ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಮೆಚ್ಚಿನ ಹಾಗೂ ಅತಿ ಹೆಚ್ಚು ಟಿಆರ್ ಪಿ ಪಡೆದು ನಂ 2 ಸ್ಥಾನದಲ್ಲಿರುವ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಸದ್ಯ ಜಯಂತ್ ಮತ್ತು ಜಾನ್ವಿ ಮದುವೆ ಸಂಭ್ರಮ ಮುಗಿಲು ಮುಟ್ಟಿದೆ.
ಕಳೆದ ಒಂದು ವಾರದಿಂದ ಜಯಂತ್ - ಜಾನು ಮದುವೆಯ ವಿವಿಧ ಆಚರಣೆ, ಸಂಪ್ರದಾಯಗಳು ಅದ್ಧೂರಿಯಾಗಿ ನಡೆಯುತ್ತ ಬಂದಿದೆ. ಅರಶಿನ ಶಾಸ್ತ್ರ, ಸಂಗೀತ್ ಕಾರ್ಯಕ್ರಮ ಎಲ್ಲಾ ಎಪಿಸೋಡ್ ಗಳು ಜನರನ್ನು ಹೆಚ್ಚಾಗಿ ಆಕರ್ಷಿಸಿದ್ದವು.
ಶ್ವೇತಾ, ಅಂಜಲಿ, ಚಂದನಾ ಅನಂತಕೃಷ್ಣ, ದಿಶಾ ಮದನ್ (Disha Madan), ಮಾನಸ ಮನೋಹರ್, ರೂಪಿಕಾ, ದೀಪಕ್, ಅಜಯ್ ರಾಜ್, ಮಧು ಹೆಗಡೆ ಮೊದಲಾದ ಘಟಾನುಘಟಿ ನಟರುಗಳಿಂದ ತುಂಬಿರುವ ಲಕ್ಷ್ಮೀ ನಿವಾಸ ಸೀರಿಯಲ್ ತನ್ನ ವಿಭಿನ್ನ ಕಥೆಯಿಂದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಸೀರಿಯಲ್ ಆರಂಭವಾದ ಕೆಲ ದಿನಗಳಲ್ಲೇ ವೀಕ್ಷಕರು ಊಹೆ ಮಾಡಲು ಸಾಧ್ಯವಾಗದಂತಹ ಟ್ವಿಸ್ಟ್ ಗಳನ್ನು ನೀಡುವ ಮೂಲಕ ಜನರ ಕುತೂಹಲವನ್ನು ಹಿಡಿದಿಡುವಲ್ಲಿ ಸೀರಿಯಲ್ (serial) ತಂಡ ಯಶಸ್ವಿಯಾಗಿತ್ತು.
ಆರಂಭದಲ್ಲಿ ಭಾವನಾ ಮದುವೆಯ ಸಂಭ್ರಮವನ್ನು ಅನುಭವಿಸುತ್ತಿರುವಾಗಲೇ ಅಪಘಾತವಾಗಿ, ಭಾವನಾ ಮದುವೆಯಾಗಲಿರುವ ಹುಡುಗ ಸಾವನ್ನಪ್ಪಿದ್ದನು. ಆ ನೋವು ಮಾಸುವ ಮುನ್ನವೇ ಜಾಹ್ನವಿಯನ್ನು ಅನಾಥನಾಗಿರುವ ಬ್ಯುಸಿನೆಸ್ ಮೆನ್ ಇಷ್ಟಪಟ್ಟು, ಮನೆಯವರ ಒಪ್ಪಿಗೆ ಪಡೆದು ಮದುವೆಗೂ ಒಪ್ಪಿಸಿದ್ದನು.
