ಶಿವಮೊಗ್ಗ ಕುದರೆಗಣಿ ಕೆರೆಯಲ್ಲಿ ಭರ್ಜರಿ ಕೆರೆಬೇಟೆ ಹಬ್ಬ! ಇದರ ಹಿಂದಿರೋ ಉದ್ದೇಶ ಮೀನು ಹಿಡಿಯೋದಲ್ಲ!

Published : May 25, 2026, 12:57 PM IST

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುದರೆಗಣಿ ಗ್ರಾಮದಲ್ಲಿ ಮಾರಿಕಾಂಬಾ ದೇವಸ್ಥಾನದ ನಿರ್ಮಾಣಕ್ಕಾಗಿ ವಿಶೇಷ 'ಕೆರೆಬೇಟೆ'ಯನ್ನು ಆಯೋಜಿಸಲಾಗಿತ್ತು. ಸಾವಿರಾರು ಜನರು ಈ ಸಾಂಪ್ರದಾಯಿಕ ಮೀನು ಹಿಡಿಯುವ ಹಬ್ಬದಲ್ಲಿ ಭಾಗವಹಿಸಿ, ಸವಾಲುಗಳ ನಡುವೆಯೂ ಬೃಹತ್ ಗಾತ್ರದ ಮೀನುಗಳನ್ನು ಹಿಡಿದು ಸಂಭ್ರಮಿಸಿದರು.

PREV
110
ಶಿವಮೊಗ್ಗದಲ್ಲಿ ಕೆರೆಬೇಟೆ ಸಿಕ್ಕಿದ್ದೆಲ್ಲವೂ ಸೀರುಂಡೆ

ಶಿವಮೊಗ್ಗ : ಮಲೆನಾಡಿನ ಸಾಂಪ್ರದಾಯಿಕ ಸೊಗಡನ್ನು ಬಿಂಬಿಸುವ ಅಪರೂಪದ 'ಕೆರೆಬೇಟೆ' (ಮೀನು ಹಿಡಿಯುವ ಹಬ್ಬ) ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ವೈಭವದಿಂದ ಜರುಗಿದೆ. ಜಿಲ್ಲೆಯ ಸೊರಬ ತಾಲೂಕಿನ ಕುದರೆಗಣಿ ಗ್ರಾಮದ ಊರಮುಂದಿನ ದೊಡ್ಡ ಕೆರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಾಂಪ್ರದಾಯಿಕ ಮೀನು ಬೇಟೆ ಹಬ್ಬದಲ್ಲಿ ಸಾವಿರಾರು ಜನರು ಭಾಗವಹಿಸಿ ಭರ್ಜರಿ ಬೇಟೆಯ ಸಂಭ್ರಮವನ್ನು ಸವಿದರು. ಈ ಬಾರಿ ಕೆರೆಬೇಟೆಗೆ ಹೋದವರು ಒಬ್ಬರು ಹೊತ್ತುಕೊಂಡು ಹೋಗಲಾಗದಷ್ಟು ಮೀನು ಹಿಡಿದುಕೊಂಡು ಹೋದರು.

210
ದೇವಸ್ಥಾನದ ಕಟ್ಟಡ ನಿರ್ಮಾಣಕ್ಕಾಗಿ ವಿಶೇಷ ಕೆರೆಬೇಟೆ

ಈ ಮೀನು ಬೇಟೆ ಕೇವಲ ಮನರಂಜನೆಗಾಗಿ ಮಾತ್ರ ನಡೆದಿರಲಿಲ್ಲ, ಇದರ ಹಿಂದೆ ಒಂದು ಪವಿತ್ರವಾದ ಉದ್ದೇಶವಿತ್ತು. ಕುದರೆಗಣಿ ಗ್ರಾಮದ ಅತ್ಯಂತ ಪ್ರಸಿದ್ಧ ಹಾಗೂ ಶ್ರದ್ಧಾಕೇಂದ್ರವಾಗಿರುವ ಮಾರಿಕಾಂಬಾ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ನಿಧಿ ಸಂಗ್ರಹಕ್ಕಾಗಿ ಈ ವಿಶೇಷ ಕೆರೆ ಬೇಟೆಯನ್ನು ಆಯೋಜಿಸಲಾಗಿತ್ತು.

