ಶ್ರೀರಸ್ತು ಶುಭಮಸ್ತು (Srirastu Shubhamastu serial) ಸೀರಿಯಲ್ ತನ್ನ ವಿಭಿನ್ನ ಕಥೆಯ ಮೂಲಕವೇ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ಅದ್ಭುತವಾಗಿ ಅಭಿನಯಿಸುವ ಮೂಲಕ ಜನಮನ ಗೆದಿದ್ದೆ, ಅದರಲ್ಲೂ ದತ್ತ ತಾತ ಅಂದ್ರೆ ವೀಕ್ಷಕರ ಫೇವರಿಟ್ ಅಂತಾನೆ ಹೇಳಬಹುದು.
ತುಳಸಿಯ ಮಾವ ದತ್ತನ ಪಾತ್ರದಲ್ಲಿ ನಟಿಸುತ್ತಿರುವ ಹಿರಿಯ ನಟ ವೆಂಕಟ್ ರಾವ್. ಇವರು ತಮ್ಮ ಮಾತು, ಅಭಿನಯದಿಂದಲೇ ವೀಕ್ಷಕರ ಮನ ಗೆದ್ದಿದ್ದಾರೆ. ದತ್ತ ತಾತನ ಪಂಚಿಂಗ್ ಡೈಲಾಗ್, ನಟನೆಗಾಗಿಯೇ ಸೀರಿಯಲ್ ನೋಡುವವರೂ ಇದ್ದಾರೆ. ಅಷ್ಟೊಂದು ಮೋಡಿ ಮಾಡುವ ಕ್ಯಾರೆಕ್ಟರ್ ದತ್ತ ತಾತನದ್ದು.
ಸೊಸೆ ತುಳಸಿಯನ್ನು ಮಾಧವನ ಜೊತೆಗೆ ಮದುವೆ ಮಾಡಿಸುವ ಮೂಲಕ ಸೀರಿಯಲ್ ನ ಆದಾರ ಸ್ಥಂಭ ಆಗಿ ನಿಂತವರು ದತ್ತ. ಸೊಸೆಯನ್ನು ಮಗಳಂತೆ ಪ್ರೀತಿಸುವ, ಆಕೆಗೆ ಯಾವುದೇ ಸಮಸ್ಯೆ ಆಗದಂತೆ ಕಾಪಾಡುವ, ಆಕೆಗೆ ಜೀವನದಲ್ಲಿ ಏನು ಅಗತ್ಯ ಇದೆ ಅನ್ನೋದನ್ನು ತಿಳಿದು ನಡೆಸುವ ಮಾವ, ವಯಸ್ಸಿಗೆ ತಕ್ಕಂತೆ ಸ್ವಲ್ಪ ಘಾಟಿ ಆದರೂ ಸಹ ತಮ್ಮ ಪ್ರೀತಿ, ಸ್ನೇಹದ ಮೂಲಕ ಜನ ಮನಗೆದ್ದವರು.
ದತ್ತ ತಾತ ಮತ್ತಷ್ಟು ಇಷ್ಟವಾಗಿದ್ದು, ಅವರು ಪಾತ್ರಗಳಿಗೆ ಇಟ್ಟಂತಹ ಹೆಸರಿನಿಂದಲೇ. ಮೊಮ್ಮಗ ಸಮರ್ಥ್ ಗೆ ದಂಡಪಿಂಡ, ಅವನ ಹೆಂದತಿ ಸಿರಿಗೆ ಸೋಗಲಾಡಿ, ಮೊಮ್ಮಗಳು ಸಂಧ್ಯಾ ಓಡಿ ಹೋಗಿ ಮದುವೆಯಾಗಿರೋದ್ರಿಂದ ಆಕೆಗೆ ಓಡಿಹೋದೋಳೆ, ಅಭಿಗೆ ಉತ್ತರ ಕುಮಾರ, ಅವಿಗೆ ಮುಂಗೋಪಿ, ಇನ್ನು ಪೂರ್ಣಿಗೆ ಗಿರ್ ಗಿಟ್ಲೆ, ಮಾಧವನಿಗೆ ಚಪ್ಪಲ್ ಕಳ್ಳ ಹೀಗೆ ಹೆಸರಿಡೋ ಮೂಲಕ ಆ ಪಾತ್ರದ ನಿಜ ಹೆಸರುಗಳನ್ನೇ ಮರೆಸಿದಂತಹ ಪಾತ್ರ ಅಂದ್ರೆ ಅದು ದತ್ತ ತಾತನದ್ದು.
