ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ನಮ್ಮನೆ ಯುವರಾಣಿಯಲ್ಲಿ ಅಹಲ್ಯಾ ತಂಗಿ ನಮೃತಾ ಆಗಿ ಮಿಂಚಿದ ನಟಿ ಪ್ರಕೃತಿ ಪ್ರಸಾದ್ (Prakruthi Pasad) ಮಲಯಾಲಂ, ತೆಲುಗಿನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿ ಕನ್ನಡ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಕೃತಿ. ನಮ್ಮನೆ ಯುವರಾಣಿ (Nammane Yuvarani) ಧಾರಾವಾಹಿ ಅಲ್ಲದೇ, ಮನಸಾರೆ, ಗಂಗಾ, ಬೆಟ್ಟದ ಹೂ, ಅರಮನೆ ಸೀರಿಯಲ್ ಗಳಲ್ಲೂ ನಟಿಸಿ ವೀಕ್ಷಕರ ಮನ ಗೆದ್ದಿದ್ದರು.
ಇದಾದ ಬಳಿಕ ಮಲಯಾಲಂನ ಸೂರ್ಯ ಚಾಲೆನ್ ನಲ್ಲಿ ಪ್ರಸಾರವಾಗುತ್ತಿದ್ದ ಅಮ್ಮಕಿಲಿಕ್ಕೂಡು ಧಾರಾವಾಹಿಯಲ್ಲಿ ಪ್ರಕೃತಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲ, ತೆಲುಗಿನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದರು. ತೆಲುಗಿನಲ್ಲಿ ಏವಂಡಿ ಶ್ರೀಮತಿಗಾರು ಧಾರಾವಾಹಿಯಲ್ಲಿ ನಟಿಸಿದ್ದರು.
ಇದೀಗ ದಕ್ಷಿಣ ಭಾರತದ ಉಳಿದೆರಡು ರಾಜ್ಯಗಳಲ್ಲಿ ಮಿಂಚಿದ ಪ್ರಕೃತಿ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು ನೀವು ಈಗಾಗಲೇ ನೋಡಿರೋವಂತೆ ಝೀಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾಳನ್ನು ಇಷ್ಟ ಪಡ್ತಿರೋ ಸಿದ್ಧೇಗೌಡ್ರಿಗೆ, ಅವರ ತಂದೆ ತಮ್ಮ ರಾಜಕೀಯ ಬಂಧ ಗಟ್ಟಿಗೊಳಿಸಲು, ಗೆಳೆಯನ ಮಗಳ ಜೊತೆ ನಿಶ್ಚಿತಾರ್ಥ ಮಾಡಿಸಿದ್ದಾರೆ. ಸಿದ್ಧೇಗೌಡ್ರನ್ನು ಮದುವೆಯಾಗೋದಕ್ಕೆ ಬಂದ ಹುಡುಗಿ ಪೂರ್ವಿಯೇ ಪ್ರಕೃತಿ ಪ್ರಸಾದ್.
ಮೈಸೂರಿನವರಾದ ಪ್ರಕೃತಿ ನಂತ್ರ ಬೆಂಗಳೂರಿಗೆ ಬಂದು ನೆಲೆಯಾದ್ರೂ, ವಿಭಿನ್ನಪಾತ್ರಗಳಲ್ಲಿ, ಇಲ್ಲಿವರೆಗೂ ಮಾಡದೇ ಇರುವಂತಹ ಪಾತ್ರಗಳಲ್ಲಿ ಮಿಂಚೋಕೆ ಪ್ರಕೃತಿಗೆ ಆಸೆ. ಗ್ರಾಮೀಣ ಹುಡುಗಿಯಾಗಿ, ಬಜಾರಿಯಾಗಿ, ಗಯ್ಯಾಳಿ, ಹುಚ್ಚಿಯಾಗಿ ನಟಿಸಬೇಕೆಂಬ ಕನಸು ಇವರದ್ದು.
ಬಾಲ್ಯದಲ್ಲಿ ನಟಿಸುವ ಆಸಕ್ತಿ ಬೆಳೆಸಿಕೊಂಡ ಪ್ರಕೃತಿ ಪಿಯುಸಿಯಲ್ಲಿರೋವಾಗ್ಲೇ ಆಡಿಶನ್ ಕೊಡೋದಕ್ಕೆ ಆರಂಭಿಸಿದ್ರು. ಇವರ ಮೊದಲನೇ ಧಾರಾವಾಹಿ ಸೌಭಾಗ್ಯವತಿ. ನಟನೆ ಜೊತೆಗೆ ಓದನ್ನು ಮುಂದುವರೆಸಿಕೊಂಡು ಹೋಗಿರುವ ಪ್ರಕೃತಿ, ಸೈಕಾಲಜಿಯಲ್ಲಿ ಎಂಎಸ್ಸಿ ಮುಗಿಸಿದ್ದಾರೆ.
ಸದ್ಯ ಪ್ರಕೃತಿ ಲಕ್ಷ್ಮೀ ನಿವಾಸದಲ್ಲಿ ನಟಿಸುತ್ತಿದ್ದಾರೆ. ಇಷ್ಟವಿಲ್ಲದೇ ಮದುವೆಗೆ ಒಪ್ಪಿಕೊಂಡು, ಈಗ ಸಿದ್ದೇಗೌಡ್ರ ಜೊತೆ ಸೇರಿ ಮದುವೆ ನಿಲ್ಲಿಸೋ ಪ್ಲ್ಯಾನ್ ಮಾಡ್ತಿದ್ದಾರೆ. ಇನ್ನು ಪೂರ್ವಿಯ ಮನಸಲ್ಲೂ ಸಿದ್ದೇಗೌಡ್ರ ಮೇಲೆ ಪ್ರೀತಿ ಶುರುವಾಗುವ ಹಾಗಿದೆ. ಕಥೆಯಲ್ಲಿ ಇನ್ನೇನೆನು ಆಗಲಿದೆ ಕಾದು ನೋಡಬೇಕು.