310
ಮೀನು ಬೇಟೆಗೆ ಮುಕ್ತ ಅವಕಾಶ

ಈ ಹಿಂದೆ ಗ್ರಾಮಸ್ಥರು ಜಂಟಿಯಾಗಿ ಇದೇ ಕೆರೆಗೆ ಸುಮಾರು ಎರಡು ಲಕ್ಷ ಮೀನಿನ ಮರಿಗಳನ್ನು ಬಿಟ್ಟು ಪೋಷಿಸಿದ್ದರು. ಈಗ ಬೇಸಿಗೆಯ ಕಾಲವಾಗಿರುವುದರಿಂದ ಕೆರೆಯಲ್ಲಿ ಮೀನು ಬೇಟೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಈ ಮೂಲಕ ಸಂಗ್ರಹವಾದ ಹಣವನ್ನು ಸಂಪೂರ್ಣವಾಗಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಗ್ರಾಮ ಸಮಿತಿ ತೀರ್ಮಾನಿಸಿದೆ.

410
ಕೆರೆಯಲ್ಲಿ ನೀರಿದ್ದರೂ ಬೇಟೆಗಾರರಿಗೆ ಸವಾಲು!

ಪ್ರಸುತ್ತ ಬೇಸಿಗೆಯ ದಿನಗಳಾಗಿದ್ದರೂ, ಕುದರೆಗಣಿ ದೊಡ್ಡ ಕೆರೆಯಲ್ಲಿ ಈ ಬಾರಿ ಇನ್ನೂ ಅಧಿಕ ಪ್ರಮಾಣದಲ್ಲಿ ನೀರು ಉಳಿದುಕೊಂಡಿತ್ತು. ಆಳವಾದ ನೀರಿದ್ದ ಕಾರಣ ಬೇಟೆಗಾರರಿಗೆ ಕೆರೆಗೆ ಇಳಿದು ಮೀನುಗಳನ್ನು ಹುಡುಕಿ ಹಿಡಿಯುವುದು ದೊಡ್ಡ ಸವಾಲಿನ ಸಂಗತಿಯಾಗಿತ್ತು. ಆದಾಗ್ಯೂ, ಮೀನು ಶಿಕಾರಿಯ ಹುರುಪಿನಲ್ಲಿದ್ದ ಜನರಿಗೆ ನೀರು ಅಡ್ಡಿಯಾಗಲಿಲ್ಲ.

510
ಸಾಹಸ ಪ್ರವೃತ್ತಿಯಿಂದ ಮೀನು ಬೇಟೆ

ಕುದರೆಗಣಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಆಗಮಿಸಿದ್ದ ಸಾವಿರಾರು ಯುವಕರು, ಹಿರಿಯರು ಕೆರೆಗೆ ಇಳಿದು ಸಾಹಸ ಪ್ರವೃತ್ತಿಯಿಂದ ಮೀನು ಬೇಟೆಯಾಡಿದರು. ತಮಗೆ ಎಷ್ಟು ಸಾಧ್ಯವೋ ಅಷ್ಟು ಮೀನುಗಳನ್ನು ಹಿಡಿದುಕೊಂಡು ಹೋದರು.

610
ಜಾತಿ-ಮತ ಭೇದವಿಲ್ಲದ ಹಬ್ಬ

ಈ ಅಪರೂಪದ ಕೆರೆಬೇಟೆಯಲ್ಲಿ ಯಾವುದೇ ಜಾತಿ, ಮತ ಅಥವಾ ವಯಸ್ಸಿನ ಭೇದವಿರಲಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೆರೆಯ ದಂಡೆಯ ಮೇಲೆ ಜಮಾಯಿಸಿದ್ದರು. ಮಹಿಳೆಯರು ಮತ್ತು ಮಕ್ಕಳು ಕೆರೆಯ ದಂಡೆಯ ಮೇಲೆ ನಿಂತು ಬೇಟೆಗಾರರು ಮೀನು ಹಿಡಿಯುವ ರೋಚಕ ಕ್ಷಣಗಳನ್ನು ಕಣ್ತುಂಬಿಕೊಂಡು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಇಡೀ ಗ್ರಾಮದಲ್ಲಿ ಯುಗಾದಿ-ದೀಪಾವಳಿಯಂತಹ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

710
ಬಿದಿರಿನ ಕುಣಿ ಜಾಗಕ್ಕೆ ಬಂತು ಕಬ್ಬಿಣದ ಕುಣಿ!

ಕೆರೆಬೇಟೆಯಲ್ಲಿ ಪಾಲ್ಗೊಳ್ಳಲು ಆಸಕ್ತರಿಗೆ ಒಂದು ಕುಣಿಗೆ 500 ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಮಲೆನಾಡಿನ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತಂತ್ರಜ್ಞಾನದ ಬದಲಾವಣೆಯೂ ಇಲ್ಲಿ ಎದ್ದು ಕಾಣುತ್ತಿತ್ತು:

ಹಳೆಯ ಪದ್ಧತಿ: ಈ ಹಿಂದೆ ಬಿದಿರಿನಿಂದ ತಯಾರಿಸಲಾದ ಸಾಂಪ್ರದಾಯಿಕ ಕುಣಿಗಳನ್ನು ಬಳಸಲಾಗುತ್ತಿತ್ತು. ಇವು ಕೇವಲ 1 ರಿಂದ 1.5 ಕೆಜಿ ತೂಕವಿರುತ್ತಿದ್ದವು.