ಜನಪ್ರಿಯ ಬ್ಯುಸಿನೆಸ್ ಮೆನ್ ಆಗಿದ್ದರೂ, ಜಯಂತ್ ನ ಸರಳತೆ, ವಿನಯತೆ, ಸಾಸಿವೆಯಷ್ಟು ಕೆಟ್ಟದ್ದು ಇಲ್ಲದ ಆ ಒಳ್ಳೆಯ ನಡತೆ ಎಲ್ಲವೂ ಜಾಹ್ನವಿ ಮತ್ತು ಮನೆಯವರನ್ನು ಮಾತ್ರವಲ್ಲ, ವೀಕ್ಷಕರನ್ನು ಸಹ ಸೆಳೆದಿದ್ದು.
ಜಾಹ್ನವಿ ಇಷ್ಟಪಟ್ಟದ್ದನ್ನೆಲ್ಲಾ ಪ್ರೀತಿಯಿಂದ ಮಾಡುವ ಜಯಂತ್ ನ ಕ್ಯಾರೆಕ್ಟರ್ ವೀಕ್ಷಕರಿಗೆ ಇಷ್ಟವಾಗಿದೆ. ಜಯಂತ್ - ಜಾಹ್ನವಿ ಜೋಡಿಯಾಗಿ ನೋಡೋದೆ ಕಣ್ಣಿಗೆ ಹಬ್ಬ, ಅವರಿಬ್ಬರ ಪ್ರೀತಿಯ ಕಣ್ಸನ್ನೆ, ಮಾತು ಇವೆಲ್ಲವೂ ವೀಕ್ಷಕರ ಹೃದಯದಲ್ಲೂ ಕಚಗುಳಿ ಇಟ್ಟಿತ್ತು.
ಇದೀಗ ಮದುವೆಯ ಎಲ್ಲಾ ಆಚರಣೆಗಳು ಸಂಭ್ರಮದಿಂದ ನಡೆದಿದ್ದು, ಮನೆಯವರೆಲ್ಲರೂ ಮದುವೆಗೆ ತಯಾರಾಗಿರುವ ಸಂದರ್ಭದಲ್ಲಿ, ಮದುವೆ ಮನೆಗೆ ವಿಶ್ವನ ಎಂಟ್ರಿಯಾಗಿದೆ. ಇದೆಲ್ಲವನ್ನೂ ನೋಡಿ ವೀಕ್ಷಕರಿಗೆ ಎದೆಯಲ್ಲಿ ನಡುಕ ಹುಟ್ಟಿದೆ. ಏನೇ ಆಗ್ಲಿ ಜಯಮ್ತ್ -ಜಾನು ನ ಬೇರೆ ಮಾಡ್ಬೇಡಿ ಅಂತ ಕೇಳಿಕೊಳ್ತಿದ್ದಾರೆ ವೀಕ್ಷಕರು.
ಇಷ್ಟೆಲ್ಲಾ ಒಳ್ಳೆಯದ್ದೆ ನಡೆಯುವಾಗ ಒಂದು ದೊಡ್ಡ ಟ್ವಿಸ್ಟ್ ಇದ್ದೇ ಇರುತ್ತೆ ಅನ್ನೋದು ವೀಕ್ಷಕರಿಗೂ ಗೊತ್ತು. ಹಸೆಮಣೆ ಏರುವ ಸಂದರ್ಭದಲ್ಲಿ ಏನೋ ಆಗುವ ಸಾಧ್ಯತೆಯಂತೂ ಇದೆ ಎಂದುಕೊಂಡಿದ್ದರು ಪ್ರೇಕ್ಷಕರು. ಆದರೆ, ಇದೀಗ ಹೊಸತೊಂದು ಪ್ರೋಮೋ ರಿಲೀಸ್ ಆಗಿದ್ದು, ಅದರಲ್ಲಿ ಜಾನುಗೆ ಜಯಂತ್ ತಾಳಿ ಕಟ್ಟಿದ್ದಾನೆ. ಇದು ಕನಸೋ, ನನಸೋ ಗೊತ್ತಿಲ್ಲ.