ಬೆಂಗಳೂರಿನಲ್ಲಿ ಪತ್ನಿಯೊಂದಿಗೆ ನೆಲೆಸಿರುವ ದತ್ತ ಆಲಿಯಾಸ್ ವೆಂಕಟ ರಾವ್ (Venkat Rao) ಇದೀಗ ಸೀರಿಯಲ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಯುಎಸ್ಎ ಗೆ ಟ್ರಾವೆಲ್ ಮಾಡಿದ್ದಾರೆ. ಅಲ್ಲಿ ವೆಂಕಟ ರಾವ್ ಮಗ -ಸೊಸೆ ಮೊಮ್ಮಕ್ಕಳು ನೆಲೆಸಿದ್ದಾರೆ. ಹಾಗಾಗಿ ವಿದೇಶಕ್ಕೆ ತೆರಳಿದ ಈ ಹಿರಿಯ ಕಲಾವಿದ ಶ್ರೀರಸ್ತು ಶುಭಮಸ್ತುವಿನ ಪ್ರೀತಿಯ ದತ್ತ ತಾತನಿಗೆ ಏರ್ ಇಂಡಿಯಾ ವಿಮಾನದ ಸಿಬ್ಬಂದಿಗಳು ಗೌರವ ಸಮರ್ಪಿಸಿದ್ದಾರೆ.
ಈ ಕುರಿತು ತುಳಸಿ ಪಾತ್ರಧಾರಿ ನಟಿ ಸುಧಾರಾಣಿಯವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವಿಡಿಯೋ ಪೋಸ್ಟ್ ಮಾಡಿ ‘ಕಲೆಯ ಒಂದು ಭಾಗವಾಗಿರುವ ಅಭಿನಯ ಪ್ರಪಂಚದ ವಿಭಾಗಗಳಾದ ರಂಗಭೂಮಿ, ಕಿರುತೆರೆ, ಬೆಳ್ಳಿತೆರೆ ಮೂರರಲ್ಲೂ ಹಲವಾರು ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿರುವ ಶ್ರೀ ವೆಂಕಟ್ ರಾವ್ ಅವರು ರಜೆಗಾಗಿ US ಗೆ ಪ್ರಯಾಣ ಮಾಡಿದ ಸಂದರ್ಭದಲ್ಲಿ ಏರ್ ಇಂಡಿಯಾ ಸಿಬ್ಬಂದಿಗಳು ಅವರನ್ನು ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ದತ್ತಣ್ಣ ಎಂದು ಗುರುತಿಸಿ, ವೆಂಕಟ್ ರಾವ್ ಅವರಿಗೆ ಗೌರವಾರ್ಪಣೆ ಸಲ್ಲಿಸಿರುವ ವಿಶೇಷ ಘಟನೆಯ ಬಗ್ಗೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಪ್ರತಿಯೊಬ್ಬ ಕಲಾವಿದರಿಗೂ ಜನರಿಂದ ಈ ಪರಿ ಅಂಗೀಕಾರ, ಪ್ರೀತಿ, ಕೀರ್ತಿ, ಯಶಸ್ಸು ಸಿಗುತ್ತಿರುವುದಕ್ಕೆ ಪ್ರಮುಖ ಕಾರಣ ತೆರೆ ಹಿಂದಿನ ನಾಯಕರಾದ ರಾಘವೇಂದ್ರ ಹುಣಸೂರು, ಜೀವಾಹಿನಿ ತಂಡ, ನಿರ್ಮಾಪಕ ಸುಬ್ರಹ್ಮಣ್ಯ ಮೂರ್ತಿನಾಥ್ ಹಾಗೂ ನಿರ್ದೇಶಕ ಸುದೇಶ್ ಕೆ ರಾವ್... ಇವರುಗಳಿಗೆ ಈ ಯಶಸ್ಸು ಸಲ್ಲಬೇಕು.. ಎಂದು ಸುಧಾರಾಣಿ ಬರೆದುಕೊಂಡಿದ್ದಾರೆ.
ಏರ್ ಇಂಡಿಯಾ (Air India) ಸಿಬ್ಬಂಧಿಗಳು ವೆಂಕಟ್ ರಾವ್ ಮತ್ತು ಅವರ ಪತ್ನಿಯನ್ನು ಜೊತೆಯಾಗಿ ನಿಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಹಿರಿಯ ನಟನಿಗೆ ಗೌರವ ಸಮರ್ಪಿಸಿದ್ದಾರೆ. ದತ್ತ ತಾತ ಕೇಕ್ ಕತ್ತರಿಸಿ, ಏರ್ ಇಂಡಿಯಾ ಸಿಬ್ಬಂಧಿ ಹಾಗೂ ಪತ್ನಿಗೆ ಕೇಕ್ ತಿನ್ನಿಸುವ ವಿಡಿಯೋ ವೈರಲ್ ಆಗಿದೆ.