ಆಧುನಿಕ ಪದ್ಧತಿ: ಈಗ ಬಿದಿರಿನ ಜಾಗಕ್ಕೆ ಕಬ್ಬಿಣದ ಕುಣಿಗಳು ಬಂದಿವೆ. ಇವು 3 ರಿಂದ 4 ಕೆಜಿ ತೂಕ ಹೊಂದಿದ್ದರೂ, ಕೆರೆಯ ಆಳದ ನೀರಿನಲ್ಲಿ ತಳ ಮುಟ್ಟಿ ಮೀನುಗಳನ್ನು ಲಾಕ್ ಮಾಡಲು ಬೇಟೆಗಾರರಿಗೆ ಹೆಚ್ಚು ಅನುಕೂಲಕರವಾಗಿದ್ದವು.

810
ಕೈಗೆ ಸಿಕ್ಕವು 5 ಕೆಜಿಯ ದೈತ್ಯ ಮೀನುಗಳು!

ಕೆರೆಗೆ ಇಳಿದ ಬಹುತೇಕ ಬೇಟೆಗಾರರಿಗೆ ನಿರಾಸೆಯಾಗಲಿಲ್ಲ. ಕೆಲವರು ಸತತ ಪ್ರಯತ್ನ ನಡೆಸಿ ಒಟ್ಟು 4 ರಿಂದ 5 ಕೆಜಿಯಷ್ಟು ತೂಕದ ಬೇರೆ ಬೇರೆ ಮೀನುಗಳನ್ನು ಹಿಡಿದು ಸಂಭ್ರಮಿಸಿದರೆ, ಇನ್ನು ಕೆಲವು ಅದೃಷ್ಟವಂತ ಬೇಟೆಗಾರರಿಗೆ ಒಂದೊಂದೇ ಮೀನು ಬರೋಬ್ಬರಿ 5 ಕೆಜಿ ತೂಕದ್ದು ಸಿಕ್ಕಿತು!

910
ದೊಡ್ಡ ಮೀನುಗಳು ಸಿಕ್ಕಿದವರಿಗೆ ಸಂತಸ

ಇಷ್ಟು ದೊಡ್ಡ ಗಾತ್ರದ ಮೀನುಗಳನ್ನು ಕೈಯಲ್ಲಿ ಹಿಡಿದು ಬೇಟೆಗಾರರು ಕೆರೆಯಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಸಾರ್ವಜನಿಕರು ಜೋರಾಗಿ ಕೂಗಿ ಹರ್ಷ ವ್ಯಕ್ತಪಡಿಸಿದರು. ಸುಮಾರು ವರ್ಷಗಳ ಬಳಿಕ ಕೆರೆಬೇಟೆಗೆ ಹೋದವರಿಗೆ ದೊಡ್ಡ ದೊಡ್ಡ ಮೀನುಗಳು ಸಿಕ್ಕಿರುವುದು ಸುತ್ತಲಿನ ಗ್ರಾಮಸ್ಥರದಲ್ಲಿ ಸಂತಸ ಮೂಡಿಸಿತು.

1010
ಪೊಲೀಸರಿಂದ ಬಿಗಿ ಬಂದೋಬಸ್ತ್

ಸಾವಿರಾರು ಜನರು ಒಂದೆಡೆ ಸೇರಿದರೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳೀಯ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕುದರೆಗಣಿ ಗ್ರಾಮಸ್ಥರು ಹಾಗೂ ಗ್ರಾಮದ ಹಬ್ಬದ ಸಮಿತಿಯವರು ಇಡೀ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಿರ್ವಹಿಸುವ ಮೂಲಕ ಸಾರ್ವಜನಿಕರ ಮತ್ತು ಅಧಿಕಾರಿಗಳ ವ್ಯಾಪಕ ಮೆಚ್ಚುಗೆಗೆ ಪಾತ್ರರಾದರು. ಈ ಕೆರೆಬೇಟೆ ಮಲೆನಾಡಿನ ಸಾಮರಸ್ಯ ಮತ್ತು ಸಂಸ್ಕೃತಿಗೆ ಸಾಕ್ಷಿಯಾಯಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories