನಸಿ ಅಂಗಡಿಯಲ್ಲಿ ಕೆಲಸ ಮಾಡುವ ಮೂಗ ವೆಂಕಿಯಾಗಿ ಶಾಸ್ತ್ರಿ (Shastry) ನಟಿಸುತ್ತಿದ್ದಾರೆ.
ಶಾಸ್ತ್ರೀ ಈ ಹಿಂದೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ನಮ್ಮ ಲಚ್ಚಿ (Namma Lacchi), ಉಘೇ ಉಘೇ ಮಾದೇಶ್ವರ, ದಾಸ ಪುರಂದರ ಸೀರಿಯಲ್ ಗಳಲ್ಲಿ ಬಣ್ಣ ಹಚ್ಚಿದ್ದ ಶಾಸ್ತ್ರೀ ರಂಗಭೂಮಿ ಕಲಾವಿದರೂ ಹೌದು, ಸದ್ಯ ಸೀರಿಯಲ್ ಗಳಲ್ಲಿ ಕೊಟ್ಟ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸುತ್ತಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದೀಗ ಶಾಸ್ತ್ರೀ ವೆಂಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಜಯಂತ್ ಜೀವನದ ಕಥೆಯನ್ನು ತೆರೆದಿಡುವಂತಹ ಪಾತ್ರವಾಗಿದೆ. ವೆಂಕಿ ಮೂಗನಾಗಿ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಇವರ ಪಾತ್ರಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.
ನಿನ್ನೆಯ ಎಪಿಸೋಡ್ ನಲ್ಲಿ ಜಾಹ್ನವಿಯ ಮನೆಯಲ್ಲಿರುವ ವೆಂಕಿ, ತನ್ನ ಮುದ್ದಿನ ತಂಗಿ ಜಾನುಗೆ ತನ್ನ ಪ್ರೀತಿಯ ವಿಚಾರವನ್ನು ತಿಳಿಸಿದ್ದಾರೆ. ಇವರಿಬ್ಬರ ಸಂಭಾಷಣೆ, ವೆಂಕಿಯ ಅಭಿನಯ ನೋಡಿ, ಜನರು ಭೇಷ್ ಅಂದಿದ್ದಾರೆ, ನಿಜವಾಗಿಯೂ ಮೂಗನೇ ನಟಿಸುತ್ತಿದ್ದಾನೆ ಏನೋ ಎನ್ನುವಂತ ರೀತಿಯಲ್ಲಿ ಪಾತ್ರದಲ್ಲಿ ಮುಳುಗಿ ಹೋಗಿದ್ದಾರೆ ವೆಂಕಿ.
ವೆಂಕಿ ಅಭಿನಯ ನೋಡಿದ ಜನರು ವೆಂಕಿ ನಿಮ್ಮ ಆಕ್ಟಿಂಗ್ ಮಾತ್ರ ಬೆಂಕಿ, ಅಣ್ಣ ಏನ್ ನಟನೆ. ಅಣ್ಣ ನನ್ ಮುದ್ದು ಅಣ್ಣಾ. ನಮ್ ಈ ಧಾರವಾಹಿನ ಯಾರ್ ನೋಡ್ತಾರೋ ಎಲ್ಲರೂ ನಿಮ್ ಫ್ಯಾನ್ ಆಗೋದ್ರಲ್ಲಿ ಡೌಟ್ ಇಲ್ಲ ಅಣ್ಣ. ನಿಮ್ಮ ನಟನೆ ಎಕ್ಸಲೆಂಟ್, ಈ ಸೀರಿಯಲ್ ನ ನಿಜವಾದ ಹೀರೋ ನೀವೆ ಅಂದಿದ್ದಾರೆ.
ಮತ್ತೊಬ್ಬರು ನಿಮ್ಮ ಆಕ್ಟಿಂಗ್ ಹೇಗೆ ಇದೆ ಗೊತ್ತಾ? ಲಕ್ಷ್ಮೀ ನಿವಾಸದ ಆ ಮುಗ್ಧ, ಹೃದಯವಂತ ವ್ಯಕ್ತಿಯಾಗಿ ನಿಮ್ಮ ನಟನೆಗೆ ನಾವು ಫಿದಾ ಆಗಿದ್ದೀವಿ. ನಿಮ್ಮ ನಟನೆ ನೋಡಿ ಕಣ್ಣಲ್ಲಿ ನೀರು ಬರುತ್ತೆ. ಎಷ್ಟೊಂದು ಚೆನ್ನಾಗಿ ನಟನೆ ಮಾಡ್ತೀರಿ ನೀವು. ಎಲ್ಲವೂ ಒಳ್ಳೆಯದಾಗ್ಲಿ ನಿಮಗೆ ಎಂದು ಹಾರೈಸಿದ್ದಾರೆ.