ಪ್ರತಿಯೊಂದು ವೈಯಕ್ತಿಕ ವ್ಯಕ್ತಿತ್ದ ಕುರಿತ ರಿಯಾಲಿಟಿ ಶೋ ನಡೆಯುವಾಗಲೂ ಹೆಣ್ಣು ಮಕ್ಕಳು ಅಥವಾ ಮಹಿಳೆಯರು ಟಾರ್ಗೆಟ್ ಆದರೂ ಬಿಗ್‌ಬಾಸ್ ಕಾರ್ಯಕ್ರಮ ನಡೆಸಿ ಕೊಡುವವರು ಯಾಕೆ ರಕ್ಷಣೆಗೆ ಮುಂದಾಗುವುದಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಲಂಡನ್‌ನಲ್ಲಿ 2007ರಲ್ಲಿ ಬ್ರಿಟೀಷ್ ರಿಯಾಲಿಟಿ ಶೋ ಬಿಗ್ ಬ್ರದರ್ ರಿಯಾಲಿಟಿ ಶೋನಲ್ಲಿ ಜೆಡ್‌ಗೂಡಿಯಿಂದ ಜಾತಿನಿಂದನೆಗೆ ಒಳಗಾದ ಶಿಲ್ಪಾಶೆಟ್ಟಿಯ ನೆರವಿಗೆ ಬಿಗ್ ಬ್ರದರ್ ಕೂಡ ಬರಲಿಲ್ಲ. ಆದೇ ರೀತಿ ಶೋಷಣೆಗೆ ಒಳಗಾದ ಸಂಗೀತಾ ಶೃಂಗೇರಿ ನೆರವಿಗೆ ಇಂದಿನ ಬಿಗ್‌ಬಾಸ್ ಕೂಡ ಬರಲಿಲ್ಲ.
ಕೊನೆಗೆ ಬಿಗ್ ಬ್ರದರ್ ರಿಯಾಲಿಟಿ ಶೋನಲ್ಲಿ ಎಲ್ಲವನ್ನು ಸಹಿಸಿಕೊಂಡಿದ್ದ ಶಿಲ್ಪಾ ಶೆಟ್ಟಿ ಅವರು ತಮ್ಮ 32ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳ ರಿಯಾಲಿಸಿ ಶೋನಲ್ಲಿ ಗೆದ್ದು ಬಂದು ಇಡೀ ದೇಶಕ್ಕೆ ಕೀರ್ತಿ ತಂದಿದ್ದರು. ಈ ಶೋ ಅವರಿಗೆ ಹೆಚ್ಚಿ ಪ್ರಸಿದ್ಧಿಯನ್ನೂ ತಂದುಕೊಟ್ಟಿತ್ತು.
ಶಿಲ್ಪಾಶೆಟ್ಟಿಗೆ ಮಾಡಿದ ಜನಾಂಗೀಯ ನಿಂದನೆ ಸೇರಿದಂತೆ ಬ್ರಿಟಿಷ್ ರಿಯಾಲಿಟಿ ಶೋ ಬಿಗ್ ಬ್ರದರ್‌ನಲ್ಲಿ ನಡೆದ ಕೆಲವು ಘಟನೆಗಳಿಂದ ಸಂಪೂರ್ಣವಾಗಿ ರಿಯಾಲಿಟಿ ಶೋ ಸ್ಥಗಿತಗೊಳಿಸಲಾಗಿದೆ.
ಬ್ರಿಟೀಷ್ ಬಿಗ್ ಬ್ರದರ್ ಮಾದರಿಯಲ್ಲಿಯೇ ಭಾರತದಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋ ನಡೆಯುತ್ತಿದ್ದು, ಹಿಂದಿಯಲ್ಲಿ 17 ಸೀಸನ್‌ಗಳು ನಡೆಯುತ್ತಿದೆ. ಕನ್ನಡದಲ್ಲಿ 10ನೇ ಸೀಸನ್ ನಡೆಯುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಯುತ್ತಿರುವ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ 10ರಲ್ಲಿ ಈ ವಾರ ಸ್ಪರ್ಧಿಗಳನ್ನು ಗಂಧರ್ವರು ಹಾಗೂ ರಾಕ್ಷಸರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಟಾಸ್ಕ್‌ಗಳನ್ನು ನೀಡಲಾಗಿತ್ತು. ಆದರೆ ಟಾಸ್ಕ್ ವೇಲೆ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗಾಯಗೊಂಡು ಚಿಕಿತ್ಸೆ ಪಡೆದು ಪುನಃ ಮನೆಗೆ ವಾಪಸ್ ಬಂದಿದ್ದಾರೆ.
ಮುಖ್ಯವಾಗಿ ಇದರಲ್ಲಿ ಡ್ರೋನ್ ಪ್ರತಾಪ್ ಅವರಿಗಿಂತಲೂ ಹೆಚ್ಚಾಗಿ ಸಂಗೀತಾ ಶೃಂಗೇರಿ ಅವರನ್ನು ಟಾರ್ಗೆಟ್ ಮಾಡಿ ಇಲ್ಲಿ ಹಿಂಸೆ ಮಾಡಲಾಗಿರುವುದು ಮೇಲ್ನೋಟಕ್ಕೆ ಹೆಚ್ಚಾಗಿ ಕಂಡುಬರುತ್ತಿದೆ.
ಬಿಗ್‌ಬಾಸ್ ಮನೆಯಲ್ಲಿ ರಾಕ್ಷಸರ ಗುಂಪಿಗೆ ಸೇರಿದವರು ಕುರ್ಚಿಯಲ್ಲಿ ಕೂತಿದ್ದ ಗಂಧರ್ವರ ಗುಂಪಿನ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಅವರನ್ನು ಎಬ್ಬಿಸಲು ಸೋಪು, ಡೆಟಾಲ್, ಖಾರದ ಪುಡಿ ಇನ್ನಿತರೆ ರಾಸಾಯನಿಕ ಬೆರೆಸಿದ ನೀರನ್ನು ಸತತವಾಗಿ ಮತ್ತು ಬಲವಾಗಿ ಮುಖಕ್ಕೆ ಎರಚಲಾಗಿದೆ. ರಾಸಾಯನಿಕಯುಕ್ತ ನೀರು ಸಂಗೀತಾ ಕಣ್ಣು, ಮೂಗು ಹಾಗೂ ಬಾಯಿಗೆ ಹೋಗಿ ತೀವ್ರ ಸಮಸ್ಯೆಯಾಗಿದೆ.
ಮೊದಲೇ ಕಣ್ಣಿನ ಸಮಸ್ಯೆಯನ್ನು ಅನುಭವಿಸುತ್ತಿರುವ ಸಂಗೀತಾ ಶೃಂಗೇರಿ ಅವರು ಮೊದಲಿನಿಂದಲೂ ಕನ್ನಡಕವನ್ನು ಬಂಸುತ್ತಿದ್ದಾರೆ. ಹೀಗಿರುವಾಗ ರಾಕ್ಷಸರ ಗುಂಪು ಒಂದು ಹೆಣ್ಣನ್ನು ಟಾರ್ಗೆಟ್ ಮಾಡಿದರೂ ಯಾಕೆ ಬಿಗ್‌ಬಾಸ್ ಬೇಗನೇ ತಡೆಯಲಿಲ್ಲ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.
ಬಿಗ್ ಬಾಸ್ ಮನೆ ಸುರಕ್ಷತೆಯ ಸ್ವರ್ಗ ಎಂದು ಹೇಳಲಾಗುತ್ತಿತ್ತು. ಸಂಗೀತಾ ಶೃಂಗೇರಿ ಮೇಲೆ ನಡೆದ ಘಟನೆಯಿಂದ ಇದು ಆಕ್ರಮಣ ಮತ್ತು ಹಿಂಸೆಯ ಅಖಾಡವಾಗಿ ಮಾರ್ಪಟ್ಟಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.