ಪ್ರಕೃತಿ ಮಡಿಲಲ್ಲಿ ಕಳೆದು ಹೋದ ವಿಕ್ರಮ್ ವೇದಾ! ಯಾವುದೀ ಅದ್ಭುತ ತಾಣ?

First Published | Nov 8, 2023, 5:28 PM IST

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನೀನಾದೆ ನಾ ಸೀರಿಯಲ್ ನಲ್ಲಿ ಸದ್ಯ ವಿಕ್ರಮ್ ಮತ್ತು ವೇದಾ ಕಾಡಿನ ಮಧ್ಯೆ ಸಿಕ್ಕಾಕಿ ಕೊಂಡಿದ್ದಾರೆ. ಪ್ರಕೃತಿಯ ಸೌಂದರ್ಯಕ್ಕೆ ಅವರಿಬ್ಬರು ಮನಸೋತಂತೆ ವೀಕ್ಷಕರು ಮನ ಸೋತಿದ್ದಾರೆ. ಹಾಗಿದ್ರೆ ಈ ಸ್ಥಳ ಯಾವುವು ನೋಡೋಣ. 
 

ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಮೇಶ್ ಅರವಿಂದ್ ನಿರ್ಮಾಣದ ಜನಪ್ರಿಯ ಧಾರಾವಾಹಿ ನೀನಾದೆ ನಾ. ಇಲ್ಲಿವರೆಗೆ ಈ ಸೀರಿಯಲ್ ಸಾಕಷ್ಟು ಜನಪ್ರಿಯತೆ ಗಳಿಸಿದೆ. ವಿಭಿನ್ನ ಕಥೆಯ ಮೂಲಕ ಜನ ಮನ ಗೆಲ್ಲುವಲ್ಲೂ ಯಶಸ್ವಿಯಾಗಿದೆ. 
 

ಈ ಸೀರಿಯಲ್ ನಾಯಕ-ನಾಯಕಿಯಾಗಿರುವ ವಿಕ್ರಮ್ ಮತ್ತು ವೇದಾ ಜೋಡಿಯೂ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದಾರೆ. ಇಬ್ಬರ ಕೋಳಿ ಜಗಳ, ಸಿಟ್ಟು, ಪ್ರೀತಿ, ಎಲ್ಲವೂ ಜನರಿಗೆ ಇಷ್ಟವಾಗಿದೆ. ಗುಂಡ ಮತ್ತು ಬೇತಾಳ ಜೋಡಿಗೆ ಕನ್ನಡಿಗರು ಫಿದಾ ಆಗಿದ್ದಾರೆ. 
 

Tap to resize

ಸದ್ಯ ವಿಕ್ರಮ್ ಮತ್ತು ವೇದಾ ರೌಡಿಗಳ ಕೈಗೆ ಸಿಕ್ಕಾಕಿಕೊಂಡು ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾಡಿನಲ್ಲಿ ಸಿಕ್ಕಿ ಹೊರ ಬರಲು ದಾರಿ ಕಾಣದೆ ಹಲವು ಸಂಕಷ್ಟಗಳನ್ನು ಎದುರಿಸುತ್ತಾ, ದಾರಿ ಹುಡುಕುತ್ತಾ ಸಾಗುತ್ತಿದ್ದಾರೆ. 
 

ಕಳೆದ ಕೆಲವು ದಿನಗಳಿಂದ ಸೀರಿಯಲ್ ಪೂರ್ತಿಯಾಗಿ ಕಾಡು, ಬೆಟ್ಟ, ಹರಿಯುವ ನದಿ ಹಸಿರ ಸಿರಿಯ ನಡುವೆ ಹರಿಯುವ ಜಲಧಾರೆಯನ್ನೆ ಅದ್ಭುತವಾಗಿ ತೋರಿಸುತ್ತಿದ್ದಾರೆ. ಪ್ರಕೃತಿ ಸೌಂದರ್ಯಕ್ಕೆ ವೇದಾ -ವಿಕ್ರಮ್ ಜೊತೆಗೆ ಅದನ್ನು ನೋಡುತ್ತಿರುವ ಪ್ರೇಕ್ಷಕರು ಸಹ ಮನಸೋತಿದ್ದಾರೆ. 
 

ಈ ಸುಂದರವಾದ ತಾಣ ಹೊರನಾಡು, ಕಳಸ. ಈ ಪ್ರದೇಶದಲ್ಲೇ ಸದ್ಯ ಶೂಟಿಂಗ್ ನಡೆಯುತ್ತಿದೆ, ಎಂದು ಸ್ಟಾರ್ ಸುವರ್ಣ ಏಷ್ಯಾನೆಟ್ ಸುವರ್ಣಗೆ ಮಾಹಿತಿ ನೀಡಿದೆ. ಮಲೆನಾಡು ಪ್ರದೇಶವಾದ ಕಳಸ ಹೊರನಾಡು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರದೇಶ.
 

ವೇದಾ ಮತ್ತು ವಿಕ್ರಮ್ ಕಾಡಿನಲ್ಲಿ ಅಲೆಯುತ್ತಿರುವ ತಾಣ ಆ ಬೆಟ್ಟ ಎಲ್ಲವೂ ಮೈದಾಡಿ ವ್ಯೂ ಪಾಯಿಂಟ್ (Maidadi View Point). ಬೆಟ್ಟ ಗುಡ್ಡ, ಹಸಿರು ವನ ಸಿರಿಗಳಿಂದ ತುಂಬಿದ ಈ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರೇ ಕಾಣಿಸುತ್ತೆ. ಚಳಿಗಾಲದಲ್ಲಿ ಟ್ರೆಕ್ ಮಾಡುವವರಿಗೆ ಈ ತಾಣ ಬೆಸ್ಟ್. 
 

ಇನ್ನು ವಿಕ್ರಮ್ ವೇದಾ ಹರಿಯುವ ನದಿಯ ಮಧ್ಯೆ ಕಲ್ಲು ಬಂಡೆಯ ಮೇಲೆ ಕುಳಿತು ಹಲ್ಲುಜ್ಜುತ್ತಾ, ಹಣ್ಣು ತಿನ್ನುತ್ತಾ ಮುಂದೆ ಎಲ್ಲೋಗೋದು ಎಂದು ಯೋಚಿಸುತ್ತಿರುತ್ತಾರೆ ಅಲ್ವಾ? ಆ ಜಾಗ ಅಂಬಾ ತೀರ್ಥ. 
 

ಹೊರನಾಡು ಕ್ಷೇತ್ರದಲ್ಲಿ ಸುಮಾರು 3 ಕಿಮೀ ದೂರದಲ್ಲಿರುವ ಕಳಸದಲ್ಲಿ ಈ ಅಂಬಾ ತೀರ್ಥ ಇದೆ. ಸಹ್ಯಾದ್ರಿ ಬೆಟ್ಟಗಳ ನಡುವೆ ಹರಿಯುವ ಭದ್ರಾ ನದಿ ಮುಂದೆ ಹರಿದು ಅಂಬಾ ತೀರ್ಥವಾಗಿ ಈ ಕಲ್ಲು ಬಂಡೆಗಳ ನಡುವೆ ಹರಿಯುತ್ತಾಳೆ. 
 

ನೀವು ಈ ಬಾರಿ ಚಳಿಗಾಲವನ್ನು ಎಂಜಾಯ್ ಮಾಡಲು ಚಿಕ್ಕಮಗಳೂರು ಕಡೆಗೆ ಹೋಗೋದಾದ್ರೆ ಕಳಸಕ್ಕೆ ಭೇಟಿ ನೀಡಲು ಮರೆಯಬೇಡಿ. ಜೊತೆಗೆ ವಿಕ್ರಮ್ ವೇದಾ ಓಡಾಡಿದ ಈ ಸುಂದರ ಪ್ರಕೃತಿಯ ಸೌಂದರ್ಯವನ್ನಂತು ಮಿಸ್ ಮಾಡದೇ ನೋಡಿ ಬನ್ನಿ. 
 

Latest Videos

click me!